ಹದಿ ಹರೆಯ
ಹದಿ ಹರೆಯದ ಮನಸ್ಸು ,
ಆ ಮನಸಿನೊಳಗೆ ಸದಾ ಹೊಸತನ್ನು ಅನ್ವೇಷಿಸೋ ಹುಮ್ಮಸ್ಸು ,
ಜೊತೆಗೆ ಅರಳೋ ಬಣ್ಣದ ಕನಸು ,
ಹೋಗದಿರಲಿ ಎಂದಿಗೂ ಕಮರಿ
ವಾಸ್ತವದ ಕಠೋರತೆಗೆ ಬೆದರಿ.
ಈ ಹೃದಯಗಳ ತುಂಬಾ ತುಂಬಿರೋ ಸಾಧನೆಯ ಛಲ ,
ಬಿದ್ದರೂ ಒಪ್ಪಿಕೊಳ್ಳದು ಸೋಲ ,
ಮತ್ತೆ ಎದ್ದು ನಿಂತು ಮುಂದೆ ಸಾಗೋ ತುಡಿತ, ಹಂಬಲ ,
ಬಾಗದಿರಲಿ ತಲೆ
ವಾಸ್ತವದ ಕಠೋರತೆಗೆ ಬೆದರಿ.
ನಿಜ ಸುಗಮವಲ್ಲ ಇಲ್ಲಿ ಬದುಕಿನ ಪಯಣ ,
ಇದ್ದಂತೆ ಮುಳ್ಳಿನ ಮಧ್ಯೆ ಅರಳೋ ಸುಂದರ ಹೂಬನ ,
ಸಹಜ ಇಲ್ಲಿ ಸುಖದ ಹಿಂದೆಯೇ ಅಪ್ಪಳಿಸೋ ಕಷ್ಟ ಕಾರ್ಪಣ್ಯ ,
ಹಾಗೆಂದು ನೋವಿನ ಅಲೆಯಲ್ಲೇ ಮುಳುಗುತ್ತಾ ಕೊಚ್ಚಿ ಹೋಗದಿರಲಿ ಜೀವನ.
ಒಂದು ಸೋಲಿನೊಂದಿಗೆಯೇ ಮುಗಿಯದು ಈ ಪಥ , ಹಾದಿ ,
ಈ ಜಗವೇ ಒಂದು ಅವಕಾಶಗಳ ಶರಧಿ ,
ಬೇಕಿಲ್ಲಿ ಹೆಜ್ಜೆ ಹೆಜ್ಜೆಗೂ
ತಾಳ್ಮೆ ನೆಮ್ಮದಿ.
ಮುಗಿಯುವುದೇ ಜೀವನ ಮುಚ್ಚಿಕೊಂಡಲ್ಲಿ ಇಲ್ಲಿ ಒಂದು ಕವಲು ?,
ಬದುಕೆಂದರೆ ಇಲ್ಲಿಹುದು ಹಲವು ಮಜಲು ,
ಸುಡು ಬಿಸಿಲಿರಲಷ್ಟೇ ಪರಿಚಿತ ತಂಪಾದ ನೆರಳು,
ಆರಗೊಡದೆ ಸಾಗಬೇಕಿಲ್ಲಿ ಭರವಸೆಯ ಕಂದೀಲು.
ಬತ್ತದಿರಲಿ ಮನಸುಗಳಲ್ಲಿ ಒಸರೋ ಉತ್ಸಾಹದ ಒರತೆ ,
ಕತ್ತಲಾದರೇನು ಇರಲಿ ಉರಿಸಿ ಸಾಗುವೆನೆಂಬ ಧೈರ್ಯ
ಭರವಸೆಯ ಹಣತೆ ,
ತಿರುಗಿ ಬೀಳುವುದಿಲ್ಲಿ ಅಭಿವೃದ್ಧಿಯ ಪಥದಲ್ಲಿ ಒಮ್ಮೊಮ್ಮೆ ಇಡೀ ಜಗತ್ತೇ,
ಹೆದರಿ ನಿಲ್ಲದಿರಲಿ ಹೆಜ್ಜೆ ಎಲ್ಲೂ
ವಾಸ್ತವದ ಕಠೋರತೆಗೆ ಬೆದರಿ.
(PC :ಸಾಂದರ್ಭಿಕ ಚಿತ್ರ, ಅಂತರ್ಜಾಲ)
– ನಯನ ಬಜಕೂಡ್ಲು
ಸಣ್ಣ ಪುಟ್ಟ ಸೋಲಿಗೆ ಮಂಕಾಗುವ, ಖಿನ್ನತೆಗೆ ಜಾರುವ ಯುವಪೀಳಿಗೆಗೆ ಧೈರ್ಯ ಹೇಳುವ ಸಾಲು “ಒಂದು ಸೋಲಿನೊಂದಿಗೆಯೇ ಮುಗಿಯದು ಈ ಪಥ , ಹಾದಿ” ಇಷ್ಟವಾಯಿತು.ಚೆಂದದ ಕವನ.
ನಿನ್ನ ಕವನ ಯುವ ಪೀಳಿಗೆಗೆ ಸ್ಫೂರ್ತಿ
uttama