ಮನೆಯೊಳಗಿನ ಅಂದಕ್ಕೆ ಸಾಂಪ್ರದಾಯಿಕ ಸ್ಪರ್ಶ

Share Button

ಮನೆ ಎಂದಾಕ್ಷಣ ಮನೆಯೊಳಗಿನ ಅಂದ, ಅಲಂಕಾರ ಹೆಚ್ಚಿಸುವಲ್ಲಿ ಎಲ್ಲರೂ ಮುತುವರ್ಜಿ ವಹಿಸುವುದನ್ನು ಕಾಣಬಹುದು. ಮನೆ ಚಿಕ್ಕದಿರಲಿ, ದೊಡ್ಡದಿರಲಿ ಅದು ಮುಖ್ಯವಲ್ಲ. ಆದರೆ ಅದು ಚೊಕ್ಕವಾಗಿ ಸುಂದರವಾಗಿರಬೇಕೆಂದು ಬಯಸುವುದು ಸಹಜ. ಎಲ್ಲರೂ ಅವರವರ ಸಾಮರ್ಥ್ಯ ಹಾಗೂ ಅಂತಸ್ತಿಗೆ ತಕ್ಕ ಹಾಗೆ ಮನೆಯನ್ನು ಆಧುನಿಕವಾಗಿ ಇಲ್ಲವೇ ಸಾಂಪ್ರದಾಯಿಕವಾಗಿ ಆಕರ್ಷಕಗೊಳಿಸುತ್ತಾರೆ. ಮನೆಯನ್ನು ಸುಂದರವಾಗಿಸುವಂತೆ ಮಾಡಲು ಸೃಜನಾತ್ಮಕವಾಗಿ ಯೋಚನೆ ಹಾಗೂ ಯೋಜನೆಯನ್ನು ಮಾಡಿ ಕೊಳ್ಳಲೇ ಬೇಕು. ಮನೆಯ ಪ್ರತಿಯೊಂದು ಕೊಠಡಿಯೂ ಪ್ರಮುಖವೆನಿಸಿದ್ದು ಪ್ರತಿಯೊಂದರ ಅಚ್ಚುಕಟ್ಟುತನವನ್ನು ಕಾಪಾಡಿ ಕೊಳ್ಳಬೇಕಾಗುತ್ತದೆ. ಪ್ರವೇಶ ದ್ವಾರ, ಅದರಲ್ಲೂ ಹೆಚ್ಚಾಗಿ ಲೀವಿಂಗ್ ರೂಮಿನ ಅಂದಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತೇವೆ.

ಲೀವಿಂಗ್ ರೂಮ್ ಎನ್ನುವುದು ಅತಿಥಿಗಳು  ಹಾಗೂ ನಾವುಗಳು ಕುಳಿತು ರಿಲಾಕ್ಸ್ ಆಗುವ ಸ್ಥಳ. ಆದುದರಿಂದ ಇದನ್ನು ಕಲಾತ್ಮಕವಾಗಿ ರೂಪುಗೊಳಿಸುವುದು ಒಂದು ಹವ್ಯಾಸ ಅಥವಾ ಕಲೆಯೆನ್ನ ಬಹುದು. ಹೆಚ್ಚು ಆಡಂಬರವಾಗಿರದೆ ಸರಳವಾಗಿಯೇ ಇದನ್ನು ಇರಿಸಿ ಕೊಳ್ಳ ಬಹುದಾಗಿದೆ. ಮೊದಮೊದಲು ಹೊಸ ಮನೆ ಕಟ್ಟಿದ ತಕ್ಷಣ ಹೊಸ ವಿನ್ಯಾಸವುಳ್ಳ ಫ್ಯಾಷನ್ ವಸ್ತುಗಳನ್ನು ಅತಿ ಬೆಲೆ ತೆತ್ತು ಅಲಂಕಾರಕ್ಕೆ ಬಳಸುತ್ತಿದ್ದನ್ನು ಕಾಣ ಬಹುದಾಗಿತ್ತು. ಕಾಲ ಬದಲಾಗುತ್ತದ್ದಂತೆ ಜನರ ಹವ್ಯಾಸಗಳು, ಆಚಾರ ವಿಚಾರಗಳೂ ಬದಲಾವಣೆಗೊಂಡು ‘ಹಳೇ ಬೇರು ಹೊಸ ಚಿಗುರು’ ಎನ್ನುವ ಮಾತಿನಂತೆ  ಹಳೆಯ ಸಂಪ್ರದಾಯಗಳು ಪುನಾರಾವರ್ತನೆಯಾಗುತ್ತಿರುತ್ತವೆ. ಎಲ್ಲಿ ಹೋದರಲ್ಲಿ ಪುರಾತನ ಕಾಲದಲ್ಲಿ ಹಿರಿಯರು ಉಪಯೋಗಿಸುತ್ತಿದ್ದ ಅಲಂಕಾರಿಕ ವಸ್ತುಗಳನ್ನು ಹುಡುಕಿ ತಂದು ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವಲ್ಲಿ ಅಭಿರುಚಿ ಹೆಚ್ಚುತ್ತಿದೆ. ಕರ ಕುಶಲ ವಸ್ತುಗಳಲ್ಲದೆ, ಲೋಹ, ಗಾಜು, ಮರದ ಪೀಠೋಪಕರಣಗಳು ಮನೆಯ ಒಳಾಂಗಣದ ಅಂದವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
.
  • ಪ್ರವೇಶ ದ್ವಾರ ಅಲಂಕಾರ : ಈ ಕೊಠಡಿಯ ಬದಿಗಳಲ್ಲಿ ಮಣ್ಣಿನ ಅಥವಾ ಮರದ ದೊಡ್ಡದಾದ ಹೂಜಿಯನ್ನು ಇಡಿಸಿದಲ್ಲಿ ಬಲು ಆಕರ್ಷಕವಾಗಿ ಕಾಣುತ್ತದೆ. ಮರದ ತಗ್ಗಾದ ರೌಂಡ್ ಟೇಬಲ್ ಅಲ್ಲದೆ ಇದೇ ಮಾದರಿಯ ಸ್ಟೂಲ್ ಗಳನ್ನು ಜೋಡಿಸಿದಲ್ಲಿ ಸಿಟೌಟ್ ಬಹಳ ಸುಂದರವಾಗಿ ಗೋಚರಿಸುತ್ತದೆ.
  • ಲೀವಿಂಗ್ ರೂಮಿನ ವಿನ್ಯಾಸ: ಮರದ ಕುಸುರಿ ಕೆತ್ತನೆಗಳನ್ನೊಳಗೊಂಡ ಪೀಠೊಪಕರಣಗಳನ್ನು ಅಚ್ಚುಕಟ್ಟಾಗಿ ಪೇರಿಸಿಡುವುದಲ್ಲದೆ ಡ್ರಾವರ್ ಇರುವ ಮೇಜುಗಳು ಸಂಗ್ರಹ ಸ್ಥಳವಾಗಿಯೂ, ಇದರ ಮೇಲ್ಗಡೆ ಅಕ್ವೇರಿಯಂ ಇಲ್ಲವೇ ಟಿವಿಯನ್ನು ಇಡಿಸಿದಲ್ಲಿ ಮತ್ತೂ ಅಂದವಾಗಿ ಕಾಣುತ್ತದೆ. ಇವಲ್ಲದೆ ಹಳೆಯ ಮಾದರಿಯ ಗ್ರಾಮ್ ಫೋನ್, ಫೋನ್ ಸ್ಟಾಂಡನ್ನೂ ಅಳವಡಿಸಿ ಕೊಳ್ಳ ಬಹುದು.
  • ಶೋಕೇಸ್ ಅಂದ ಹೆಚ್ಚಿಸಲು: ಅನೇಕ ವಿನ್ಯಾಸದ ಮರದ ಶೋಕೇಸ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರಲ್ಲಿ  ಅಲಂಕಾರಕ್ಕಾಗಿ  ಇಡಿಸುವ ವಸ್ತುಗಳು ನಮ್ಮನ್ನು ಹಾಗೂ ಅತಿಥಿಗಳನ್ನು ಸಂತೋಷ ಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಿರಿಯರು ಬಳಸುತಿದ್ದ  ಹಿತ್ತಾಳೆ ತಾಮ್ರದ ಪಾತ್ರೆಗಳು, ತಂಬಿಗೆ, ಲೋಟಗಳು, ಮೂರ್ತಿಗಳನ್ನು ಇರಿಸ ಬಹುದು. ಇವಲ್ಲದೆ, ಆಭರಣ ಪೆಟ್ಟಿಗೆ, ದುಡ್ಡು ಹಾಕಿಡುವ ತಿರುಗಣಿ ಪಾತ್ರೆಗಳನ್ನೂ ಜೊತೆಗೆ ತಾಮ್ರದ ಸ್ಪೂನ್, ಸೌಟುಗಳನ್ನೂ ಪಾಲೀಷ್ ಮಾಡಿಸಿ ಇರಿಸಿದಲ್ಲಿ ಸಾಂಪ್ರದಾಯಿಕ ಲುಕ್ ಗೋಚರಿಸುವುದಂತು ಖಂಡಿತ. ಇನ್ನೊಂದೆಡೆ ಮರದ ಆಟಿಕೆ ವಸ್ತುಗಳನ್ನು ಜೋಡಿಸಿಟ್ಟಲ್ಲೂ ಶೋಕೇಸ್ ಬಹಳ ಅಂದವಾಗಿ ಕಂಡು ಬರುವುದಲ್ಲದೆ, ಸಾಂಪ್ರದಾಯಿಕ ದೇಶೀಯ ಸೊಗಡಿನ ಸೌಂದರ್ಯವನ್ನು ಆಸ್ವಾದಿಸ ಬಹುದು.
  • ಬೆಡ್ ರೂಮಿನ ಸೌಂದರ್ಯ: ಇಲ್ಲಿ ಹಳೆಯ ಮಾದರಿಯ ಮರದ ಚೌಕಟ್ಟುಗಳುಳ್ಳ ಎತ್ತರದ ಮಿರರ್ ಸ್ಟಾಂಡ್ ಹಾಗೂ ಕನ್ನಡಿಯನ್ನೊಳಗೊಂಡ ಮರದ ಗಾಡ್ರೇಜ್ ಇವು ಕೊಠಡಿಯ ಶೋಭೆಯನ್ನು ಹೆಚ್ಚಿಸುತ್ತದೆ. ಇವಲ್ಲದೆ ಆಂಟಿಕ್ ವಸ್ತುಗಳಾದ ಪೇಂಟಿಂಗ್ ನ್ನು ಗೋಡೆಯಲ್ಲಿ ತೂಗು ಹಾಕಿದಲ್ಲಿ ಆಕರ್ಷಕವಾಗಿ ಕಂಡು ಬರುತ್ತದೆ.
  • ಡೈನಿಂಗ್ ಹಾಲ್: ಇಲ್ಲಿ ವಿಶಾಲವಾದ ಸ್ಥಳಾವಕಾಶವಿದ್ದಲ್ಲಿ ಕಾರ್ನರ್ ಪಕ್ಕ ತಾಮ್ರದ ಕೊಡಪಾನ, ಡ್ರಮ್ ಗಳನ್ನು ಅಲಂಕಾರಕ್ಕೆ ಇಡಿಸ ಬಹುದು. ಗೋಡೆಯ ಪಕ್ಕ ಅಕ್ವೇರಿಯಂನ್ನು ಅಂದಕ್ಕಾಗಿ ಫಿಕ್ಸ್ ಮಾಡಿ ಕೊಳ್ಳ ಬಹುದು. ಪುರಾತನ ಕಾಲದಿಂದಲೂ ಬಳಕೆಯಲ್ಲಿದ್ದ ತಾಮ್ರದ ಟೇಬಲ್ ವೇರ್ ( ಮೇಜಿನ ಮೇಲೆ ಬಡಿಸಲು ಬಳಸುವ ಪಾತ್ರೆ) ಇದನ್ನು ಡೈನಿಂಗ್ ಟೇಬಲ್ ಮೇಲೆ ಇಡಿಸುವುದೂ ಈಗ ಫ್ಯಾಷನ್ ಹಾಗೂ ಸ್ಟೈಲ್ ಎನಿಸಿ ಕೊಂಡಿದೆ.

ಇತ್ತೀಚೆಗೆ ತಾಮ್ರ, ಹಿತ್ತಾಳೆ ಅಲಂಕಾರಿಕ ವಸ್ತುಗಳು ಅಲ್ಲದೆ ಅದರ ಉಪಕರಣಗಳು ಬಹು ಬೇಡಿಕೆಯಲ್ಲಿದೆ. ಇವುಗಳನ್ನು ಪಾಲಿಷ್ ಮಾಡಿ ಆಕರ್ಷಕಗೊಳಿಸುತ್ತಾರೆ. ಮೊದಲೆಲ್ಲಾ ತಾಮ್ರದ ಕೊಡ ಅಥವಾ ತಂಬಿಗೆಯಲ್ಲಿ ನೀರನ್ನು ಶೇಕರಿಸಿಟ್ಟು ಬೆಳಿಗ್ಗೆ ಕುಡಿಯುವ ಪದ್ಧತಿಯಿತ್ತು. ಇದರಿಂದ ಥೈರಾಯ್ಡ್ ಹಾಗೂ ಜೀರ್ಣಶಕ್ತಿಯನ್ನೊಳಗೊಂಡ ಕಾಯಿಲೆಗಳು ವಾಸಿಯಾಗುವುದಲ್ಲದೆ ನೆನಪಿನ ಶಕ್ತಿ ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ಅರೋಗ್ಯವೂ ವೃದ್ಧಿಯಾಗುತ್ತದೆ ಎಂಬ ಪ್ರತೀತಿಯೂ ಇದೆ. ಇತ್ತೀಚಿಗೆ ಇದು ವೈಜ್ಞಾನಿಕ ಸಂಶೋಧನೆಗಳಿಂದ ದೃಢಪಟ್ಟಿದೆ.
.
ಹಿರಿಯರು ಬಳಸುತ್ತಿದ್ದ ವಸ್ತುಗಳು ಹಾಗೂ ಅದನ್ನು ಉಳಿಸಿ ಬೆಳೆಸಿದ ಹೆಮ್ಮೆ ಹಾಗೂ ಅವರ ನೆನಪುಗಳು ನಮ್ಮಲ್ಲಿ ಒಂದು ರೀತಿಯ  ಸಂತೋಷವನ್ನು ಉಂಟು ಮಾಡುವುದಲ್ಲದೆ ಮನೆಯಲ್ಲೂ ಸಂತೋಷ ಭರಿತ ವಾತಾವರಣ ಸೃಷ್ಟಿಸುವುದರಲ್ಲಿ ಸಂಶಯವಿಲ್ಲ.
;
-ಇಂದಿರಾ.ಪಿ, ಪುತ್ತೂರು
.

1 Response

  1. Pallavi Bhat says:

    ಹಳೆಯ ಸಾಮಗ್ರಿಗಳು ಮತ್ತೆ ಟ್ರೆಂಡ್ ಆಗಿವೆ. ಉತ್ತಮ ಬರಹ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: