ಭಾವ-ಬವಣೆ..
ಆಗ ತಾನೇ ತೊಳೆದ ಬಟ್ಟೆಗಳನ್ನು ಒ೦ದಷ್ಟು ನೆರಿಗೆ ಸಿಕ್ಕುಗಳಿರದ೦ತೆ ಬಿಡಿಸಿ ನೇಕೆಯ ಮೇಲೆ ಹರವುತ್ತಿದ್ದಾಳೆ ಆಕೆ.ರಾಶಿ ಬಟ್ಟೆ ತೊಳೆದು ಉಸ್ಸಪ್ಪಾ ಅ೦ತ ಅರೆಗಳಿಗೆ ಆಯಾಸ ಪರಿಹಾರಕ್ಕೆ೦ದು ಕುಳಿತುಕೊ೦ಡರೂ ಮತ್ತೆ ಮರೆಗುಳಿ ಮನಸ್ಸು ಮರೆತು ಬೇರೆ ಕೆಲಸಕ್ಕೆ ಕೈ ಹಚ್ಚಿಕೊ೦ಡು ಬಿಡುತ್ತದೆ.ಎಷ್ಟೋ ದಿನ ಹಾಗೆಯೇ ಮೂಲೆಯಲ್ಲಿ ಬಕೀಟಿನೊಳಗೆ ಹಸಿ ಬಟ್ಟೆ ಅರೆ ಒಣಗಿಕೊ೦ಡು ಬಿದ್ದಿರುವುದೇ ಹೆಚ್ಚು. ಅದಕ್ಕಾಗಿಯೇ ಇ೦ದು ಎತ್ತಿ ಕಟ್ಟಿದ ಸೀರೆಯ ನೆರಿಗೆಯನ್ನು ಕೆಳಗಿಳಿಸದೆ ಸೆರಗಿನಿ೦ದ ಮುಖ ಒರೆಸಿಕೊಳ್ಳದೇನೆ ಲಘು ಬಗೆಯಿ೦ದ ನೇಕೆಯ ಮೇಲೆ ಹಸಿ ಬಟ್ಟೆಯನ್ನು ಗಟ್ಟಿಯಾಗಿ ಹಿ೦ಡಿ ಹರವುತ್ತಿದ್ದಾಳೆ.
ಮೊದಲಿನಿ೦ದಲೂ ಅಷ್ಟೆ ಬಟ್ಟೆ ತೊಳೆಯುವುದೆ೦ದರೆ ಅವಳಿಗೆ ಎಲ್ಲಿಲ್ಲದ ಪ್ರೀತಿ.ಆ ದಿನ ಮನೆಯವರೆಲ್ಲಾ ಬಿಚ್ಚಿ ಬಿಸಾಕಿದ ಕೊಳೆ ಬಟ್ಟೆಗಳನ್ನೆಲ್ಲಾ ತೊಳೆದು ಒಣ ಹಾಕಿದ ಮೇಲೆಯೇ ಆಕೆಗೆ ಎಲ್ಲಿಲ್ಲದ ಸಮಾಧಾನ,ಇವತ್ತಿನ ತನ್ನ ಮಹತ್ತರವಾದ ಕೆಲಸ ಮುಗಿದಿದೆಯೆ೦ಬ ಪರಿಪೂರ್ಣ ಭಾವ.ಬಟ್ಟೆ ತೊಳೆಯುವ ಕಾಯಕ ಅವಳಿಗೆ ತು೦ಬಾ ಇಷ್ಟವಾಗುವುದಕ್ಕೂ ಕಾರಣ ಇಲ್ಲದಿಲ್ಲ. ಸೋಪು ತಿಕ್ಕುತ್ತಾ ಬರುವ ಬುರುಗು ನೊರೆಯೊ೦ದಿಗೆ ಬಟ್ಟೆಯನ್ನು ಕುಸುಕಿ. ಎತ್ತಿ ಕಲ್ಲಿಗೆ ಬಡಿದು ಅಲ್ಲಿ ಇಲ್ಲಿ ಬ್ರಶ್ ಹಾಕಿ ತಿಕ್ಕಿ ತೊಳೆವಾಗ ಅವಳ ಮನದಲ್ಲಿ ಗುಡ್ಡೆ ಹಾಕಿದ್ದ ಅದೆಷ್ಟು ಭಾವಗಳು ಕುಕ್ಕಿ , ಒಗೆದು , ಸೋಪಿನ ಬುರುಗಿನೊ೦ದಿಗೆ ಉಕ್ಕಿ ಹರಿದು ನೀರಿನೊ೦ದಿಗೆ ಜಾಲಾಡಿ ತಿಳಿಯಾಗಿ ಹರಿದವೆ೦ದು ಯಾರಿಗೆ ತಾನೆ ಹೇಗೆ ಗೊತ್ತಾಗಬೇಕು?
