ಪುಸ್ತಕ-ನೋಟ

ಪುಸ್ತಕ ನೋಟ: ‘ಕಾದಿರುವಳು’ ಕಾದಂಬರಿ

Share Button


‘ನಾನು ಅಷ್ಟೇನೂ ಓದಿದವಳಲ್ಲ, ಬರೆದವಳೂ ಅಲ್ಲ’ ಎಂದು ವಿನೀತರಾಗಿ ತನ್ನನ್ನು ಪರಿಚಯಿಸಿಕೊಳ್ಳುವಾಗಲೇ ಆತ್ಮೀಯರಾಗುವವರು ಶ್ರೀಮತಿ ಪುಷ್ಪಾ ನಾಗತಿಹಳ್ಳಿ. ಅವರು ಬರೆದಕಾದಿರುವಳು ಕಾದಂಬರಿಯನ್ನು ಓದಿದೆ. ಅವರ ಮೊದಲ ಕೃತಿ ‘ಚಂದಿರನೇತಕೆ ಓಡುವನಮ್ಮ’ ಎಂಬ  ಬಾಲ್ಯಕಥನವನ್ನೂ ಓದಿದ್ದೆ. ಎರಡೂ ಪುಸ್ತಕಗಳಲ್ಲಿ ಸರಳವಾದ ನಿರೂಪಣೆ ಹಾಗೂ ಸುಲಲಿತವಾಗಿ ಓದಿಸಿಕೊಂಡು ಹೋಗುವ ಶೈಲಿಯನ್ನೂ ಗಮನಿಸಬಹುದು.

ಶ್ರೀರಾಮನ ಆಗಮನಕ್ಕಾಗಿ ತನ್ನ ಬದುಕನ್ನು ಮುಡಿಪಾಗಿಸಿ  ಅವನ  ಆಗಮನವನ್ನು ನಿರೀಕ್ಷಿಸುತ್ತಾ, ‘ಕಾಯುವಿಕೆ’ ಎಂಬ ಪದಕ್ಕೆ ರೂಪಕವಾದವಳು ರಾಮಾಯಣದ ಶಬರಿ. ಅವಳ ಕಾಯುವಿಕೆಯಲ್ಲಿ ಅನನ್ಯ ಭಕ್ತಿಯಿತ್ತು ಹಾಗೂ ಶ್ರೀರಾಮನು  ಆಕೆಯನ್ನು ಭೇಟಿಯಾದಾಗ ಆ ಕಾಯುವಿಕೆಗೆ ಸಾರ್ಥಕ್ಯ ಲಭಿಸಿತು. ಆದರೆ ಈ ಪ್ರಯತ್ನದಲ್ಲಿ  ಶಬರಿಯು  ತನ್ನ ಜೀವನವನ್ನು ಸವೆಸಿದಳು ಎಂಬುದು ಕೂಡ ಪ್ರಮುಖವಾಗುತ್ತದೆ. ಹೆಣ್ಣನ ಸಹನೆಯನ್ನು ಭೂಮಿಗೂ ಅವಳ ಶಕ್ತಿಯನ್ನು  ದುರ್ಗೆಗೂ ಹೋಲಿಸಿ  ನಾರಿಗೆ ದೇವಿಯ  ಸ್ಥಾನವನ್ನು  ತಾತ್ವಿಕವಾಗಿ ಕಲ್ಪಿಸಿದ ನಾಡು ನಮ್ಮದು. ಆದರೆ, ಇದೇ ನಾಡು, ಎಂತಹ ಸಂದರ್ಭದಲ್ಲಿಯೂ ಹೆಣ್ಣು  ಸಹನೆಯನ್ನು ಮೀರಬಾರದಂತೆ, ಶಕ್ತಿಯನ್ನು ತೋರಿಸಲಾಗದಂತೆ ಸಂಸ್ಕೃತಿಯ ಹೆಸರಿನಲ್ಲಿ ಆಕೆಯನ್ನು ಕಟ್ಟುಪಾಡುಗಳಿಂದ ಬಂಧಿಸಿದೆ. ಹಾಗಾದರೆ ಸತ್ಸಂಪ್ರದಾಯ, ದಾಂಪತ್ಯದಲ್ಲಿ ಜವಾಬ್ದಾರಿ ಹಾಗೂ ಪ್ರಾಮಾಣಿಕತೆ ಹೆಣ್ಣಿಗೆ ಮಾತ್ರ ಅನ್ವಯವಾಗುವ ವಿಚಾರಗಳೆ ? ‘ಕಾದಿರುವಳು’ ಕಾದಂಬರಿಯ ಕಥಾನಾಯಕಿ ಶಬರಿಯು ತನ್ನದಲ್ಲದ ತಪ್ಪಿಗೆ ಅನುಭವಿಸುವ ವಿವಿಧ ಕಷ್ಟಕಾರ್ಪಣ್ಯಗಳನ್ನು ಹಾಗೂ ಕೈಹಿಡಿದ ಶಂಕರನ ನಯವಂಚಕತನವನ್ನು ಗಮನಿಸುವಾಗ ಈ ಪ್ರಶ್ನೆ ಉದ್ಭವಿಸುತ್ತದೆ.

ಶಬರಿಯು ತನಗೆ ಎದುರಾಗುವ ವಿವಿಧ ಸಮಸ್ಯೆಗಳನ್ನು ಏಕಾಂಗಿಯಾಗಿ ನಿರ್ವಹಿಸುತ್ತಾಳೆ, ತನಗೆ ತಿಳಿದಿರುವ ಗಿಡಮೂಲಿಕೆಗಳ ಔಷಧಿಗಳನ್ನು ಅವಶ್ಯಕತೆ ಇರುವವವರ ಸೇವೆಗಾಗಿ ಬಳಸುವ ಜನಾನುರಾಗಿಯಾಗುತ್ತಾಳೆ. ಹಳ್ಳಿಯ ಹೆಣ್ಣುಮಗಳಾದರೂ ಬಹಳಷ್ಟು ಸಾಧನೆಗೈದು ಗುರುತಿಸಲ್ಪಡುತ್ತಾಳೆ. ಇಷ್ಟೆಲ್ಲ  ಬುದ್ಧಿವಂತೆ, ವ್ಯವಹಾರ ಚತುರೆಯಾಗಿದ್ದರೂ , ತನ್ನ ಗಂಡ ಶಂಕರನ ನಡವಳಿಕೆಗಳು ಹಾದಿ ತಪ್ಪುತ್ತಿರುವಾಗ ಆಕೆಗೆ ಕಿಂಚಿತ್ತೂ ಅನುಮಾನ ಬರಲಿಲ್ಲವೇ ಅನಿಸುತ್ತದೆ. ಅದಕ್ಕೂ ಕಾರಣವಿದೆ! ಆಕೆ ತನ್ನ
‘ಪತಿಯೇ ಪರಬ್ರಹ್ಮ’ ಎಂದು ನಂಬಿದ ಮುಗ್ಧ ಹೆಣ್ಣುಮಗಳು! ಆತನ ಬಗ್ಗೆ ಸಂದೇಹ ಪಡಲೇ ಇಲ್ಲ. ತನ್ನ ಪತಿ ಯಾವುದೋ ತೊದರೆಗೆ ಸಿಲುಕಿರಬೇಕು ,ಬಂದೇ ಬರುತ್ತಾನೆ ಎಂಬ ನಂಬಿಕೆಯೇ ಅವಳಿಗೆ ಬೇರೆ ಆಲೋಚನೆ ಸುಳಿಯದಂತೆ ತಡೆಗೋಡೆಯಾಗುತ್ತದೆ.

ರಾಮಾಯಣದ ಶಬರಿಯ ಕಾಯುವಿಕೆಗೆ ಶ್ರೀರಾಮನ ಆಗಮನದಿಂದ ಸಾರ್ಥಕ್ಯ ಲಭಿಸಿದರೆ, ಇಲ್ಲಿನ ಕಥಾನಾಯಕಿ ಶಬರಿಗೆ ಗಂಡ ಶಂಕರನು ತನ್ನ ಬಾಳಿನಿಂದ ನಿರ್ಗಮಿಸಿದ್ದಾನೆ ಎಂದು ಗೊತ್ತಾದಾಗ, ಅವಳ ಸುದೀರ್ಘ ಕಾಯುವಿಕೆ ವ್ಯರ್ಥವಾಯಿತೆಂದು ವೇದ್ಯವಾಗುತ್ತದೆ .  ಶಬರಿಯು ಗಂಗಾನದಿಯಲ್ಲಿ  ಮುಳುಗುಹಾಕುವಾಗ ಆಕೆಯ ಮಾಂಗಲ್ಯಸರವು ತೇಲಿಹೋದರೂ ಕಿಂಚಿತ್ತೂ ವಿಚಲಿತಳಾಗದೆ ದಿಟ್ಟ ನಿರ್ಧಾರ ಕೈಗೊಳ್ಳುವ ಘಟನೆಯ ಮೂಲಕ , ಈ ಸಂದರ್ಭವನ್ನು ಲೇಖಕಿಯು ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಏಕಾಂಗಿ ಶಬರಿಯು ತನ್ನದೇ ಶೈಲಿಯಲ್ಲಿ ರೂಪಿಸಿಕೊಂಡ ಬದುಕು ಹಾಗೂ ನಿಸ್ವಾರ್ಥ ಸೇವೆಯಿಂದ ಗಳಿಸಿದ ಯಶಸ್ಸು ನಾರಿಯ ಶಕ್ತಿಯ ದ್ಯೋತಕವೆನಿಸುತ್ತದೆ.

‘ಕಾದಿರುವಳು’ ಕಾದಂಬರಿಯ ‘ಶಬರಿ’ಯಂತವರು ನಮ್ಮ ಸುತ್ತುಮುತ್ತಲು ಹಿಂದೆಯೂ ಇದ್ದರು, ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ !  ವಾಸ್ತವವಾಗಿ ಹೆಣ್ಣಿಗೆ ಯಾವುದೇ ಅತಿ ಭಾವುಕತೆಯ ಲೇಪನದ  ದೇವಿ ಪಟ್ಟ ಬೇಕಿಲ್ಲ, ಆಕೆಯನ್ನು ಸರಳ, ಸಹಜ ಮನುಷ್ಯಳಾಗಿ ಪರಿಗಣಿಸಿದರೆ ಸಾಕು,  ಪ್ರಪಂಚದ ಹಲವಾರು ಸಮಸ್ಯೆಗಳಿಗೆ ಇದೇ ಸೂಕ್ತ ಪರಿಹಾರವಾಗಬಲ್ಲುದು.


ಲೇಖಕಿಯವರು ತಮಗೆ ಗಿಡಮೂಲಿಕೆಗಳ ಬಗ್ಗೆ ಇರುವ  ಆಸಕ್ತಿ, ಪ್ರವಾಸಾನುಭವ ಹಾಗೂ ಹಳ್ಳಿಯ ಪರಿಸರದ ಸೊಗಡನ್ನು ಸೂಕ್ತವಾಗಿ ಕಥೆಯಲ್ಲಿ ಜೋಡಿಸಿಕೊಂಡು, ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ಕಾದಂಬರಿಯನ್ನು ರಚಿಸಿದ್ದಾರೆ. ಪ್ರೀತಿಯಿಂದ ತಮ್ಮ ಪುಸ್ತಕವನ್ನು ಕಳುಹಿಸಿಕೊಟ್ಟ ಫೇಸ್ ಬುಕ್ ಸ್ನೇಹಿತೆ ಪುಷ್ಪಾ ನಾಗತಿಹಳ್ಳಿ ಅವರಿಗೆ ಧನ್ಯವಾದಗಳು..

 

-ಹೇಮಮಾಲಾ.ಬಿ. ಮೈಸೂರು

3 Comments on “ಪುಸ್ತಕ ನೋಟ: ‘ಕಾದಿರುವಳು’ ಕಾದಂಬರಿ

  1. ನೀವು ಈ ಪುಸ್ತಕದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದೀರಿ .ಇದಕ್ಕಾಗಿ ನಾನು ಅಭಾರಿಯಾಗಿದ್ದೇನೆ. ತುಂಬು ಚಂದದ ವಿವರದೊಂದಿಗೆ ಪುಸ್ತಕ ಕ್ಕೆ ಒಂದು ಗೌರವ ಸಂದಿದೆ..ಇದರಿಂದ ನನ್ನ ಬರವಣಿಗೆಗೂ ಉತ್ಸಾಹ ಬಂದಿದೆ. ತುಂಬು ಧನ್ಯ ವಾದಗಳು ಹೇಮಾಮಾಲಾ ರವರಿಗೆ.

    1. ತಮ್ಮ ಲೇಖನಿಯಿಂದ ಇನ್ನಷ್ಟು ಕೃತಿಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ..ಧನ್ಯವಾದಗಳು .

  2. ‘ಕಾದಿರುವಳು”ಕಾದಂಬರಿಯನ್ನು ನಾನು ಓದಿಲ್ಲ. ಆದರೂ ಶ್ರೀಮತಿ ಹೇಮ ಮಾಲಾ ಅವರು ಬರೆದ ವಿಮರ್ಶಾತ್ಮಕವಾದ ಲೇಖನ ಓದಿ ಕಾದಂಬರಿ ಓದಿದ ಹಾಗೆ ಆಯಿತು,

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *