ಹೊಸವರ್ಷದ ಕ್ಯಾಲೆಂಡರ್ ಸಿಕ್ಕಿತಾ?

Share Button


ಹಾಂ.!.ಮತ್ತೊಮ್ಮೆ ಬಂದಿತು …ಹೊಸ ವರುಷ.!!.ಕ್ರಿಸ್ತಶಕೆಯಲ್ಲಿ ಜನವರಿ 1 ಹೊಸ ವರುಷ..! ಆದರೆ ಮುಂದೆ ಬರಲಿದೆಯಲ್ಲಾ ನಮ್ಮ ಚಾಂದ್ರಮಾನ, ಸೌರಮಾನ ಯುಗಾದಿಗಳು..ಹಿಂದು ಪದ್ಧತಿಯಲ್ಲಿನ ಹೊಸವರುಷ..! ಅದೇನು ಹೊಸತಾಗಿ ಬರುತ್ತಾ..ಇಲ್ಲ.. ಚಕ್ರ ತಿರುಗುವುದಷ್ಟೆ!  ಒಂದು ಬಿಂದುವಿನಿಂದ ಹೊರಟ ಚಕ್ರ ಒಂದು ಸುತ್ತು ತಿರುಗಿ ಪುನಃ ಅದೇ ಬಿಂದುವಿನಿಂದ ಇನ್ನೊಂದು ಸಲ, ಮಗದೊಂದು ಸಲ ಸುತ್ತುವುದೇ ಕಾಲಚಕ್ರ!  .ಆದರೆ ಅದೆಲ್ಲಾ ವೈಜ್ನಾನಿಕ!    ಎಲ್ಲಾ ವ್ಯಾವಹಾರಿಕ ಕೆಲಸಗಳಿಗೆ ಸರಿಯಾದ ತಾರೀಕು ಬೇಕೇ ಬೇಕು.ಹಾಗಾಗಿ ಪ್ರತಿದಿನದ ಸರಿಯಾದ ತಾರೀಕು ನಮಗೆ ಗೊತ್ತಿರಲೇ ಬೇಕು ಅಲ್ವಾ?

2017ನೇ ಇಸವಿ ಕೊನೆಗೊಂಡು ನಮ್ಮ ಎಲ್ಲಾ ಕೆಲಸಕಾರ್ಯಗಳಲ್ಲಿನ ಇಸವಿಯು 2018ಕ್ಕೆ ಬದಲಾವಣೆಗೊಳ್ಳುತ್ತದೆ… ಅದೇನೋ ಹೌದು..!..ಆದರೆ ಅದರಿಂದ ಆಗುವ ಫಜೀತಿ ನೋಡಿ..!.ನನ್ನ ಶಾಲಾದಿನಗಳಲ್ಲಿ ಚಿತ್ತಿಲ್ಲದೆ ಬರೆಯುತ್ತಿದ್ದ ಕೋಪಿಗಳು, ಜನವರಿ 1ರಿಂದ, ಹಿಂದಿನ ವರ್ಷದ ಇಸವಿ ಬರೆದು, ಅದನ್ನು ಆಮೇಲೆ ತಿದ್ದಿ ಹೊಸವರ್ಷದ ಇಸವಿ ಬರೆಯುವುದೇ ಆಗ್ತಿತ್ತು. ಈ ತಿದ್ದುವ ಕೆಲಸದ  ಕತೆ ಆಫೀಸು ಕೆಲಸಕ್ಕೆ ಸೇರಿದ ಮೇಲೆಯೂ ಮುಂದುವರಿದಿತ್ತು ಎನ್ನಿ!. ಹೆಚ್ಚಿನ ಎಲ್ಲಾ ದೇಶಗಳಲ್ಲಿ ಜನವರಿಯಿಂದ ಡಿಸೆಂಬರ್ ವರೆಗೆ ವಾರ್ಷಿಕ ಲೆಕ್ಕಾಚಾರಗಳ ಕೊನೆ ಆಗಿರುತ್ತದೆ. ನಮ್ಮಲ್ಲಿ ಮಾತ್ರ ಎಪ್ರಿಲ್ ನಿಂದ  ಮಾರ್ಚ್..!

