ಯುಗಾದಿ ಮರಳಿ ಬರುತಿದೆ
” ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ” ಎನ್ನುವ ಹಾಗೆ 26 ವರ್ಷಗಳ ಹಿಂದೆ ನಡೆದ ಘಟನೆಯೊಂದು ಮರಳಿ ಮರಳಿ ನೆನಪಿಗೆ ಬರುತ್ತಿದೆ . ಅಂದು ಯುಗಾದಿ ಹಬ್ಬ .ಮನೆಯವರಿಗೆ ರಜೆಯ ದಿನ .ಬೇವು ಬೆಲ್ಲ ತಿಂದು ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸುವ ದಿನ. ಆದರೆ ನಮ್ಮ ಮನೆಯಲ್ಲಿ ಅಂದು ಹಬ್ಬದ ವಾತಾವರಣವಿರಲಿಲ್ಲ .ಹಿಂದಿನ ರಾತ್ರಿಯಿಂದ ಮಗನಿಗೆ ಸೌಖ್ಯವಿರಲಿಲ್ಲ .ಅವನಾಗ 8 ತಿಂಗಳ ಶಿಶು .ರಾತ್ರಿಯೆಲ್ಲಾ ನೆಗಡಿ, ಕೆಮ್ಮು ಜೊತೆಗೆ ಪದೇ ಪದೇ ವಾಂತಿಯಾಗುತ್ತಿತ್ತು. ನಾನು ಹಾಗು ನನ್ನ ಯಜಮಾನರು ರಾತ್ರಿಯೆಲ್ಲಾ ನಿದ್ದೆಗೆಟ್ಟು ಅವನ ಜೊತೆ ಕುಳಿತಿದ್ದೆವು .ಬೆಳಿಗ್ಗೆ ಮಗನಿಗೆ ಸ್ವಲ್ಪ ಹಾಲು ಕುಡಿಸಿದಾಗ ಅದೂ ವಾಂತಿಯಾದಾಗ ನಮಗೆ ಇನ್ನೂ ಗಾಭರಿ . ಗಡಿಬಿಡಿಯಲ್ಲಿ ಏನೋ ತಿಂಡಿ ತಿಂದು ಮಗನ್ನು ಎತ್ತಿಕೊಂಡು ಫ್ಯಾಮಿಲಿ ಡಾಕ್ಟರಲ್ಲಿಗೆ ಓಡಿದೆವು. ನಮ್ಮ ದುರಾದ್ರಷ್ಟಕ್ಕೋಎಂಬಂತೆ ಆ ದಿನ ಡಾಕ್ಟರ್ ಕೂಡ ರಜೆಯ ಮೇಲಿದ್ರು .ಸಪ್ಪೆ ಮುಖ ಹೊತ್ತು ಮನೆಗೆ ಬಂದಾಯಿತು .
ಹಬ್ಬವನ್ನಾಚರಿಸುವ ಮನಸ್ಸು ,ಹುಮ್ಮಸ್ಸು ಎರಡೂ ಇರಲಿಲ್ಲ ಮೈದುನ ಹಾಗು ಅವನ ಹೆಂಡತಿ “ಹಬ್ಬದ ವಿಶೇಷ ಅಡುಗೆಯೇನೂ ಬೇಡ, ಒಂದು ಅನ್ನ ಸಾರು ಮಾಡಿದರಾಯಿತು , ಊಟ ಮಾಡಿ ರೆಸ್ಟ್ ಮಾಡಿ” ಎಂದರು.ರಾತ್ರಿಯೆಲ್ಲಾ ನಿದ್ದೆಗೆಟ್ಟಿದ್ದ ನಮಗೂ ಅದು ಸರಿಯೆನಿಸಿತು .ಮಗನಾಗಲೇ ಬಳಲಿ ಬಸವಳಿದು ನಿದ್ದೆ ಹೋಗಿದ್ದ. ನಾವಿಬ್ಬರು ಹೆಂಗಸರು ಅಡಿಗೆ ಮಾಡಿ ಮುಗಿಸಲು ಒಳನಡೆದೆವು. ಬೇಗಬೇಗನೆ ಕುಕ್ಕರಿಟ್ಟು ಮುಂದಿನ ತಯಾರಿ ಮಾಡುತ್ತಿದ್ದಂತೆ ಬೆಲ್ ಆದ ಶಬ್ದ .ಬಾಗಿಲು ತೆರೆದರೆ ನಮ್ಮನೆಯವರ ಮಾವ ನಿಂತಿದ್ದರು. ..ಏನೋ ಕೆಲಸದ ನಿಮಿತ್ತ ಆ ಕಡೆ ಬಂದವರು ,ಹೇಗೂ ಹಬ್ಬದ ದಿನ , ನಮ್ಮಲ್ಲಿಯೇ ಉಂಡು ಹೋದರಾಯಿತೆಂದು ಬಂದಿದ್ದರು. ಆಗೆಲ್ಲ ಈಗಿನಂತೆ ಫೋನ್, ಮೊಬೈಲ್ ಇರಲಿಲ್ಲವಲ್ಲ. ಸಡನ್ನಾಗಿ ನೆಂಟರು ಬಂದರೂ ಪ್ರೀತಿಯಂದ ಅತಿಥಿ ಸತ್ಕಾರ ಮಾಡುವುದು ರೂಢಿ, ಸಂಪ್ರದಾಯವಾಗಿತ್ತು.
ಮಾವನಿಗೆ ಮೊದಲಿಗೆ ಚಹಾ ಮಾಡಿಕೊಟ್ಟು ಅಡಿಗೆಯನ್ನು ಮುಂದುವರಿಸಲು ನಾವಿಬ್ಬರು ಹೆಂಗಸರು ಮತ್ತೆ ಅಡಿಗೆಮನೆ ಸೇರಿದೆವು. ಅನ್ನ ಹಾಗು ಸಾರಿನ ತಯಾರಿ ಮುಕ್ತಾಯದ ಹಂತದಲ್ಲಿತ್ತು. ಮಾವ ಬಂದಿದ್ದಾರೆ. ಅದರಲ್ಲೂ ಹಬ್ಬದ ದಿನ ಬೇರೆ, ಹೀಗಾಗಿ ಏನಾದರೂ ವಿಶೇಷ ಅಡಿಗೆ ಮಾಡಲೇ ಬೇಕಲ್ಲವೇ? ಸಾರಿನ ಜೊತೆಗೆ ಸಾಸಿವೆ, ತಂಬಳಿ ಮಾಡುವುದೆಂಬ ನಿರ್ಧಾರ. ಕಜ್ಜಾಯ ಏನು ಮಾಡುವುದೆಂದು ತಲೆ ತುರಿಸಿಕೊಳ್ಳುತ್ತಿರುವಾಗ ಮೂಲೆಯಲ್ಲಿ ಬುಟ್ಟಿಯಲ್ಲಿ ಗೋಪುರದಂತೆ ತುಂಬಿ ಕುಳಿತ್ತಿದ್ದ ಆಲೂಗಡ್ಡೆ ‘ನಾನಿರುವುದೇ ನಿಮಗಾಗಿ’ಎಂದು ನಮ್ಮನ್ನುಕರೆದು ಆಲೂ ಬೋಂಡಾದ ತಯಾರಿಗೆ ನಾಂದಿ ಹಾಡಿತು. ಇನ್ನು ಸಿಹಿ ಕಜ್ಜಾಯದ ಬಗ್ಗ್ರೆ ಯೋಚಿಸುತ್ತಿರುವಾಗ ಕುಕ್ಕರಿನಲ್ಲಿದ್ದ ಅನ್ನದ ಪಾತ್ರೆ ಕಣ್ಣಿಗೆ ಬಿತ್ತು. ಬಿಸಿ ಬಿಸಿ ಅನ್ನಕ್ಕೆ ತೆಂಗಿನಕಾಯಿ ತುರಿ,ಬೆಲ್ಲ , ತುಪ್ಪ, ದ್ರಾಕ್ಷಿ, ಗೋಡಂಬಿಗಳನ್ನುಸೇರಿಸಿ ಕಾಸಿ ತಿರುವಿದರೆ ರುಚಿಯಾದ ಕಾಯಿಬಾತ್ ಸವಿಯಲು ಸಿದ್ಧವಾಗುತ್ತೆ. ಇನ್ನೇನು ಬೇಕು ಹಬ್ಬದ ಅಡುಗೆ ಇಷ್ಟು ಸಾಕು ಎಂದು ನಾವಿಬ್ಬರು ಪಟಪಟನೆ ಮುಂದಿನ ತಯಾರಿಯಲ್ಲಿ ತೊಡಗಿದೆವು.
ತರಾತುರಿಯಲ್ಲಿ ಅಡಿಗೆ ಮುಗಿಸಿ ಎಲ್ಲರನ್ನು ಊಟಕ್ಕೆ ಎಬ್ಬಿಸಿಯಾಯಿತು. ಹಾಲ್ನಲ್ಲೇ ಎಲ್ಲರೂ ಆರಾಮಾಗಿ ಕುಳಿತರಾಯಿತೆಂದು ಎಲ್ಲ ಅಡಿಗೆ ಗಳನ್ನು ಹಾಲ್ ಗೆ ಸಾಗಿಸುತ್ತಿರುವಾಗ ಸಡನ್ನಾಗಿ ಎಚ್ಚರತಪ್ಪಿ ಬೀಳುವಂತಹ ಶಾಕ್ ನನಗೆ! ಮೈದುನನ ಹೆಂಡತಿಗೆ ಮೆಲ್ಲನೆ ಕಣ್ಸನ್ನೆ ಮಾಡಿ ಅನ್ನದ ಪಾತ್ರೆ ತೋರಿಸಿದೆ. ಮಾಡಿದ ಅನ್ನದಲ್ಲಿ ಅರ್ಧಕ್ಕಿಂತ ಜಾಸ್ತಿ ಕಾಯಿಬಾತ್ ಮಾಡಲು ಬಳಸಿಯಾಗಿತ್ತು .ಗಡಿಬಿಡಿಯಲ್ಲಿ ಮತ್ತೆ ಅನ್ನ ಮಾಡಬೇಕೆಂಬುದನ್ನು ಮರೆತ ನಮ್ಮ ಸ್ಥಿತಿ ರಣರಂಗಕ್ಕೆ ಶಸ್ತ್ರಾಸ್ತಗಳನ್ನು ಬಿಟ್ಟು ಹೋದ ಯೋಧನ ಪರಿಸ್ಥಿತಿಯಾಗಿತ್ತು .ಮತ್ತೆ ಅನ್ನ ಮಾಡಲು ಕನಿಷ್ಠ 20 ನಿಮಿಷಗಳಾದರೂ ಬೇಕು, ಅಲ್ಲದೆ ಆ ಕುಕ್ಕರ್ ಬೇರೆ ಸಿಟಿ ಹಾಕಿ ಕೂಗಿ ತನ್ನಿರವನ್ನು ತೋರುವುದೆಂಬ ಗಾಬರಿ ಬೇರೆ. ನಾವು ಹೆಂಗಸರಿಬ್ಬರು ನಂತರ ಊಟ ಮಾಡುವುದೆಂದು ಮೌನದ ಮೀಟಿಂಗ್ನಲ್ಲೇ ನಿರ್ಣಯ ತೆಗೆದುಕೊಂಡೆವು.ಇನ್ನು ಮನೆಯ ಗಂಡಸರಿಗೆ ಮನವರಿಕೆ ಮಾಡಿಕೊಡುವುದಕ್ಕಾಗಿ ಕಣ್ಸನ್ನೆ ಮಾಡುತ್ತ ಅನ್ನದ ಪಾತ್ರೆಯನ್ನು ಕುಟ್ಟಿ ತಟ್ಟಿ ತೋರಿಸುತ್ತ ಅಂತೂ ಆ ಕಾರ್ಯದಲ್ಲೂ ಯಶಸ್ವಿಯಾದೆವು.
PC: ಸಾಂದರ್ಭಿಕ ಚಿತ್ರ, ಅಂತರ್ಜಾಲ
ಮಾವನ ಬಟ್ಟಲಿಗೆ ಅನ್ನವನ್ನು ಬಡಿಸಿ ಉಳಿದ ಅನ್ನವನ್ನು ಮನೆಯ ಗಂಡಸರಿಗೆ ಬಡಿಸಿದ್ದಾಯಿತು. ಮಾವ ಸಾರು ಅನ್ನ ಕಲಸಿ ಉಣ್ಣುತ್ತಿದ್ದಂತೆಯೇ “ಮಾವ, ನಾನು ಬಡಿಸಿದ್ದನ್ನು ತಿನ್ನಲೇ ಬೇಕು “ಎನ್ನುತ್ತಾ ಒಮ್ಮೆ ನಾನು ಇನ್ನೊಮ್ಮೆ ನನ್ನ ಮೈದುನನ ಹೆಂಡತಿ ಪೈಪೋಟಿಯ ಮೇಲೆಂಬಂತೆ ಅವರ ಬಟ್ಟಲಿಗೆ ಬೋಂಡ ಹಾಗು ಕಾಯಿಬಾತನ್ನು ಹಾಕಲು ಪ್ರಾರಂಭಿಸಿದೆವು.ಪಾಪ , ಅವರು ಕಜ್ಜಾಯದಲ್ಲೇ ಹೊಟ್ಟೆ ತುಂಬಿಸಿಕೊಂಡು ತೃಪ್ತಿಯಿಂದ ತೇಗುತ್ತಾ ಮತ್ತೆ ಅನ್ನವನ್ನು ಹಾಕಿಸಿಕೊಳ್ಳದೆಯೇ ಊಟ ಮಾಡಿ ಎದ್ದಾಗ ನಮಗೋ ದೊಡ್ಡದೊಂದು ಯುದ್ಧವನ್ನು ಗೆದ್ದಂತಹ ನಿರಾಳತೆ. ಗಂಡಸರ ಉರಿನೋಟ,ಉಪದೇಶಗಳ ಸುರಿಮಳೆಯಾಗುವ ಸಂಭಾವ್ಯತೆಯ ಬಗ್ಗೆ ನೂರು ಪ್ರತಿಶತ ಭರವಸೆ ಇದ್ದರೂ ಸಧ್ಯಕ್ಕೆ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಂಥ ಭಾವ ನಮ್ಮಲ್ಲಿತ್ತು.
ನಂತರ ನಾವೇನು ಊಟ ಮಾಡಿದೆವು ಎನ್ನುವ ನೆನಪಿಲ್ಲದ್ದಿದ್ದರು ಯುಗಾದಿಯ ದಿನ ನಾವು ಎದುರಿಸಿದ ಈ ಪೇಚಿನ ಪ್ರಸಂಗ ಇಂದಿಗೂ ನೆನಪಾಗುತ್ತದೆ .ಈಗಲೂ ನಾನು ಹಾಗು ನನ್ನ ಮೈದುನನ ಹೆಂಡತಿ ಒಂದಾಗಿ ಅಡಿಗೆ ಮಾಡುವಾಗ ಈ ಪ್ರಸಂಗವನ್ನು ನೆನಪು ಮಾಡಿಕೊಳ್ಳುತ್ತ”ಅನ್ನ ಬೇಕಾದಷ್ಟಿದೆಯಲ್ಲ”ಎಂದು ಎಲ್ಲರನ್ನು ಊಟಕ್ಕೆ ಎಬ್ಬಿಸುವ ಮುನ್ನ ಹೇಳಿಕೊಂಡು ಹೊಟ್ಟೆ ತುಂಬಾ ನಗುತ್ತೇವೆ.
-ಶಶಿಕಲಾ ಹೆಗಡೆ, ಮುಂಬೈ
ಅಕ್ಕ.ಚೆನ್ನಾಗಿದೆ ಬರಹ
Thanks ,Smita
ನಿಮ್ಮಿಬ್ಬರ ಸಮಯಸ್ಪೂರ್ತಿ ಮತ್ತು ಅತಿಥಿ ಸತ್ಕಾರ ಇಷ್ಟವಾಯಿತು. ಚೆಂದದ ಬರಹ
ಧನ್ಯವಾದಗಳು ಮೇಡಂ
ಚೆನ್ನಾಗಿದೆ ಬರಹ
thanks
ಚೆನ್ನಾಗಿದೆ ಬರಹ
ಹ್ಹ…. ಹ….. ಹ್ಹ….
ಬಹಳ ಚೆನ್ನಾಗಿದೆ ಮೇಡಂ , ನಿಮ್ಮ ಅನುಭವ. ಬಹಳಷ್ಟು ಸಲ ನಾವು ಇಂತಹ ಪೇಚಾಟಿಕೆಯಲ್ಲಿ ಸಿಕ್ಕಿ ಬೀಳುವುದುಂಟು . ಅದನ್ನು ನಿಭಾಯಿಸುವ ಪರಿಯಂತೂ ಆ ದೇವರಿಗೆ ಪ್ರೀತಿ, ಕಾಪಾಡಪ್ಪ ಅಂತ ಅವನ ಮೊರೆ ಹೋಗುವುದೊಂದೇ ನಮಗಿರುವ ದಾರಿ . ಬಹಳ ಖುಷಿ ಆಯಿತು ಮೇಡಂ ನಿಮ್ಮ ಲೇಖನ ಓದಿ .
ಊಟದ ಹೊತ್ತಿಗೇ ಸಡನ್ನಾಗಿ ಯಾರಾದರೂ ಅತಿಥಿಗಳು ಬಂದರೆ ಊಟದ ಮೊದಲು ಹಲಸಿನ ಹಣ್ಣು ಕತ್ತರಿಸೋ ನಮ್ಮ ಸಂಬಂಧಿಕರ ನೆನಪಾಯ್ತು..
ಉತ್ತಮ ಬರಹ, ಸೊಗಸಾದ ನಿರೂಪಣೆ
ಚೆಂದದ ಬರಹ
ಇಂತಹ ಪೇಚಿನ ಘಳಿಗೆಗಳು ನಮಗೆಲ್ಲಾ ಮಾಮೂಲು. ಬರಹ ಚೆನ್ನಾಗಿದೆ.