ಮೊದಲ ವಿಮಾನ ಯಾನ
ಜೀವನ ಸಿಹಿಕಹಿಯ ಜೊತೆಗೂಡಿ ಸಾಗುವ ಯಾನ.ಆಡಿದ ಆಟಿಕೆಗಳ ಜೊತೆಗೆ ಜೀವಿಗಳ ಚಟುವಟಿಕೆಗಳು. ಪ್ರಶ್ನೆಗಳ ಸುಳಿದಾಟ. ಕೆಲವಕ್ಕೆ ಉತ್ತರ.ಉಳಿದವು ಒಗಟು.ಅನುಭವವು ಮನುಶ್ಯನನ್ನು ಪರಿಪಕ್ವಗೊಳಿಸುತ್ತವೆ.ಮನದ ಸಮತೋಲನದ ಕಲೆ ಜೀವಯಾನವನ್ನು ರೋಚಕವಾಗಿಸುತ್ತದೆ.
ಗುಂಯ್…ಎಂದು ಗಂಭೀರವಾಗಿ ಹಾದುಹೋಗುವ ವಿಮಾನ,ಜಾತ್ರೆಯಲ್ಲಿ ಖರೀದಿಸುವ ಯಕಶ್ಚಿತ್ ಆಟಿಕೆಯಂತೇ ಕಾಣುತ್ತಿತ್ತಲ್ಲ!ಹೊರಗೋಡಿ ಬಂದು ನೋಡುವುದರೊಳಗೆ ಮಂಗಮಾಯ!ರಾತ್ರಿ ಬಣ್ಣದ ಚುಕ್ಕಿಗಳಂತೇ ಕಾಣುವ ದೀಪಗಳು ಅವೆಷ್ಟು ಕನಸುಗಳನ್ನು ಕುಸುರಿ ಮಾಡಿವೆಯೋ.
ನನಗೆ ಮದುವೆಯಾದ ಹೊಸತು.ಅದೊಂದು ಸುಂದರ ಸಂಜೆ. ನನ್ನ ಪತಿಗೆ ಕಂಪನಿಯ ನಿರ್ದೇಶಕರಿಂದ ಮುಂಬೈಗೆ ಔತಣಕೂಟಕ್ಕೆ ಪರಿವಾರ ಸಮೇತ ಆಹ್ವಾನ.ಹೋಗಿಬರುವದು ವಿಮಾನದಲ್ಲಿ.ಖರ್ಚು ಕಂಪನಿಯದ್ದು. ವಿಮಾನಯಾನವೆಂಬ ಕನಸಿನ ಪಯಣದ ತಯಾರಿಯ ಸಂಭ್ರಮ. ಸಾಮಾನು ಜೋಡಿಸಲು ನಿಯಮಪಾಲನೆ.
ಬಂದೇ ಬಿಟ್ಟಿತು ಆ ಸುದಿನ. ಏನೂ ಬಿಟ್ಟಿಲ್ಲವೆಂದು ಖಾತ್ರಿಮಾಡಿಕೊಳ್ಳುತ್ತಲೇ ಎರಡುತಾಸು ಮೊದಲೇ ಮಂಗಳೂರು ವಿಮಾನನಿಲ್ದಾಣ ತಲುಪಿದ್ದಾಯಿತು.ಎನೋ ಆತಂಕ,ತಳಮಳ.ಎಲ್ಲಾ ತಿಳಿದವರಂತೇ ನಟಿಸುತ್ತಾ ಮುನ್ನಡೆದೆ. ಭದ್ರತಾ ಸಿಬ್ಬಂದಿಗಳಿಂದ ಗುರುತಿನ ದಾಖಲೆಗಳ ತಪಾಸಣೆ, ವಿಮಾನ ನಿಲ್ದಾಣ ಪ್ರವೇಶ..ವಿವಿಧ ಬಣ್ಣದ ಆಕರ್ಶಕ ಸಮವಸ್ತ್ರ ಧರಿಸಿದ ಪರಿಚಾರಿಕೆಯರು..ವಿಮಾನದೊಳಗೆ ಪ್ರವೇಶ ಪರವಾನಿಗೆ ಪಡೆದದ್ದಾಯಿತು..ಸಾಮಾನು ಕೈಜಾರಿ ಹೊಯಿತೋ ಎಂಬಂತೆ ಸರಪಳಯಲ್ಲಿ ಜಾರಿತು.ಮತ್ತೊಮ್ಮೆಭದ್ರತಾ ತಪಾಸಣೆ.. ಅವರುಗಳ ಸಂಶಯ ಅಷ್ಟೇ ದೃಢ ನೋಟ.. ನುಣ್ಣಗೆ ಬೆವರಿಳಿಸಿತ್ತು..ಇನ್ನು ಪ್ರವೇಶದ್ವಾರದಲ್ಲಿ ಕಾಯುವಿಕೆ..ಪ್ರವೇಶದ ಸೂಚನೆ..ರೋಮಾಂಚನ..ಅಬ್ಬಾ! ವಿಮಾನದ ಬೃಹತ್ ಗಾತ್ರಕ್ಕೆ ಬೆಕ್ಕಸ ಬೆರಗು.ಎತ್ತರದ ಏಣಿ ಹತ್ತಿ ವಿಮಾನದೊಳಗೆ ಪ್ರವೇಶ.
ನುಣ್ಣಗೆ ಬಣ್ಣ ಹಚ್ಚಿ ಹೊಳಪಾಗಿಸಿಕೊಂಡಂತಿರುವ ಗಗನಸಖಿಯರ ಸ್ವಾಗತ..ಒಂದು ಕ್ಷಣ ಮನ ಈರ್ಷ್ಯೆಗೊಳಗಾದದ್ದು ಸುಳ್ಳಲ್ಲ. ಐನೂರೈವತ್ತು ಜನ ಆಸೀನರಾಗುವ ವ್ಯವಸ್ಥೆಯುಳ್ಳ ಹವಾನಿಯಂತ್ರಿತ ಅರಮನೆಯದು..ಮೆಲುವಾದ ಸಂಗೀತಕ್ಕೆ ಮನದಲ್ಲಿ ಉಲ್ಲಾಸದ ತರಂಗ..ಎದುರಿನ ಅಸನಕ್ಕೆಹೊಂದಿಸಿದ ಚಿಕ್ಕ ಸಿನೆಮಾ ಪರದೆ..ಓದಲು ವಿವಿಧ ಪತ್ರಿಕೆಗಳು..ಕಿಟಕಿ ಬದಿಯ ಸೀಟಿನಲ್ಲಿ ನಾನು..ನನ್ನ ಹಾವಭಾವವನ್ನು ಓರೆಗಣ್ಣಿಂದ ಗಮನಿಸುತ್ತಿದ್ದ ನನ್ನವರ ಸಾಮಿಪ್ಯ..ಸೀಟಿನ ಪಟ್ಟಿ ಕಟ್ಟಿಕೊಳ್ಳಲು ಅವರ ಸಹಾಯ..ಉತ್ಸಾಹದಲ್ಲಿ ಓಡಾಡುತ್ತಿರುವ ಗಗನಸಖಿಯರ ಆತಿಥ್ಯ..ಆಹಾ! ನನ್ನನ್ನು ಮಂತ್ರಮುಗ್ಧಳನ್ನಾಗಿಸಿತ್ತು.
ವಿಮಾನಚಾಲಕ ಧ್ವನಿವರ್ಧಕದಲ್ಲಿ ಎಲ್ಲರ ಪರಿಚಯದೊಂದಿಗೆ ಉಡಾವಣೆಯ ಸಂಕೇತ ನೀಡುತ್ತಿದ್ದಂತೇ ವಿಮಾನ ಚಲಿಸತೊಡಗಿತು.ರನ್ವೇ ನಲ್ಲಿ ಬಹುದೂರ ಚಲಿಸಿ ಜಿಗಿದೇಬಿಟ್ಟಿತು ನಭಕೆ..ನನ್ನೆದೆ ಬಡಿತ ಅಂಬರಕ್ಕೇರಿತು.ಅಂತರಿಕ್ಷದಲ್ಲಿ ಆಧಾರವಿಲ್ಲದೇ ತೇಲುವ ವಿಮಾನ ಇನ್ನೇನು ಕೆಳಗೆ ಬೀಳಬಹುದೇನೋ..ಬಂಧು ಬಾಂಧವರನ್ನೆಲ್ಲಾ ಮನ ನೆನೆಯಿತು..ದೇವರ ಸ್ತೋತ್ರ ಪಠಣಗಳೆಲ್ಲಾ ಬಾಯೊಳಗೆ ಗುನುಗಿತು.,ಪಕ್ಕದಲ್ಲಿ ಕುಳಿತ ನನ್ನವರು ಮಾತ್ರ ತಟಸ್ಥರಾಗಿದ್ದುದು ಹೇಗೋ..ಗಟ್ಟಿಯಾಗಿ ಅವರ ಕೈ ಹಿದಿದುಕೊಂಡು ಕಣ್ಮುಚ್ಚಿಕೊಂಡೆ.
ನೆಲದಿಂದ ಮೂರುಸಾವಿರ ಕಿಲೋಮೀಟರ್ ಎತ್ತರದಲ್ಲಿ ಸಾಗಿದ ವಿಮಾನ ಸಮತೋಲನದಲ್ಲಿ ಸಾಗುತ್ತಿತ್ತು.ದೂರದರ್ಶನದ ದಾರವಾಹಿಗಳಲ್ಲಿ ನೋಡಿದ ಸ್ವರ್ಗದ ದೃಶ್ಯ ಮನಮೋಹಕ..ಹೊಸಬಗೆಯ ರುಚಿಕರವಾದ ಖಾದ್ಯ..ಕಣ್ಣಿಗೂ ಬಾಯಿಗೂ ಸವಿಯೂಟ..ಹೊಸಜೀವ ಪದೆದವಳಂತೆ ಮನಕೆ ವಿಶ್ರಾಂತಿ.ಎದುರಿಗಿರುವ ಪತ್ರಿಕೆಗಳ ಪುತಾ ತಿರುಗಿಸುವಷ್ಟರಲ್ಲಿ ಇಳಿಯುವ ಸಂಕೇತ..ವಿಮಾನ ಕೆಳಮುಖವಾಗಿ ಇನ್ನೇನು ನೆಲಕ್ಕೆ ಅಪ್ಪಳಿಸಿತೋ ಎಂಬಂತೇ ಸುಂಯ್…ಎಂದು ಸಾದ್ದುಮಾಡುತ್ತ, ಶರವೇಗದಲ್ಲಿ ಓಡುತ್ತ,ಮತ್ತೆ ನಿಧಾನವಾಗಿ ಚಲಿಸಿ ನಿಂತಾಗ “ಬದುಕಿದೆಯಾ ಬಡಜೀವಾ”ಎಂಬಂತಾಗಿತ್ತು.
–ಕಲಾ ಚಿದಾನಂದ, ಮುಂಬೈ
ಚೆನ್ನಾಗಿದೆ ಅನುಭವ ಕಥನ ಕಲಾ
ತಾಜಾ ಬರಹ.. ಸ್ವಲ್ಪ ಅವಸರದಲಿ.. ವಿಮಾನದಷ್ಟೇ ವೇಗವಾಗಿ ಮುಗಿಸಿದಂತಾಗಿದೆ… ಶುಭ ಹಾರೈಕೆ..
ಪ್ರೋತ್ಸಾಹಕ್ಕೆ ಸುರಹೊನ್ನೆ ಯವರಿಗೆ ಧನ್ಯವಾದಗಳು
ಓದಿ,
ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು
ನಿಮ್ಮ ವಿಮಾನ ಯಾನದ ಅನುಭವ ಚೆನ್ನಾಗಿದೆ
ವಿಮಾನಯಾನದ ಅನುಭವ ತುಂಬಾ ಚೆನ್ನಾಗಿ ವ್ಯಕ್ತವಾಗಿದೆ ಕಲಾ
Thumbha Chennagi baredidheeri
ಚೆಂದವಾಗಿದೆˌವಿಮಾನಯಾನ ಕಥನˌಕಲಾˌ
ಓಹ್. ಒಳ್ಳೆಯ ಅನುಭವ
ನಿರೂಪಣೆ ಚೆನ್ನಾಗಿದೆ