ಅಡುಗೆ ಎಂಬ ಆಟವೂ, ಕೆಲಸವೂ..
ನನ್ನ ಅಕ್ಕ ಫೋನ್ ಮಾಡುವಾಗಲೆಲ್ಲ ಆ ದಿನ ತಾನೇನು ಅಡುಗೆ ಮಾಡಿದೆ ಎಂದು ವಿವರಿಸುತ್ತಿದ್ದಳು. ಮುಂಬಯಿಯಲ್ಲಿ ವಾಸವಿದ್ದ ಅವಳು ಸಾಮಾನ್ಯವಾಗಿ ಭಾನುವಾರ ಫೋನ್ ಮಾಡುತ್ತಿದ್ದಳು. ಆ ದಿನ ಹೆಚ್ಚಾಗಿ ಏನಾದರೂ ಸ್ಪೆಷಲ್ ಅಡುಗೆ ಇರುತ್ತಿತ್ತು. ತನಗೆ ತಿಳಿದಿದ್ದ ಚಿಕನ್ ವೆರೈಟಿಗಳ ಬದಲು ಇಂಟರ್ನೆಟ್ಟಲ್ಲಿ ಹೊಸ ರೆಸಿಪಿಗಳನ್ನು ಹುಡುಕಿ, ಟಿವಿ ಚಾನೆಲ್ ಗಳ ಅಡುಗೆ ಕಾರ್ಯಕ್ರಮಗಳ ರೆಸಿಪಿಗಳನ್ನು ಬರೆದಿಟ್ಟುಕೊಂಡು ವೈವಿಧ್ಯಮಯ ಅಡುಗೆ ತಯಾರಿಸುತ್ತಿದ್ದಳು. ಜೊತೆಗೆ ಅದನ್ನು ಮಾಡುವ ಕ್ರಮವನ್ನು ನನಗೆ ವಿವರಿಸಿ ನೀನೂ ಟ್ರೈ ಮಾಡು ಎನ್ನುತ್ತಿದ್ದಳು. ಗೊತ್ತಿರುವ ಅಡುಗೆ ಮಾಡಲು ಸಮಯವಿಲ್ಲ ಎನ್ನುವ ಸ್ಥಿತಿಯಲ್ಲಿರುವ ನಾನು ಏನಾದರೊಂದು ಅಡುಗೆ ಆದರೆ ಸಾಕು ನನ್ನ ಮೂವರು ಪುಟ್ಟ ಮಕ್ಕಳಿಗೆ ತಿನ್ನಿಸಿ ಶಾಲೆಗೆ ಹೊರಡಿಸಿ, ನಾನೂ ಸಮಯಕ್ಕೆ ಸರಿಯಾಗಿ ಹೊರಡುವಂತಾದರೆ ಸಾಕು ಎಂದು ಬೇಡುತ್ತಿದ್ದೆ. ಅವಳ ಮಾತಿಗೆ ‘ಹಾ, ಹೂಂ’ ಎಂದು ಫೋನಿಟ್ಟರೆ ತಂಗಿಯ ಫೋನ್. ಅವಳಿಗೂ ಹೀಗೇ ಏನಾದರೊಂದು ಹೊಸರುಚಿ ಪರೀಕ್ಷಿಸುವ ಹುಚ್ಚು. ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದ ಇವರಿಬ್ಬರೂ ಹೀಗೇ ಮನೆಯನ್ನು ಲಕಲಕ ಹೊಳೆಯುವಂತಿಟ್ಟು, ರುಚಿರುಚಿಯಾದ ಅಡುಗೆಯನ್ನು ಖುಷಿಯಿಂದ ಮಾಡುತ್ತಾ ತಮ್ಮ ಗಂಡ, ಅವರ ಗೆಳೆಯರು, ನೆಂಟರು ಹೀಗೇ ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದರು. ಶಿಕ್ಷಕ ವೃತ್ತಿಯ ನಾನು ಹಾಗೂ ನನ್ನ ದೊಡ್ಡಕ್ಕನ ಪಾಡು ನಾಯಿಪಾಡು. ಹಾಗೂ ಹೀಗೂ ಏಗುತ್ತಾ ಜಟ್ ಪಟ್ ಎಂದು ಅಡುಗೆ ಮಾಡಿ, ಉಳಿದ ಮನೆಕೆಲಸ ಮುಗಿಸಿ ಕೆಲಸಕ್ಕೆ ಹೋಗುವ ಧಾವಂತ.
ಇತ್ತೀಚೆಗೆ ನನ್ನ ಅಕ್ಕನ ಗಂಡ ಅನಿರೀಕ್ಷಿತವಾಗಿ ನಿಧನ ಹೊಂದಿದರು. ಜರ್ಜರಿತಳಾದ ನನ್ನಕ್ಕನಿಗೆ ನೋವಿನ ನಡುವೆಯೂ ಕೆಲಸಕ್ಕೆ ಸೇರುವುದು ಅನಿವಾರ್ಯವಾಯಿತು. ಮಕ್ಕಳೊಂದಿಗೆ ಮುಂಬಯಿಯಿಂದ ಬೆಂಗಳೂರಿಗೆ ಶಿಫ್ಟ್ ಆಗಿ ಕೆಲಸಕ್ಕೆ ಸೇರಿದ ಅಕ್ಕನಿಗೆ ಈಗ ಕೆಲಸದ ಒತ್ತಡ ಹಾಗೂ ಇತರ ಕಾರಣಗಳಿಂದ ಅಡುಗೆಯ ಮೇಲೆ ಮೊದಲಿದ್ದ ಆಸಕ್ತಿ ಹೊರಟು ಹೋಗಿದೆ. ಈಗ ಅವಳ ಫೋನ್ ಮಾತುಕತೆಯಲ್ಲಿ ಅಡುಗೆಯ ಪ್ರಸ್ತಾಪವೇ ಇಲ್ಲ. ನನ್ನ ತಂಗಿಗೂ ಎರಡನೇ ಮಗು ಹುಟ್ಟಿತು. ಇಬ್ಬರು ಮಕ್ಕಳ ಲಾಲನೆ ಪಾಲನೆ, ಮನೆಕೆಲಸ, ಜೊತೆಗೆ ಗಂಡನ ಕಛೇರಿಯ ಕೆಲಸಗಳಲ್ಲಿ ಸಹಕಾರ ಇಷ್ಟಾದಾಗ ಅವಳಿಗೂ ಅಡುಗೆಯ ಮೇಲೆ ಮೊದಲಿದ್ದ ಅದಮ್ಯ ಆಸಕ್ತಿ ಸ್ವಲ್ಪ ಕಡಿಮೆಯಾಯಿತು. ನನ್ನ ತವರು ಮನೆಯಲ್ಲಿ ನನ್ನ ಅಮ್ಮನಿಗೆ ಅಡುಗೆ ಕೋಣೆಯಲ್ಲಿ ಕೆಲಸವಿಲ್ಲದಿದ್ದ ಸಮಯವೇ ವಿರಳ. ನನ್ನ ತವರೂರಲ್ಲಿರುವ ನೆಂಟರಿಷ್ಟರು, ನೆರೆಯವರ ಮನೆಗಳಲ್ಲೂ ಹೆಂಗಸರು ದಿನವಿಡೀ ತರಹೇವಾರಿ ಅಡುಗೆಗಳ ತಯಾರಿಯಲ್ಲಿ ಮುಳುಗಿರುತ್ತಿದ್ದುದನ್ನೇ ನೋಡಿದ್ದೆ. ಅವರಿಗೆಲ್ಲ ಅಡುಗೆ ,ಜೀವನದ ಒಂದು ಅವಿಭಾಜ್ಯ ಅಂಗವೇ ಆಗಿದೆ. ಅವರ ಐಡೆಂಟಿಟಿಯೇ ಅಡುಗೆಯೊಂದಿಗೆ ತಳುಕು ಹಾಕಿಕೊಂಡಿದೆಯೆನಿಸುತ್ತದೆ. ನಮ್ಮ ಊರಲ್ಲಿ (ಬಹುಶಃ ಎಲ್ಲ ಊರುಗಳಲ್ಲೂ)ಹೆಂಗಸರ ಕುಶಲೋಪರಿಯಲ್ಲಿ ಅಡುಗೆಯ ವಿಷಯ ಇಣುಕದಿದ್ದರೆ ಅದು ಏನೋ ಗಹನವಾದ ಮಾತುಕತೆ ಎಂದೇ ಅರ್ಥ.
ಅಡುಗೆಯನ್ನು ಮೆಚ್ಚಿಕೊಂಡವರು, ಅಡುಗೆಯಿಂದಾಗಿ ಇತರರ ಮೆಚ್ಚುಗೆ ಪಡೆದುಕೊಂಡವರು, ಅಡುಗೆಯನ್ನೇ ಆಟವಾಗಿ ತಿಳಿದುಕೊಂಡವರೂ ಆದ ಹೆಂಗಸರ ಮಧ್ಯೆ ಅಡುಗೆಯೆಂದರೆ “ಅಯ್ಯೋ, ಕರ್ಮ” ಎನ್ನುವಂತಹ ನನ್ನಂತಹ ಕೆಲವರೂ ಇದ್ದಾರೆ.
ಅಷ್ಟಕ್ಕೂ ಈ ಅಡುಗೆ ಕೆಲಸ ಹೆಂಗಸರಿಗೇ ಮೀಸಲು ಎಂದು ಜನ ಭಾವಿಸುವುದೇಕೋ? ಮಹಿಳೆ ಉದ್ಯೋಗಕ್ಕೂ ಹೋಗಿ ಕುಟುಂಬದ ಆರ್ಥಿಕ ವ್ಯವಹಾರದಲ್ಲಿ ಪಾಲುದಾರಳಾಗುವಾಗ ಗಂಡಸರು ಅವರ ಅಡುಗೆ ಕೆಲಸದಲ್ಲಿ ಪಾಲುಗಾರರಾಗಬೇಕಲ್ಲವೇ? ನನ್ನ ಗಂಡ ಒಮ್ಮೊಮ್ಮೆ ಅಡುಗೆ ಕೆಲಸ ತಾವಾಗಿ ಮಾಡುವುದುಂಟು ಅಥವಾ ನನಗೆ ಸಣ್ಣಪುಟ್ಟ ಸಹಾಯ ಮಾಡುವುದುಂಟು. ಅವರಾಗಿ ಅಡುಗೆ ಮಾಡಿದರೆಂದರೆ ನನಗೆ ಅಡುಗೆ ಮನೆಯನ್ನು ಪೂರ್ವಸ್ಥಿತಿಗೆ ತರುವುದೂ ಒಂದು ಕೆಲಸವಾಗುತ್ತದೆ. ಈರುಳ್ಳಿ ಸಿಪ್ಪೆ, ಇತರ ತರಕಾರಿಗಳನ್ನು ಕತ್ತರಿಸಿದಾಗ ಉಳಿದ ಕಸ ಎಲ್ಲಾ ಅಲ್ಲೇ ಬಿದ್ದಿರುತ್ತದೆ. ಡಬ್ಬಗಳೆಲ್ಲಾ ಸ್ಥಾನಪಲ್ಲಟವಾಗಿರುತ್ತವೆ. ಆದರೂ ಇಂತಹ ಸಹಾಯದಿಂದ ನನಗೆ ಸ್ವಲ್ಪಮಟ್ಟಿಗೆ ವಿಶ್ರಾಂತಿ ಸಿಗುತ್ತದೆ. ಮನೆಯ ಇತರ ಸದಸ್ಯರ ಅಳಿಲು ಸೇವೆ ಇದ್ದರೆ ಅಡುಗೆ ಎಂಬ ಕರ್ಮ ಎಲ್ಲಾ ಹೆಂಗಸರಿಗೂ ಖುಷಿ ತರುವ ಆಟವಾಗುತ್ತದೆ.
– ಜೆಸ್ಸಿ ಪಿ ವಿ ಪುತ್ತೂರು
ನಿಮ್ಮ ಬರಹದ ಶೈಲಿ ಇಷ್ಟವಾಯ್ತು.
ಚೆನ್ನಾಗಿ ಬರೆದಿದ್ದೀರಿ..
ಅಡುಗೆ ಎಂಬುದು ಕಲೆ…ಅಡುಗೆಯನ್ನು ಏನೋ ಒಂದು ಮಾಡುವಂತೆಯೂ ಮಾಡಬಹುದು ಹಾಗೆಯೇ ಅಡುಗೆಯನ್ನು ಪ್ರೀತಿಸಲೂಬಹುದು…ಅಡುಗೆ ಅನ್ನುವುದು ಮನುಷ್ಯನ ಬದುಕಿನ ಅವಿಭಾಜ್ಯ ಅಂಗ. ಅದಿಲ್ಲದಿದ್ದರೆ ಸಾಧ್ಯವಾ? ಬದುಕಿನ ಜಂಜಾಟದಲ್ಲಿ ಅಡುಗೆಯೆಂಬುದು ಕರ್ಮವಾಗುವುದು ಶೋಚನೀಯ..
ಗೃಹಿಣಿಯರೆಂದ ಮಾತ್ರಕ್ಕೆ ಅಡುಗೆ ಮನೆಗೆ ಸೀಮಿತ ಅಂತ ಅಲ್ಲ…ಆ ಮನೆಯವರ ಅದೃಷ್ಟ…ಏನೋ ಒಂದು ಮಾಡಿ ಹಾಕದೆ ಸೊಗಸಾಗಿ ಮಾಡಿ ಉಣಬಡಿಸುವುದು ಪುಣ್ಯದ ಕೆಲಸ….
ನಿಜ, ಅಡುಗೆಯೂ ಒಂದು ಕಲೆ. ಇದನ್ನು ವಿವರಿಸುತ್ತಾ ಒಂದು ಕಡೆ ಬದುಕು ತನ್ನ ಆಯಾಮವನ್ನು ಹೇಗೆ ಬದಲಾಯಿಸುತ್ತದೆ ಅನ್ನೋದನ್ನೂ ನೆನಪಿಸಿದ್ದೀರಿ . nice aricle .
ನಿಜವಾದ ಮಾತುಗಳು.