ಬದಲಾದ ಹಳ್ಳಿಗಳ ಚಿತ್ರಣ
ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಸಾವಿರಾರು ಸ್ವಾತಂತ್ರ ಹೋರಾಟಗಾರರ ಕನಸು ಭಾರತ ಭವ್ಯ ಭಾರತವಾಗಬೇಕು ಎಂಬ ಕನಸು ಇಂದು ನನಸಾಗಿದೆಯೇ ನೋಡೋಣ. ನಮ್ಮ ದೇಶ ಹಳ್ಳಿಗಳ ದೇಶ ಭಾರತ ಅಭಿವೃದ್ಧಿ ಹೊಂದಬೇಕು ಎಂದರೆ ಹಳ್ಳಿಗಳು ಅಭಿವೃದ್ಧಿ ಹೊಂದಬೇಕು. ಪಂಚಾಯತ್ ರಾಜ್ ಬಂದ ಮೇಲೆ ಬದಲಾವಣೆ ಬಂದಿದೆಯೇ?ವಾಸ್ತವತೆ ಏನಾದರು ಇರಲಿ 2014 ರ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಸರ್ಕಾರದ ಸಾಧನೆಗಳನ್ನು ಹೇಳಿ ಕೊಳ್ಳುವ ಜಾಹೀರಾತುಗಳನ್ನು ನೋಡಬೇಕು. ಸುಂದರ ಹಳ್ಳಿಯ ಚಿತ್ರಗಳು ರಸ್ತೆಗಳು, ಶಾಲೆ, ಆಸ್ಪತ್ರೆ, ಕೆರೆ, ಕಟ್ಟಡಗಳು ದಿಗ್ಭ್ರಮೆ ಆಗುತ್ತದೆ. ಜಾಹಿರಾತುಗಳಂತೆ ನಮ್ಮ ಹಳ್ಳಿಗಳು ಅಭಿವೃದ್ಧಿ ಹೊಂದಿದರೆ ಹೃದಯ ತುಂಬಿ ಬರುವಷ್ಟು ಸಂತೋಷವಾಗುತ್ತಿತ್ತು .
ಆದರೆ ಸರ್ಕಾರ ಹೇಳಿಕೊಳ್ಳುವಂತ ಬದಲಾವಣೆ ಏನೂ ಆಗಿಲ್ಲ .ಪ್ರತಿ ಚುನಾವಣೆಯಲ್ಲೂ ನಮ್ಮನ್ನು ಆಳುವವರು ಮಾತಿನ ಆಶ್ವಾಸನೆಗಳನ್ನು ಮಾತ್ರ ಕೊಡುತ್ತಾ ಬಂದಿದ್ದಾರೆ.
ಅಭಿವೃದ್ಧಿ ಹೆಸರಿನಲ್ಲಿ ರೈತರ ಜಮೀನುಗಳು ಬಂಡವಾಳ ಶಾಹಿಗಳ ಸ್ವತ್ತಾಗುತ್ತಿವೆ. ಹಳ್ಳಿಗಳಲ್ಲಿ ಮೂಲಭೂತ ಅವಶ್ಯಕತೆಗಳೂ ಇಲ್ಲದೆ ಕೃಷಿ ಮಾಡಲೂ ನೀರು ಇಲ್ಲದೆ ರೈತರು ನಗರಗಳಿಗೆ ವಲಸೆ ಬರುತ್ತಿದ್ದಾರೆ. ವಿದ್ಯಾವಂತ ಯುವಕರು ಕೆಲಸವಿಲ್ಲದೆ ಭವಿಷ್ಯ ರೊಪಿಸಿಕೊಳ್ಳಲು ಆಗದೆ ಅತೃಪ್ತರಾಗಿ ತಪ್ಪು ದಾರಿ ಹಿಡಿಯಲು ಕಾರಣವಾಗಿ ಸಾಮಾಜಿಕ ಭದ್ರತೆ ಇಲ್ಲದ ಬೇರೆ ಬೇರೆ ದುಷ್ಕ್ರತ್ಯಗಳಿಗೆ ದಾರಿ ಮಾಡಿಕೊಟ್ಟಿದೆ.
ನಾನೂ ಮೂಲತ: ಹಳ್ಳಿಯವಳೇ. ನಮ್ಮ ಊರು ಚಿಕ್ಕಮಗಳೂರಿನ ಹತ್ತಿರ ಬಾಣೂರು ಎಂಬ ಚಿಕ್ಕಹಳ್ಳಿ. 50 ವರ್ಷಗಳ ಕೆಳಗೆ ನಮ್ಮ ಊರಿಗೆ ಹೋಗುವುದು ತುಂಬಾ ಸಂಭ್ರಮ. ಇಡೀ ಊರವರೇ ಒಂದು ಕುಟುಂಬದಂತಿದ್ದರು. ದನ ಕರುಗಳು ಎತ್ತುಗಳು ಅವರ ಆಸ್ತಿಯಾಗಿತ್ತು .ಹಸು ಸಾಕದೇ ಇರುವವರೇ ಇರಲಿಲ್ಲ. ಊರಿಗೆ ಹೋದರೆ ಕುಡಿಯುವಷ್ಟು ನಾಡ ಹಸುವಿನ ಹಾಲು, ತಿನ್ನುವಷ್ಟು ಹಣ್ಣುಗಳು, ಬೇಸಾಯ ಮಾಡಲು ಒಳ್ಳೆತಳಿಯ ಎತ್ತುಗಳನ್ನು ಇಟ್ಟು ಕೊಳ್ಳುವುದೇ ಒಂದು ಹೆಮ್ಮೆ ವಿಚಾರವಾಗಿತ್ತು. ಕೃಷಿ ಮಾಡುವ ಎತ್ತುಗಳು ಸತ್ತರೆ ಮನುಷ್ಯರಿಗೆ ಮಾಡುವ ರೀತಿ ಆರಾಧನೆ ಮಾಡುತ್ತಿದ್ದರು. ಅದರ ಶವವನ್ನು ಗಾಡಿಯ ಮೇಲೆ ತೆಗೆದು ಕೊಂಡು ಹೋಗಿ ಸಮಾಧಿ ಮಾಡುತ್ತಿದ್ದರು. ಊರವರಿಗೆಲ್ಲಾ ಕೋಸಂಬರಿ ಪಾನಕ ಹಂಚುತ್ತಿದ್ದರು. ಈಗ ಎತ್ತುಗಳು ಹಸುಗಳು ತಂಬಾ ಕಡಿಮೆಈಗ ಅವುಗಳಿಗೆ ವಯಸ್ಸಾದ ಮೇಲೆ ಕಟುಕರಿಗೆ ಮಾರುತ್ತಾರೆ.
ರೈತರ ನಿಜವಾದ ಸಂಪತ್ತು ನೆಲ, ಜಲ, ಪಶು ಸಂಪತ್ತು, ಅದರೆ ಈಗ ನೆಲ, ಜಲ ಮತ್ತು ಪಶು ಸಂಪತ್ತಿಲ್ಲಅದಕ್ಕೆ ಕಾರಣ ಕೃತಕ ಗೊಬ್ಬರಗಳ ಬಳಕೆ ಬಂದಿದ್ದುಭಾರತದಲ್ಲಿ ಹಸಿರು ಕ್ರಾಂತಿ ಮಾಡುತ್ತೇವೆಂದು ಕೃತಕ ಗೊಬ್ಬರ ಉಪಯೋಗಿಸಲು ಆರಂಭಿಸಲಾಯಿತು. ಆಗಲೇ ಫಲವತ್ತಾದ ಕೃಷಿಕರ ಭೂಮಿ ಬರಡಾಗಲು ನಾಂದಿಯಾಯಿತು. ಇಂದು ನಾವು ಸೇವಿಸುತ್ತಿರುವುದು ವಿಷಯುಕ್ತ ಆಹಾರ.ಈಗ ಮೊದಲಿನ ರೀತಿ ಜೈವಿಕ ಗೊಬ್ಬರ ಉಪಯೋಗಿಸಿ ಬೆಳೆ ಬೆಳೆಯಲು ಆಗುತ್ತಿಲ್ಲ. ಇದಕ್ಕೆ ಕಾರಣ ದನಕರುಗಳ ಸಂಖ್ಯೆ ಕಡಿಮೆ ಆಗಿರುವುದರಿಂದ ಜೈವಿಕ ಗೊಬ್ಬರದ ಕೊರತೆ. ಮೊದಲೆಲ್ಲ ಪ್ರತಿ ಹಳ್ಳಿಗಳಲ್ಲೂ ಹಸುಗಳು ಮೇಯಲು ಗೋಮಾಳವನ್ನು ಬಿಡಲಾಗಿತ್ತು. ಆದರೆ ಈಗ ಗೋಮಾಳಗಳೆನ್ನಲ್ಲಾ ಜಮೀನುಗಳನ್ನಾಗಿ ಪರಿವರ್ತಿಸಲಾಗಿದೆ .ಬೆಟ್ಟ ಗುಡ್ಡಗಳಲ್ಲೆಲ್ಲಾ ಕಾಫಿ ತೋಟ ಮಾಡಲಾಗಿದೆ. ಹಸುಗಳು ಮೇಯಲು ಜಾಗವೇ ಇಲ್ಲ.
ಇನ್ನೂ ಜಲ ಸಂಪತ್ತಿನ ಬಗ್ಗೆ ಹೇಳ ಬೇಕಾದರೆ ನಮ್ಮ ಊರಿನಲ್ಲಿ ವೇದ ನದಿ ಹರಿಯುತ್ತಿತ್ತು. ಹಾಸನ ಜಿಲ್ಲೆಯಲ್ಲಿ ನೀರಾವರಿ ಯೋಜನೆ ನಿರ್ಮಿಸಲು ಈ ನದಿಯ ಪ್ರಾಕೃತಿಕ ಹರಿಯುವಿಕೆಯನ್ನು ಬದಲಾಯಿಸಿದ ಕಾರಣ ನಮ್ಮ ಊರು ಮತ್ತು ಸುತ್ತು ಮುತ್ತಲಿನ ಹಳ್ಳಿಗಳಿಗೆ ನೀರಿಲ್ಲದಂತಾಯಿತು. ಈ ಸಂದರ್ಭದಲ್ಲಿ ರೈತರು ಹೋರಾಟ ನಡೆಸಿದರು .ಅವರ ಹೋರಾಟಕ್ಕೆ ಮನ್ನಣೆ ಸಿಗಲಿಲ್ಲ. ಈ ನದಿ ನೀರು ಬತ್ತಿದ ಕಾರಣ ಬಾಣಾವರ ಕೆರೆ, ದೇವನೂರು ಕೆರೆ ಬತ್ತಿಹೋದವು. ಊರುಗಳಲ್ಲಿ ಬೋರವೆಲ್ ಕೊರೆತದಿಂದ ಅಂತರಜಲ ಕಮ್ಮಿಯಾಗಿ ಬೇಸಿಗೆಯಲ್ಲಿ ಕುಡಿಯುವ ನೀರು ಇಲ್ಲದೆ ಪರಿಸ್ಥಿತಿ ಉಂಟಾಗಿದೆ. ನಾನು ನೋಡಿದ ಒಂದು ಊರಿನ ಪರಿಸ್ಥಿತಿಯನ್ನು ಇಲ್ಲಿ ಉಲ್ಲೇಖಿಸಿದ್ದೇನೆ. ಇಂತಹ ಸಾವಿರಾರು ಕೆರೆಕಟ್ಟೆ ನದಿಗಳು ಅಭಿವೃದ್ದಿಯ ಹೆಸರಿನಲ್ಲಿ ಒಣಗಿ ಹೋಗಿವೆ.
ಎಲ್ಲಾ ಹಳ್ಳಿಗಳಲ್ಲಿ ಶಾಲೆ, ಆಸ್ಪತ್ರೆಗಳು ಪ್ರಾರಂಭವಾಗಿವೆ, ಫ್ರಾರಂಭವಾದರಷ್ಟೆ ಸಾಲದು ಅವುಗಳ ಉದ್ದೇಶ ಸಾರ್ಥಕತೆ ಕಂಡು ಕೊಳ್ಳಬೇಕು. ಅವುಗಳಿಂದ ಜನರ ಜೀವನದಲ್ಲಿ ಬದಲಾವಣೆ ಬರಬೇಕು, ಬಡವರ ಉದ್ದಾರಕ್ಕಾಗಿ ರೂಪಿಸಿರುವ ಯೋಜನೆಗಳಿಂದ ರೈತರು ಸೋಮಾರಿಗಳಾಗುತ್ತಿದ್ದಾರೆ. ಯಾರನ್ನೇ ಅಗಲಿ ಉದ್ದಾರ ಮಾಡುವುದಾದರೆ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕೆ ಹೊರತು ಪರಾವಲಂಬಿಯನ್ನಾಗಿ ಮಾಡಬಾರದು.
ರೈತರಿಗೆ ಸರಿಯಾದ ಮಾರ್ಗದರ್ಶನ ಮತ್ತು ಬೆಂಬಲ ಬೆಲೆ ನೀಡಿ ಅತ್ಯಾವಶ್ಯಕವಾಗಿ ಬೇಕಾಗುವ ವಿದ್ಯುತ್, ಸಾಗಾಣಿಕಾ ಸೌಕಾರ್ಯಗಳನ್ನು ಒದಗಿಸಲು ಪೂರಕ ಯೋಜನೆಗಳನ್ನು ರೂಪಿಸಬೇಕು. ಸಹಕಾರ ಸಂಘಗಳನ್ನು ಸ್ಥಾಪಿಸ ಬೇಕು ಮಧ್ಯವರ್ತಿಗಳನ್ನು ದೂರ ಇಡಬೇಕು. ಜನಹಿತವಲ್ಲದ ಯೋಜನೆಗಳ ಅನುಷ್ಠಾನಕ್ಕೆ ತಡೆಹಾಕುವುದು ಹಾಗೂ ಮಧ್ಯಪಾನ ನಿಲ್ಲಿಸುವವರೆಗೆ ಹಳ್ಳಿಗಳು ಅಭಿವೃದ್ಧಿ ಹೊಂದುವುದಿಲ್ಲ ಸ್ವಾತಂತ್ರ್ಯ ನಂತರ ಗ್ರಾಮಗಳ ಮಾದರಿ ಗ್ರಾಮಗಳಾಗಿ ಪರಿವರ್ತನೆ ಕಂಡಿರ ಬಹುದು ಅದು ಅಲ್ಲಿನ ಜನರ ಒಗಟ್ಟಿನ ಮನೋಭಾವನೆ, ಶ್ರಮ ಮತ್ತು ಎಲ್ಲರ ಹಿತವನ್ನೊಳಗೊಂಡ ಕಾರ್ಯಕ್ರಮಗಳಿಂದ ಇದು ಸಾಧ್ಯವಾಗಿದೆ.
ಗ್ರಾಮ ಪಂಚಾಯತ್ ಆಳ್ವಿಕೆ ಎಲ್ಲಿ ಚೆನ್ನಾಗಿ ನಡೆಯುತ್ತಿದೆಯೇ ಅಂತಹ ಗ್ರಾಮಗಳು ಸಹ ಅಭಿವೃದ್ಧಿ ಹೊಂದಿದೆ ನಮ್ಮ ಜನರು ಸ್ವಾವಲಂಬಿಗಲಾಗುವಂತ ಶಿಕ್ಷಣ ಸಿಗಬೇಕು. ಶ್ರಮ ಜೀವಿಗಳಾಗ ಬೇಕು. ಅನ್ಯಾಯ, ಅಕ್ರಮಗಳನ್ನು ಒಗ್ಗಟ್ಟಾಗಿ ವಿರೋಧಿಸುವ ಶಕ್ತಿಯನ್ನು ಬೆಳಸಿಕೊಂಡಾಗಲೇ ಹಳ್ಳಿಗಳ ಅಭಿವೃದ್ಧಿ ಸಾಧ್ಯ ಯುವ ಜನ ಮನಸ್ಸು ಮಾಡಿದರೆ ಬದಲಾವಣೆ ಖಂಡಿತಾ ಸಾಧ್ಯ..
– ನೀಲಮ್ಮ, ಕಲ್ಮರಡಪ್ಪ, ಮೈಸೂರು.
01/04/2014
ನಿಜ, ನೀವು ಹೇಳುವುದೆಲ್ಲ. ಭವಿಷ್ಯ ನೆನೆಸಿಕೊಂಡರೆ ಭಯವಾಗುತ್ತದೆ.
ತುಂಬಾ ಚೆನ್ನಾಗಿದೆ. ನರೇಂದ್ರ ರಾಯ್ ದೇರ್ಲ ಅವರ ‘ಹಸಿರು ಕೃಷಿಯ ನಿಟ್ಟುಸಿರುಗಳು ‘ ಹಾಗೂ ಶಿವಾನಂದ ಕಳವೆಯವರ ಲೇಖನಗಳೂ ಗ್ರಾಮೀಣ ಭಾರತದ ಸಂಕಸ್ಥಗಳತ್ತ ಗಮನ ಸೆಳೆಯುತ್ತವೆ.
ಬದಲಾದ ಹಳ್ಳಿಗಳ ಚಿತ್ರಣ ವನ್ನು ಚೆನ್ನಾಗಿ ಕೊಟ್ಟಿದ್ದೀರಿ .ಹಳ್ಳಿಗಳಲ್ಲಿ ಕೂಲಿಯಾಳುಗಳ ಸಮಸ್ಯೆ ಗಳಿ೦ದಾಗಿ ಹಳ್ಳಿಬಿಟ್ಟು ಪೇಟೆಯತ್ತ ಹೋಗುತಾರೆ
ಮನಸ್ಸಿಗೆ ತುಂಬ ಹಿಡಿಸಿದ ಬರಹ .ಸತ್ಯ ವಾದ ವಿಚಾರಗಳು .
ಚೆನ್ನಾಗಿದೆ…