ನಕ್ಕಳಾ ರಾಜಕುಮಾರಿ!
ಈಗ್ಗೆ ಹನ್ನೆರಡು ವರ್ಷಗಳ ಕೆಳಗೆ ನನ್ನ ಮಗಳು ನರ್ಸರಿ ಓದುತ್ತಿದ್ದ ಸಮಯದಲ್ಲಿ ಶಾಲೆಯಲ್ಲಿ ಟೀಚರ್, ಮುಂದಿನ ವಾರ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಇದೆ. ನಿಮ್ಮ ಮಗಳನ್ನು ರೆಡಿ ಮಾಡಿ ಕಳುಹಿಸಿ, ಒಂದು ಸೆಂಟೆನ್ಸ್ ಆದರೂ ತಾವು ಹಾಕಿದ ಪಾತ್ರದ ಬಗ್ಗೆ ಮಾತನಾಡಲೇಬೇಕು ಎಂದು ಪುಸ್ತಕದಲ್ಲಿ ಬರೆದು ಕಳುಹಿಸಿದ್ದರು. ಅದನ್ನು ಓದಿ ಯಾವ ಪಾತ್ರ ಮಾಡಿಸಬೇಕು ಎಂಬ ಗೊಂದಲದಲ್ಲಿ ಬಿದ್ದೆ. ಈಗಿನಂತೆ ನನ್ನ ಮಗಳು ಅರಳು ಹುರಿದಂತೆ ಮಾತನಾಡುವುದು, ಯಾವಾಗಲೂ ಎಲ್ಲರನ್ನೂ ನಗಿಸುತ್ತಾ, ಜೋಕ್ ಮಾಡುತ್ತಾ ಇದ್ದಂತೆ ಇರಲಿಲ್ಲ. ತುಂಬಾ ಗಂಭೀರ ಸ್ವಭಾವದವಳು. ಮೊದಲೇ ಮೂಡಿ, ನಗುವುದು ಅಂತೂ ಮೊದಲೇ ಅಪರೂಪ. ನಕ್ಕರಂತೂ ಮಲ್ಲಿಗೆ ಹೂವು ಅರಳಿದಂತಿರುತ್ತದೆ. ಇಲ್ಲದಿದ್ದರೆ ಯಾವಾಗಲೂ ಮುಖ ಸೀರಿಯಸ್. ಚಿಕ್ಕ ಪಾಪು ಇದ್ದಾಗಿನಿಂದಲೂ ಅಷ್ಟೆ. ಅಪರೂಪಕ್ಕೊಮ್ಮೆ ನಗುತ್ತಿದ್ದರೆ ನನ್ನಮ್ಮ ‘ನಕ್ಕಳಾ ರಾಜಕುಮಾರಿ’ ಎನ್ನುತ್ತಾ ಮನೆಮಂದಿಯನ್ನೆಲ್ಲಾ ಕರೆದು ತೋರಿಸುತ್ತಿದ್ದಳು.
ಫ್ಯಾನ್ಸಿ ಡ್ರೆಸ್‌ಗೆ ಬಟರ್‌ಫ್ಲೈ ಪಾತ್ರ ಹಾಕಿಬಿಡಿ, ಹೇಗಿದ್ದರೂ ಕಳೆದ ವರ್ಷ ನನ್ನ ಮಗಳು ಯುಕ್ತಿ ಆ ಪಾತ್ರ ಮಾಡಿದ್ದಳು, ಚಿಟ್ಟೆಗೆ ಹೊಂದುವ ಡ್ರೆಸ್, ರೆಕ್ಕೆಗಳು ಎಲ್ಲಾ ರೆಡಿ ಇದೆ, ಒಂದು ಡೈಲಾಗ್ ‘ಐ ಯಾಮ್ ಬಟರ್ ಫ್ಲೈ’ ಅಂತಾ ಎರಡು ಸಲ ಕೈಯನ್ನು ಮೇಲೆ ಕೆಳಗೆ ಆಡಿಸಿ ರೆಕ್ಕೆ ಬಡಿಯುತ್ತಾ ಹೇಳಿದರಾಯಿತು, ಬಂದು ತೆಗೆದುಕೊಂಡು ಹೋಗಿ ಎಂದು ಗೆಳತಿ ಕವಿತಾ ಸಲಹೆ ನೀಡಿದಾಗ ತುಂಬಾ ಖುಷಿಯಾಯಿತು. ಸಂಜೆಯೇ ಕವಿತಳ ಮನೆಗೆ ಹೋಗಿ ಎಲ್ಲಾ ಪರಿಕರಗಳನ್ನು ತೆಗೆದುಕೊಂಡು ಬಂದೆ. ಅದನ್ನೆಲ್ಲಾ ನನ್ನ ಮಗಳ ಸೈಜಿಗೆ ಅನುಕೂಲವಾಗುವಂತೆ ರಿಪೇರಿ ಮಾಡಿದ್ದಾಯಿತು. ಒಂದು ಬಾರಿ ಎಲ್ಲಾ ತೊಡಿಸಿ ಚೆಕ್ ಮಾಡಿದ್ದೂ ಆಯಿತು. ಪ್ರತಿದಿನ ಅವಳಿಗೆ ಡೈಲಾಗ್ ಉರುಹೊಡೆಸಿದ್ದಾಯಿತು.
ಸ್ಪರ್ಧೆಯ ದಿನ ನೋಡು ಪುಟ್ಟೀ ನೀನು ಸ್ಟೇಜಿನ ಮೇಲೆ ನಿಂತು ಚೆನ್ನಾಗಿ ಡೈಲಾಗ್ ಹೇಳಿದರೆ ಟೀಚರ್ ಪ್ರೈಜ್ ಕೊಡುತ್ತಾರೆ, ಮನೆಗೆ ಬಂದ ಮೇಲೆ ನಿನ್ನಿಷ್ಟದ ಗೋಭೀ ಮಂಚೂರಿ ಮಾಡಿಕೊಡ್ತೇನೆ ಎಂದು ಪೂಸಿ ಹೊಡೆಯುತ್ತಾ ರೆಡಿ ಮಾಡಿ ಶಾಲೆಗೆ ಕರೆದುಕೊಂಡು ಹೋಗಿದ್ದಾಯಿತು. ಅವಳೂ ಸಹ ಆಯ್ತು ಮಮ್ಮೀ ಎಂದು ಖುಷಿಯಿಂದಲೇ ತಯಾರಾದಳು. ಅಲ್ಲಿಗೆ ಹೋದ ಮೇಲೆ ಫೋಟೋಗ್ರಾಫರ್‌ಗೆ ನೋಡಪ್ಪಾ ನನ್ನ ಮಗಳು ಬಟರ್ ಫ್ಲೈ ಅಂತಾ ಡೈಲಾಗ್ ಹೇಳುತ್ತಿದ್ದಂತೆ ಫೋಟೋ ತೆಗೆದುಬಿಡು ಎಂದು ಹೇಳಿದ್ದೆ.
ಸ್ಪರ್ಧೆ ಆರಂಭವಾಗುತ್ತಿದ್ದಂತೆ ಮಕ್ಕಳಿಗಿಂತ ಪೋಷಕರ ಆತಂಕವೇ ಹೆಚ್ಚಾಗಿತ್ತು. ಎಷ್ಟೋ ಮಕ್ಕಳು ಚೆನ್ನಾಗಿಯೇ ಡೈಲಾಗ್ ಹೇಳಿದರು, ಕೆಲವರು ಅಳುತ್ತಾ ಸ್ಟೇಜು ಸಹ ಹತ್ತದೆ ಮರಳಿದರು. ಇವಳೇನು ಮಾಡುತ್ತಾಳೋ ಎನ್ನುವ ಅನುಮಾನ ಇದ್ದೇ ಇತ್ತು. ಇವಳ ಸರದಿ ಕೊನೆಯದಾಗಿತ್ತು. ಹೆಸರು ಕರೆದಾಕ್ಷಣ ಸ್ಟೇಜಿಗೆ ಮತ್ತೊಮ್ಮೆ ಎಲ್ಲ ಬೆಣ್ಣೆ ಹಚ್ಚಿ ಕಳುಹಿಸಿದೆ. ಅದೇಕೋ ಗೊತ್ತಿಲ್ಲ ಸ್ಟೇಜಿನ ಮೇಲೆ ನಿಂತು ಎಲ್ಲರನ್ನು ನೋಡುತ್ತಿದ್ದ ಹಾಗೆ ಗಾಬರಿಯಾದಂತಾಯಿತು. ಡೈಲಾಗ್ ಹೇಳದೆ, ರೆಕ್ಕೆ ಬಡಿಯದೆ ಸುಮ್ಮನೆ ನಿಂತಿದ್ದಳು. ಸ್ಟೇಜಿನ ಒಂದು ಬದಿ ನಾನು, ಮತ್ತೊಂದು ಬದಿ ಟೀಚರ್ ಆಕ್ಷನ್ ಮಾಡುತ್ತಾ ಬಟರ್‌ಫ್ಲೈ ಬಟರ್‌ಫ್ಲೈ ಅಂತಾ ಜೋಕರ್ ಹಾಗೆ ಕುಣಿದು ಕುಣಿದು ತೋರಿಸಿದ್ದಾಯಿತು. ಸಧ್ಯ ಅದೇನು ನಮ್ಮನ್ನು ನೋಡಿ ನಗು ಬಂತೋ ಗೊತ್ತಿಲ್ಲ, ತಾನೂ ಸಹ ಬಟರ್‌ಫ್ಲೈ, ಬಟರ್‌ಫ್ಲೈ ಅಂತಾ ಎರಡು ಸಲ ರೆಕ್ಕೆ ಬಡಿದುಬಿಟ್ಟಳು. ನಾನಂತೂ ಮೂರನೇ ಮಹಾಯುದ್ಧ ಗೆದ್ದುಬಂದಷ್ಟು ತೃಪ್ತಿಯಿಂದ ನಿಟ್ಟುಸಿರು ಬಿಟ್ಟೆ. ಫೋಟೋಗ್ರಾಫರ್ ಆ ಅಮೂಲ್ಯ ಕ್ಷಣವನ್ನು ತಕ್ಷಣ ಕ್ಲಿಕ್ಕಿಸಿದ್ದ. ಇವಳಿಗೆ ಮೊದಲ ಬಹುಮಾನ ಬಂದಾಗ ಇಷ್ಟು ದಿನ ಒದ್ದಾಡಿದ್ದಕ್ಕೂ ಸಾರ್ಥಕಪಟ್ಟೆ.
ಈ ಫೋಟೋ ನೋಡಿದಾಗೊಮ್ಮೆ ನಾನೂ ಹಾಗೂ ನರ್ಸರಿ ಟೀಚರ್ ಜೋಕರುಗಳ ಹಾಗೆ ಕುಣಿದಿದ್ದು ನೆನಪು ಮಾಡಿಕೊಂಡು ಮಗಳಿಗೆ ರೇಗಿಸುತ್ತಿರುತ್ತೇನೆ.
-ನಳಿನಿ. ಟಿ. ಭೀಮಪ್ಪ, ಧಾರವಾಡ.