ಇನ್ನೇನ ಬರೆಯಲಿ?
ಮಳೆಗೆ ನೆನೆಯದ, ನೆನಪುಗಳಿಗೆ ಜಾರದ ಜೀವಗಳು ಎಲ್ಲಿ ತಾನೇ ಇದ್ದಾತು?. ಏನು ಬರೆದರೂ ಮಳೆಯ ಹನಿಯೊಂದು ಅಲ್ಲೇ ಎದೆಯತಳದಲ್ಲಿ ಅವಿತು ಕುಳಿತು ಕೈ ಹಿಡಿದು ಬರೆಸಿದಂತೆ ಭಾಸವಾಗುತ್ತದೆ. ಮಳೆಯ ಹನಿಗೆ ಹಿತವಾಗಿ ತೋಯಿಸಿಕೊಳ್ಳುತ್ತಾ ಬರೆದ ಬರಹದ ತುಂಬೆಲ್ಲಾ ಮಳೆಯ ಲಾಲಿತ್ಯವೇ. ಏನ್ರೀ.. ಎಷ್ಟೊಂದು ಮಳೆ ಕವಿತೆ?, ಎಷ್ಟೊಂದು ಮಳೆ ಪ್ರಬಂಧ?, ನಿಮ್ಮೂರಿನ ಮಳೆ, ನಿಮ್ಮೂರಿನ ನದಿ, ಅಲ್ಲಿಯ ಕಣ್ಣು ತಂಪಾಗಿಸುವ ಹಸಿರು, ಅಸೂಯೆಯಾಗುತ್ತೆ ಅಂತ ಆತ್ಮೀಯರು ಅಭಿಮಾನದಿಂದ ಅನ್ನುವಾಗಲೆಲ್ಲಾ ಯಾಕೋ, ಈ ಜಿನುಗುವ ಮಳೆ, ತೊನೆಯುವ ಹಸಿರು, ನಡುವೆ ಮೊಳೆತು ಅರಳುವ ಒನಪು ಕವಿತೆ.. ಬರೆದಷ್ಟೂ ಮುಗಿಯುವುದಿಲ್ಲ ಮಳೆಯ ಆಲಾಪ. ಪ್ರತೀ ಮಳೆಯೂ ಕಟ್ಟಿ ಕೊಟ್ಟದ್ದು ಅದೆಷ್ಟು ಕನಸುಗಳನ್ನು?. ಈ ಮಳೆಯಿಂದಲೇ ಬೆಸೆದುಕೊಂಡದ್ದು ಅದೆಷ್ಟು ಬಂಧಗಳು?.
ಮಳೆ ಅಂದಿನಂತೆ ಮೊನ್ನೆಯೂ ಕೂಡ ಸುರಿಯ ತೊಡಗಿತ್ತು. ಕಳೆದ ಸಲ ನಾವೆಲ್ಲಾ ನೀರಿಲ್ಲ ಅಂತ ಹಲುಬಿದ್ದಕ್ಕೆಯೋ ಏನೋ ಈ ಸಲ ತುಸು ಜೋರಾಗಿಯೇ ಸುರಿಯುತ್ತಿದೆ ಅಂತಾನೇ ಅಂದುಕೊಂಡಿದ್ದೆ. ಮನಸ್ಸನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮಳೆಗೆ ಇನ್ಯಾರು ಸಾಟಿ ಅಂತ ಅಪಾರ ನಂಬಿಕೆಯಲ್ಲಿರುವಾಗಲೇ ಜಿಟಿಗುಟ್ಟಿ ಸುರಿಯುವ ಮಳೆ ಮೊದಲಿನಂತಿಲ್ಲ ಅಂತಾನೇ ಮನಸು ಮಿಡುಕುತ್ತಿತ್ತು. ಏನೋ ಕಂಪನ, ಹೇಳತೀರದ ತಳಮಳ. ಹೌದು! ಊಹೆ ನಿಜವಾಗಿತ್ತು. ನೆಲ ಬಿರಿದ ಸದ್ದಿಗೆ ಮಳೆ ಮತ್ತಷ್ಟು ಜೋರಾಗಿ ಅಳುತ್ತಿತ್ತು. ನೆಲದ ಎದೆಯೊಡಲಿನಿಂದ ನದಿಯಂತೆ ಹರಿಯುತ್ತಿದೆ ರಕ್ತ ಕಣ್ಣೀರು. ಮಳೆಯ ದುರಂತ ಕತೆಯನ್ನು ವರ್ಣಿಸಲು ನನ್ನಲ್ಲೀಗ ಪದಗಳಿಲ್ಲ. ನೋಡ ನೋಡುತ್ತಿದ್ದಂತೆಯೇ ಎಲ್ಲೆಲ್ಲೂ ಪ್ರವಾಹ, ಭೂ ಕುಸಿತ. ಅಲ್ಲೇಲೋ ಬೆಟ್ಟ ಅಲುಗಾಡಿದ ಸದ್ದಿಗೆ , ಇಲ್ಲಿ ನಿಂತ ನೆಲವೇ ಕುಸಿದಂತೆ ಭಾಸವಾಗುತ್ತಿದೆ.
ಸುಂದರ ಕವಿತೆಯಂತ ಊರಿನಲ್ಲಿ ಹುಟ್ಟಿಕೊಂಡ ಶೋಕ ಗೀತೆಯ ದು:ಖವನ್ನು ತಣಿಸುವರಾರು?. ಎಲ್ಲೆಲ್ಲೂ ರೋಧನ. ಯಾರನ್ನು ಯಾರು ಸಂತೈಸುವುದು?. ಮಳೆಗಾಗಿ ಹಲುಬುತ್ತಿದ್ದ ಹೃದಯ ಮಳೆಯನ್ನೇ ಶಪಿಸುವಂತಾಯಿತೇ?. ದೂರದ ಊರಿಂದ ಬರುವ ಕುಶಲ ವಿಚಾರಿಸುವ ಕರೆಗಳು, ಬಂದು ಬಿಡಿ ನಮ್ಮೂರಿಗೆ ಅನ್ನುವ ಕಕ್ಕುಲಾತಿಗೆ ಎದೆ ತುಸು ತಂಪೆನ್ನಿಸಿದರೂ , ಮಳೆ ನೋಡಲಿಕ್ಕಾಗಿಯೇ ನಮ್ಮೂರಿಗೆ ಬರಲು ಹಪಹಪಿಸುವ ಜೀವಗಳು ಇವತ್ತು ನಮ್ಮನ್ನೇ ಅವರೂರಿಗೆ ಕರೆಯುವಂತಾಯಿತೇ?.ಹೃದಯ ಮತ್ತೆ ಬೇಯುತ್ತಿದೆ.
ಮತ್ತೆ ಟಪ ಟಪ ಮಳೆ ಹನಿಯುತ್ತಿದೆ. ಸಣ್ಣ ಹನಿಗೂ ಎದೆ ಬಡಿದುಕೊಳ್ಳುತ್ತಿದೆ. ಸಾವು ಇಲ್ಲೆಲ್ಲೋ ಹೊಂಚು ಹಾಕುತ್ತಿದೆ ಅಂತನ್ನಿಸುತ್ತಿದೆ. ಮಳೆಯ ಮೋಹಕತೆಯನ್ನು, ರುದ್ರ ರಮಣೀಯತೆಯನ್ನು ಕಂಡುಂಡ ಜೀವಕ್ಕೆ, ಈ ಹೊತ್ತಿನಲ್ಲಿ ಮತ್ತೇನು ಬರೆಯಲಾರೆ, ಇನ್ನೇನು ಬರೆದರೂ ಅದೆಲ್ಲವೂ ಬೂಟಾಟಿಕೆ ಅಂತನ್ನಿಸುತ್ತಿದೆ.
-ಸ್ಮಿತಾ ಅಮೃತರಾಜ್. ಸಂಪಾಜೆ.
ಹೌದು …ನಮ್ಮ ಪ್ರೀತಿಯ ಕೊಡಗು ಬೇಗ ಮೊದಲಿನಂತಾಗಬೇಕು