ಇನ್ನು ಹೊಸ ಕ್ಯಾಲೆಂಡರ್ ಗಳ ಗೌಜಿಯೇ ಬೇರೆ..! ನಾವು ಚಿಕ್ಕವರಿದ್ದಾಗ ತರಹೇವಾರಿ ಕ್ಯಾಲೆಂಡರ್ ಗಳ ರಾಶಿಯೇ ಮನೆಯಲ್ಲಿ ಬಂದು ಬೀಳ್ತಿತ್ತು..!.ಆಹಾ..! ಇರುವ ಎಲ್ಲಾ ದೇವದೇವತೆಗಳೂ ಅವುಗಳಲ್ಲಿ ವಿರಾಜಮಾನವಾಗಿರುತ್ತಿದ್ದರೆ, ನಾವೆಲ್ಲ ಅವುಗಳ ಚಂದವನ್ನೇ ಕಣ್ಣು ಬಾಯಿ ಬಿಟ್ಟು ನೋಡುತ್ತಿದ್ದೆವು.ಅದನ್ನು ಬಿಡಿಸಿದ ಕಲಾಗಾರನದು ಅದ್ಭುತ ಕೈಚಳಕವೇ ಸರಿ. ಅವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸಬೇಕೆಂದು ನನ್ನ ವೈಯ್ಯಕ್ತಿಕ ಅಭಿಪ್ರಾಯ..! ಡಿಸೆಂಬರ್ ವಾರದ ಕೊನೆಗೆ ಅಥವಾ ಜನವರಿ ಮೊದಲನೇ ವಾರಗಳಲ್ಲಿ ಸಾಮಾನು ತರಲು ಅಂಗಡಿಗಳಿಗೆ ಹೋದಾಗ ಉಚಿತ ಉಡುಗೊರೆಯಾಗಿ ಖಾಯಂ ಗಿರಾಕಿಗಳಿಗೆ ಕ್ಯಾಲೆಂಡರ್ ವಿತರಣೆಯಾಗತ್ತಿತ್ತು. ಒಂದು ವೇಳೆ ಅವರು ಕೊಡದಿದ್ದರೆ ಕೇಳಿಯೇ ಪಡೆದುಕೊಳ್ಳುವುದೂ ಒಂದು ವಾಡಿಕೆಯೇ..!.ಚಂದದ ಕ್ಯಾಲೆಂಡರ್ ಸಿಗದಿದ್ದರೆ, ಏನ್ರೀ ಈಸಲ ಅಷ್ಟೇನೂ ಚೆನ್ನಾಗಿಲ್ವಲ್ಲಾ ಎಂಬ ವಿಮರ್ಶೆಗಳಿಗೂ ಕೊರತೆ ಇರಲಿಲ್ಲ..!.  .ಅಂಗಡಿ ಮಾಲೀಕರ ಬಳಿ ತರಹೇವಾರಿ ಕ್ಯಾಲೆಂಡರ್ ಗಳಿರುತ್ತಿದ್ದವು. ದೊಡ್ಡ ಗಿರಾಕಿಗಳಿಗೆ ಒಳ್ಳೆಯ ಕ್ಯಾಲೆಂಡರ್ ಕೊಟ್ಟರೆ, ಉಳಿದವರಿಗೆ ಸಾದಾ..! ಮೇಲ್ಭಾಗದಲ್ಲಿ ಚಂದದ ದೇವದೇವತೆಯರ ಚಿತ್ರವಿದ್ದರೆ ಕೆಳಗಡೆಗೆ ಅವರ ಜಾಹೀರಾತು !..ಜೊತೆಗೇ ಇಡೀ ವರ್ಷದ ತಾರೀಕು ಸಣ್ಣ ಅಕ್ಷರಗಳಲ್ಲಿರುತ್ತಿತ್ತು. ಅಪರೂಪಕ್ಕೆ ನಿಸರ್ಗದ ಚಿತ್ರಗಳೂ ಕಂಡುಬರುತ್ತಿದ್ದವು ಅನ್ನಿ.! ನಮ್ಮದು ಹಳೇಕಾಲದ ಮಣ್ಣಿನ ಗೋಡೆಯ ಹಂಚಿನ ಮನೆಯಾಗಿತ್ತು.ಗೋಡೆಗಳ ಹತ್ತಾರು ತೂತುಗಳನ್ನು ಮುಚ್ಚಲು ಈ ಕ್ಯಾಲೆಂಡರ್ ಗಳ ಉಪಯೋಗ!! ..ಹೊಸದು ಬಂದ ತಕ್ಷಣ ಗೋಡೆ ತೂತಿಗೆ ಮೊಳೆ ಹೊಡೆದು ಅಲ್ಲಿ ತೂಗುಹಾಕಿದರೆ ಮುಗಿಯಿತು,.! ಪ್ರತೀ ವರ್ಷ ಅದೇ ಮೊಳೆಗಳಿಗೆ ಹೊಸದು ತೂಗಿಬೀಳುತ್ತಿತ್ತು.ಹಳೇದು ಹಿಂದು ಹಿಂದಕ್ಕೇ ಪ್ರತಿಷ್ಟಾಪನೆ..!.ಹಳೇದು, ಚಂದದ್ದು  ತೆಗೆದು ನಮ್ಮ ಪಠ್ಯಪುಸ್ತಕಗಳಿಗೆ ಬೈಂಡ್ ಹಾಕಿದರೆ ಆ ದೇವನಿಗೆ ದಿನಾ ನಮಸ್ಕಾರ…ಪರೀಕ್ಷೆ ಸಮಯದಲ್ಲಿ ಸ್ವಲ್ಪ ಜಾಸ್ತಿ!!.ಚಂದದ ದೇವದೇವಿಯರ ಚಿತ್ರಗಳಿಗೆ ಚೆನ್ನಾಗಿ ಕಟ್ಟು ಹಾಕಿಸಿ ದೇವರ ಕೋಣೆಯಲ್ಲೂ  ಸ್ಥಾನ ಪಡೆದದ್ದೂ ಇದೆ..! ಯಾರಾದರು ನೆಂಟರು ಬಂದಾಗ ಅವರಿಗೂ ಒಂದೊಂದು ರವಾನಿಸಿದ್ದೂ ಇದೆ.!

ಸುರಳಿ ಸುತ್ತಿದ ಕ್ಯಾಲೆಂಡರ್ ನ್ನು ಜನವರಿ 1ರಂದು ಚಪ್ಪಟೆ ಮಾಡಿ ಗೋಡೆಗೆ ತೂಗುಹಾಕುವುದಕ್ಕೇ ಸ್ವಲ್ಪ ಸರ್ಕಸ್ ಮಾಡಬೇಕಾಗುತ್ತಿತ್ತು..!. ಮನೆಯವರಿಗೆ ಉಪಯೋಗಕ್ಕೆ ದಿನಾ ತಾರೀಕು ನೋಡಲು ಬೇಕಾಗುವುದು ಸಾದಾ ಕ್ಯಾಲೆಂಡರ್. ಅದರಲ್ಲೂ ಹಲವು ವಿಧ… ದಪ್ಪ ಅಕ್ಷರದಲ್ಲಿ ಬರೆದ ತಾರೀಕು…ತಾರೀಕಿನ ಸುತ್ತಲೂ ತಿಥಿ ವಾರ ನಕ್ಷತ್ರಗಳ ವಿವರಗಳು ಜೊತೆಗೆ ಆಯಾ ದಿನಗಳ ಜಾತ್ರೆ ರಥೋತ್ಸವ ಹಬ್ಬಗಳ ಸವಿವರಗಳು.!.ಇಂಥವುಗಳು ಸದಾ ಚಾಲ್ತಿಯಲ್ಲಿ ಇರುವಂಥವು..! ಹಾಲಿನ ಲೆಕ್ಕವನ್ನು ಪಕ್ಕಾ ಮಾಡುವುದೇ ಈ ಕ್ಯಾಲೆಂಡರ್ ಗಳು ತಾನೇ..!

ಈ ದಿನಗಳಲ್ಲಿ ತರಹೇವಾರು ಕ್ಯಾಲೆಂಡರ್ ಗಳು ಕಡಿಮೆಯಾಗುತ್ತಿವೆ. !.ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಸಾದಾ ಕ್ಯಾಲೆಂಡರ್ ಗಳನ್ನು ಗ್ರಾಹಕರಿಗೆ ಉಡುಗೊರೆಯಾಗಿ ಕೊಟ್ಟರೆ ಕೆಲವು ಕಂಪೆನಿಗಳು ಗ್ರಾಹಕರ ಶ್ರೇಣಿಗನುಗುಣವಾಗಿ ವಿವಿಧ ರೀತಿಯ ಡೈರಿಗಳನ್ನು ವಿತರಿಸುತ್ತವೆ.ಅದರಲ್ಲೂ ಜಾಹೀರಾತು ಹಾವಳಿ. !!.ಇರಲಿ… ಈಗಂತೂ ಹೊಸವರ್ಷಕ್ಕೆ ಹಿಂದಿನ ಈ ಮಜಾ ಇಲ್ಲಪ್ಪ..!.ಆಚರಣೆ ಒಂದೇ ದಿನಕ್ಕೆ..!.ಡಿಸೆಂಬರ್ 31ರ ಮಧ್ಯ ರಾತ್ರಿ..! ಆಗಿಗಷ್ಟೇ ಸೀಮಿತ..!.ಮುಗಿಯಿತು ಮತ್ತೆ..!! ಸರ್ವರ ಕೈಯಲ್ಲಿರುವ ಜಂಗಮವಾಣಿಯಲ್ಲಿ ಎಲ್ಲದರ ಜೊತೆಗೆ ತಾರೀಕು ಕೂಡಾ ಸಿಗುತ್ತದಲ್ಲ…! ಮುಂದಿನ ಪೀಳಿಗೆಗೆ ಇನ್ನು ಕ್ಯಾಲೆಂಡರ್ ಅವಶ್ಯಕತೆಯೇ ಇಲ್ಲ ಅಲ್ಲವೇ..??

                     ಎಲ್ಲರಿಗೂ ಹೊಸವರುಷದ ( 2018 )  ಶುಭಾಶಯಗಳು

– ಶಂಕರಿ ಶರ್ಮ, ಪುತ್ತೂರು.

5 Responses

  1. ಸಾವಿತ್ರಿ ಭಟ್ says:

    ಈ ಲೇಖನ ಓದುವಾಗ ಮನಸ್ಸು ಬಾಲ್ಯಕ್ಕೆ ಹೋಯಿತು. ಹಳೆ ಕ್ಯಾಲೆಂಡರ್ ಗಾಗಿ ಅಣ್ಣಂದಿರೊಡನೆ ಜಗಳ ಮೊದಲಾದ ಸವಿನೆನಪುಗಳಿಂದ ಮನ ಮುದಗೊಂಡಿತು.
    ಲೇಖನ ಬಹಳ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು ಶಂಕರಿಯವರಿಗೆ.

  2. ಶಂಕರಿ ಶರ್ಮ says:

    ಧನ್ಯವಾದಗಳು ಸಾವಿತ್ರಿ ಅಕ್ಕ,

  3. ಬಲು ಮಜವಾದ ಮೆಲುಕು. ತೊಂಭತ್ತರ ದಶಕದ ನನ್ನ ಬಾಲ್ಯವೂ ಹೆಚ್ಚುಕಮ್ಮಿ ಇದೇ ರೀತಿ ಇತ್ತು. ಲೇಖನ ಓದುವಾಗ ಎಷ್ಟೋ ಕಡೆ ನನ್ನ ಬಾಲ್ಯಕ್ಕೇ ಕನ್ನಡಿ ಹಿಡಿದಂತಾಯಿತು.

  4. Shruthi Sharma says:

    ನಿಮ್ಮ ಬರಹವನ್ನೋದುತ್ತಾ ನನ್ನ ನೆನಪಿನ ಸುರುಳಿ ಹೊಸ ಕ್ಯಾಲೆಂಡರ್ ನಂತೆ ಬಿಚ್ಚಿಕೊಂಡಿತು. ಇದೇ ತೆರನಾಗಿ ಕಳೆದ ಒಂದಷ್ಟು ಹೊಸ ವರುಷಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿದ್ದೀರಿ. ಧನ್ಯವಾದಗಳು. 🙂

  5. ಶಂಕರಿ ಶರ್ಮ says:

    ಶ್ರುತಿ ಶರ್ಮಾ ಮತ್ತು ಸಿಂಧು ದೇವಿಯವರಿಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: