ಟೆಲಿಗ್ರಾಂ- ತಂತಿ ಸಂದೇಶ

Share Button

ಇತ್ತೀಚಿನ ದಿನಗಳಲ್ಲಿ ಯಾವುದೇ ಟೆಕ್ನಾಲಜಿ ಬಂದರೂ ಕೆಲವೇ ದಿನಗಳಲ್ಲಿ ಅದು ಹಳತಾಗಿ ಅದರ ಜಾಗದಲ್ಲಿ ಹೊಸತು ಬಂದು ಕೂರುತ್ತದೆ. ಎರಡು ವರ್ಷಗಳ ಹಿಂದೆ ಖರೀದಿಸಿದ ಮೊಬೈಲ್ ಫೋನನ್ನು ಇನ್ನು ಬದಲಾಯಿಸಿಲ್ಲವೆಂದು ಸ್ನೇಹಿತರು ನನ್ನನ್ನು ಹಂಗಿಸುತ್ತಾರೆ. ಹೀಗಿರುವಾಗ, 1837 ರಲ್ಲಿ ಅಮೇರಿಕಾದ ಸಂಶೋಧಕ ಸ್ಯಾಮುಯೆಲ್ .ಬಿ. ಮೋರ್ಸ್ ಕಂಡುಹಿಡಿದ ಈ ತಂತ್ರಜ್ಞಾನ 2013 ರ ವರೆಗೂ ಅಂದರೆ 176 ವರ್ಷಗಳ ವರೆಗೂ ಬಾಳಿದ ಏಕೈಕ ತಂರ್ತಜ್ಞಾನವೆಂದರೆ ಅಚ್ಚರಿಯಲ್ಲವೆ? ತಂತಿಯ ಮೂಲಕ ಸಂದೇಶ ಕಳಿಸಲು ಆತ ಬಳಸಿದ ಎರಡು ಚಿಹ್ನೆ ‘ಕಟ್ಟ’ ಮತ್ತು ‘ಕಡ‘ ಕಂಪ್ಯೂಟರ್ ನಲ್ಲಿ ‘0 ಮತ್ತು ‘1’ ಇದ್ದಂತೆ. ಉದಾಹರಣೆಗೆ ಆಂಗ್ಲ ಭಾಷೆಯ ‘A’  ಗೆ ಕಡ-ಕಟ್ಟ,  ‘B’ ಗೆ ಕಟ್ಟ-ಕಡ-ಕಡ-ಕಡ,  ‘C’ ಗೆ ಕಟ್ಟ-ಕಡ-ಕಟ್ಟ-ಕಡ. ಬಹಳ ಸರಳವಾದ ತಂತ್ರಜ್ಞಾನ. ನಮಗೆ ಅದರ ಶಬ್ದ ಸಂಗೀತ ಕೇಳಿದಂತೆ ಆಗುತ್ತಿತ್ತು..

ಭಾರತದಲ್ಲಿ ಮೊದಲ ತಂತಿ ಮಾರ್ಗ 1851 ರಲ್ಲಿ ಕಲ್ಕತ್ತ ಮತ್ತು ಡೈಮಂಡ್ ಹಾರ್ಬರ್ ನಡುವೆ ಹೂಗ್ಲಿ ನದಿಯ ಮೇಲೆ ಸ್ಥಾಪಿಸಲಾಯಿತು. 1854 ರಲ್ಲಿ ಸುಮಾರು 800 ಮೈಲಿ ತಂತಿ ಮಾರ್ಗ ಕಲ್ಕತ್ತಾ ಮತ್ತು ಆಗ್ರಾ ಮಧ್ಯೆ ನಿರ್ಮಿಸಲಾಯಿತು. 1865 ರಲ್ಲಿ ಪರ್ಷಿಯನ್ ಗಲ್ಫ್ ಮೂಲಕ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಸಂಪರ್ಕ ಕಲ್ಪಿಸಲಾಯಿತು. 1939 ರಲ್ಲಿಯೇ ಭಾರತದಲ್ಲಿ 100000 ಮೈಲು ಉದ್ದದ ತಂತಿಮಾರ್ಗ ಇತ್ತು .

ಸಾಮಾನ್ಯವಾಗಿ ಟೆಲಿಗ್ರಾಮ್ ಎಂದರೆ ಜನ ಹೆದರುತ್ತಿದ್ದರು. . ಏಕೆಂದರೆ ಬಹುತೇಕ ಅದು ಸಾವಿನ ಸುದ್ದಿಯಾಗಿರುತ್ತಿತ್ತು. ಒಮ್ಮೆ ನಾನು ರಾತ್ರಿ ಡ್ಯೂಟಿಯಲ್ಲಿದ್ದಾಗ ನಮ್ಮ ಮೆಸೆಂಜರ್‍ ಗಳನ್ನು ಬೆಳಗ್ಗೆ 5 ಗಂಟೆಗೆ ಹೊರಗೆ ಕಳಿಸಿದ ನಂತರ ಒಂದು ಟೆಲಿಗ್ರಾಂ ಬಂತು. ಅದರಲ್ಲಿ ಯಾರೋ ಹೆಂಗಸರು 6 ಗಂಟೆಗೆ ರೈಲಿನಲ್ಲಿ ಬರುವವರಿದ್ದರು. ಸ್ಟೇಷನ್ ಗೆ ಬನ್ನಿ ಎಂದಿತ್ತು. ಆಫೀಸ್ ಗೆ ಬೀಗ ಹಾಕಿ ನಾನೇ ಅದನ್ನು ತಲಪಿಸಲು ಹೊರಟೆ. ಅವರ ಮನೆ ಹುಡುಕಿ ‘ಟೆಲಿಗ್ರಾಂ’ ಎಂದೆ. ಅವರು ತಮಿಳಿನವರು. ‘ಅಯ್ಯೋ ಪೋಯಿಟ್ಟೀಯಾ’ ಎಂದು ಅಳಲು ಪ್ರಾರಂಭ್ಸಿದರು. ಹೀಗಿತ್ತು ಟೆಲಿಗ್ರಾಂನ ಭಯ.

ಸುಮಾರು 2005 ರ ವೇಳೆಗಾಗಲೇ ಟೆಲಿಗ್ರಾಂ ಸೇವೆ ತನ್ನ ಅವನತಿಯತ್ತ ದಾಪುಗಾಲು ಹಾಕುತ್ತಾ ಹೊರಟಿತ್ತು. ಅದು ಹೇಗೆಂದರೆ ಒಂದು ಟೆಲಿಗ್ರಾಮ್ ಸ್ವೀಕರಿಸಲು ನಾವು ತೆಗೆದುಕೊಳ್ಳುತ್ತಿದ್ದುದು ಕೇವಲ 3 ರೂ 50 ಪೈಸೆ. ದೇಶದ ಯಾವುದೇ ಭಾಗದಿಂದ ಸ್ವೀಕರಿಸಿದರೂ ಮೈಸೂರಿಗೆ ಬಂದು ಸೇರಿದ ನಂತರ ಅದನ್ನು ವಿತರಣೆ ಮಾಡಲು 8 ರೂ ಕೊಟ್ಟು ಕಳಿಸಬೇಕಾಗಿತ್ತು. ಈ ವಿತರಣೆಗಾಗಿ ಸರ್ಕಾರಿ ನೌಕರರಲ್ಲದವರನ್ನು ನೇಮಿಸಿಕೊಂಡಿದ್ದೆವು. ಹೀಗೆ ಇಲಾಖೆಗೆ ನಷ್ಟವಾದರೂ ತನ್ನ ಸೇವಾ ಮನೋಭಾವವನ್ನು ಬಿಟ್ಟಿರಲಿಲ್ಲ. ಮಹಾಭಾರತದಲ್ಲಿ ನು ತನ್ನ ಅವಸಾನ ಕಾಲದಲ್ಲೂ ಇಂದ್ರನಿಗೆ ಕವಚಗಳನ್ನೂ, ಕೃಷ್ಣನಿಗೆ  ಕರ್ಣಕುಂಡಲಗಳನ್ನೂ ಕೊಡುವ ಮೂಲಕ ತನ್ನ ದಾನ ಬುದ್ಧಿಯನ್ನು ಬಿಡಲಿಲ್ಲ. ಕೆಲವರು ಮದುವೆಯ ಆಮಂತ್ರಣಗಳನ್ನು ಮುದ್ರಿಸಿ ಪೋಸ್ಟ್ ಮಾಡುವುದುಕ್ಕಿಂತ ಟೆಲಿಗ್ರಾಂ ಬಹಳ ಅಗ್ಗ ಎಂದು ಈ ಸೇವೆಯನ್ನು ಉಪಯೋಗಿಸುತ್ತಿದ್ದರು.

