ನಾವೋ…ಅವರೋ…
ಅದು ನಾನು ಬೆಂಗಳೂರಿನಿಂದ ಮೈಸೂರಿಗೆ ಟ್ರೇನಿನಲ್ಲಿ ಪ್ರಯಾಣಿಸುತ್ತಿದ್ದ ಸಮಯ. ಸಂಜೆ ಆರುಕಾಲರ ಟ್ರೇನ್ ಹಿಡಿದು, ಮೈಸೂರಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ತಮ್ಮನನ್ನು ಕಾಣಲು ಹೋಗುತ್ತಿದ್ದೆ. ನಾನು ಹೀಗೆ ತಮ್ಮನನ್ನು ಕಾಣಲು ಮೈಸೂರಿಗೆ ಪ್ರಯಾಣ ಬೆಳೆಸಿದ್ದರ ಹಿಂದೆ ಕಾರಣವೂ ಇದೆ. ಅವನು ಈಗ ಇಂಟರ್ನಶಿಪ್ ಮಾಡುತ್ತಿದ್ದಾನೆ. ಮನೆಯವರೊಂದಿಗೆ ಸರಿಯಾಗಿ ಮಾತನಾಡುವುದೇ ಕಡಿಮೆಯಾಗಿಬಿಟ್ಟಿದೆ. ದಿನದ ಹನ್ನೆರಡು ಗಂಟೆ ಆಸ್ಪತ್ರೆಯಲ್ಲಿ ಕೆಲಸ. ಇದು ಅಮ್ಮನಿಗೆ ತುಂಬಾ ಚಿಂತೆ ತರಿಸಿತು. ಒಮ್ಮೆ ಮೈಸೂರಿಗೆ ಹೋಗಿ, ವಿನಯನ ಜೊತೆ ಮಾತಾಡಿ ಬನ್ನಿ ಎಂದು ಹೇಳುತ್ತಲೇ ಇದ್ದರು. ಆದರೆ ಸಮಯ ಯಾರ ಬಳಿಯೂ ಇರಲಿಲ್ಲ. ಅದಕ್ಕಾಗಿ ಅಮ್ಮ, ನಾವು ಬೆಂಗಳೂರಿಗೆ ಡಾಕ್ಟರ್ ಬಳಿ ಚಿಕಿತ್ಸೆಗೆಂದು ಹೋದಾಗ ನೀನೊಂದು ದಿನ ಹೋಗಿ ಬಾ ಎಂದರು. ನಾನೂ ಸರಿಯೆಂದು, ಅಮ್ಮನ ಜೊತೆ ಬೆಂಗಳೂರಿಗೆ ಹೋದಾಗ, ಒಂದು ಶನಿವಾರ ಸಂಜೆ ತಮ್ಮನನ್ನು ಕಾಣಲು ಮೈಸೂರಿಗೆ ಟ್ರೇನಿನಲ್ಲಿ ಹೊರಟೆ.
ನನಗೆ ಟ್ರೇನ್ ಹೊಸತಲ್ಲ. ಮೊದಲು ಪಿಯೂಸಿ ಓದುವಾಗ ಹೊನ್ನಾವರದಿಂದ ಮಂಗಳೂರಿಗೆ ಕೆಲವು ಬಾರಿ ಟ್ರೇನಿನಲ್ಲಿ ಹೋಗಿದ್ದೆ. ಹಾಗಾಗಿ ಅಲ್ಲಿ ಪ್ರಯಾಣಿಸುವ ಜನರು, ಮಾರುತ್ತ ಬರುವ ತಿಂಡಿಗಳು, ಕೊಲ್ಡ್ರಿಂಕ್ಸ್ ಬಾಟಲ್ಗಳು ನನಗೆ ಚಿರಪರಿಚಿತವೇ. ಆದರೆ ಅಂದು ನಾನು ಮೈಸೂರಿಗೆ ಪ್ರಯಾಣಿಸುವಾಗ ಒಂದು ತಮಾಷೆಯ ಘಟನೆ ನಡೆಯಿತು. ಇದು ಎಲ್ಲಾ ಕಡೆ ನಡೆಯುವುದಾದರೂ, ಆ ಘಟನೆ ನನ್ನಲ್ಲಿ ಕೆಲ ಆಲೋಚನೆಗಳನ್ನು ಹುಟ್ಟು ಹಾಕಿತು.
ಟ್ರೇನ್ ಒಂದು ಸ್ಟೇಷನ್ ಅಲ್ಲಿ ನಿಂತಿತ್ತು.(ಯಾವುದೆಂದು ಸರಿಯಾಗಿ ನೆನಪಿಲ್ಲ.) ಆದರೆ ಟ್ರೇನಿನ ಸೀಟುಗಳೆಲ್ಲ ಫುಲ್ಲಾಗಿದ್ದವು. ನಾನಿದ್ದ ಸೀಟಿನಲ್ಲಿ, ಒಬ್ಬ ಲಾಯರ್ ಮತ್ತು ಇನ್ನೊಬ್ಬರು ಕುಳಿತಿದ್ದರು. ನನ್ನೆದುರು ಗಂಡ-ಹೆಂಡತಿ, ಮತ್ತೊಬ್ಬಳು ಹೆಂಗಸು. ಆನಂತರ ನಮ್ಮ ಎಡಭಾಗದಲ್ಲಿ ಹೆಂಗಸರು, ಹೆಣ್ಣುಮಕ್ಕಳು ಕುಳಿತಿದ್ದರು. ಆಗ ಒಬ್ಬ ಕುರುಡ ಬೇಡುತ್ತ ಬಂದ. ಮಾತು ಮಾತಿಗೂ ‘ಸರ್..ಸರ್..’ ಎನ್ನುತ್ತಿದ್ದ. ಕೈಯಲ್ಲೊಂದು ಕೋಲು ಹಿಡಿದಿದ್ದ ಆತನಿಗೆ ಸುಮಾರು ವಯಸ್ಸಾಗಿತ್ತು. ಆತ ಮೊದಲು ನಮ್ಮ ಸಾಲಿನಲ್ಲಿ ಹಣ ಕೇಳಿದ ಆಗ ನನ್ನೆದುರು ಕುಳಿತಿದ್ದವನು, ಹತ್ತು ರೂಪಾಯಿ ನೋಟು ಕೊಟ್ಟು ಒಂಭತ್ತು ರೂಪಾಯಿ ಚೇಂಜ್ ಪಡೆದ.
“ಅಬ್ಬಾ! ಚೇಂಜ್ ಪಡೆಯಲು ಬೇರೆ ದಾರಿಯೇ ಇಲ್ಲವೇ? ಪಾಪ! ಕುರುಡ. ಹತ್ತು ರೂಪಾಯಿ ದಾನ ಮಾಡಿದರೇನಾಗುತ್ತಿತ್ತು.” ಎಂದು ಮನದಲ್ಲೇ ಅಂದುಕೊಂಡೆ.
ಅವನಿಂದ ಒಂದು ರೂಪಾಯಿ ಪಡೆದ ಆತ ಎಡಗಡೆ ಸಾಲಿಗೆ ತಿರುಗಿದ. ತಿರುಗುವಾಗ ಸರ್ ಸರ್ ಎನ್ನುತ್ತಿದ್ದವನು, ಆ ಕಡೆ ತಿರುಗಿದ ಮೇಲೆ ಥಟ್ಟನೆ ಮೇಡಂ ಎನ್ನಲು ಶುರುಮಾಡಿದ.
ಯಾರೆಷ್ಟು ಗಮನಿಸಿದರೋ ನನಗ್ಗೊತ್ತಿಲ್ಲ. ಆದರೆ ನಾನು ಗಮನಿಸಿದೆ.
ಇದು ನನ್ನಲ್ಲಿ ಆಲೋಚನೆಗಳನ್ನು ಹುಟ್ಟಿಸಿದ ತಮಾಷೆಯ ಘಟನೆ!
ಅವನು ಬಂದಾಗಲೂ ಕುರುಡನೆಂದುಕೊಂಡೆ, ಅವನಿಂದ ಹಣ ಪಡೆದಾಗಲೂ ಕುರುಡನೆಂದುಕೊಂಡೆ, ತಿರುಗುವಾಗಲೂ ಕುರುಡನೆಂದುಕೊಂಡೆ. ಆದರೆ ತಿರುಗಿದ ಮೇಲೆ..!?
ಈತ ನಿಜಕ್ಕೂ ಕುರುಡನೋ? ಅಥವಾ ನಾಟಕ ಮಾಡುತ್ತಿರುವವನೋ? ಎಂದು ಆಲೋಚನೆ ಶುರುವಾಯಿತು.
ಅವನಿಗೆ ಅಲ್ಲಿದ್ದ ಹೆಂಗಸರು ಹಣ ನೀಡಲಿಲ್ಲ. ಆತ ಹಾಗೆಯೇ ಮುಂದೆ ಹೋದ. ಟ್ರೇನ್ ಮೈಸೂರಿಗೆ ಪ್ರಯಾಣ ಮುಂದುವರೆಸಿತು.
ಅದು ಬೇರೆ ವಿಷಯ!
ಆದರೆ ನಾನಿಲ್ಲಿ ಹೇಳಹೊರಟಿರುವುದು ಬೇಡುವ ಕುರುಡರ ವಿಷಯ.
ಆತ ನಿಜಕ್ಕೂ ಕುರುಡನೇ! ಎಂದು ಯಾರೂ ಬೇಕಾದರೂ ಹೇಳಬಲ್ಲರು. ಅವನ ಕಣ್ಣುಗಳು, ಆತನ ಹಾವ-ಭಾವಗಳು ಹಾಗಿದ್ದವು. ಆದರೆ ಆ ಕ್ಷಣ ಅವನಾಡಿದ ಮಾತು ಮಾತ್ರ ಅವನು ಕುರುಡನಲ್ಲವೇನೋ? ಎನಿಸಿತು.
ನನಗಿಲ್ಲಿ ಆತ ನಿಜವಾಗಿಯೂ ಕುರುಡನೋ? ಅಲ್ಲವೋ? ಎನ್ನುವುದು ಗೊತ್ತಿಲ್ಲ. ಅವನಿಗೆ ಹಣ ಕೊಟ್ಟವರಿಗೂ ಗೊತ್ತಿಲ್ಲ, ಹಣ ನೀಡದವರಿಗೂ ಗೊತ್ತಿಲ್ಲ. ಆದರೆ ಇಲ್ಲೊಂದು ವಿಷಯವನ್ನು ಗಮನಿಸಬೇಕು.
ನಮ್ಮ ನಡುವೆಯೇ ಇಂಥವರು ಬೇಕಾದಷ್ಟು ಜನರಿದ್ದಾರೆ. ಯಾರು ಕುರುಡರು? ಯಾರು ಕುರುಡರಲ್ಲ? ಯಾರಿಗೆ ನಿಜವಾದ ಸಹಾಯದ ಅವಶ್ಯಕತೆ ಇದೆ? ಯಾರಿಗೆ ಸಹಾಯದ ಅವಶ್ಯಕತೆ ಇಲ್ಲ, ಕೆಲಸದ ಅವಶ್ಯಕತೆ ಇದೆ? ತರಬೇತಿಯ ಅವಶ್ಯಕತೆ ಇದೆ? ಶಿಕ್ಷೆಯ ಅವಶ್ಯಕತೆ ಇದೆ? ಎಂಬುದು ನಮಗರಿವಿರದ ವಿಷಯ. ಕೆಲವರು ನಿಜವಾಗಿಯೂ ಕುರುಡರಾಗಿರುತ್ತಾರೆ. ಕೆಲವರು ಅನಿವಾರ್ಯ ಕಾರಣಗಳಿಂದ, ಸುಲಭವಾಗಿ ದುಡ್ಡು ಮಾಡುವ ಉದ್ದೇಶದಿಂದ ಹೀಗೆ ನಾಟಕ ಮಾಡುವವರೂ ಇರಬಹುದು. ಆದರೆ ನಮಗೆ ಅದು ಕಾಣಿಸುವುದಿಲ್ಲ.
ಮೇಲಿನ ವ್ಯಕ್ತಿಯ ಹಾಗಿರಬಹುದು!
ನಮಗೆ ಅವನು ನಿಜವಾಗಿಯೂ ಕುರುಡನೋ? ಅಲ್ಲವೋ? ಹೇಳುವುದು ಕಷ್ಟ. ಸಂದರ್ಭ ಹೀಗಿದ್ದಾಗ ನಾವು ಅವರನ್ನು ಅಷ್ಟಾಗಿ ಗಮನಿಸುವುದಿಲ್ಲ. ನಮ್ಮ ಪ್ರಪಂಚವೇ ಬೇರೆ! ಅವರ ಪ್ರಪಂಚವೇ ಬೇರೆ! ಎಂದು ನಮಗನಿಸಿದರೆ, ಅವರು ನಮ್ಮೊಳಗೆ ಬೆರೆತುಹೋಗಿರುತ್ತಾರೆ. ದೇವಸ್ಥಾನಗಳಲ್ಲಿ, ರಸ್ತೆ ಬದಿಗಳಲ್ಲಿ, ಅಂಗಡಿಗಳ ಮುಂದೆ, ಬಸ್ಟಾಪುಗಳಲ್ಲಿ ಹೀಗೆ ಎಲ್ಲಾ ಕಡೆಯೂ ಇರುತ್ತಾರೆ. ನಾವು ಕೆಲವೊಮ್ಮೆ ಒಂದು ರೂಪಾಯೋ? ಎರಡು ರೂಪಾಯೋ? ನೀಡಿ ಮುಂದೆ ನಡೆಯುತ್ತೇವೆ. ನಮ್ಮಿಂದ ಹೀಗೆ ಹಣ ಪಡೆದವರು, ಕುರುಡರೇ ಆಗಿರಬಹುದು, ಕುರುಡಲ್ಲದೆಯೂ ಇರಬಹುದು.
ಇಷ್ಟೆಲ್ಲ ಆಲೋಚನೆಗಳು ನನ್ನ ತಲೆಯಲ್ಲಿ ಆನಂತರದ ಸಮಯದಲ್ಲಿ ಹಾದು ಹೋಯಿತು. ನಾನು ಅವನ್ನೆಲ್ಲ ಮರುಕ್ಷಣವೇ ಹೊಡೆದು ಹಾಕಿ ಎಲ್ಲಿದ್ದೇನೆಂದು ನೋಡಿದರೆ, ನಾನು ಶ್ರೀರಂಗಪಟ್ಟಣ ತಲುಪಿದ್ದೆ.
–ಗೌರೀಶ್ ಅಬ್ಳಿಮನೆ