ಕಲ್ಪನೆ ವಾಸ್ತವಗಳ ನಡುವೆ…
ನಾವುಗಳೇ ಹಾಗೆ ಅನಿಸಿದ್ದನ್ನ ಹೇಳೋಲ್ಲ,ಇಷ್ಟ ಇರೋದು ಮಾಡೋಲ್ಲ ,ಇರೋ ಅಷ್ಟರಲ್ಲಿ ತೃಪ್ತಿನು ಪಡೋಲ್ಲ, ಚಿಂತೆಗೆ ತಡೆ ಇರೋಲ್ಲ, ಕನಸಿಗೆ ಕೊನೆ ಇರೋಲ್ಲ,ಆಸೆಗಂತೂ ಮಿತಿನೇ ಇರೋಲ್ಲ.ಮನುಷ್ಯ ಜೀವ ಅಲ್ವೇ ಆಸೆ, ನಿರಾಸೆ,
ಅನಿಸಿದ್ದೆಲ್ಲ ಹೇಳುವಂತಿದ್ದರೇ?,ಬಯಸಿದ್ದೆಲ್ಲ ಸಿಗುವಂತಿದ್ದರೇ?,ಕನಸೆಲ್ಲ ನನಸಾಗುವಂತಿದ್ದರೇ? ಹೀಗೆ ನೂರಾರು ರೇ ಗಳ ಜೊತೆ ಜೀವನದ ಬಂಡಿ ಸಾಗುತ್ತ ಇರುತ್ತೆ. ಹಲವರು ಇನ್ನೊಬ್ಬರ ಜೀವನದ ಒಂದು ಭಾಗ ನೋಡಿ ನಮ್ಮ ಬದುಕು ಕೂಡ ಅವರ ಬದುಕಿನ ತರ ಇದ್ದಿದ್ದರೇ? ಅಂದುಕೊಳ್ಳುತ್ತಾರೆ,ಆದರೆ ಅವರಿಗೇ ಗೊತ್ತಿಲ್ಲದೆ ಮತ್ತ್ಯಾವುದೋ ಒಂದು ಜೀವ ಇವರ ಜೀವನದ ಒಂದು ಭಾಗದ ಆಕರ್ಷಣೆಯಲ್ಲಿರುತ್ತೆ. ನಾವೆಲ್ಲಾ ನಮ್ಮಲ್ಲಿರುವುದರ ಬಗೆಗೆ ನಿರಾಸಕ್ತರೇ…
ತೃಪ್ತಿ,ಸಂತೃಪ್ತಿ ಇದೆಲ್ಲ ಬರಿ ನಾವುಗಳು ಓದೋ ಯಾವುದೋ ಕಥೆಗಳ ಪಾತ್ರಗಳಿಗಷ್ಟೇ ಸೀಮಿತವಾಗಿದೆ. ಎಲ್ಲವು ನನಗೆ ಬೇಕು ಅನ್ನೋ ಕೆಟ್ಟ ಹಸಿವು ಹೆಚ್ಚಾದಂತೆ ನಮ್ಮಲ್ಲಿರುವ ಸುಂದರ ಜೀವನವೆಂಬ ಮೃಷ್ಟಾನ್ನ ಭೋಜನವು ಅಲ್ಪವೆನಿಸುತ್ತದೆ,ವಿಪರ್ಯಾಸ ಅಂದ್ರೆ ಕೆಲವರ ಹಸಿವು ಕೇವಲ ಹಿಡಿ ಅನ್ನದ ಹಸಿವಾಗಿರುತ್ತದೆ.
ಎಲ್ಲರು ಯೋಚನಾ ಜೀವಿಗಳೇ ಆದರೆ ಅದರಲ್ಲಿ ಬಹುತೇಕ ವಿಚಾರವಂತಿಕೆ,ಯೋಚನೆಗಳು ನಾವು- ನಮ್ಮದು -ನಮ್ಮವರು ಅನ್ನುವ ಬಂಧ ಅನ್ನೋ ಬಂಧನಗಳ ಮಟ್ಟಿಗೆ ಅಷ್ಟೇ.ಸ್ವಾರ್ಥ ಒಳ್ಳೇದೋ? ಕೆಟ್ಟದ್ದೋ? ಅನ್ನೋ ತರ್ಕ ಎಷ್ಟರ ಮಟ್ಟಿಗೆ ಸರಿ ಅನ್ನೋದೇ ಪ್ರಶ್ನಾರ್ಥಕ .
ಅನುಭವಕ್ಕೆ ಸಿಗದೇ ಇರುವುದು ಹಲವಿದೆ ಜಗದೊಳಗೆ,ಕಲ್ಪನೆಗೆ ಸಿಕ್ಕಿಯೂ ಸಿಗದಂತಿರುವುದು ಮತ್ತಷ್ಟಿವೆ ಬದುಕೊಳಗೆ…….ಕಲ್ಪನೆ-ವಾಸ್ತವಗಳ ನಡುವೆ ಏನಿರಲಿ,ಇಲ್ಲದಿರಲಿ ನಿರಂತರ ಈ ಬದುಕಬಂಡಿಯ ಓಟ. ಕಲ್ಪನೆಯ ವಾಸ್ತವಕ್ಕೆ ಮಿತಿ ಇರದೇ ಇದ್ದಿದ್ದರೇ ?
ಕಲ್ಪನೆಗೆ ಬೇಲಿ ಹಾಕುವವರಾರು ? ನನ್ನವು ಒಂದಿಷ್ಟು ಕಲ್ಪನೆಗಳಿವೆ… ಅನುಭವಾತೀತ ಕಲ್ಪನೆಗಳೆನ್ನಬಹುದೇನೋ? ಮರುಳೆನ್ನಬಹುದೇನೋ ನನ್ನ?
- ಮಾನವ ಸಂಕುಲಕ್ಕೆ ನಾಗರೀಕತೆಯ ಗಾಳಿಯೇ ತಾಗದೆ ಇದ್ದಿದ್ದರೇ?
- ಧರ್ಮ, ಜಾತಿಗಳೆಂಬ ಬೀದಿ ನಾಟಕವೇ ಇರದಿದ್ದರೇ?
- ನೀ ಹೆಣ್ಣು ,ನಾ ಗಂಡು ಅನ್ನೋ ಪಾತ್ರ ಪ್ರವೇಶವೇ ಇರದಿದ್ದರೇ?
- ಸಂಸಾರ ಅನ್ನೋ ನೌಕೆಯ ಪಯಣವೇ ಇರದಿದ್ದರೇ?
- ದ್ವೇಷ ,ಅಸೂಯೆ,ಹೊಡೆದಾಟಗಳ ಆಟವೇ ಇರದಿದ್ದರೇ ?
- ಸ್ನೇಹ ,ಪ್ರೀತಿ ,ಸಂಬಂಧಗಳೇ ಇರದಿದ್ದರೇ?
- ಸ್ವಾರ್ಥ, ನಿಸ್ವಾರ್ಥಗಳ ಪರದೆಗಳೇ ಇರದಿದ್ದರೇ?
- ಎಲ್ಲರೂ ಎಲ್ಲರ ಬಗೆಗೆ ಯೋಚಿಸುವಂತಿದ್ದರೇ?
- ಹಸಿವು,ದಣಿವುಗಳೇ ಭಾಸವಾಗದಂತಿದ್ದರೇ?
- ನಿದ್ರೆ ಎಂಬುದೇ ಇರದಿದ್ದರೇ?
- ದುಡ್ಡು ಅನ್ನೋ ಕಾಗದದ ಚೂರು ಬರಿಯ ಕಾಗದವೇ ಆಗಿ ಉಳಿದಿದ್ದರೇ?
- ಹುಟ್ಟಿದ ಹಸುಗೂಸಿಗೆ ತನ್ನೆಲ್ಲ ಬೇಕು ಬೇಡಗಳ ಮಂಡನೆ ಮಾಡುವ ಅವಕಾಶವಿದ್ದಿದ್ದರೇ ?
- ಸಾಗೋ ದಾರಿಗೆ ಕೊನೆ ಎಂಬುದೇ ಇರದಿದ್ದರೇ?
- ಸಾವೆಂಬ ಕೊನೆ ಮನೆಯ ಬಾಗಿಲು ತೆಗೆಯದೇ ಇದ್ದಿದ್ದರೇ ?
- ಇತರ ಜೀವರಾಶಿಗಳು ಮನುಕುಲದೊಟ್ಟಿಗೆ ಸಮಾನತೆಯ ಕೇಳಿ ಸ್ಪರ್ಧೆಗೆ ಇಳಿದಿದ್ದರೇ?
- ಕಾಲ ಚಕ್ರ ತಿರುಗದೆ ಇದ್ದಿದ್ದರೇ?
- ಪಂಚಭೂತಗಳ ಅಸ್ತಿತ್ವವೇ ಇರದಿದ್ದರೇ?
- ಹಗಲು,ಇರುಳುಗಳ ಕಣ್ಣಾಮುಚ್ಚಾಲೆಯೇ ಇರದಿದ್ದರೇ ? ಹೀಗೆ ಅದೆಷ್ಟೋ ಮರುಳ ಕಲ್ಪನೆಗಳಿವೆ ನನ್ನವು …..!
ಮಾಡುವುದೆಲ್ಲ ಹೊಟ್ಟೆ ಪಾಡಿಗೆ ಅನ್ನೋ ಮಾತು ಬರಿಯ ತೋರಿಕೆಯ ನಾಮಫಲಕದಂತೆ. ಅಷ್ಟೆಲ್ಲ ಹಣ ದುಡಿದು ರಾಶಿ ಹಾಕಿ ಮಾಡುವುದಾದರೂ ಏನು?
ಕೊನೆಯ ಪಯಣದಲ್ಲಿ ತೊಟ್ಟ ಬಟ್ಟೆಗೆ ಕಿಸೆಇರದು , ಮಲಗೋ ೬-೩ ಅಡಿಯ ಕೋಣೆಯಲ್ಲಿ ಯಾವ ತಿಜೋರಿಯು ಇರದು, ನನ್ನವರಿಗಾಗಿ ಈ ಉಳಿತಾಯ ಅನ್ನಲು ಅಲ್ಲಿರುವುದು ಒಂಟಿ ಒಬ್ಬಂಟಿಯ ನೀನು ಮಾತ್ರ. ಈ ಎಲ್ಲ ವಾಸ್ತವದ ಅರಿವಿದ್ದರೂ ನಡೆದಿದೆ ಕಾಗದದಚೂರಿನ ಹಿಂದೆ ನಮ್ಮ ಓಟ.
ಯಾರಲ್ಲಿಯೂ ಹಂಚಿಕೊಳ್ಳಲಾಗದ ಅನುಭವ ನಿನ್ನ ಕಡೇಪಯಣ ಮರೆಯದಿರು ಅಲ್ಲಿ ಬಯಸಿದರೂ ನಿನಗೇ ನೀ ಸಿಗಲಾರೆ ಮತ್ತೊಮ್ಮೆ,
ಮಗದೊಮ್ಮೆ ಯೋಚಿಸು ಇರುವವರೆಗು ನೀ ಇಲ್ಲಿ ಮಾಡಬೇಕಾದುದು ಏನೆಂದು.
-ಮಾಲಾ ಎನ್ ಮೂರ್ತಿ
ನಿಮ್ಮ ಕಲ್ಪನೆಗಳು ನಿಜ ಆಗದೆ ಇದ್ದರೂ ಕಲ್ಪನೆಯಾಗಿಯೇ ಸುಂದರವಾಗಿದೆ . ಎಲ್ಲಾ ನೋವುಗಳಿಗೂ ಇಲ್ಲಿ ಅತಿಯಾದ ನಿರೀಕ್ಷೆಯೇ ಕಾರಣ. ಚಂದದ ಬರಹ
ಕಲ್ಪನೆಯ ಕಲ್ಪನೆ…….ಸುಂದರವಾಗಿದೆ…….