ಮತ್ತೆಂದೂ ಬರಬೇಡ….
ಸಾಗರತೀರಕೆ ಎಂದೆಂದೂ ಮತ್ತೆಂದೂ ಬರಬೇಡ ಓ ಸಾಗರದೊಡೆಯಾ
ಅಂದು ರವಿವಾರದ ದಿನ
ರಜಾ ದಿನದ ಸುಖನಿದ್ರೆಗೆ ಜಾರಿದ್ದ ಜನ
ನಿರೀಕ್ಷಿಸಿರಲಿಲ್ಲ ತಮ್ಮ ಬದುಕಿನ ದುರ್ದಿನ
ಸಾಗರದೊಡಲಿನಲ್ಲಾಗಿತ್ತೊಂದು ರೌದ್ರ ನರ್ತನ
ಒಡನೆಯೇ ಕೇಳಿಬಂತು ರಕ್ಕಸ ಅಲೆಗಳ ಆರ್ಭಟನ
ಕ್ಷಣಾರ್ಧದಲ್ಲಿ ಸಾಗರತೀರಕೆ ಅಪ್ಪಳಿಸಿಬಂತು ರಕ್ಕಸ ಅಲೆಗಳ ಪರ್ಯಟನ
ಮನೆ-ಮಠ, ಗಿಡ-ಮರ ಎಲ್ಲಾ ಜಲಸಮಾಧಿ ಸೇರಿ ದನ-ಜನ
ಒಮ್ಮೆಲೆ ಮುಗಿಲು ಮುಟ್ಟಿತು ಸಾವಿರಾರು ಜನರ ಆಕ್ರಂದನ
ಸಾಗರತೀರದಲ್ಲಿ ವಾಯುವಿಹಾರಕ್ಕೆಂದು ಹೊರಟ್ಟಿದ್ದವರು ಅದೆಷ್ಟೋ ಜನ
ಸೂರ್ಯದೇವನ ಪ್ರಾರ್ಥನೆಯಲ್ಲಿ ತೊಡಗಿದ್ದವರು ಅದೆಷ್ಟೋ ಜನ
ವ್ಯಾಯಾಮದಲ್ಲಿ ನಿರತರಾಗಿದ್ದವರು ಅದೆಷ್ಟೋ ಜನ
ಯೋಗ ಮಾಡಲೆಂದು ಬಂದವರು ಅದೆಷ್ಟೋ ಜನ
ವಾಹನ ಕಲಿಯಲು ಬಂದವರು ಅದೆಷ್ಟೋ ಜನ
ಮುಂಜಾನೆಯ ಅಲೆಗಳೊಡನೆ ಆಟವಾಡಲು ಬಂದವರು ಅದೆಷ್ಟೋ ಜನ
ಕ್ಷಣಾರ್ಧದಲ್ಲಿ ಹೇಳ ಹೆಸರಿಲ್ಲದಂತಾಗಿ ನಿರ್ನಾಮವಾದರು
ಒಮ್ಮೆಲೆ ಮಾಯವಾಗಿ ಸಾಗರದೊಡಲ ಸೇರಿದರು
ಸಾಗರದೊಡೆಯಾ ಇಂಗಿತೇ ನಿನ್ನ ಶತ ಶತಮಾನಗಳ ದಾಹ
ಮನುಕುಲ ಮರೆಯಲಾಗದು ನಿನ್ನ ರಾಕ್ಷಸ ಹಸಿವಿನ ದಾಹ
ನಿನ್ನೊಡಲಿನಲ್ಲಾದರು ಏಕಿಂಥ ರೌದ್ರ ನರ್ತನ
ನಡುಗಿಬಿಟ್ಟರಲ್ಲ ನಿನ್ನ ರೌದ್ರ ನರ್ತನಕ್ಕೆ ಪೃಥ್ವಿಯ ಜನ
ತನ್ನವರನ್ನು ಹೆತ್ತವರನ್ನು ನಂಬಿದವರನ್ನು ಕಳೆದುಕೊಂಡು ನಿರ್ಗತಿಕರಾದರು
ಬದುಕು ಬರಡಾಗಿ ಜೀವನವೇ ಕುರುಡಾಗಿ ದಿಕ್ಕಿಲ್ಲದಂತಾದರು
ಭಯಭೀತರಾಗಿ ಬದುಕಿದ್ದರೂ ಸತ್ತಂತೆ
ಆಕಾಶವೇ ಕಳಚಿ ತಲೆಮೇಲೆ ಬಿದ್ದಂತೆ
ಬರಬೇಡ ನೀ ಮತ್ತೊಮ್ಮೆ ಸಾಗರತೀರಕೆ ಸಾಗರದೊಡೆಯಾ
ನಿನ್ನ ಮಕ್ಕಳನ್ನು ಕರುಣಿಸಿ ದಯೆ ಮಾಡೆಯಾ
ನಿನ್ನ ಮಡಿಲ ಮಕ್ಕಳ ಏಳ್ಗೆಯನ್ನು ನೀ ಸಹಿಸಲಾರೆಯಾ
ಮನದುಂಬಿ ನಿನ್ನ ಮಕ್ಕಳನು ಹರಸಲಾರೆಯಾ
ಕರುಣೆಯಿರಲಿ ಮಮತೆಯಿರಲಿ ಆಲಿಸು ನಿನ್ನ ಮಕ್ಕಳ ಪ್ರಾರ್ಥನೆಯಾ
ನಮಸ್ಕಾರ ನಮಸ್ಕಾರ ನಿನಗೆ ಓ ಸಾಗರದೊಡೆಯಾ
ಸಾಗರತೀರಕೆ ಇನ್ನೆಂದೂ ಮತ್ತೆಂದೂ ಎಂದೆಂದೂ
ಬರಬೇಡ ಬರಬೇಡ ಓ ಸಾಗರದೊಡೆಯಾ
– ವೆಂಕಟೇಶ್, ಕಾರವಾರ
(ದಿನಾಂಕ 26/12/2004 ರಂದು ಸಂಭವಿಸಿದ ಸುನಾಮಿಯ ದುರಂತದ ನೆನಪಿನಲ್ಲಿ ಬರೆದ ಕವನ)
ತುಂಬಾ ಚೆನ್ನಾಗಿದೆ ಕವನ