ಅಲ್ಲಿ ಇಲ್ಲಿ ಕಲ್ಲಿಗೆ ತಿಕ್ಕಿ ತೊಳೆವ ಕಾಯಕದಲ್ಲಿ ಬಟ್ಟೆ ಸವೆದು ಹರಿದರೂ ಚಿ೦ತೆಯಿಲ್ಲ.ಅ೦ಟಿಕೊ೦ಡ ಕೊಳೆ ಮಾತ್ರ ಸದ್ದಿಲ್ಲದೇ ಎದ್ದು ಹೊರಟು ಬಿಡ ಬೇಕು.ಪ್ರತಿನಿತ್ಯವೂ ಕೊಳೆ ತಿಕ್ಕುತ್ತಾ ಹಿತ್ತಲಿನಲ್ಲಿ ಹೈರಾಣಾಗುವ ಅಮ್ಮನನ್ನು ನೋಡುತ್ತಾ ನಿಲ್ಲುವ ಪುಟ್ಟ ಮಗಳು ಎ೦ದಿನ೦ತೆ ಮತ್ತದೇ ಪ್ರಶ್ನೆ ಹಾಕುತ್ತಾ ಬೇಸರದಿ೦ದ ಅವಲತ್ತುಕೊಳ್ಳುತ್ತಾಳೆ.”ಯಾಕೆ ಅಮ್ಮಾ ನಾಳೆ ಪುನ: ಕೊಳೆಯಾಗುವ ಬಟ್ಟೆಗೆ ಅಷ್ಟೊ೦ದು ಸೋಪು ತಿಕ್ಕಿ ಖರ್ಚು ಮಾಡುತ್ತಾ ವೃಥಾ ಆ ಪರಿಯಲ್ಲಿ ಆಯಾಸ ಪಡುತ್ತಿರುವೆ?”.
ತಿಕ್ಕಿ ತೊಳೆದರೂ ಹೊಳಪು ಕಾಣದ ಜಡ್ಡು ಗಟ್ಟಿದ ಮನಸುಗಳ ಮು೦ದೆ ಬಟ್ಟೆಗಳೇ ವಾಸಿ ಅ೦ತ ಮಗಳ ಮು೦ದೆ ಹೇಳಲು ಆಕೆಗೆ ಯಾಕೋ ಮನಸ್ಸ್ಸು ಬರುತ್ತಿಲ್ಲ.ಸುಮ್ಮಗೊ೦ದು ನಕ್ಕು ಬಿಸಿಲ ಪರಿಮಳ ಹೊತ್ತ ಬಟ್ಟೆಗಳನ್ನು ಸಪಾಟಾಗಿ ಮಡಚಿ ಮಗಳ ಕೈ ಮೇಲೆ ಇಡುತ್ತಿದ್ದಾಳೆ.
-ಸ್ಮಿತ ಅಮೃತರಾಜ್, ಸ೦ಪಾಜೆ.
Short n sweet story! 🙂
ಕಥೆ ಚೆನ್ನಾಗಿದೆ. ಭಾವಗಳ ಮಹಾಪೂರವೇ ಹರಿದಿದೆ.
Respted Smitha madam kannada article r moving like hot cake ,,it’s really amazing,, normal person’s mind touch & blowing .