ಹರಿದುಬಿಡು…..
ಬರಿಯ ಒಣಹಾಳೆಯ ಗೀಚುಗಳವು ಹರಿದುಬಿಡು
ಮೈಸೊಕ್ಕಿಗೆ ಬಂದ ಒಡ್ಡುಗಳ ದಾಟಿ ಹರಿದುಬಿಡು
ಶುಷ್ಕ ಪದ ಪಂಕ್ತಿಗಳವು ಓದದೆಯೆ ಹರಿದುಬಿಡು
ನಿನ್ನ ಹೃದಯಭಾರ ಇಳಿಸಲೊಮ್ಮೆಲೆ ಹರಿದುಬಿಡು
ಅಸತ್ಯಗಳಾಗರದ ಆಶ್ವಾಸನೆಗಳವು ಹರಿದುಬಿಡು
ನೋವ ನುಂಗುವ ಘನತೆಯೊಂದಿಗೆ ಹರಿದುಬಿಡು
ಮೃಗತ್ವ ಮರೆಮಾಚಿ ಬರೆದವುಗಳ ಹರಿದುಬಿಡು
ಮಾನವತ್ವದ ಹದದಲ್ಲಿ ಹನಿಯಾಗಿ ಹರಿದುಬಿಡು
ಅಪಾತ್ರನ ಪತ್ರ ದೃಢ ಕೈಗಳಿಂದಲೆ ಹರಿದುಬಿಡು
ನಿನ್ನ ಪಾತ್ರವ ಬಿಡದೆ ‘ಅನಂತ’ ಗಮ್ಯಕೆ ಹರಿದುಬಿಡು
(ಗಜಲ್)
– ಅನಂತ ರಮೇಶ್