ನನ್ನ ಪುಟ್ಟಮ್ಮ…

Spread the love
Share Button

ನನ್ನಾಕೆ ನನ್ನ ಬಾಳೊಳಗೆ ಬಲಗಾಲಿಟ್ಟು ಪ್ರವೇಶಿಸುವಾಗ ನನ್ನ ಮುಂದೆ ಜೀವನದ ಬಗೆಗೆ ಇದ್ದದ್ದು ಬರಿ ಪ್ರಶ್ನೆಗಳೇ, ಬಹುಶ ಆಕೆಯ ಮನದಲ್ಲೂ …ಇಬ್ಬರು ಅಪರಿಚಿತ ಪರಿಚಿತರು ಒಂದೇ ದಾರಿಯ ಎರಡು ಹೆಜ್ಜೆಗಳಾಗಿ ಪಯಣ ಪ್ರಾರಂಭಿಸಿದೆವು ನಮ್ಮದಲ್ಲದ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಹುಡುಕಲು ಜೊತೆಯಾದೆವು..ಕಾಲ ಸರಿದು ಪಯಣದ ದೂರ ತುಸು ದೂರವೇ ಬಂದೆವೆನಿಸುವಾಗ ನಮ್ಮಿಬ್ಬರನ್ನ ಒಂದೇ ಎಂದು ಹೇಳುವ ಹೆಜ್ಜೆಯ ಜೊತೆಯಾಯಿತು..ಪುಟ್ಟ ಹೆಜ್ಜೆ ಅದು ಆದರೆ ಬದುಕ ಪಯಣದ ದೊಡ್ಡ ದಾರಿಗೆ ಹೊಸ ದಿಕ್ಕನ್ನೇ ತಂದುಕೊಟ್ಟಿತು.

ಬದುಕಲ್ಲಿದಿದ್ದು ನಾನು ನನ್ನವಳು… ನಮಗೆಂದು ಬಂದವಳು.. ನಮ್ಮ ಮಗಳು. ಗಂಡ ಅನ್ನೋ ಹುದ್ದೆ ಜೊತೆಗೆ ಅಪ್ಪ ಅನ್ನೋ ಬಡ್ತಿ ಸಿಕ್ಕಿದ ಖುಷಿ ಅದ ಹೇಳಲು ನಾ ಕವಿ ಅಲ್ಲ , ಅಂತ ಪದಗಳ ನಿಘಂಟೂ ನನ್ನಲ್ಲಿಲ್ಲ,ಅದ ಅನುಭವಿಸಿದ ಅದೃಷ್ಟವಂತ ಅಷ್ಟೆ. ಆ ಪುಟ್ಟ ಕಾಲಿಗೆ ಗೆಜ್ಜೆ ಕಟ್ಟಿ ಕಣ್ಣುತುಂಬಿಕೊಂಡ ಕ್ಷಣಗಳು,ಹೂವಿಗಿಂತ ಮೃದುವಾದ ಕೈ ಬೆರಳ ಪದೇ ಪದೇ ನನ್ನ ಒರಟಾದ ಕೆನ್ನೆಗೆ ತಾಗಿಸಿ ಕಚಗುಳಿ ಅನುಭವಿಸಿದ ಅನುಭವ,ನಕ್ಕರು,ಅತ್ತರು ಕೆಂಪಾಗೊ ಆ ಬೆಣ್ಣೆ ಕೆನ್ನೆಯ ಮುದ್ದಾಡಿದ ಆ ದಿನಗಳು,ಪ್ರತಿ ದಿನ ಹೆಗಲ ಮೇಲೆ ನನ್ನ ಪುಟ್ಟ ದೇವತೆಯ ಮೆರವಣಿಗೆ ಮಾಡುತಿದ್ದ ದಿನಗಳು  ಕಳೆದು ವರ್ಷಗಳೇ ಆಗಿದೆ ಎಂದು ಗೊತ್ತಾಗಿದ್ದು,ನನ್ನ ರಾಜಕುಮಾರಿಗೆ ರಾಜಕುಮಾರನ ಹುಡುಕೋ ಸಮಯ ಬಂದಿದೆ ಎಂದು ಸುತ್ತಲಿನವರು ಹೇಳಿದಾಗ ನನ್ನಾಕೆ ನನ್ನಲ್ಲಿಗೆ ಪ್ರಪಂಚದ ಚಿಂತೆ ಎಲ್ಲಾ ಹೊತ್ತವಳಂತೆ ಬಂದಾಗಲೇ.


(PC:ಸಾಂದರ್ಭಿಕ ಚಿತ್ರ ಅಂತರ್ಜಾಲ)

ನಮ್ಮ ಪುಟ್ಟಿಯ ಮದುವೆ ಮಾಡುವುದಿಲ್ಲವೇ ನೀವು ? ಇನ್ನು ತೊಟ್ಟಿಲ ಮಗುವೆಂದು ತಿಳಿದಿರುವಿರಾ ? ಆಕೆಯ ಜೊತೆಗಿನ ಹೆಣ್ಣು ಮಕ್ಕಳೆಲ್ಲ ಗಂಡನ ಮನೆ ಸೇರಿ ಸಂಸಾರ ತೂಗುಸ್ತಿದ್ದಾರೆ ..ನಿಮಗೆ ಮಗಳನ್ನ ನಿಮ್ಮ ಆಸರೆಯಲ್ಲಿ ಇನ್ನು ಎಷ್ಟು ದಿನ ಬೆಚ್ಚಗೆ ಇಡಬಹುದು ಅನ್ನೋ ಯೋಚನೆ? ನಾವು ಗಟ್ಟು ಮುಟ್ಟಾಗಿರೋವಾಗ್ಲೇ ಒಂದು ದಡ ಸೇರಿಸೋ ಯೋಚನೆ ಮಾಡೋ ಕಾಲ ಬಂದಿಲ್ವೇನು ?? ಆಗ್ಲೇ ೨೩ ದಾಟಿತು ಇನ್ನು ಯಾವಾಗ ಹುಡುಗನ್ನ ಹುಡುಕೋದು,ಅಪ್ಪ ಮಗಳಿಗೆ ಇಷ್ಟ ಆಗೋ ಹುಡುಗ ಸಿಗೋದು…ನಾವು ಎಲ್ಲಾ ತಯಾರಿ ಮಾಡ್ಕೊಳೋದು?? ಮದುವೆ ಎಂದರೇನು ಹುಡುಗಾಟವೇ ?? ನಿಮಗೆ ಹೇಳಿದರೆ ಅವಳಿಗೇನು ಮಹಾ ವಯಸ್ಸು ಆಗಿದೆ ಇವಾಗಷ್ಟೇ ಓದು ಮುಗಿಸಿದೆ ಮಗು ಅಂತೀರಾ…ನನ್ನ ಭಯ ಕಾಳಜಿ ನಿಮಗೆ ಯಾವತ್ತು ಅರ್ಥ ಆಗೋಲ್ಲ ಅಂತಾಳೆ ನನ್ನ ಅರ್ಧಾಂಗಿ.ನನ್ನ ಪುಟ್ಟಿಗೆ 22 ತುಂಬಿದಾಗಿನಿಂದ ಒಂದೇ ಉಸಿರಲ್ಲಿ ದಿನ ನನ್ನವಳ ಬಾಯಲ್ಲಿ ಕೇಳೋ ಮಾತಿವು,ನನ್ನ ಹೊಟ್ಟೆಗೆ ಊಟ ಹಾಕೋದು ಮರೆತರು ನನ್ನ ಕಿವಿಗೆ ಈ ವಿಷಯ ಹಾಕೋದು ಮರೆಯೋಲ್ಲ ನನ್ನಾಕೆ.
ತಾಯಿ ಜೀವ ಮಗಳ ಬದುಕಿನ ಬಗೆಗೆ ಚಿಂತಿಸುವುದು ಸಹಜವೆ. ಹುಟ್ಟಿದ ಮನೆ ತೊರೆದು ಮತ್ತೊಂದು ಮನೆಗೆ ಬಂದು ಅಲ್ಲಿಯೇ ತನ್ನ ಮತ್ತೊಂದು ಬದುಕ ಕಟ್ಟಿಕೊಳ್ಳೋ ಹೆಣ್ಣಲ್ಲವೇ ಮತ್ತೊಂದು ಹೆಣ್ಣಿಗು ಅದು ಸಹಜ ಹಾಗು ಅಷ್ಟು ಕಷ್ಟವಾಗದು ಅನ್ನೋ ನಂಬಿಕೆ ಅವಳಿಗೆ ಆದರೆ ನನಗೆ .??

ಒಬ್ಬಳನ್ನ ಮದುವೆ ಆಗಿ ನನ್ನ ಮನೆಗೆ ಕರೆತಂದಷ್ಟು ಸುಲಭವೇ ನನ್ನ ಪುಟ್ಟಮ್ಮನನ್ನು ಬೇರೊಬ್ಬ ಅಪರಿಚಿತನ ಕೈಗೆ ಒಪ್ಪಿಸಿ ಇದ್ದುಬಿಡುವುದು ಅದಕ್ಕೆ ಸ್ವಲ್ಪ ಹಿಂಜರಿಕೆ. ನನ್ನ ಮಗಳು ನನಗೆ ಇಂದಿಗೂ ಪುಟ್ಟಮ್ಮನೆ ಅವಳ ಪುಟ್ಟ ಕೈಗಳಲ್ಲಿ ಒಂದು ಸಂಸಾರದ ಜವಾಬ್ದಾರಿ ಅನ್ನೋ ಭಾರ ಇಡಲು ಮನಸು ಒಪ್ಪುತ್ತಿಲ್ಲ ಆದರೆ ನನ್ನವಳ ಮಾತು ಸರಿಯೇ ನಾನೆಷ್ಟು ದಿನ ನನ್ನ ಪುಟ್ಟಮ್ಮನ ಬೆಚ್ಚಗಿನ ನನ್ನ ಗೂಡಲ್ಲಿ ಇಡಲು ಸಾಧ್ಯ…ಅಪ್ಪ ನನಗೆ ನಿನ್ನ ಅಮ್ಮನ್ನ ಬಿಟ್ಟೋಗೋ ಯಾವ ಆಸೆಯೂ ಇಲ್ಲ ಮದುವೆ ಎಲ್ಲಾ ಏನು ಬೇಡ ಅನ್ನೋ ಮಗಳ ಹಠ ಕೂಡ ಸರಿ ಎನ್ನಿಸುತ್ತೆ ಅವಳನ್ನ ಬಿಟ್ಟಿರಬೇಕೆಂಬ ಯೋಚನೆ ಕಣ್ ಮುಂದೆ ಬಂದಾಗ.

ಪ್ರತಿ ತಂದೆಗೂ ತನ್ನ ಮಗಳು ತನ್ನಮ್ಮನ ರೂಪವೇ, ತನ್ನ ಪುಟ್ಟ ತಾಯಿಯ ಬಿಟ್ಟಿರಲು ಈ ವಯಸ್ಸಾದ ಮಗು ಇನ್ನು ಅಭ್ಯಾಸ ಮಾಡಿಕೊಳ್ಳಲೇಬೇಕು ,ಎಷ್ಟೇ ಹೆಣ್ಣು ಮಕ್ಕಳಿದ್ದರು ಅಪ್ಪನಿಗೆ ಅವರೆಲ್ಲ ಪುಟ್ಟ ತಾಯಿಯರೇ…ನನ್ನ ಪುಟ್ಟಮ್ಮನನ್ನ ಒಂದೊಳ್ಳೆ ಮನೆಯ ಸೇರಿಸಬೇಕೆಂಬ ಚಿಂತೆ ನಿದ್ದೆಗೆಡಿಸ ತೊಡಗಿತು,ಅಳೆದು ತೂಗಿ ನನ್ನ ಪುಟ್ಟ ಗೌರಿಗೆ ಸಂಬಂಧ ತರಬೇಕು ಅನ್ನೋ ಯೋಚನೆ ಹೆಚ್ಚಾಯ್ತು ತಕ್ಷಣವೇ ಎಲ್ಲಿಂದಲೋ ನನ್ನ ಪುಟ್ಟಿಯ ಧ್ವನಿ ಅಪ್ಪ ಇಷ್ಟು ಅವಸರವೇ ನನ್ನ ಕಳುಹಿಸಲು ಎಂದು ಹೇಳುವುದ ಕೇಳಿ ಏನೂ ಕಳೆದುಕೊಳ್ಳೋ ಭಾವ ಮನ ಹಿಂಡುತಿತ್ತು.

ಪುಟ್ಟಮ್ಮನನ್ನು ದೂರವಾಗಿಸಿಕೊಳ್ಳಲು ಇಷ್ಟವಿಲ್ಲದೆ ನನ್ನಾಕೆಯ ಮಾತಿಗೆ ಕಿವಿ ಕೊಡದೆ ಮತ್ತೆರಡು ವರ್ಷ ಸವೆಸಿದೆ,ನಿಜವಾದ ಭಯ ಆಗ ಶುರುವಾಗಿದ್ದು ಇನ್ನೆಷ್ಟು ದಿನ ನನ್ನ ಪುಟ್ಟ ಗೌರಿಯ ಹೀಗೆ ನಾ ಕೈ ಹಿಡಿದು ನಡೆಯುವುದು,ನಡೆಯೋ ಕಾಲುಗಳ ಚೈತನ್ಯವೇ ಕಡಿಮೆ ಆದಂತಿದೆ,ಕೈ ನರಗಳ ಬಲ ಕಡಿಮೆ ಆಗುತ್ತಿದೆ,ನನ್ನ ಪುಟ್ಟಮ್ಮನ ಕೈ ಹಿಡಿಯಲು ಬಲವಿರೋ ಕೈಗಳ ಹುಡುಕಲೇ ಬೇಕು ಅನ್ನೋ ಯೋಚನೆ ಹೆಚ್ಚಾಯಿತು.ನನ್ನ ನಾ ಮೊದಲು ಈ ದೊಡ್ಡ ಬದಲಾವಣೆಗೆ ಸಿದ್ಧಪಡಿಸಿಕೊಂಡು ನನ್ನ ಪುಟ್ಟಮ್ಮನ ಬಳಿ ಹೇಳಿದೆ ಅವಳೆಂದಳು ನಿನ್ನ ಬಲ ಕಡಿಮೆ ಆಗಿಲ್ಲ ಅದೆಲ್ಲ ನನ್ನಲ್ಲಿದೆ ನಾನೇ ನಿನ್ನ ಕೈ ಹಿಡಿದು ನಡೆವೆ ನೀ ಯೋಚನೆ ಮಾಡ್ಬೇಡ ಅಪ್ಪ ಅಂದಳು.

ನನ್ನ ಪುಟ್ಟಮ್ಮ ನನ್ನ ಮಾತಿಗೆ ಎಂದೂ ಇಲ್ಲ ಅಂದಿದ್ದೆ ಇಲ್ಲ ,ಅಪ್ಪ ಅಮ್ಮ ಆಗಿ ನಾವು ನಮ್ಮ ಆಸೆಯ ಅವಳ ಮುಂದೆ ಇಟ್ಟೆವು, ಆವಳು ಸಮಯ ತೆಗೆದುಕೊಂಡಳು ತನ್ನ ತಾ ಯಾವುದೊ ಯುದ್ಧಕ್ಕೆ ಸಿದ್ಧಪಡಿಸಿಕೊಂಡವಳಂತೆ ಬಂದು ನಿಮಗೆ ಖುಷಿ ಆಗೋದಾದ್ರೆ ಸರಿ ಅಂದಳು.ನನ್ನಾಕೆಯ ಖುಷಿಗೆ ಪಾರವೇ ಇಲ್ಲ, ಆದರೆ ನನ್ನ ಮನದ ಮೂಲೆಯಲ್ಲಿ ಸಣ್ಣ ಅಳುಕು, ಭಯ , ಸಂಕಟ ಎಲ್ಲವು ಸೇರಿ ದೊಡ್ಡ ನಾಟಕವೇ ನೆಡೆದಿತ್ತು.

ನನ್ನ ಪುಟ್ಟ ಮಗಳ ಕೈ ಹಿಡಿದು ಕನ್ಯಾದಾನ ಮಾಡುವ ಶುಭ ಸಂಕಟದ ಘಳಿಗೆಯೂ ಬಂದೇಬಿಟ್ಟಿತು….ಮದುವೆಯ ಯೋಚನೆ ಬಂದದ್ದಷ್ಟೇ ನೆನಪು ಎಲ್ಲಾ ಅದೆಷ್ಟು ಬೇಗ ಕೂಡಿಬಂದಿತು… ಅಂದರೆ ನನ್ನ ಪುಟ್ಟಿಯ ನನ್ನಿಂದ ದೂರ ಕಳಿಸಲು ಕಾದುಕೂತು ಅವಕಾಶ ಸಿಕ್ಕಿದ ತಕ್ಷಣ ನಮ್ಮ ಮನೆಯ ಆವರಿಸದಂತಿತ್ತು.

ಅಂದು ನಿನ್ನ ಆ ಪುಟ್ಟ ಪಾದಗಳಿಂದ ನನ್ನ ಎದೆಯ ಸವರಿದೆ,
ಇಂದು ಅಳುವ ಕಂಗಳಿಂದ ನನ್ನ ಎದೆಯ ಒದ್ದೆಯಾಗಿಸಿದೆ…
ಅಂದು ನಿನ್ನ ಆ ಎಳೆಯ ಕಿರುಬೆರಳ ನನ್ನ ಕೈಲಿ ಇಟ್ಟು ನಡೆಯುವುದ ಕಲಿಸು ಅಂದೆ,
ಇಂದು ನೀನೇ ಮುಷ್ಠಿ ಬಿಗಿ ಇಡಿದರೂ, ನಿನ್ನ ನಾ ಬಿಗಿಯಾಗಿ ಹಿಡಿಯಲಾರದೆ ಹೋದೆ..

ನೋಡ ನೋಡುತ್ತಿದ್ದಂತೆ ನನ್ನ ಪುಟ್ಟಮ್ಮ ಬೇರೆ ಮನೆಯ ಬೆಳಗಲು ಹೊರಟು ನಿಂತಾಗಿತ್ತು,ನನ್ನಾಕೆ ಇಷ್ಟು ದಿನ ಮಗಳ ಮದುವೆ ಮಾಡಿ ಹೇಳುತ್ತಿದ್ದವಳು ತನ್ನ ಸೀರೆಯ ಸೆರಗು ಪೂರ್ತಿ ತೋಯ್ದು ಹೋಗೋವರೆಗೂ ಕಣ್ಣೀರಿಡುತ್ತಿದ್ದಳು.ನನ್ನ ಪುಟ್ಟಿಯ ಪುಟ್ಟ ಕೈಗಳು ಕಣ್ಣ ದೃಷ್ಠಿ ಹಾಯುವಷ್ಟು ದೂರದ ತನಕ ಕಾಣುತ್ತಲೇ ಇದ್ದವು ಅಪ್ಪ ನನ್ನ ಮರೆತು ಬಿಡಬೇಡ ಅಂದಂತಿತ್ತು ಅವು.ನನ್ನ ಪುಟ್ಟ ಗುಬ್ಬಿಗೆ ನಾ ಹೇಳಿದ್ದು ಇಷ್ಟೇ ನಿನಗೆ ಹೊಸದೊಂದು ಗೂಡು ಹುಡುಕಿರುವೆ ಎಂದು,ಏನು ಹೇಳದೆ ಕೇಳದೆ ತಲೆ ತಗ್ಗಿಸಿ…. ಕೈ ಹಿಡಿದು ಹಿಂಬಾಲಿಸಿ ನಡೆದೇ ಬಿಟ್ಟಿತು ಹೊಸ ಗೂಡಿನೆಡೆಗೆ.ಅದರ ಮೌನ ಏನೋ ಹೇಳಿದಂತಿತ್ತು…..

ನಾ ನನ್ನ ಬಗೆಗೆ ಕನಸ ಕಂಡೆ…..ನನ್ನ ಕನಸುಗಳಿಗೆ ಬಣ್ಣ ಹಚ್ಚಲು ಕುಂಚ ನೀವಾದಿರಿ..
ನಾನಿನ್ನೂ ನಿಮ್ಮೊಂದಿಗೆ ಬಣ್ಣ ಬಳಿಯುವ ಯೋಜನೆಯ ಯೋಚನೆಯಲ್ಲಿದ್ದೆ,ಆದರೆ ನೀವು ಅದಾಗಲೇ 
ನನ್ನ ಕನಸ ಇನ್ಯಾರದೋ ಮನೆಯ ಗೋಡೆ ಶೃಂಗರಿಸಲು ಉಡುಗೊರೆಯಾಗಿ ಕೊಡುವಸಿದ್ಧತೆಯಲ್ಲಿದ್ದಿರಿ...ಅಂದಂತಿತ್ತ್ತು ನನ್ನ ಪುಟ್ಟ ಗುಬ್ಬಿ.ಹೊಸತನದ ಗಾಳಿ ಹೆಚ್ಚಾಗಿ ತಾಗದಿರಲಿ ನನ್ನ ಮರಿಗೆ..ಈ ಗೂಡಿಗಿಂತ ಹೆಚ್ಚು ಬೆಚ್ಚನೆಯ ಭಾವ ಸಿಗಲಿ ಆ ಗೂಡಲಿ ನನ್ನ ಪುಟ್ಟ ತಾಯಿಗೆ.

ನನ್ನ ಮನೆಯ ಜ್ಯೋತಿಯದು ನಿಮ್ಮ ಮನೆ-ಮನಗಳನ್ನು ಬೆಳಗಲಿ ,
ನನ್ನ ಮನೆಯ ಹೂವು ಅದು ನಿಮ್ಮ ಮನೆಯ ಪೂಜೆಗಾಗಲಿ,
ನನ್ನ ಮನೆಯ ನಗುವದು ನಿಮ್ಮ ಮನೆಯ ಸಡಗರವ ಹೆಚ್ಚಿಸಲಿ,
ನನ್ನ ಮನೆಯ ಬಣ್ಣವದು ನಿಮ್ಮ ಮನೆಯ ಕನಸ ರಂಗೇರಿಸಲಿ,
ನನ್ನ ಮನೆಯ ಸಂಪತ್ತು ನನ್ನ ಮಗಳು ನಿಮ್ಮ ಮನೆಯ ನಿಧಿಯಾಗಲಿ.

ಮನೆ ಮನಗಳೆರಡೂ ಖಾಲಿ ಅನ್ನಿಸುತ್ತಿದೆ….25 ವರ್ಷ ಜೊತೆಗಿದ್ದ ಗುಬ್ಬಿ ಗೂಡು ಬಿಟ್ಟು 25ನಿಮಿಷ ಕಳೆದಿಲ್ಲ ಮನೆಯೊಳಗಿನ ಮೌನ ಸಾಕೆನಿಸಿದೆ.ಗೆಜ್ಜೆ ಕಟ್ಟಿ ಬಿಟ್ಟ ಪುಟ್ಟ ಹೆಜ್ಜೆಗಳ ಸಪ್ಪಳವಿಲ್ಲ, ಪಟಪಟ ಹೊರಬೀಳುತ್ತಿದ್ದ ತರಲೆ ಮಾತುಗಳಿಲ್ಲ,ಹೇಳಿದ್ದನ್ನು ಕೇಳದೆ ಎದುರಾಡಿ ಬೈಗುಳದ ಜೊತೆಗೆ ಕೆಲವೊಮ್ಮೆ ವದೇ ತಿಂದು ಕಣ್ಣೀರಿಟ್ಟ ಅಳುವೂ ಇಲ್ಲ ..ದಾನ ದಾನಗಳಲ್ಲಿ ಶ್ರೇಷ್ಠ ದಾನ ಕನ್ಯಾದಾನ ಅನ್ನುತ್ತಾರೆ ಅದರ ಪುಣ್ಯ ಏಳೇಳು ಜನ್ಮಕ್ಕೆ ಅನ್ನುತ್ತಾರೆ ಅವರ್ಯಾರೋ ಹೆಣ್ಣು ಮಕ್ಕಳಿಲ್ಲದವರು ಇರಬೇಕು.

-ಮಾಲಾ ಏನ್ ಮೂರ್ತಿ

12 Responses

 1. Anonymous says:

  ಹೆಣ್ಣು ಹೆತ್ತ ಎಲ್ಲರ ಸಂಕಟವೂ ಇಲ್ಲಿ ಮಿಳಿತವಾಗಿದೆ.ಪುಟ್ಟಮ್ಮನ ಬದುಕು ಸುಂದರವಾಗಲಿ.

 2. Hema says:

  ಆಪ್ತ ಬರಹ .

 3. Pallavi Rao says:

  Very touching..

 4. Girish Giri says:

  ಅಬ್ಬಾ….ಸುಪರ್

 5. Parvathi Honnappa says:

  Prathiyondu hennu makkala thande thaaiyara manadaalada maathugalannu sogasaagi vivarisiddeeri.

 6. Shankara Narayana Bhat says:

  ಬಹಳ ದೀರ್ಘವಾಗಿದೆ ಲೇಖನ, ಆದರೆ ಅದರಲ್ಲಿ ನೈಜವಾಗಿದೆ,

 7. Nayana Bajakudlu says:

  ಯಸ್, ಯಾಕೆ ಇಂತಹ ಹೃದಯ ಕಲಕುವ ಸಂಪ್ರದಾಯ??, ಎಷ್ಟು ನೋವಿದೆ ಅಲ್ಲಿ ಹೆಣ್ಣನ್ನು ಇನ್ನೊಂದು ಮನೆಯ ದೀಪವಾಗಿಸುವಾಗ,
  ಸುಂದರ, ಹೃದಯ ತಟ್ಟುವಂತಹ ನಿರೂಪಣೆ

 8. Shankari Sharma says:

  ಕಥಾ ನಿರೂಪಣೆ ಹೆಣ್ಣು ಹೆತ್ತ ಎಲ್ಲಾ ತಾಯಂದಿರನ್ನೂ ಮುಟ್ಟುವಂತಿದೆ.

 9. Roopa Halgeri says:

  Very beautiful article.. very emotional.. indicates family relationship. How actually a girl’s dad and mom would feel during kanyadana.. it’s a mixture feeling for them.. just loved it. No words to explain this awesome.. am a big fan of you ..

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: