ಗುಂಪಿಗೆ ಸೇರದ ಪದಗಳು
ಗುಂಪಿಗೆ ಸೇರದ ಪದಗಳೇ ಹಾಗೆ
ಹುಟ್ಟು ಹಠಮಾರಿಗಳು
ಗುಂಪಲ್ಲಿದ್ದು ಇಲ್ಲದಂತಿರುತ್ತವೆ
ಅಥವಾ ಎದ್ದು ಕಾಣುತ್ತಿರುತ್ತವೆ,
ಅಂದ ಮಾತ್ರಕ್ಕೆ ಗುಂಪಿನಿಂದಲೇ
ಹೊರಹಾಕುವುದು ನಿಕೃಷ್ಟ.
ಗುಂಪಿಗೆ ಸೇರದ ಪದವನ್ನು ಗುರುತಿಸಿ
ಹೀಯಾಳಿಸಿ ಕೆರಳಿಸುವುದು ಹೊಸತೇನಲ್ಲ.
ಗುಂಪಿನಲ್ಲಿ ಗೋವಿಂದವಾಗುವುದಕ್ಕಿಂತ
ಗುಂಪಿಗೆ ಸೇರದಿರುವುದೇ ಒಳಿತು.
ಹೊಗರು ಕಾಯಿಗಳ ಗುಂಪಿನಲ್ಲಿರುವ
ಹಣ್ಣು, ಮಾಗಿದ ಮೇಲೆ ಸಿಹಿಯಾದದ್ದು,
ಮಿಕ್ಕವಕ್ಕಿಂತ ತುಸು
ಮೊದಲೇ ಮಾಗಿರುತ್ತದಷ್ಟೇ.
ಮಿಕ್ಕವುಗಳ ಹಣೆಬರಹವು ನಾಳೆ
ಅದೇ ಆಗಬಹುದು.
ಆಗ ಗುಂಪಿಗೆ ಸೇರದೆಂದು ಹೊರಹಾಕಿದ
ಹಣ್ಣು ನೆನಪು ಮಾತ್ರ,
ಕಾಲನಿಗೆ ಜೇಷ್ಠತೆಯ ಹಂಗೆಲ್ಲಿದೆ.
ಕೆಲವು ಪದಗಳು ಗುಂಪನ್ನೇ ಹೊರದಬ್ಬಿ
ಭುಗಿಲೆದ್ದ ಸೂರ್ಯನಂತಾದರೆ..
ಮತ್ತಲವು ದಬ್ಬಿಸಿಕೊಂಡು ತಾಳ್ಮೆಯ
ಚಂದ್ರನಂತಾಗುತ್ತವೆ.
ಈ ಗುಂಪಿಗೆ ಸೇರದ ಪದಗಳೇ ಹೀಗೆ..
ತಾವು ಇತರ ಪದಗಳಿಗಿಂತ ಭಿನ್ನವೆಂದು
ಹೆಮ್ಮೆ ಪಡಬೇಕೋ..
ದೌರ್ಬಲ್ಯವೆಂದು ದುಃಖಿಸಬೇಕೋ ತಿಳಿಯದೇ,
ಸಮಯೋಚಿತ ಪ್ರಸಾಧನದ
ಹುಡುಕಾಟದಲ್ಲಿ ಕಂಗೆಟ್ಟಿರುತ್ತವೆ.
ಸದಾ ಅಭದ್ರತೆಯ ಆತಂಕದಲ್ಲಿ
ಅದೆಷ್ಟೋ ಕನಸುಗಳು ಭಗ್ನಗೊಂಡಿರುತ್ತವೆ.
ಅಷ್ಟಕ್ಕೂ ಗುರುತಿಸಲ್ಟಟ್ಟ ಪದದ
ಅಂತ:ಕರಣವನ್ನರಿತು, ಇರುವಂತೆ ಸ್ವೀಕರಿಸೋ
ದೊಡ್ಡ ಹೃದಯದ ಪದಗಳು ಮಿತಿಯಲ್ಲಿವೆ.
ಗುರುತಿಸಿ ಅಂಕ ಗಳಿಕೆಯೇ
ಪರಮ ಧ್ಯೇಯವಾಗಿರುವಾಗ
ನಿರೀಕ್ಷಿಸುವುದು ಹಾಸ್ಯಾಸ್ಪದವೇ.
ಗುಂಪಿಗೆ ಸೇರದ ಪದದ
ನಿಶ್ಯಬ್ಧದ ಕೂಗು ಆಲಿಸಿದವರಿಗಷ್ಟೇ
ಕೇಳಿಸುವುದು.
ಮೌನದ ಆಲಾಪನೆ ಹಾಗೆಲ್ಲ ಎಲ್ಲರಿಗೂ
ಸಿದ್ಧಿಸುವುದಿಲ್ಲ.
-ಶರತ್ ಪಿ.ಕೆ. ಹಾಸನ.,
ಕವನ ಸೊಗಸಾಗಿದೆ..
ಧನ್ಯವಾದಗಳು
ಅರ್ಥಪೂರ್ಣ, ಅಭಿನಂದನೆಗಳು.
ಚೆನ್ನಾಗಿದೆ, ಹಣ್ಣುಗಳು , ಸೂರ್ಯ, ಚಂದ್ರ , ಜೊತೆಗೆ ಬದುಕು ಕವನದಲ್ಲಿ ಅಡಗಿರೋ ಈ ಎಲ್ಲಾ ಉದಾಹರಣೆಗಳು ಸೊಗಸಾಗಿವೆ .
ಚೆನ್ನಾಗಿದೆ ಶರತ್