ಸಂತೃಪ್ತಿಯೇ ಸಂತೋಷ
“ಸಂತಸದ ಚಿಲುಮೆ ಸದಾ ಹರಿದು ಸರಿಸಲಿ ಖೇದ
ನಮ್ಮೊಳಗಿನಾನಂದ ಹೊರಸೂಸಿ ಮೊಗದಿಂದ
ಎಲ್ಲರು ತಮ್ಮವರೆಂದು ತಿಳಿದು ನಡೆಯಲು ಮುಂದು
ಕೋಪ ದ್ವೇಷಗಳನೆಲ್ಲ ತೊರೆದು ಜೀವಿಸಲೆಂದು.”
ಹೌದು..ನಿಜವಾಗಿಯೂ ಸಂತೋಷ..ಆನಂದ ಎಂದರೇನು? ಮನದೊಳಗೆ ಸಂತಸದ ಹೂವು ಅರಳಿದಾಗ ಅನುಭವಕ್ಕೆ ಬರುವಂತಹ ಈ ಸುಖಾನುಭೂತಿಗೆ ಯಾರೂ ಇನ್ನೂ ಭಾಷ್ಯ ಬರೆದಿಲ್ಲ ಅಲ್ಲವೇ? ವ್ಯಕ್ತಿಯಿಂದ ವ್ಯಕ್ತಿಗೆ ಸಂತಸದ ಪರಿಭಾಷೆ ಬದಲುತ್ತಾ ಹೋಗುವುದು ನಿಜ.
ಒಬ್ಬರಿಗೆ ಒಂದು ಸಂಗತಿ ಸಂತಸ ತಂದರೆ ಅದೇ ವಿಷಯ ಇನ್ನೊಬ್ಬರಿಗೆ ದುಃಖ ತರಬಹುದಾದ ಸಾಧ್ಯತೆ ಇದೆ. ಇದರ ಪರಿಧಿಯು ಶ್ರೀಮಂತರಲ್ಲಿ ಹಿಗ್ಗುತ್ತಾ ಹೋಗಿ, ಅತೃಪ್ತ ಧನದಾಹಿಗಳಾಗಿ ನರಳುವವರು ಬಹಳ ಮಂದಿ. ಕಡುಬಡವರಿಗೋ ಹೊಟ್ಟೆ ತುಂಬಾ ಆಹಾರ ಸಿಗುವ ಕ್ಷಣವೇ ತುಂಬಾ ಸಂತಸದಾಯಕ. ಆಲಸಿಗಳಿಗೆ ಭರ್ಜರಿ ತಿಂದುಂಡು ನಿದ್ರಿಸುವುದರಲ್ಲೇ ಸ್ವರ್ಗಾನಂದವಾದರೆ, ಕಠಿಣ ಕಾರ್ಯಪ್ರವೃತ್ತರಿಗೆ ಅವರು ಹಾಕಿಕೊಂಡ ಗುರಿಸಾಧನೆಯ ಕ್ಷಣದ ಆನಂದ ಅವರ್ಣನೀಯ. ಸಕಾಲದ ಉಪಯುಕ್ತ ಸಹಾಯವು ಕೊಡು ಕೊಂಡವರಿಗಿಬ್ಬರಿಗೂ ಅತ್ಯಂತ ಆನಂದದಾಯಕ. ಅದರಲ್ಲೂ ಫಲಾಪೇಕ್ಷೆಯಿಲ್ಲದ ನಿಸ್ವಾರ್ಥಸೇವೆಯಿಂದ ಸಿಗುವ ಮಹದಾನಂದ ಎಣೆಯಿಲ್ಲದ್ದು. ದುಃಖದಲ್ಲಿರುವವರೊಡನೆ ಆಡುವ ಒಂದೆರಡು ಒಳ್ಳೆಯ ಮಾತುಗಳು ಇಬ್ಬರಿಗೂ ಮನಸ್ಸಂತೋಷ ನೀಡುವುದಂತೂ ಖಚಿತ.
ಒಳ್ಳೆಯ ಸಂಗೀತ, ಹಾಡು, ಹರಿಕಥೆ, ಪ್ರವಚನ ಇತ್ಯಾದಿಗಳನ್ನು ಕೇಳಿದಾಗ, ಒಳ್ಳೆಯ ಕಾರ್ಯಕ್ರಮಗಳನ್ನು ನೋಡಿದಾಗ, ಸುಂದರ ಪ್ರಕೃತಿ ಸೌಂದರ್ಯವನ್ನು ಅಸ್ವಾದಿಸಿದಾಗ ಆಗುವ ಆನಂದಾನುಭೂತಿ ಅವರವರ ಅಭಿರುಚಿಗೆ ತಕ್ಕಂತೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ವಿಘ್ನಸಂತೋಷಿಗಳ ಪರಿಯೇ ಅತೀ ಹೀನ ಮಟ್ಟದ್ದು. ಆದರೆ ಜಗತ್ತಿನಲ್ಲಿ ಎಲ್ಲೆಲ್ಲೂಇಂಥಹವರೇ ಹೆಚ್ಚಾಗಿ ಕಾಣಸಿಗುವುದು ದೌರ್ಭಾಗ್ಯದ ಸಂಗತಿ. ಕೀರ್ತಿಯ ಬೆನ್ನುಹತ್ತಿ ಅದರಲ್ಲೇ ಸಂತೋಷವನ್ನು ಹುಡುಕುವವರು ಇನ್ನೊಂದು ವಿಧ. ಇವುಗಳೆಲ್ಲ ಬರೇ ತಾತ್ಕಾಲಿಕ. ಮನಃಸಂತೃಪ್ತಿಯುತ ಸಂತೋಷ ಮನೋವಿಕಾಸಕ್ಕೆ ಕಾರಣವಾಗುವುದು ನಿಶ್ಚಿತ. ಪ್ರಕೃತಿಯಲ್ಲಿ ಪ್ರಾಣಿಪಕ್ಷಿಗಳೂ ಅವುಗಳದೇ ರೀತಿಯಲ್ಲಿ ಸಂತಸವನ್ನು ವ್ಯಕ್ತಪಡಿಸುವುವು. ಸಾಕುಪ್ರಾಣಿಪಕ್ಷಿಗಳಲ್ಲಿ ಅದರ ಅಭಿವ್ಯಕ್ತಿಯನ್ನು ನಾವು ನೋಡಬಹುದು. ಮನೋವಿಕಾಸಕ್ಕೆ ಕಾರಣವಾಗುವ ಮನಃಸಂತೃಪ್ತಿಯುತ ಸಂತೋಷ ಎಲ್ಲೆಲ್ಲೂ ಕಾಣಸಿಗಲಿ ಎಂದು ಹಾರೈಸೋಣ.
– ಶಂಕರಿ ಶರ್ಮ, ಪುತ್ತೂರು.
(ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಿತವಾದ ಬರಹ)
ನೈಸ್, ಯಾವೆಲ್ಲ ವಿಷಯಗಳೊಳಗೆ ಹೊಕ್ಕು , ಅದರಲ್ಲಿ ಭಾಗಿಯಾಗಿ ನಾವು ಸಂತಸ ಹೊಂದಬಹುದು ಅನ್ನುವುದನ್ನು ಸಹಜವಾಗಿ , ಸುಂದರವಾಗಿ ವಿವರಿಸಲಾಗಿದೆ