ಹೀಗೊಂದು ಹರಟೆ
ಕಾಲಘಟ್ಟ: ಎಪ್ಪತ್ತು ಎಂಭತ್ತರ ದಶಕ.
ರಮ, ಅನಿತ, ರೂಪ ,ಶಶಿ (ಎಲ್ಲ ಮಧ್ಯಮ ವರ್ಗದ ಗೃಹಿಣಿಯರು)
ರಮ: (ಬೆವರೊರೆಸಿಕೊಳ್ಳುತ್ತ) ಅಲ್ಲ “ಪಾಪಿ ಪಾತಾಳ ಹೊಕ್ಕರೂ ಮೊಣಕಾಲುದ್ದ ನೀರು“ ಅಂತ ಈ ಬೀದಿ ಎಲ್ಲ ತಿರುಗಿದರೂ ಒಂದು ಲೋಟ ಸಕ್ಕರೆ ಸಿಗಲಿಲ್ವೇ . ಆ ಹಾಳು ನೆಂಟರೋ “ಹೋದ್ಯ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿಲಿ ” ಅಂತ ಒಬ್ಬರನ್ನ ಸಾಗಹಾಕಿ ಬಂದರೆ ಇನ್ನೊಬ್ಬರು ವಕ್ಕರಿಸ್ತಾರೆ. ಆ ರೇಶನ್ನಲ್ಲಿ ಕೊಡೋ ಮೂರು ಕೇಜಿ ಸಕ್ಕರೆನೋ “ರಾವಣಾಸುರನ ಹೊಟ್ಟೆಗೆ ಅರಕಾಸಿನ ಮಜ್ಜಿಗೆ ” ಅಂತ ಮೂರು ದಿನ ಬರಲ್ಲ.ಎಲ್ಲ ಕರ್ಮ.(ಲೊಚಗುಟ್ಟುವಳು).
ಅನಿತ: ಏನ್ರಿ ಅದು ರಮ ನಡು ರಸ್ತೆಯಲ್ಲಿ ನಿಂತುಕೊಂಡು ಕರ್ಮ ಅಂತಿದೀರಿ. ನೀವೇನೇ ಹೇಳಿ ಇವರೇ “ರಾಮೇಶ್ವರಕ್ಕೆ ಹೋದ್ರು ಶನೇಶ್ವರನ ಕಾಟ ತಪ್ಪದು” ಅಂತಾರಲ್ಲ ಹಾಗೆ ಈ ಹೆಂಗಸರಿಗೆ ಎಲ್ಲಿ ಹೋದರೂ ಲೊಚಗುಟ್ಟೋದು ತಪ್ಪಲ್ಲ.
ರಮ : (ಸಂಕೋಚದಿಂದ ) ಹ್ಹೆ… ಹ್ಹೆ… ಏನಿಲ್ಲ ಹೀಗೇ ಸುಮ್ಮನೆ .
ಅನಿತ: ಇವತ್ತಿನ ಪೇಪರ್ ನೋಡಿದಿರಾ “ದುರ್ಭಿಕ್ಷದಲ್ಲಿ ಅಧಿಕಮಾಸ ” ಅಂತ ಪ್ರತಿ ಬಜೆಟ್ನಲ್ಲೂ ಏರ್ತಾ ಇರೋ ಬೆಲೆ ಸಾಲ್ದು ಅಂತ ಬಸ್ಸು ರೈಲು ಎಲ್ಲದರ ದರನೂ ಏರಿಸಿ ಬಿಟ್ಟಿದ್ದಾರಲ್ಲ ರೀ.ಇನ್ನೇನ್ ರೀ ನಮ್ಮಂಥವರು ಬದುಕೋದು.
ರೂಪ:(ಸೆರಗಿಗೆ ಕೈಯೊರೆಸುತ್ತಾ ಬರುವಳು) ಏನು ಇಬ್ಬರೂ ಆರಾಮವಾಗಿ ನಿಂತುಬಿಟ್ಟಿದೀರಲ್ಲ ಇಷ್ಟು ಬೇಗ ಕೆಲಸ ಎಲ್ಲ ಆಯಿತೇ.
ಅನಿತ : ರೂಪ ಬನ್ನೀಪ್ಪಾ ಕೆಲಸಕ್ಕೇನು ಮಾಡ್ತಾ ಇದ್ದರೆ ಇರತ್ತೆ. ಅಂದಹಾಗೇ “ದೇಶ ಸುತ್ತು ಕೋಶ ಓದು “ಅಂತ ನಿಮ್ಮ ಮನೆಯವರು ಯಾವಾಗಲೂ ಓದ್ತಾನೇ ಇರ್ತಾರಂತೆ . ಹಾಗಂತ ನಮ್ಮ ಪಕ್ಕದ ಮನೆಯವರು ಹೇಳ್ತಾ ಇದ್ರು. ಡೆಲ್ಲಿಗ್ಹೋಗಿದ್ರಲ್ಲ ಏನೇನ್ ತಂದ್ರೋ…..
ರೂಪ: ತಂದ್ರು “ದರಿದ್ರ ಗಂಡ ದಂಡಿಗೆ ಹೋಗಿ ಮಕ್ಕಳ ಕೈಗೆ ಬೆರಣಿ ತಂದಾ” ಅಂತ ಒಂದು ರಾಶಿ ಪುಸ್ತಕಾನ .
ರಮ: ಅದಕ್ಯಾಕೆ ಬೇಜಾರು ಮಾಡ್ಕೋತೀರ ಬಿಡಿ ಇವರೇ. ಸರಸ್ವತಿ ಎಲ್ಲಾರಿಗೂ ಒಲಿಯಲ್ಲ ಅದಕ್ಕೂ ಏಳೇಳು ಜನ್ಮದಲ್ಲಿ ಪುಣ್ಯ ಮಾಡಿರಬೇಕು.
ರೂಪ : ಏನ್ ಸರಸ್ವತಿನೋ ಏನ್ ಪುಣ್ಯನೋ “ತಿನ್ನೋಕೆ ತೌಡಿಲ್ಲ ವಾರಕ್ಕೆ ಹಂದಿ ಸಾಕಿದರು” ಅಂತ ಇವರು ಪುಸ್ತಕಕ್ಕೇ ದುಡ್ಡು ಸುರೀತಾ ಇದ್ರೆ ಸಂಸಾರದ ಗತಿ ಏನ್ರೀ. ಎಲ್ಲ ಅಷ್ಟೇ “ಹಣವಿದ್ದ ಗಂಡನ್ನ ಪಡೆದರೂ ಋಣವಿದ್ದಷ್ಟೇ ಭಾಗ್ಯ” ಅಂತ ಪುಣ್ಯಾತ್ಮರ ಮನೆಯಲ್ಲಿ ಚಿನ್ನ ,ಬೆಳ್ಳಿ , ಒಡವೆ, ವಸ್ತ್ರ ಅಂತ ಇದ್ರೆ ನಮ್ಮನೆ ತುಂಬ ಪುಸ್ತಕಾನೋ ಪುಸ್ತಕ… ಹೋಗ್ಲಿ ಬಿಡಿ , ಎಷ್ಟು ಹೇಳಿದರೂ ಅಷ್ಟೇ. ಅಂದಹಾಗೇ ನಿಮ್ಮ ಮಗ ಎಲ್ರೀ ಅನಿತ ಮೂರು ದಿನದಿಂದ ಕಾಣ್ತಾನೇ ಇಲ್ಲ.
ಅನಿತ : ಏನ್ ಹೇಳಲಿ ನನ್ನ ಮಗನ ಕಥೆ , ಸ್ಕೂಲ್ಗೆ ಹೋಗ್ತಾ ಸುಮ್ಮನೆ ಹೋಗಬಾರದಾ ಯಾರೋ ದಾಂಡಿಗನ ಜೊತೆ ಜಗಳ ಆಡಿ “ಆಯ್ಕೊಂಡು ತಿನ್ನೋ ಕೋಳಿ ಕಾಲು ಮುರಿದ ಹಾಗೆ “ ಚೆನ್ನಾಗಿ ಹೊಡತ ತಿಂದು ಬಂದಿದಾನೆ ರೀ. ಮೂರು ದಿನದಿಂದ ಜ್ವರ ಮೇಲೆದ್ದಿಲ್ಲ. ಸ್ಕೂಲ್ಗೂ ಹೋಗಿಲ್ಲ ಕಣ್ರೀ.
ರೂಪ : ಅಯ್ಯೋ ಪಾಪ ತುಂಬಾ ಪೆಟ್ಟಾಗಿರಬೇಕು ಅಲ್ವೇ. ಈ ಗಂಡು ಹುಡುಗರು ಮಾಡೋದೇ ಹೀಗೆ. “ಬೀದೀಲಿ ಹೋಗೋರನ್ನ ಕೆಣಕ ಅವರು ಬಂದು ನನ್ನ ತದಕ “ ಅಂತ.
ಅನಿತ: ಇನ್ನೇನ್ ಹೇಳಿ ಮಕ್ಕಳು ಮಾಡೋದೆಲ್ಲ ಹೀಗೇನೇ. “ಆಡ್ಕೊಳ್ಳೋರ ಮುಂದೆ ಎಡವಿ ಬಿದ್ದ ಹಾಗೆ”
ರಮ: ಅದಕ್ಯಾಕೆ ಬೇಜಾರು ಮಾಡ್ಕೋತೀರ ಇವರೇ. “ನಿಮ್ಮನೆ ದೋಸೇ ತೂತಾದ್ರೆ ನಮ್ಮನೆ ಕಾವಲಿನೇ ತೂತು” ಅನ್ನೋ ಹಾಗೆ ಎಲ್ಲಾ ಮಕ್ಕಳೂ ಹೀಗೇ ಇರ್ತಾರೆ ಬಿಡಿ
ರೂಪ : “ಮಾತಿಗೆ ಮಾತು ಬಂದಾಗ ಸೋತೋನೇ ಜಾಣ” ಅಂತ ನಿಮ್ಮ ಮಗ ಸುಮ್ಮನಿದ್ದು ಬಿಡಬೇಕಿತ್ತು . ಹುಡುಗರಿಗೆ ಅಷ್ಟೆಲ್ಲ ತಿಳೀಬೇಕಲ್ಲ.
ಅನಿತ: ಅದೂ ಸರಿ ಅನ್ನಿ. ಮಕ್ಕಳೇನು ದೊಡ್ಡೋರೇ ಇದನ್ನು ಅರ್ಥ ಮಾಡ್ಕೊಳ್ಳೋಲ್ವಲ್ಲ. ನಾನೂ ಹೇಳ್ತಾನೇ ಇರ್ತೀನಿ , “ದುಷ್ಟರನ್ನ ಕಂಡರೆ ದೂರ ಇರು” , ಅವರು “ಗೇಣು ಬಿಡು ಅಂದ್ರೆ ನೀನು ಮಾರು ಬಿಡು” ಅಂತ. ಎಲ್ಲಿ ಕೇಳ್ತಾರೆ ಈಗಿನ ಕಾಲದ ಮಕ್ಕಳು.
ರಮ : ಓ.. ಶಶಿಕಲಾ ಬರ್ತಾ ಇದಾರೆ. ಬನ್ನಿ ಶಶಿ ಆಯ್ತ ಕೆಲಸ ಎಲ್ಲ.
ರೂಪ: ಅವರಿಗೇನಪ್ಪ ಬೆಳೆದ ಮಗಳಿದಾಳೆ ಎಲ್ಲ ಮಾಡ್ತಾಳೆ. ಅಲ್ವೇಂದ್ರಿ.
ಶಶಿ: ಹುಂ ಮಾಡ್ತಾಳೆ ಮಾಡ್ತಾಳೆ , ಈಗಿನ ಕಾಲದ ಮಕ್ಕಳು ಮಾಡೋದು ಗೊತ್ತಿಲ್ವೇ. ಅದೇನೋ ಗಾದೆ ಹೇಳ್ತಾರಲ್ಲ. “ಕೆಲಸಕ್ಕೆ ಬಾರೆ ಕುಮಾರಿ ಅಂದ್ರೆ ನಾನು ರೋಗದ ಕೋಳಿ ಅಲ್ವೇ, ಊಟಕ್ಕೆ ಬಾರೆ ಕುಮಾರಿ ಅಂದ್ರೆ ನಾನು ಹೆಡಗೆ ರಾವಣನಲ್ವೇ” ಅಂತ. ರುಚಿ ರುಚಿಯಾಗಿ ಮಾಡಿಟ್ರೆ ಚನ್ನಾಗಿ ತಿಂತಾಳಷ್ಟೆ
ರೂಪ: ಶಶಿ ನಿಮ್ಮ ಮಗಳು ಹಾಕ್ಕೊಂಡಿದಾಳಲ್ಲ ವಾಲೆ ತುಂಬಾ ಚೆನ್ನಾಗಿದೆ ಕಣ್ರಿ. ಹೊಸದಾಗಿ ಮಾಡ್ಸಿದ್ದಾ.
ಶಶಿ: ಹೌದು ರೀ ಬರೋ ತಿಂಗಳು ನನ್ನ ಹುಟ್ಟಿದ ಹಬ್ಬ ಬರತ್ತಲ್ಲ ರೀ ಅದಕ್ಕೇ ನಮ್ಮೋರು ಮಾಡ್ಸಿದಾರೆ. ಬೇಡ ಬೇಡ ಅಂದ್ರು ಆಗ್ಲೇ ಹಾಕ್ಕೊಂಡು ಬಿಟ್ಟಿದಾಳೆ ನೋಡಿ ಇವರೇ. ಅಷ್ಟಲ್ಲದೇ ಹೇಳ್ತಾರಾ “ಮಗಳು ಕೈಯಿಗೆ ಬರೋಕೆ ಮುಂಚೆ ಉಟ್ಟು ತೊಟ್ಟು ಸುಖ ಪಡು, ಸೊಸೆ ಮನೆಗೆ ಬರೋಕೆ ಮುಂಚೆ ಉಂಡು ತಿಂದು ಸುಖ ಪಡು” ಅಂತ. ಇನ್ನಾಯ್ತು ನಾನು ಹೊಸ ಸೀರೆ ಉಟ್ಟು , ಹೊಸ ವಡವೆ ತೊಟ್ಟಿದ್ದು. (ರಮ ಕಡೆ ತಿರುಗಿ) ಇದೇನ್ ರಿ ರಮ ಲೋಟ ಹಿಡ್ಕೊಂಡಿದೀರ. ಕಾಫಿ ಗೀಫಿ ಹಂಚ್ತೀರಾ?
ರಮ : ( ಸಂಕೋಚದಿಂದ ನಗ್ತಾ ) ಕಾಫಿ ಎಲ್ ಬಂತೂ ರೀ .ಸಂಜೆ ನಮ್ಮಕ್ಕ ಭಾವ ಬರ್ತಾ ಇದಾರೆ…. ಮನೆಲಿ ಸುತರಾಂ ಸಕ್ಕರೆ ಇಲ್ಲ . ನಿಮ್ಮನೆಲಿ ಮೊನ್ನೆ ತಂದಿದ್ರಲ್ಲ, ಒಂದು ಲೋಟ ಸಾಲ ಕೊಡ್ತೀರೇನೊ ಕೇಳೋಣಾ ಅಂತಿದ್ದೆ.
ಶಶಿ: ಏ…. ಎಲ್ಲಿ ಬರಬೇಕು ರೀ ನೆನ್ನೆ ನಮ್ಮ ಮನೆಯವರ ಆಫೀಸ್ನೋರು ತುಂಬ ಜನ ಬಂದುಬಿಟ್ಟಿದ್ರು , ಅಪರೂಪಕ್ಕೆ ಬಂದೋರಿಗೆ ಏನಾದ್ರೂ ಮಾಡಬೇಕಲ್ವ. ಇಲ್ಲಾ ಅಂದ್ರೆ “ಅಡಕೇಲಿ ಹೋದ ಮಾನ ಆನೆ ಕೊಟ್ರೂ ಬರಲ್ಲ” ಅನ್ನೋ ಹಾಗೆ ಆಗತ್ತೆ ಅಂತ ಇದ್ದಬದ್ದ ಸಕ್ಕರೆನೆಲ್ಲ ಸುರಿದು ಸ್ವೀಟ್ ಮಾಡ್ಬಿಟ್ಟೆ ಕಂಡ್ರೀ. ಈಗ ನನ್ನ ಪರಿಸ್ಥಿತಿನೇ “ಬಹುಮಾನಕ್ಕೆ ಬಳಿದಿಕ್ಕಿ ಹಿತ್ತಲಿಗೆ ಹೋಗಿ ಕೈ ನೆಕ್ಕಿದ್ರೂ” ಅಂತ ಆಗಿದೆ. ಬರ್ತೀನಿ ರೀ ಮಕ್ಕಳು ಬರೋ ಹೊತ್ತಾಯ್ತು. (ನಿರ್ಗಮಿಸುವಳು)
ರಮ : ಅನಿತ ನೀವಾದ್ರೂ …….
ಅನಿತ : ನನ್ನ ಕೇಳ್ಳೇ ಬೇಡಿ ರಮ. ಪಕ್ಕದ ಮನೆ ಗೀತಮ್ಮ ಸಂಕ್ರಾಂತಿಗೆ ಚೆನ್ನಾಗಿ ಸಕ್ಕರೆ ಅಚ್ಚು ಮಾಡಿದ್ರು ಅಂತ ನಾನೂ ಮೊನ್ನೆ ಮಾಡಕ್ಕೆ ಹೋಗಿ ಇದ್ದ ಸಕ್ಕರೆನೆಲ್ಲ ಸೀಸಿಟ್ಟೆ ಕಂಡ್ರೀ . “ಸರಿ ಮನೆಯಮ್ಮ ಸರಿಗೆ ಹಾಕ್ಕೊಂಡ್ಲು ಅಂತ ನೆರೆ ಮನೆಯಮ್ಮ ನೇಣ್ ಹಾಕ್ಕೊಂಡ್ಲು” ಅನ್ನೋ ಹಾಗೆ ಸೀದಿರೋ ಪಾತ್ರೆನೇ ಇನ್ನೂ ತೊಳೆಯಕ್ಕೆ ಆಗಿಲ್ಲ. ಬರ್ತೀನಿ ರೀ ನಮ್ಮ ಮನೆಯವರು ಬರೋ ಹೊತ್ತಿಗೆ ಅಡಿಗೆ ಮಾಡಬೇಕು. (ಹೋಗುವಳು)
ರಮ : ರೀ ರೂಪ…..
ರೂಪ: ರಾಮ ರಾಮ “ಮಾತು ಮನೆ ಕೆಡುಸ್ತು ತೂತು ಒಲೆ ಕೆಡುಸ್ತು” ಅಂತ ಒಲೆ ಮೇಲೆ ಹಾಲಿಟ್ಟಿದ್ದೆ ಸೀದ ವಾಸನೆ ಇಲ್ಲಿಗೇ ಬರ್ತಾ ಇದೆ . ಬರ್ತೀನಿ ರೀ (ಅವಸರದಿಂದ ಓಡುವಳು).
ರಮ: (ಸ್ವಗತ ) “ಅಲ್ಲುಂಟು ಇಲ್ಲುಂಟು ಕಲ್ಲಲ್ಲುಂಟೆ ಶಿವದಾನ “ ಅಂತ ನಾನು ಇವರನ್ನು ಕೇಳಿದ್ನಲ್ಲ. ಅಲ್ಲ ಸಕ್ಕರೆ ಕೇಳ್ತಿದ್ದ ಹಾಗೇ ಎಲ್ಲರೂ ಮಾಯವಾಗಿ ಬಿಟ್ರಲ್ಲ. ‘ಕಾಲಿಗೆ ಅಡ್ಡ ಬೀಳ್ತಿದ್ದ ಹಾಗೇ ಮಾಯವಾಗೋ ಸಿನಿಮಾ ದೇವರಂತೆ’. ನಾನೇನು ಇವರ ಗಂಟು ತಿಂದಿದ್ನೇ. ಏನೋ ಮೂರು ನಾಲ್ಕು ಸತಿ ಸಾಲ ತಂದು ಕೊಟ್ಟಿಲ್ಲದೇ ಇರಬಹುದಪ್ಪ. ಅಷ್ಟಕ್ಕೇ ಇವರು…… ಹೋದ್ರೆ ಹೋಗ್ತಾರೆ ಬಿಡಿ. “ಹುಲಿಗೆ ತನ್ನ ಕಾಡೇನು ಪರರ ಕಾಡೇನು” ಎಲ್ಲೋ ತಂದ್ರಾಯ್ತು.( ಸಭಿಕರನ್ನು ಉದ್ದೇಶಿಸಿ ) ಅಂದ ಹಾಗೇ ನೀವೇ ಒಂದು ಲೋಟ ಸಕ್ಕರೆ ಕೊಡ್ತೀರೋ.
ಲತಾ ಗೋಪಾಲಕೃಷ್ಳ ನಿಮ್ಮ ಗಾದೆಗಳ ಸಂಕೋಲೆ ., ಒಂದೇ ಗಾದೆಯೊಳಗೆ ಇನ್ನೊಂದು ಪೋಣಿಸುವ ಕಲೆ ನಿಜಕ್ಕೂ ಅಭಿನಂದನಾರ್ಹ.
ನಾನು ಹವ್ಯಕ ಭಾಷೆಯಲ್ಲಿ ಇಂತಹ ನುಡಿಗಟ್ಟುಗಳ ಬರಹ ೧೧೦(ಒಂದೊಂದೇ ಬರಹ).ಬೇರೆ ಸಂದರ್ಭದಲ್ಲೂ ಬಳಸುವ ರೀತಿ, ಉದಾಹರಣೆ; ಹವ್ಯಕ ವೆಬ್ ಸಯಿಟ್ (ಒಪ್ಪಣ್ಣ ಬಯಲು) ನಲ್ಲಿ ಪ್ರಕಟವಾದವುಗಳನ್ನ ಈ ಬಾರಿ ವಿಶ್ವಹವ್ಯಕ ಸಮ್ಮೇಳನದಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ. ಆದರೆ ಇದು ಸಂಕೋಲೆ ರೂಪದಲ್ಲಿ ನಿಜಕ್ಕೂ ವಿಶೇಷ ಚಿಂತನೀಯ. ಇನ್ನೂ ಬರೆಯಿರಿ.
ಧನ್ಯವಾದಗಳು
ಲಲನೆಯರ ಗಾದೆಗಳ ತಗಾದೆ ಸೂಪರ್ ಆಗಿದೆ!
ಧನ್ಯವಾದಗಳು
ಗಾದೆಗಳು ನಮ್ಮ ಬದುಕಿಗೆ ದಾರಿ ದೀಪವಿದ್ದಂತೆ. ಮಾತುಗಳಲ್ಲೇ ಗಾದೆಗಳನ್ನು ಪೋಣಿಸಿದ ಪರಿ ಅಭಿನಂದನೀಯ
ಧನ್ಯವಾದಗಳು
ಅಬ್ಬಾ…… ಎಷ್ಟೊಂದು ಗಾದೆ ಮಾತುಗಳು . ಬ್ಯೂಟಿಫುಲ್ . ಗಾದೆ ಮಾತುಗಳನ್ನು ಸಂಭಾಷಣೆಗಳಲ್ಲಿ ಸಂದರ್ಭಕ್ಕೆ ತಕ್ಕ ಹಾಗೆ ಬಳಸಿಕೊಂಡ ರೀತಿ ಚೆನ್ನಾಗಿದೆ .
ಧನ್ಯವಾದಗಳು