1985 ರಲ್ಲಿ ಭಾರತದಲ್ಲಿ ಸುಮಾರು 45000 ಟೆಲಿಗ್ರಾಫ್ ಆಫೀಸುಗಳಿದ್ದುವು. ವರ್ಷಕ್ಕೆ6 ಕೋಟಿ ಸಂದೇಶಗಳು ರವಾನೆ ಆಗುತ್ತಿದ್ದುವು. ದೆಹಲಿಗೆ ದಿನಕ್ಕೆ 1 ಲಕ್ಷ ಟೆಲಿಗ್ರಾಂ ಬರುತ್ತಿದ್ದುವಂತೆ. ನಾವು ನಮ್ಮ ವೇತನ ಪರಿಷ್ಕರಣೆಗಾಗಿ 1967 ರಲ್ಲಿ ‘ನಿಯಮದಂತೆ ಕೆಲಸ’ ಎಂಬ ಮುಷ್ಕರ ಮಾಡಿದೆವು. ಅದು ಹೇಗೆಂದರೆ ನಮಗೆ ಒಂದು ಗಂಟೆಗೆ 30 ಟೆಲಿಗ್ರಾಂ ಕಳಿಸಬೇಕು, ಹೆಚ್ಚಿಗೆ ಕಳುಹಿಸಿದರೆ 1 ಟೆಲಿಗ್ರಾಂ ಗೆ 3 ಪೈಸೆ ಇನ್ಸೆಂಟಿವ್ ಕೊಡುತ್ತಿದ್ದರು. ನಾವು ಗಂಟೆಗೆ 30 ಟೆಲಿಗ್ರಾಂ ಮಾತ್ರ ಕಳುಹಿಸುವ ಮೂಲಕ ಸಾವಿರಾರು ಟೆಲಿಗ್ರಾಂ ಹಾಗೆಯೇ ಉಳಿಯುತ್ತಿದ್ದುವು. ಬೆಂಗಳೂರಿನಲ್ಲಿ ನಾವು ನೂರಾರು ಜನ ಟೆಲಿಗ್ರಾಫಿಸ್ಟ್ ಗಳಿದ್ದೆವು. ಅಂದರೆ ಬೆಂಗಳೂರೊಂದರಲ್ಲಿಯೇ ಎಷ್ಟು ಸಾವಿರ ಟೆಲಿಗ್ರಾಂ ಬರುತ್ತಿದ್ದುವು ಎಂದು ಲೆಕ್ಕ ಹಾಕಬಹುದು. ಎಲ್ಲದಕ್ಕೂ ಒಂದು ಅಂತ್ಯ ಇರುತ್ತದೆಯಲ್ಲವೆ? ಬಂದೇ ಬಂತು ಆ ದಿನ. ಅದುವೇ 14 ಜುಲೈ 2013. ನಾನೇ ಮೈಸೂರಿನ ತಂತಿ ಕಛೇರಿಯಲ್ಲಿ ಕಟ್ಟಕಡೆಯ ಟೆಲಿಗ್ರಾಂ ಕೊಟ್ಟು , ನನ್ನನ್ನು 38 ವರ್ಷಗಳ ಕಾಲ ಸಾಕಿದ ಈ ತಂತ್ರಜ್ಞಾನಕ್ಕೆ ಅಶ್ರುತರ್ಪಣ ಕೊಟ್ಟೆ. ಅಂದು ಭಾನುವಾರ ರಾತ್ರಿ 0900 ಗಂಟೆಗೆ ಬಿ.ಎಸ್.ಎನ್.ಎಲ್ ತನ್ನ ಸುದೀರ್ಘ ಇತಿಹಾಸದ ಟೆಲಿಗ್ರಾಂ ವ್ಯವಸ್ಥೆಗೆ ಮಂಗಳ ಹಾಡಿತು.

ನಾನು ಕಂಡ ಒಂದೆರಡು ಹಾಸ್ಯ ಸನ್ನಿವೇಶಗಳಿವು. ಯಾರೋ ಒಬ್ಬರು ದೂರು ತೆಗೆದುಕೊಂಡು ಬಂದಿದ್ದರು. ಏನೆಂದರೆ ಗ್ರೀಟಿಂಗ್ಸ್ ನಲ್ಲಿ ಕಳಿಸಿರುವವರ ಹೆಸರು ‘ಪೂರಿ ಮತ್ತು ಚಪಾತಿ’ ಎಂದಿತ್ತು! ನಾನು ವಿಚಾರಣೆ ಮಾಡಲಾಗಿ, ಅದು ‘ಸೂರಿ ಮತ್ತು ಚಲಪತಿ’ ಆಗಬೇಕಿತ್ತು! ಇನ್ನೊಮ್ಮೆ ಒಬ್ಬರು ಕಂಪ್ಲೆಂಟ್ ತಂದಿದ್ದರು. ಅವರ ಟೆಲಿಗ್ರಾಂ ನಲ್ಲಿ ” How Bhaagyavathi matured. ” ಎಂದಿತ್ತು. ಇದೇನು ಹೀಗೆ ಬಂದಿದೆಯಲ್ಲಾ ಎಂದು ಅವರ ದೂರಾಗಿತ್ತು. ಅದು ಏನಾಗಿತ್ತೆಂದರೆ, ನಮ್ಮ ಮೋರ್ಸ್ ಕೋಡ್ ನಲ್ಲಿ ‘S’ ಮತ್ತು ‘H’ ಗೆ  ಸ್ವಲ್ಪವೇ ವ್ಯತ್ಯಾಸ. ‘S’ ಗೆ ಕಡ-ಕಡ-ಕಡ (ಮೂರು)  ‘H’ ಗೆ ಕಡ-ಕಡ-ಕಡ-ಕಡ (ನಾಲ್ಕು). ಇಲ್ಲಿ ‘S’ಗೆ ಬದಲಾಗಿ ‘H’ ಬಂದಿದೆ. ಅದು ‘Sow Bhaagyavathi matured’    ಎಂದಿರಬೇಕಿತ್ತು.

ಇನ್ನೊಮ್ಮೆ ‘ಮದುವೆ’ ಗ್ರೀಟಿಂಗ್ಸ್ ನಲ್ಲಿ ‘ Happy Independence Day’  ಎಂದು ಬಂದಿತ್ತು. ಗ್ರೀಟಿಂಗ್ಸ್ ಸಂಖ್ಯೆ  ‘Eight’ ಆದರೆ ಅದು ‘Wish you both a happy married life’ .  ‘Eighteen’ ಆದರೆ  ಅದು ‘ Happy Independence day  greetings .  ಹೀಗೆ Eight ಬದಲು Eighteen ಆಗಿ ಅದು ಅವಾಂತರ ಮಾಡಿತ್ತು. ಅವರಿಗೆ ನಾನು ಸರಿಯಾಗಿಯೇ ಇದೆ, ಈವತ್ತಿನಿಂದ ನೀವು ಸ್ವಾತಂತ್ರ್ಯ ಕಳೆದುಕೊಳ್ಳುವವರಿದ್ದೀರಿ, ಎಂದೆ. ಆವರು ನಗುತ್ತಾ ಹೊರಟುಹೋದರು.

ಈ ರೀತಿ ಹಾಸ್ಯ ಸನ್ನಿವೇಶಗಳಿಂದ, ಕಣ್ಣೀರು ತರಿಸುವ ಘಟನೆಗಳಿಂದ ದೀರ್ಘಕಾಲ ಸೇವೆ ಸಲ್ಲಿಸಿದ ತಂತಿಸೇವೆ 14-07-2013 ರಿಂದ ಅಸ್ತಂಗತವಾಯಿತು.

 – ಎ.ಜಿ.ಸೋಮಶೇಖರ್,
ನಿವೃತ್ತ ಸೂಪರಿಂಟೆಂಡೆಂಟ್, ಮೈಸೂರು 

9 Responses

  1. Hema says:

    ಲೇಖನ ಬಹಳ ಸೊಗಸಾಗಿ, ಮಾಹಿತಿಯುಕ್ತವಾಗಿ ಮೂಡಿ ಬಂದಿದೆ. ನಮಗೆ ಪರಿಚಯವಿಲ್ಲದ ಟೆಲಿಗ್ರಾಂ ಜಗತ್ತಿನ ಸ್ವರೂಪವನ್ನೂ ಸ್ವಾರಸ್ವವನ್ನೂ ತಿಳಿಸಿದ್ದಕ್ಕಾಗಿ ಧನ್ಯವಾದಗಳು.

  2. Vasanth Shenoy says:

    Nice narration. Will prompt us to read till end. Nice one

  3. Nayana Bajakudlu says:

    ಬಹಳಷ್ಟು ಈಗಿನ ವರಿಗೆ ಟೆಲಿಗ್ರಾಮ್ ನ ಬಗ್ಗೆ ಏನೂ ಗೊತ್ತಿಲ್ಲ, ನನಗೂ ಅದರ ಬಗ್ಗೆ ಕೇಳಿದ್ದೆನಾದರೂ ಅದರಲ್ಲಿ ಇಷ್ಟೆಲ್ಲ ಸಂಗತಿಗಳಿವೆ ಅನ್ನೋದು ಗೊತ್ತಿರಲಿಲ್ಲ . ಲೇಖನದ ಜೊತೆಗೆ ನವಿರಾದ ಹಾಸ್ಯ ಘಟನೆಗಳು ಚೆನ್ನಾಗಿವೆ. ಬಹಳಷ್ಟು ಮಾಹಿತಿಗಳಿಂದ ಕೂಡಿದ ಲೇಖನ, ಚೆನ್ನಾಗಿದೆ.

  4. Jayalaxmi Rao says:

    ಲೇಖನ ಚೆನ್ನಾಗಿದೆ. ನಮ್ಮ ವೃತ್ತಿ ಜೀವನದ ಸವಿನೆನಪುಗಳನ್ನು ಮೆಲುಕಿ ಹಾಕಿದಂತಾಯಿತು.

  5. Prakash Deshpande says:

    ಸೊಗಸಾದ ಲೇಖನ,ನನ್ನ ಪತ್ರಿಕಾ ಜೀವನದಲ್ಲಿ ಈ ತಂತಿ ಕೆಲ ಅವಾಂತರ ಸೃಷ್ಟಿಸಿದ್ದಿದೆ.

  6. Shankara Narayana Bhat says:

    ಸರಿ , ಈಗ ಕಾಲ ಬದಲಾಗಿದೆ. ಎಲ್ಲವೂ ಬದಲಾಗುತ್ತವೆ, ಪುರಾತನ ಕಾಲದ ಸಂಗತಿಗಳನ್ನು ಹೇಳಿದಾಗ ಆಧುನಿಕರು ಗೆ ಆಶ್ಚರ್ಯವಾಗುತ್ತದೆ.

  7. Harshavardan says:

    Super info

  8. Pallavi Bhat says:

    ಟೆಲಿಗ್ರಾಂ ಪರಿಚಯವೂ ಚೆನ್ನಾಗಿತ್ತು.

  9. Somashekar says:

    ಲೇಖನವನ್ನು ಮೆಚ್ಚಿದ ಪ್ರತಿಕ್ರಯಿಸಿದ ಎಲ್ಲರಿಗೊ ಧನ್ಯವಾದಗಳು..ಸೋಮಶೇಖರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: