ಗೋವಿನ ಭಾಷೆ (ನುಡಿಮುತ್ತು4)

Share Button


ಕೆಲವಾರು ವರ್ಷಗಳಹಿಂದೆ ಅಜ್ಜನಮನೆಯಲ್ಲಿ ಹಟ್ಟಿತುಂಬಾ ದನಗಳಿದ್ದ ಕಾಲ. ಎಲ್ಲದನಗಳಿಗೂ ಒಂದೊಂದು ಹೆಸರು. ಗೆಂದೆ, ಕುಸುಮ,ಕಾವೇರಿ, ಗೋದಾವರಿ, ಕಾರ್ಚಿ,ಹೀಗೆ. ಹಾಲು ಕರೆಯುವ ಹಸುಗಳನ್ನು ಮೂಡುಬದಿಯ ಸಣ್ಣ ಅಂಗಳದಲ್ಲಿ ಅವುಗಳಿಗೆ ನಿಯೋಜಿಸಿದ  ಕಂಬದಲ್ಲಿ ಕಟ್ಟುವುದು.ಅವುಗಳಿಗೆ ಮಡ್ಡಿ ತಿನ್ನಿಸಿ , ಹಾಲು ಕರೆದು (ದನದಹಾಲು ಕರೆಯುವ ಕೆಲಸ, ಅಜ್ಜಿಗೆ) ಇತರ ದನಕರುಗಳಿಗೆ  ಒಂದಿಷ್ಟು ಅಕ್ಕಚ್ಚು ಕೊಟ್ಟು ಗುಡ್ಡೆಗೆ ಮೇಯಲು ಎಲ್ಲವುಗಳನ್ನೂ ಒಟ್ಟಿಗೇ ಬಿಡುವುದು ರೂಢಿ. ಎಮ್ಮೆ ಹಾಲು  ಕರೆಯಲು ಹಾಗೂ ಇತರ ಜಾನುವಾರು ಕೆಲಸಕ್ಕೆ ನಂಬಿಗಸ್ಥ ಸೀನ ಎಂಬ ಹೆಸರಿನ ಕೆಲಸದವ.

ಕರವು ಮುಗಿದಮೇಲೆ  ಆ ಕರುಗಳನ್ನೂ ತಾಯಿ ಹಸು ಹಾಗೂ ಇತರ ಕರುಗಳೊಂದಿಗೆ ಗುಡ್ಡೆಗೆ ಮೇಯಲು  ಬಿಡುತ್ತಾರೆ.  ಗುಡ್ಡೆಗೆ ಬಿಡುವ  ಪ್ರಾರಂಭಕ್ಕೆ  ಒಳ್ಳೆಯ ದಿನ ನೋಡಿ ಹೇಳುವುದು ಅಜ್ಜ. ಭರಣಿ, ಕೃತಿಕೆಯೋ ವಾರದೋಷವೋ ಇದ್ದದಾದರೆ ಪ್ರಾರಂಭಿಸುವ ಹಾಗಿಲ್ಲ.ಅಂತೂ ಹಟ್ಟಿಬಾಗಿಲು ತೆಗೆದು ಎಲ್ಲಾ ದನಗಳನ್ನೂ ಒಟ್ಟಿಗೇ ಬಿಡುವುದು. ಗಬ್ಬದ ದನವಾದರೆ ಗುಡ್ಡೆಗೆ ಬಿಡುವಾಗ ಎಚ್ಚರಿಕೆ ವಹಿಸಲು ಹೇಳುವ ಕೆಲಸ ಅಜ್ಜಿಯದು. ಒಂದೆರಡು ದಿನ ಮೊದಲೇ ಕರುಹಾಕುವ ಸೂಚನೆಯನ್ನು  ದನದ ಉದರ ಹಾಗೂ  ಕೆಚ್ಚಲು ನೋಡಿದ ಕೂಡಲೇ ತಿಳಿಯುತ್ತಾರೆ ಅನುಭವಿಗಳು.. ಆದರೆ ಈ ತಿಳುವಳಿಕೆಯೂ ಕೆಲವು ವೇಳೆ ಏರು-ಪೇರು ಆಗದು ಎನ್ನುವಂತಿಲ್ಲ.(ವೈದ್ಯರಿಗೇ ಗೊತ್ತಾಗುವುದಿಲ್ಲ ಬಿಡಿ!!.).


ಸಂಜೆ 4-30 , 5 ಗಂಟೆಯೊಳಗೆ ದನಗಳೆಲ್ಲ ಮೇವು ಮುಗಿಸಿ ಮನೆ ಸೇರುತ್ತವೆ. ಆ ಹೊತ್ತಿಗೆ ಅಂಗಳದಲ್ಲಿ ಅಜ್ಜಿ ಎಲ್ಲವಕ್ಕೂ ಒಂದೊಂದು ಎಳ್ಳಿನ ಹಿಂಡಿ ಪೀಸು ಕೊಡುವ ರೂಢಿ.  ಅವುಗಳೆಲ್ಲವುಗಳ  ಹೆಸರು ಕರೆದು ದನಕ್ಕೆ ಕೊಡುವ ಹಿಂಡಿ ಗಟ್ಟಿ ಕೊಡುವಾಗ .ಕೆಲವು ಹ್ಞೂಂ, ಹಾಂ..ಎಂದು ತಕ ತೈ ಎಂಬ ಸಂಜ್ಞೆಯೊಂದಿಗೆ ಹಾರುವುದೂ ಇದೆ.  ಇದು ಬೇಡ, ಅದುಬೇಕು, ಅಥವಾ ಸಾಲದು ಎಂಬ ಹಸುಗಳ ಬೇಡಿಕೆ  ಅರ್ಥೈಕೆ ಅಜ್ಜಿಗೆ ಕರಗತ.

ಇಲ್ಲಿ ಇನ್ನೊಂದು ಮಜಾ ಇದೆ!. ಕರುಗಳೆಲ್ಲ ತಿನ್ನುವುದಕ್ಕಾಗಿ  ತಾಮುಂದು, ನಾಮುಂದು ಎಂದು ಪೈಪೋಟಿ ಮಾಡುವಾಗ ನಾವು ಮಕ್ಕಳ ಪೈಪೋಟಿ ಅವುಗಳಿಗೆ ಹಿಂಡಿ ಗಟ್ಡಿ ಕೊಡುವುದಕ್ಕೆ !!.ಈ ಧಾವಂತದಲ್ಲಿ ಕೆಲವು ಸಲ ಅವಗಳಡಿಗೆ ನಾವು ಬಿದ್ದು ಏಳುವುದೂ ಇದೆ!!!!.

ಒಂದು ದಿನ ಸಂಜೆ  ಮನಗೆ ಬಂದ ದನಗಳ  ಗುಂಪಿನಲ್ಲಿ ಗೆಂದೆ ಹಸು ಇಲ್ಲ!ಅಜ್ಜಿ ಕಕ್ಕಾಬಿಕ್ಕಿ!!! “ಸೀನಾ.., ಗೆಂದೆ  ಬತ್ತಿಯಿಜ್ಜಿಯತ್ತಾ?(ಗೆಂದೆ ಬರಲಿಲ್ಲವಲ್ಲಾ?). ಬೊಳುಪ್ಪುಗು ಬುಡ್ನಾಗ ತೂತಾ ಅತ್ತಾ?  .(ಬೆಳಿಗ್ಗೆ ಬಿಡುವಾಗ ನೋಡಿದ್ದಿಯಲ್ಲಾ?)
ನೋಡಿದ್ದೇನೆ. ಅಷ್ಟು ಬೇಗ ಕರು ಹಾಕುವ ಲಕ್ಷಣ ಇಲ್ಲ ಎಂಬ ಉತ್ತರ ಅವನಿಂದಲೂ ಬಂತು.

ಅಷ್ಟರಲ್ಲೇ ಗೇಟಿನಹೊರಗೆ “ಹ್ಞುಂ…ಮ್ಮಾ..” ಎಂಬ ಕರೆ…!.ನೋಡಿದರೆ ಅದು ಗೆಂದೆಹಸು!
ಅದರ ಹತ್ತಿರ ಹೋದರೆ  ಅದು ಒಳಗೆ ಬರುವ ಲಕ್ಷಣ ಇಲ್ಲ!!.ವಾಪಾಸು ಗುಡ್ಡೆಯ ಕಡೆ…ಮುಖಮಾಡಿ ಅಜ್ಜಿಯನ್ನೇ ಕರೆಯುವ ಪರಿ….
ಅಷ್ಟರಲ್ಲಿ ಮಾವ, ಅಜ್ಜ ಎಲ್ಲರೂ ಅಲ್ಲಿ ಸೇರಿದರು.

ಹಸುವನ್ನು ಸೂಕ್ಷ್ಮವಾಗಿ ನೋಡಿ; ಇದು ಕರುಹಾಕಿದೆ ಎಂಬ ಅಭಿಪ್ರಾಯ ಪಟ್ಟರು. ಗೆಂದೆ ಹಸು ಎಲ್ಲರನ್ನೂ ಕರೆದು ಗುಡ್ಡೆಯಕಡೆ ಓಡಿತು. ಅದರ ಹಿಂದಿನಿಂದಲೇ ಎಲ್ಲರೂ ಹೋದರು. ಅದು ಹೋಗಿ ಗುಡ್ಡೆ ಕೊಡಿಯ ಕಂದಕದ ಮೇಲೆ ‌ನಿಂತು ಕೆಳಗೆ ಇಣುಕಿ ಅಜ್ಜಿಯನ್ನೊಮ್ಮೆ ನೋಡಿ, ಹ್ಞೂಂ.. ಎಂದಿತು. ನೋಡಿದರೆ ಕೆಳಗೆ ಪೊದರಿನಲ್ಲಿ ಕರು ಸಿಕ್ಕಿ ಹಾಕಿಕೊಂಡಿದೆ.

ತಕ್ಷಣ ಮನೆಯಿಂದ ಬಾವಿ ಹಗ್ಗ, ಒಂದು ದೊಡ್ಡ ಬುಟ್ಟಿ ತರಲು ಸೀನನನ್ನು ಕಳುಹಿಸಿ ತರಿಸಿದರು. ಬುಟ್ಟಿಗೆ ಹಗ್ಗ ಕಟ್ಟಿ ಒಂದು ತುದಿಯನ್ನು ಹತ್ತಿರದ ಮರಕ್ಕೆ ಕಟ್ಟಿದ ಸೀನ; ಬುಟ್ಟಿಯೊಂದಿಗೆ  ಅಜ್ಜ ಹೇಳಿದಂತೆ ಜಾಗರೂಕತೆಯಿಂದ ಇಳಿದು ಬುಟ್ಟಿಯಲ್ಲಿ ಕರುವನ್ನು ಮೆಲ್ಲಗೆ ಮಲಗಿಸಿದ. ಮೇಲೆ ನಿಂತವರು ಅತೀ ಜಾಗ್ರತೆ ಯಿಂದ ಬುಟ್ಟಿಯನ್ನು ಮೇಲೆಳೆದರು!. ಕರು ಮೇಲೆ ಬಂದ ತಕ್ಷಣ ತಾಯಿ ಹಸು ತನ್ನ ಮಗು ಇರುವಲ್ಲಿಗೆ ಹಾರಿ; ಕರುವನ್ನು ನೆಕ್ಕಿ, ನೆಕ್ಕಿ ,ಮುದ್ದು ಮಾಡಿದ್ದಲ್ಲದೆ ಅಜ್ಜಿಯನ್ನಲ್ಲದೆ ಬೇರೆ ಯಾರನ್ನೂ ಮುಟ್ಡಲು ಬಿಡಲಿಲ್ಲ. ಗೆಂದೆಯ  ಮುಖವನ್ನ ಹಿಡಿದು ನೇವರಿಸಿದ ಅಜ್ಜಿ ಸೀನನಿಗೆ ಬೇಗನೆ ಅದನ್ನು ಮನೆಗೆ ಒಯ್ಯುವ ಸೂಚನೆಯಿತ್ತರು. ಸೀನ ಕರುವನ್ನು ಒಯ್ದು ಕೆಳಗೆ ಇಳಿಯುವ ಸೂಚನೆ ಕಂಡೊಡನೆ ತಾಯಿಹಸು ಅವನ  ಬೆಂಬಿಡದೆ ಮನೆಸೇರಿತು. ಅಪಾಯದ ಸ್ಥಿತಿಯಲ್ಲಿ ಮನೆಗೆ ಬಂದು ತನ್ನ ಮೂಕ ಭಾಷೆಯಲ್ಲಿ ಸುದ್ದಿ ಮುಟ್ಟಿಸಿ , ಕಾರ್ಯಸಾಧಿಸಿ ಕರುವನ್ನು ಉಳಿಸಿದ ಗೆಂದೆ ,ಎಲ್ಲರ ಪ್ರಶಂಸನೆಗೆ ಒಳಗಾಯಿತು.

ಅಂತೂ ಎಲ್ಲರೂ ಸಂತೋಷದ ನಿಟ್ಟುಸಿರು ಬಿಡುವಂತಾಯಿತು.

– ವಿಜಯಾಸುಬ್ರಹ್ಮಣ್ಯ, ಕುಂಬಳೆ.

4 Responses

  1. Nayana Bajakudlu says:

    ಸೂಪರ್ಬ್ ಬರಹ. ಬಹಳ ಇಷ್ಟ ಆಯಿತು . ಬಾಯಿ ಬಾರದ ಆ ಮೂಕ ಜೀವಿಗಳ ಜಗತ್ತು ಕೂಡ ಬಹಳ ಸುಂದರ, ಅವುಗಳ ಭಾಷೆಯು. ನಾವು ಸ್ಪಂದಿಸಿದಲ್ಲಿ ಎಷ್ಟು ಪ್ರೀತಿ ಮಾಡ್ತಾವೆ ಅವು ನಮ್ಮನ್ನು … ತುಂಬಾ ಚೆನ್ನಾಗಿದೆ ಲೇಖನ.

  2. Anonymous says:

    ಧನ್ಯವಾದ ಗಳು ನಿಹಾರಿಕಾ

  3. ಲತಾ says:

    ಚೆನ್ನಾಗಿದೆ ಬರಹ.

  4. Shankari Sharma says:

    ಪ್ರಾಣಿಗಳಿಗೂ ಸಮಯಪ್ರಜ್ನೆ ಇರುವುದು ಪ್ರಕೃತಿದತ್ತ ವರ…ಸೊಗಸಾದ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: