ನಿನ್ನ ಮರೆಯುವೆನೆಂಬ ಭ್ರಮೆಯೊಳಗೆ
ನಿನ್ನ ಮರೆಯುವೆನೆಂಬ ಭ್ರಮೆಯೊಳಗೆ
ಕಟ್ಟಿದ್ದೆ ದೂರ ತೀರದಿ ಹೊಸ ಗೂಡೊಂದನು.
ಕಟ್ಟಿದ್ದ ತೃಪ್ತಿಯಲಿ ಒಳಹೊಕ್ಕರೆ ಭಿತ್ತಿ
ತುಂಬಾ ನಿನ್ನ ನೆನಪಿನ ಬಣ್ಣ ಬಳಿದಿತ್ತು
ನೋಡೆಂತಾ ವಿಪರ್ಯಾಸ.
ಇದ್ದರಿರಲಿ ಬಣ್ಣದ ಭಿತ್ತಿ ಹಾಗೇ ,ಹೊತ್ತು ಕಳೆಯುವೆ ಮಂದ ಬೆಳಕಲಿ ಎಂದೆಣಿಸಿ
ತೂಗುಹಾಕಿದೆ ಪುಟ್ಯ ಲಾಂದ್ರ
ಕಣ್ತೆರೆದು ದಿಟ್ಟಿಸೆ ಲಾಂದ್ರವೂ ಆ ನಿನ್ನ
ಪ್ರಖರ ನೆನಪುಗಳೊಳಗೆ ಮೆರೆದಿತ್ತು
ಉಜ್ವಲ ಬೆಳಕನಿತ್ತು.
ಇರಲಿ ಅವಿತಿರಲಿ ನಿನ್ನ ನೆನಪು ಗೂಡ
ಒಳಗೇ ,ನಾನಿರುವೆ ಉದ್ಯಾನದಿ ಅರಳು
ಗುಲಾಬಿಯ ಸವಿದು.
ಹೇ ಅದೆಂತ ಮರ್ಮ ಗುಲಾಬಿ ಉಸುರಿದ್ದ
ಕಂಪೊಳಗೆ ಮಿಲನ ನಿನ್ನ ನೆನಪಿನ ಗಾಢ
ಅಲೆಯಲೆಯ ಮಾಟ.
ಕೆಂಪಿರುಳ ಸಂಜೆಗೆ ಮೆಲುದನಿಯಲೇ
ಗುಟ್ಟೊಂದ ಹೇಳಹೊರಟಿತು ಅದೇ ಗುಲಾಬಿ ಮುದುಡಿ
ನನಗೂ ಉಮ್ಮಳಿಸಿ ಬಂದ ದುಃಖ ಬರಿಸಿದ ಕೋಪ ಕಿತ್ತೊಗೆದೆ ಪಕಳೆಗಳ
ಬಿಸುಟು.
ಅಲ್ಲೂ ಬಿಡದೆ ಕಾಡಿದ ನಿನ್ನ ನೆನಪು ನೀನು
ಅದೆಷ್ಟು ನವಿರಾಗಿ ಹೊಕ್ಕಿ ಕುಳಿತಿರುವೆ
ಹೃದಯ ಮಾನಸದಿ.
ಹೂ ಕಿತ್ತೊಗೆದ ಕ್ಷಣಗಳಲಿ ಚುಚ್ಚಿದ ಮುಳ್ಳಿಗೆ ನೆತ್ತರ ಹನಿದ ಬೆರಳ ಬಾಯೊಳಗಿಟ್ಟರೆ ಅದೂ ನಿನ್ನ ನೆನಪೊಳಗೆ
ಮತ್ತಷ್ಟು ಸಿಹಿ.
ನಿನ್ನ ಮರೆಯುವ ಭ್ರಮೆಯೊಳಗೆ ನಾ
ಹಚ್ಚಿದ್ದೆ ನನ್ನ ಹೃದಯಕೆ ಜ್ವಾಲೆಯ ಕಿಚ್ಚು
ಭಸ್ಮವಾಗಲಿ ನೆನಪು ಎಂದೆನುವ ನೋವಲ್ಲೇ.
ಅಬ್ಬಾ ಆಗಸದ ಮುಗಿಲು ತಾ ನಿನ್ನ ಒಲವನು ಹೊತ್ತು ಹನಿಯಾಗಿ ಸುರಿದು
ನಿನ್ನ ನೆನಪೊಳಗೆ ತಣಿಸಿತ್ತಾ ಜ್ವಾಲೆಯನೇ.
-ಲತಾ(ವಿಶಾಲಿ) ವಿಶ್ವನಾಥ್