ವಿನಯಚಂದ್ರರವರ “ಗೆಳತೀ..” ಕವನ ಸಂಕಲನ

Share Button

ವಿನಯ್ ಚಂದ್ರರವರ ‘ಗೆಳತೀ’ ಕವನ ಸಂಕಲನ ಓದಿದೆ. ಒಟ್ಟು 83 ಕವಿತೆಗಳನ್ನೊಂಡ ಈ ಸಂಕಲನದಲ್ಲಿ ಕವಿಗಳು ತಮ್ಮ ಪ್ರಿಯತಮೆಗಾಗಿ ಬರೆದ ಅಥವಾ  ಪ್ರಿಯತಮೆಯ ಬಗೆಗಿನ ಕಾಳಜಿಗಾಗಿ, ಅವಳ ಗಮನಕಾಗಿ, ಮನಸಿನ ನಿವೇದನೆಗಾಗಿ, ವಿವರಿಸಲಸಾಧ್ಯವಾದ ಪ್ರೀತಿ ಎಂಬ ಭಾವದಿಂದ ಬರೆದಿರುವ ಸೊಗಸಾದ ಕವಿತೆಗಳಿವೆ.

ಪ್ರೀತಿ ಎಂದರ ಆಕರ್ಷಣೆಯಿಂದಾಗುವ, ಪಡೆಯುವವವರೆಗೆ ಕಾಡುವ, ಪಡೆದ ನಂತರ ವ್ಯಸನದಂತಾಗುವ, ಇಂದ್ರಿಯಕೆ ನಿಲುಕುವ ಸ್ಥಿತಿಯೆಂಬಂತೆ ಬಿಂಬಿತವಾಗಿರುವ ಹಾಗೂ ಪುಸ್ತಕಗಳನ್ನು ಓದದೇ ಕೇವಲ ದೃಶ್ಯ ಮಾಧ್ಯಮದಲ್ಲಿ ತೋರಿಸಲಾಗುವ ಅಥವಾ ಸಿನಿಮಾಗಳಲ್ಲಿ ವಿವರಿಸುವ ಪ್ರೀತಿಯ ತಪ್ಪು ನಿರೂಪಣೆಯನ್ನೇ ನಂಬಿಕೊಂಡು ಅದಕ್ಕೆ  ಅಂಟಿಕೊಂಡಿರುವ ಇಂದಿನ ಯುವ ಪೀಳಿಗೆಯ ಇಂದಿನ ಕಾಲಘಟ್ಟದಲ್ಲಿ ಸಾತ್ವಿಕ ಪ್ರೀತಿ ಎಂದರೇನು ಎಂಬುದರ ಸಾಂದರ್ಭಿಕ, ಸಕಾಲಿಕ ಕವಿತೆಗಳನ್ನು ಈ ಪುಸ್ತಕದಲ್ಲಿ ಕಾಣಬಹುದು.

ಅಷ್ಟಕ್ಕೂ ಇಂದಿನ ಪೀಳಿಗೆಯಷ್ಟೇ ಅಲ್ಲದೆ ಹಿಂದಿನ ಪೀಳಿಗೆಯ ಜನಸಾಮಾನ್ಯರೂ ಸಹ ಪ್ರೀತಿಯನ್ನು ತಪ್ಪಾಗಿ ವಾಖ್ಯಾನಿಸಿದ್ದಾರೆ. ಪ್ರೀತಿ ಎಂದರೆ ಕೇಳಿದ್ದನ್ನು ಪೂರೈಸುವ ಅಥವಾ ತನ್ನ ತಾಳಕ್ಕೆ ನರ್ತಿಸುವ ಅಪೇಕ್ಷೆಯೆಂದು, ತನ್ನ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳುವ ನಿರೀಕ್ಷೆಯನ್ನೇ ಪ್ರೀತಿ ಎಂಬಂತೆ ಬಹುತೇಕವಾಗಿ ನಂಬಲಾಗಿದೆ. ಪ್ರೀತಿಯೆಂದರೆ ಬಂಧನವೆಂಬಂತೆ, ವಸ್ತುವಂತೆ ತಿಳಿಯಲಾಗಿದೆ.

ಆದರೆ ಪ್ರೀತಿ ಎಂಬುದು ಬಿಡುಗಡೆ, ಪರಸ್ಪರ ಗೌರವ, ಇದ್ದಂತೆಯೇ ಒಪ್ಪಿಕೊಳ್ಳುವ, ಏನನ್ನೂ ನಿರೀಕ್ಷಿಸದೇ ತನ್ನ ಪ್ರೀತಿಪಾತ್ರರ ಸಂತೋಷಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಿರುವ, ಪ್ರೀತಿ ಪಾತ್ರರ ಖುಷಿಯನ್ನಷ್ಟೇ ಧ್ಯೇಯವಾಗಿಸಿಕೊಳ್ಳುವುದೇ ನಿಜವಾದ ಪ್ರೀತಿ. ಇದನ್ನು ವಿನಯ್ ರವರು ತಮ್ಮ ಕವಿತೆಗಳಲ್ಲಿ ನಿರೂಪಿಸಿದ್ದಾರೆ.

“ಒಪ್ಪಿಸಿಕೋ ಗೆಳತಿ
ನಿನ್ನನ್ನೇ ನಿನಗೆ ನೀಡುತ್ತಿದ್ದೇನೆ
ಒಪ್ಪಿಸಿಕೋ ಗೆಳತಿ
ನಿನ್ನೊಳಗೇ ನಾನೂ ಅವಿತಿದ್ದೇನೆ” ಎಂಬ ಸಾಲುಗಳಲ್ಲಿ ಹೇಗೆ ನಿಜವಾದ ಪ್ರೀತಿಯು ಬಂಧನವಾಗದೇ ಸ್ವತಂತ್ರವಾದುದು ಎಂಬುದನ್ನು ನಿರೂಪಿಸಲಾಗಿದೆ.

“ಗೂಡೊಂದ ಕಟ್ಟಿದ್ದೇನೆ
ತತ್ತಿ ಇಡಲೇ ಬೇಕೆಂದಿಲ್ಲ
ಹಾರಿ ಬಾ ಗೆಳತಿ
ತೇಲಿ ಹೋಗೋಣ”

ಈ ಸಾಲುಗಳಲ್ಲಿ ಪ್ರೀತಿಯೆಂಬುದು ಯಾವುದೇ ನಿರೀಕ್ಷೆ, ಅಪೇಕ್ಷೆಗಳಿಲ್ಲದ ಕೇವಲ ಪ್ರೇಮಿಯ ಉಪಸ್ಥಿತಿಯಲ್ಲಷ್ಟೇ ಸುಮಧುರ ಬದುಕು ಇದೆ ಎಂಬುದನ್ನು ಕವಿತೆ ಕಟ್ಟಿ ಕೊಡುತ್ತದೆ.

ಪ್ರೇಮಿ ಜೊತೆಗಿದ್ದರೆ ಲೋಕದಲ್ಲಿ ಬೇರೆ ಯಾರೂ ಇಲ್ಲ ಎಂಬ ಭಾವ ಅಥವಾ ಯಾರೂ ಇರದ ಲೋಕದಲ್ಲೇ ನಾವಿಬ್ಬರು ಇದ್ದೇವೆ ಅಥವಾ ಇರುವಂತಾಗಲಿ ಎಂಬ ಪ್ರಾಮಾಣಿಕ ಭಾವ ಸೂಸುವ ಸಾಲುಗಳು ಹೀಗಿವೆ.

“ಕೈಕಯಿ ಕೌರವರು ಮತ್ತೆ ಹುಟ್ಟಲೆಂದು ಹುಟ್ಟಿ ನಮ್ಮ ಕಾಡಿಗಟ್ಟಲೆಂದು
ಕಾತುರದಿಂದ ಕಾಯುತ್ತಿದ್ದೇನೆ
ನಾರು ಮಡಿಯೇ ಸಾಕು
ಪರ್ಣಕುಟಿಯೂ ಸಾಕು
ಮಾಯಾಜಿಂಕೆಯಿರದ ರಾವಣರಿರದ
ಏಕಾಂತ ದೊರೆವ ಕಾಡಿಗೆ ತೆರಳೋಣ
ಹೊರಟುಬಿಡು ಗೆಳತೀ
ವನವಾಸದಲ್ಲೇ ಅಜ್ಞಾತರಾಗಿ ಹೋಗೋಣ.”

ಹೀಗೆ ” ಗೆಳತೀ” ಕವನಗಳನ್ನು ನಿರಂತರವಾಗಿ ಬರೆಯುವ, ಬರೆದು ಫೇಸ್ ಬುಕ್ ಗೆ ಹಾಕುವ ಸಂದರ್ಭದಲ್ಲಿ ನನಗೆ ಅನುಮಾನ ಬಂದು…

“ಇದು ಒಬ್ಬಳೆ ಗೆಳತಿಗಾಗಿ ಬರೆದ ಕವಿತೆಗಳ ಸರಣಿಯೋ ? ಅಥವಾ ಗೆಳತಿಯರ ಸರಣಿಗಾಗಿ ಬರೆದ ಕವಿತೆಗಳೋ? ” ಎಂದು ನಾನು ಕೇಳಿದ್ದಿದೆ. ಅದಕ್ಕೆ ವಿನಯವಾಗಿಯೇ ನಸುನಗುತ್ತಾ ಹಾಗೆಲ್ಲಾ ಹೇಳಲು ಆಗುವುದಿಲ್ಲ ಎಂದು ಹಾಸ್ಯಮಾಡಿದ್ದು ನನಗೆ ನೆನಪಿದೆ.

ಹೀಗೆ ಗೆಳತಿಯ ಸಾಂಗತ್ಯಕ್ಕಾಗಿ ಹಾತೊರೆಯುವ, ಗೆಳತಿಯ ಮೌನಕ್ಕೆ ಬೆದರುವ, ವಿರಹದಿಂದ ಚಡಪಡಿಸುವ, ಪ್ರಕೃತಿಯ  ಜೀವ ಸಂಕುಲಗಳಲ್ಲೂ ಗೆಳತಿಯನ್ನೇ ಹುಡುಕುವ, ಕನಸುಗಳನ್ನು ಕಾಣುವ, ಮುನಿಕೊಂಡಾಗ ಸಮಾಧಾನಿಸುವ, ಎಲ್ಲೂ ಪ್ರೀತಿಗೆ ಕಾಮದ ನೆರಳನ್ನು ಕನಸಿನಲ್ಲೂ ಸೋಕದಂತೆ ಕನಸಿಗೆ ಎಚ್ಚರಿಸುವ ನಿಷ್ಕಲ್ಮಶ ಪ್ರೀತಿ ಅಂದರೇನು ಅಥವಾ ಪ್ರೀತಿಯೆಂಬುದೇ ನಿಷ್ಕಲ್ಮಶ, ಮಧುರ, ನವಿರಾದ ಸ್ಥಿತಿಯೆಂಬುದನ್ನು ವಿನಯಚಂದ್ರರವರು ತನ್ನ ಗೆಳತಿಯನ್ನೇ ಧ್ಯಾನಿಸುತ್ತಾ ಬರೆದ ಕವಿತೆಗಳನ್ನು ಓದುವುದು ಖುಷಿಯ ಸಂಗತಿಯಾಗಿದೆ.

“ಮೆದುಳು ಸತ್ತೂ ಬದುಕಿದವರಿದ್ದಾರೆ ನಮ್ಮಲ್ಲಿ
ಹೃದಯ ಸತ್ತವರಾರೂ ಬದುಕಿದ್ದ ಕಂಡಿಲ್ಲ ಜಗದಲಿ”

ಎಂಬ ಸಾಲುಗಳಲ್ಲಿ ಪ್ರೀತಿ ಎಂಬುದು ಮೆದುಳಿನಲ್ಲಿ ಘಟಿಸುವುದಲ್ಲ ಅದು ತಾನಾಗೆ ಹೃದಯದಲ್ಲಿ ಘಟಿಸುವಂತದ್ದು ಎಂಬುದನ್ನು ಸಾರುತ್ತಿದೆ. ಪ್ರೀತಿಯೆಂದರೇನು ಅನ್ನುವುದರ ತಪ್ಪು ಕಲ್ಪನೆಯಲ್ಲಿರುವ ಸಮಾಜಕ್ಕೆ, ಪ್ರೀತಿಯೆಂದರೇನು ಎಂಬುದ ತಿಳಿಯಲು ಈ ಕವಿತೆಗಳು ಸಹಕಾರಿಯಾಗಲಿವೆ.

 ಶರತ್ ಪಿ.ಕೆ. ಹಾಸನ

3 Responses

  1. Nayana Bajakudlu says:

    ಧನ್ಯವಾದಗಳು , ಕವನ ಸಂಕಲನದ ಪರಿಚಯ ಮಾಡಿಸಿ ಕೊಟ್ಟದ್ದಕ್ಕಾಗಿ. ನಿರೂಪಣೆ ಪುಸ್ತಕವನ್ನು ಓದುವಂತೆ ಪ್ರೇರೇಪಿಸುತ್ತದೆ

  2. Shankari Sharma says:

    ಪುಸ್ತಕ ವಿಮರ್ಶೆ ಚೆನ್ನಾಗಿ ಮೂಡಿಬಂದಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: