‘ಹಾಸಿಗೆ ಇದ್ದಷ್ಟು ಕಾಲು ಚಾಚು’
ನಮ್ಮ ಹಿರಿಯರ ಜೀವನಾನುಭವದ ಮೂಸೆಯಲ್ಲಿ ಬೆಂದು ಹೊರಹೊಮ್ಮಿದ ಅನರ್ಘ್ಯ ನುಡಿಮುತ್ತುಗಳೇ ಗಾದೆ ಮಾತುಗಳಾಗಿ, ಮುಂದಿನ ಪೀಳಿಗೆಯ ಜೀವನ ಪಥಕ್ಕೆ ಹಿಡಿದ ಪ್ರಣತಿಯಂತಿವೆ. ಕೆಲವೇ ಕೆಲವು ಶಬ್ದಗಳಲ್ಲಿ ರಚಿತವಾಗುವ ವಾಮನಾಕಾರದ ವಾಕ್ಯವು ತ್ರಿವಿಕ್ರಮನೆತ್ತರದ ಅಗಾಧ ಅರ್ಥವನ್ನು ಒಳಗೊಂಡಿರುವುದೇ ಇದರ ವಿಶೇಷತೆ. ಇದೊಂದು ಗಾದೆ ಮಾತು..’ಹಾಸಿಗೆ ಇದ್ದಷ್ಟು ಕಾಲು ಚಾಚು’. ಮೇಲ್ನೋಟಕ್ಕೆ , `ಇದೇನಪ್ಪಾ, ಮಲಗುವ ಹಾಸಿಗೆ ಗಿಡ್ಡವಾಗಿದೆಯಾ?’ ಎನ್ನಿಸುವುದಾದರೂ, ಈ ಶಬ್ದಾರ್ಥದೊಳಗಿನ ಗೂಢಾರ್ಥ ಇನ್ನೂ ನಿಗೂಢ! ಅದನ್ನು ಸರಳೀಕರಿಸಿದರೆ ಸಿಗುವುದೇ ನಮ್ಮ ಹಿರಿಯರ ಜೀವನ ಮೌಲ್ಯಗಳ ಪಾಠ.
ನಾವು ದಿನಾ ಕಾಣುವಂತೆ ಅದೆಷ್ಟೋ ಜನರು; ಸಮಾಜದಲ್ಲಿ ತಮ್ಮ ಘನತೆಯನ್ನು ಮೆರೆಯಲೋಸ್ಕರವೋ ಅಥವಾ ಕ್ಷಣಿಕ ಪ್ರಚಾರಕ್ಕೋಸ್ಕರವೋ, ಕೈಯಲ್ಲಿ ಕಾಸಿಲ್ಲದಿದ್ದರೂ ಸಾಲ ಮಾಡಿಯಾದರೂ ತುಂಬಾ ಠಾಕುಠೀಕಾದ ಆಡಂಬರದ ಜೀವನವನ್ನು ಸಾಗಿಸುತ್ತಾರೆ. ಆದರೆ ಕೊನೆಗಾಲದಲ್ಲಿ ಕೈ ಖಾಲಿಯಾಗಿ ಅವಮಾನಕರವಾದ ಬದುಕು ನಡೆಸಬೇಕಾಗುತ್ತದೆ. ಕೈಯಲ್ಲಿರುವುದರಲ್ಲೇ ತೃಪ್ತಿಯಿಂದ ಜೀವನ ನಡೆಸುವುದರಲ್ಲೇ ಸಾರ್ಥಕತೆಯಿದೆ. ಇದಕ್ಕೇ ಹಿರಿಯರು ಮೇಲಿನ ನುಡಿಯನ್ನು ಉದಾಹರಿಸುವರು.
ಹಿಂದೆ ನಾವಿದ್ದ ಮನೆ ಪಕ್ಕ ಮೂವರು ಮಕ್ಕಳಿರುವ ಕುಟುಂಬವೊಂದಿತ್ತು. ಮನೆ ಯಜಮಾನನಿಗೆ ಒಂದು ಪುಟ್ಟ ನೌಕರಿಯಿತ್ತು. ಅವರಲ್ಲಿಗೆ ಯಾರಾದರೂ ನೆಂಟರು ಬಂದರೆಂದರೆ ಆ ಮನೆಯಾಕೆ ನಮ್ಮಲ್ಲಿಂದ ಸ್ವಲ್ಪ ಸ್ವಲ್ಪವಾಗಿ ಪಾಯಸಕ್ಕೆ ಬೇಕಾಗಿರುವ ಎಲ್ಲಾ ಸಾಮಾನುಗಳನ್ನೂ ಒಯ್ಯುತ್ತಿದ್ದಳು; ಗೋಡಂಬಿ, ಏಲಕ್ಕಿ ಸಹಿತ. ಅಲ್ಲದೆ, ದಿನದ ಅಡಿಗೆಗೆ ಬೇಕಾಗಿರುವ ಸಾಮಾನುಗಳಿಗೂ ನಾನೇ ಜವಾಬ್ದಾರಳಾಗಿದ್ದೆ! ಅವುಗಳನ್ನು ಹಿಂದಕ್ಕೆ ಕೊಡುವ ತಪ್ಪನ್ನೂ ಅವಳು ಮಾಡುತ್ತಿರಲಿಲ್ಲ. ನನಗೋ ಪುನಃ ಕೇಳಬೇಕೆಂಬ ಹಂಬಲವೂ ಇರಲಿಲ್ಲ ಬಿಡಿ. ಆಗ..`ಯಾಕಾಗಿ ಹೀಗೆಲ್ಲಾ ಸಾಲ ಕೇಳಿ ಅತಿಥಿಗಳಿಗೆ ಔತಣ ಮಾಡುವರೋ’ ಎಂದು ನನಗನಿಸುತ್ತಿತ್ತು, ಅಚ್ಚರಿಯೂ ಆಗುತ್ತಿತ್ತು. ಅವರಿಗೋ ಅದು ದಿನಾ ರೂಢಿಯಾಗಿಬಿಟ್ಟಿತ್ತು.
ಇದರ ವಿರುದ್ಧ ಗುಣದ ವ್ಯಕ್ತಿಗಳ ಬಗ್ಗೆಯೂ ಹೇಳಲೇಬೇಕು. ಈಗ ನಾವಿರುವ ಮನೆಯ ಪಕ್ಕದಲ್ಲಿಯೇ ಇರುವ ಬಡ ಕುಟುಂಬ. ಮನೆ ಮಹಿಳೆಯೇ ದುಡಿದು ಜೀವನ ಸಾಗಬೇಕು. ಅವಳಿಗೋ ತೀವ್ರ ಅನಾರೋಗ್ಯ ಸಮಸ್ಯೆ. ಹೊಟ್ಟೆ ತುಂಬಾ ಊಟಕ್ಕಿಲ್ಲದಿದ್ದರೂ ಒಂದು ದಿನವೂ ಸಾಲ ಕೇಳಿದವಳಲ್ಲ. ಔಷಧಿಗೆ ಏನಾದರೂ ಹಣದ ಸಮಸ್ಯೆ ಬಂದರೆ ಮಾತ್ರ ಕೇಳುತ್ತಾಳೆ. ಅದನ್ನು, ಹೇಳಿದ ದಿನಕ್ಕೆ ವಾಪಸ್ ಕೊಡುತ್ತಾಳೆ. ಇದಕ್ಕೇ ಹೇಳುವುದು ಮೇಲಿನ ಗಾದೆ ಮಾತನ್ನು.
`ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ’ ಎನ್ನುವ ಮಾತೂ ಇದೇ ಸಂದರ್ಭಕ್ಕೆ ಉಚಿತವಾಗಿದೆ. ಆದ್ದರಿಂದ ನಾವು ನಮ್ಮ ಇತಿಮಿತಿಗಳನ್ನು ತಿಳಿದುಕೊಂಡು ಜೀವಿಸಿದರೆ ಅದರಲ್ಲಿಯೇ ಮನಸ್ಸಿಗೆ ಸುಖ, ಶಾಂತಿ, ನೆಮ್ಮದಿ ಲಭ್ಯ..ಏನಂತೀರಿ?
-ಶಂಕರಿ ಶರ್ಮ, ಪುತ್ತೂರು.
ಚೆನ್ನಾಗಿದೆ ವಿಶ್ಲೇಷಣೆ.
ಗಾದೆ ಮಾತಿನ ಅರ್ಥವನ್ನು ವಿವರಿಸಿದ ರೀತಿ ಚೆನ್ನಾಗಿದೆ ಸ್ವಂತ ಅನುಭವಗಳ ಜೊತೆ .
ಚೆನ್ನಾಗಿದೆ ವಿಶ್ಲೇಷಣೆ.
ಓದಿದ…ಮೆಚ್ಚಿದ ಸಹೃದಯೀ ಬಂಧುಗಳಿಗೆ ಕೃತಜ್ಞತೆಗಳು.