ಸೋಲು ಅವಮಾನವಲ್ಲ, ಅನುಭವ!
ಆ ಮಗು ಈಗ ಎಲ್ ಕೆ ಜಿ. ಬೆಂಗಳೂರಿನ “ಪ್ರತಿಷ್ಟಿತ” ಶಾಲೆಯಲ್ಲಿ ಓದು. ಮೊನ್ನೆ ಅವರಮ್ಮ ತುಂಬ ಖುಷಿಯಿಂದ ಸಂಡಿಗೆಯಂತೆ ಮುಖ ಅರಳಿಸಿಕೊಂಡು ಹೇಳುತ್ತಿದ್ದರು. “ನಮ್ಮಗ ತುಂಬಾ ಜಾಣ! ಥರ್ಟಿಫ಼ೈವ್ ಔಟ್ ಆಫ಼್ ಥರ್ಟಿಫ಼ೈವ್ ತಗೊಂಡಿದಾನೆ ಎಗ್ಸಾಮ್ಸ್ನಲ್ಲಿ, ಟೀಚರ್ ಮೀಟಿಂಗ್ ನಲ್ಲಿ ಹೊಗಳ್ತಾ ಇದ್ರು ಇವ್ನನ್ನ! ಇವ್ರಿಗೆ ಆನ್ಸರ್ ಪೇಪರ್ ತೋರ್ಸು ಪುಟ್ಟ!” ಎಂದು ಮಗನ ಬ್ಯಾಗ್ ನಿಂದ ಉತ್ತರ ಪತ್ರಿಕೆ ತೆಗೆಸಿದರು. ಆ ಮುದ್ದು ಮಗುವಿನ ಮುಖದಲ್ಲೂ ಖುಷಿ ಅರಳಿತ್ತು.
ಉತ್ತರ ಪತ್ರಿಕೆಯಲ್ಲಿ ಎಲ್ಲವೂ ಸರಿ! ಎಲ್ ಕೆ ಜಿ ಮಕ್ಕಳ ಮಟ್ಟದ ಆ ಪ್ರಶ್ನೆಗಳೆಲ್ಲವನ್ನೂ ಪೂರ್ತಿ ಸರಿ ಬರೆದ ಹುಡುಗನ ಬೆನ್ನು ತಟ್ಟಿ ಗುಡ್ ಎಂದೆ. ತಕ್ಷಣ ಅಲ್ಲಿಂದ ಹೋಗುವಂತಿರಲಿಲ್ಲವಾದ್ದರಿಂದ ಮಾತು ಮುಂದುವರಿಸುತ್ತಾ ಸುಮ್ಮನೆ ಆ ಮಗುವಿನ ಬಳಿ ಉತ್ತರ ಪತ್ರಿಕೆ ತೆರೆದು ಕೇಳಿದೆ. “ನನಗೂ ಹೇಳಿ ಕೊಡ್ತೀಯಾ ಇದೇನು ಅಂತ?”
ಅದೂ ಖುಶಿ ಖುಶಿಯಾಗಿ “ಇದು ಟಿಕ್, ಇದು ಮಾಚಿಂಗ್, ಇದು ಅದು, ಅದು ಇದು ಅನ್ನುತ್ತಾ ತೋರಿಸಿತ್ತು. “ಟಿಕ್” ನಲ್ಲಿ ಒಂದು ಚಿತ್ರ ಕೊಟ್ಟು ಅದರ ಮುಂದಿದ್ದ ಪದಗಳಲ್ಲಿ ಸರಿಯಾದ ಪದವನ್ನು ಟಿಕ್ ಮಾಡಬೇಕಿತ್ತು. “ಮಾಚಿಂಗ್” ನಲ್ಲಿ ಹೂವಿನ ಚಿತ್ರಕ್ಕೆ ಎದುರಿನ ಕಾಲಂ ನಲ್ಲಿ ಬರೆಯಲಾಗಿದ್ದ ಹೂಗಳ ಹೆಸರಿನಿಂದ ಸರಿಯಾದ ಹೆಸರನ್ನು ಹೊಂದಿಸಬೇಕಿತ್ತು.
ಸುಮ್ಮನೆ ತಾವರೆಯ ಚಿತ್ರವನ್ನು ತೋರಿಸಿ ಸುಮ್ಮನೆ ಕೇಳಿದೆ “ಇದೇನು?”
ಮಾತಾಡದೆ ಹುಡುಗ ಉತ್ತರಪತ್ರಿಕೆಯಲ್ಲಿ ಅದಾಗಲೇ ಮಾಚ್ ಮಾಡಿದ ಮುಂದಿನ ಕಾಲಂನ ‘ಲೋಟಸ್’ ಅನ್ನುವ ಪದ ತೋರಿಸಿದ.
“ಅದು ಸರಿ ಪುಟ್ಟಾ, ನನಗೆ ಓದಲು ಬರುವುದಿಲ್ಲ, ಅದರ ಹೆಸರೇನು?” ಎಂದು ಪೆದ್ದು ಮುಖ ಮಾಡಿ ಕೇಳಿದೆ.
“ಅದು ಜಾಸ್ಮಿನ್!” ಅಂದು ಬಿಡುವುದೇ!
“ಸರಿಯಾಗಿ ನೋಡು” ಅಂದೆ.
“ರೋಸ್” ಅಂದ.
ಹಾಗೇ ಎಲ್ಲ ಹೂಗಳಿಗೂ ಅದ್ಯಾವುದೋ ಹೂವಿನ ಹೆಸರನ್ನು ಹೇಳುತ್ತಿದ್ದ ಬಾಲಕನನ್ನು ನೋಡಿ ಮರುಕವಾಯಿತು. ಉತ್ತರ ಪತ್ರಿಕೆಯಲ್ಲಿ ಮಾತ್ರ ಈ ಮಗು ಎಲ್ಲಾ ಹೂಗಳಿಗೂ ಸರಿಯಾದ ಹೆಸರನ್ನು ಹೊಂದಿಸಿ ಪೂರ್ತಿ ಅಂಕ ಗಳಿಸಿತ್ತು.
ಚಿತ್ರಕ್ಕೆ ಸರಿಯಾದ ಹೆಸರನ್ನು ಉತ್ತರಪತ್ರಿಕೆಯಲ್ಲಿ ಹೊಂದಿಸಲು ಕಲಿತಿದ್ದಾನೆ, ಆದರೆ ಆ ಹೆಸರನ್ನು ಅರ್ಥ ಮಾಡಿಕೊಳ್ಳುವ ಮನಸ್ಸಿನೊಳಗಿನ ಮಾಚಿಂಗ್ ಕೆಲಸ ಇನ್ನೂ ಬಾಕಿಯಿದೆ ಅನ್ನಿಸಿತ್ತು. ಬಹುಷ: ಅಕ್ಷರಗಳನ್ನೂ ಆ ಮಗು ಚಿತ್ರ ರೂಪದಲ್ಲೇ ಪರಿಗಣಿಸುತ್ತಿತ್ತು. ಇದರಲ್ಲಿ ತಪ್ಪಿದೆಯೇ, ಇದ್ದರೆ ಅದು ಯಾರದ್ದು, ಯಾರ ನಿರ್ಲಕ್ಶ್ಯ ಇತ್ಯಾದಿ ಯೋಚಿಸಿ ತಲೆ ಹಾಳು ಮಾಡುವ ಕೆಲಸಕ್ಕೆ ಹೋಗಲಿಲ್ಲ.
ಅದ್ಯಾವ ಮಟ್ಟಿಗೆ ಪೂರ್ತಿ ಅಂಕ ಗಳಿಸುವಿಕೆಯಲ್ಲಿ ಆ ಕ್ಷಣಕ್ಕೆ ಹೆತ್ತವರು ಖುಷಿ ಪಡುತ್ತಾರೋ, ಅದರ ವಿವಿಧ ಮಜಲುಗಳು ಗಮನಕ್ಕೆ ಬರುವುದಿಲ್ಲ. ಬದುಕು ನಾವಂದುಕೊಂಡಂತೆಯೋ, ಬದುಕಿನ ಪರೀಕ್ಷೆಗಳಲ್ಲಿ ಶೈಕ್ಷಣಿಕ ಪರೀಕ್ಷೆಯಲ್ಲಿ ಅಂಕ ಗಳಿಸಿದಂತೆ ಯಶಸ್ಸನ್ನು ಪಡೆಯಲೋ ಯಾವಾಗಲೂ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹೇಳದೆ ಕೇಳದೆ ಬರುವ ತಿರುವುಗಳು, ಆಕಸ್ಮಿಕ ಸೋಲುಗಳು ಆತ್ಮವಿಶ್ವಾಸವನ್ನು ನೆಲಕಚ್ಚಿಸುವಂಥಹ ಘಟನೆಗಳು ಇವೆಲ್ಲ ಜೀವನದಲ್ಲಿ ಸಾಮಾನ್ಯ.
ನನ್ನ ಪ್ರೈಮರಿ ಶಾಲಾ ದಿನಗಳಲ್ಲಿ ಹುಡುಗಿಯೊಬ್ಬಳ ಅಪ್ಪ ಟೀಚರ ಬಳಿ “ಅಕ್ಷರ ತಪ್ಪು ಬರೆದರೆ ಒಂದಲ್ಲ ಎರಡು ಮಾರ್ಕೇ ಕಟ್ ಮಾಡಿ! ಇನ್ನು ಮೇಲೆ ಆ ತಪ್ಪು ಮಾಡಬಾರದು ಇವಳು!!” ಎನ್ನುತ್ತಿದ್ದುದು ನೆನಪಾಯ್ತು. ಹೆತ್ತವರಿಗೆ ಹೆಗ್ಗಣ ಮುದ್ದೇ ಆದರೂ ಆತನಿಗೆ ಮಗು ತಪ್ಪು ಮುಂದುವರಿಸಬಾರದೆಂಬ ಕಳಕಳಿ, ಕಾಳಜಿಯಿತ್ತಲ್ಲಿ. ತಪ್ಪಾದರೂ ಸರಿಯಾದರೂ ಅಂಕದಲ್ಲಿ ಮಾತ್ರ ಯಾವ ಕೊರತೆಯೂ ಆಗಬಾರದೆಂಬ ನಿಲುವಿರಲಿಲ್ಲ.
ಪ್ರತಿಬಾರಿಯೂ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದು ಗಳಿಸುವ ಫೀಲಿಂಗ್ ಬದುಕಿನ ಪರೀಕ್ಷೆಗಳ ಫಲಿತಾಂಶಗಳಲ್ಲಿ ಸಿಗುವುದು ವಿರಳ. ಆಗ “ಸೋಲು” ಎನ್ನುವುದರ ಸಣ್ಣ ಅನುಭವವೂ ಇಲ್ಲದೆ ಹೋದವರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಸಣ್ಣ ಪುಟ್ಟ ಗೆಲುವುಗಳನ್ನೂ ಅತಿರೇಕವಾಗಿ ಸಂಭ್ರಮಿಸಿ ತಮ್ಮ ಅಹಮಿಕೆಗೊಂದಷ್ಟು ಗೊಬ್ಬರ ಹಾಕಿ ಮಕ್ಕಳಲ್ಲೂ ಅದೇ ಜಾಯಮಾನವನ್ನು ಬೆಳೆಸುವವರಿಗೇನೂ ಕಡಿಮೆಯಿಲ್ಲ. ಆ ಮಕ್ಕಳು ಮುಂದೆ ಆಟದಲ್ಲಿ ಕೂಡಾ ಪುಟ್ಟ ಸೋಲನ್ನೂ ಸಹಿಸದೆ ವ್ಯಗ್ರ ಮುಖ ಮಾಡುವುದನ್ನು ಕಣ್ಣಾರೆ ನೋಡಿದ್ದೇನೆ. ಖಿನ್ನತೆ, ಆತಂಕಗಳು ಅಲ್ಲೇ ಮೆತ್ತಗೆ ಮೊಳಕೆಯೊಡೆದಿರುತ್ತವೆ.
ಶಾಲಾ ಪರೀಕ್ಷೆಗಳಲ್ಲಿ ಅಂಕಗಳ ಆಟದಲ್ಲಿ ಸಣ್ಣ ಸೋಲೂ ಬಾರದೇ ಇರುವಂತೆ ನೋಡಿಕೊಳ್ಳುವ ವ್ಯವಸ್ಥೆಗಳು ತಾವು ಒಂದು ದೊಡ್ಡ ಸಮೂಹ ಮಕ್ಕಳನ್ನು ಜೀವನದಲ್ಲಿ ಎಡವಿಸಿ ಮಕಾಡೆ ಮಲಗಿಸುತ್ತಿದ್ದೇವೆಂಬ ಕಿಂಚಿತ್ ಪಶ್ಚಾತ್ತಾಪವೂ ಇಲ್ಲದೆ ಸಾಗುತ್ತಿವೆ.
ಸೋಲು-ಗೆಲುವು ಎರಡೂ ಒಂದೊಂದು ರೀತಿಯ ಸಂಭವಗಳಷ್ಟೇ. ಆದುದರಿಂದ ಅವೆರಡನ್ನೂ ಯಥಾ ಸ್ಥಿತಿಯಲ್ಲಿ ಸ್ವೀಕರಿಸಿ ಮುನ್ನಡೆಯಬೇಕೆಂಬ ಮನಸ್ಥಿತಿ ಮಕ್ಕಳಲ್ಲಿ ಬೆಳೆಸದಿದ್ದರೆ ಒಂದೊಮ್ಮೆ ಹೆತ್ತವರು ಪಶ್ಚಾತ್ತಾಪಪಡುವ ಕಾಲ ಬರಲೂ ಬಹುದು. ಗೆಲುವು ಸಂತೋಷ ನೀಡುತ್ತದೆ ಹೌದು. ಆದರೆ ಸೋಲನ್ನು ಒಂದು ಅನುಭವ ಎಂದು ಪರಿಗಣಿಸಿದಲ್ಲಿ ಅದೇ ನಮ್ಮ ನಿಜವಾದ ಗೆಲುವು.
– ಶ್ರುತಿ ಶರ್ಮಾ, ಬೆಂಗಳೂರು.
Very very nice topic. Really thought provoking. I appreciate Shruti madam for this nice writing.
Thanks a lot! It’s my pleasure 🙂
Nice writing. This is the method of Teaching in Highly reputed Schools, they are concetrating just of % of marks not about Knowledge. First of Teachers should be Trained to teach practical common things.
Very true 🙂
Thank you
Nija .Nimma vicharagalu tumba prastutavagive.Anka galisuvudara jotege vishaya arthaisuvike mukhya endu navu managanabekagide.
ಧನ್ಯವಾದಗಳು 🙂
Fantastic literature. Like it.
Thank you 🙂
Please send this article for the news paper. .Very nice..actually parents are blind in getting the marks..and children will blind in their practical life..
You are right! Thanks a lot. Will definitely send to newspapers too 🙂
ಬಹಳಷ್ಟು ಜನರು ತಮ್ಮ ಮಕ್ಕಳ ವಿಧ್ಯಾಭ್ಯಾಸದ ವಿಷಯದಲ್ಲಿ ಮಾಡುವ ತಪ್ಪು ಇದು, ಎಲ್ಲರಿಗೂ ಬಹಳ ಸರಳವಾಗಿ ಅರ್ಥವಾಗುವಂತೆ ಬರೆದಿದ್ದೀರಿ, ಧನ್ಯವಾದಗಳು ನಿಮ್ಮ ಬರಹಕ್ಕೆ..
ಧನ್ಯವಾದಗಳು. 🙂
ನಿಜ.ಈಗ ಕನ್ನಡದಲ್ಲೂ ನೂರಕ್ಕೆ ನೂರು ಕೊಡ್ತಾರೆ. ನಮ್ಮ ಕಾಲದಲ್ಲಿ ಗಣಿತಕ್ಕೆ ಮಾತ್ರ ಪೂಣ೯ ಅಂಕ ಕೊಡ್ತಾ ಇದ್ದರು.
ನಾನು ಯಾವಾಗಲೂ ಕನ್ನಡದಲ್ಲಿ ಮೊದಲಿಗಳು 80ಕ್ಕಿಂತ ಮೇಲೆ ಹೋಗಿಲ್ಲ.ಆದರೆ ನೂರಕ್ಕೆ 100 ತೆಗೆದ ಮಕ್ಕಳಿಗೆ ಒಂದು ಒಳ್ಳೆ ಪ್ರಬಂಧ ಬರೆಯಲು ಬರಲ್ಲ. ನಾವು 5 ನೇ ತರಗತಿಯಲ್ಲೇ ಸ್ವಂತ ವಾಕ್ಯಗಳಲ್ಲಿ ಬರೆಯುತ್ತಿದ್ದೆವು.!
ನಿಜ. ಧನ್ಯವಾದಗಳು.
ಉತ್ತಮ ವಿಮರ್ಶೆಯನ್ನೊಳಗೊಂಡ ಲೇಖನ…ಧನ್ಯವಾದಗಳು…
ಧನ್ಯವಾದಗಳು..
ನಿಜವಾದ ಮಾತುಗಳು. ಒಳ್ಳೆಯ ಬರಹ 🙂