ಸೊಪ್ಪುಗಳ ರಾಣಿ …ಕರಿಬೇವಿನ ಸೊಪ್ಪು…!!
ಹೌದು…ನಮ್ಮ ಕರಿಬೇವಿನ ಸೊಪ್ಪು..ಎಲ್ಲಾ ಸೊಪ್ಪುಗಳ ರಾಣಿ..! ಮನೆಗಳಲ್ಲಿ ಯಾವ ಸೊಪ್ಪು ಇಲ್ಲದಿದ್ದರೂ ಸರಿ..ಘಂ ಎಂದು ಒಗ್ಗರಣೆಗೆ ಕರಿಬೇವು ಸೊಪ್ಪು ಬೇಕೇ ಬೇಕು ಅಲ್ವಾ..ಒಲೆ ಮೇಲೆ ಒಗ್ಗರೆಣೆಗಿಟ್ಟು, ಮನೆಯ ಹಿತ್ತಿಲಿನಿಂದ ತಾಜಾ ಕರಿಬೇವು ತಂದು ಅದಕ್ಕೆ ಹಾಕಿ,ಚುಂಯ್ ಎಂದು ಒಗ್ಗರಣೆ ಹಾಕಿದರೆ ಆ ದಿನದ ನಳಪಾಕ ತಯಾರಾದಂತೆ..!ಅಡಿಗೆಗೆ ಮಾತ್ರವಲ್ಲದೆ ಹೇರಳ ಪೋಷಣಾಂಶಗಳಿರುವ ಕರಿಬೇವು,ಕೂದಲ ಆರೈಕೆಯಲ್ಲಿ ಹಾಗೂ ವಿವಿಧ ಔಷಧಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ. ಈ ಎಲೆ ಸಣ್ಣಗೆ ತುಂಡು ಮಾಡಿ ಹಾಕಿದ ಬಜ್ಜಿ..ವಡೆಗಳು..ತುಂಬಾ ಪರಿಮಳ..ರುಚಿ..ರುಚಿ..!!
ಮದುವೆಯಾದಾಗ ಅಡಿಗೆ ಏನೂ ಬರದಿದ್ದರೂ ಕರಿಬೇವಿನ ಒಗ್ಗರಣೆ ಮಾತ್ರ ಬಹಳ ಮುತುವರ್ಜಿಯಿಂದ ಬೀಳುತ್ತಿತ್ತು ಮಾಡಿದ ಆ ದಮಯಂತಿ ಪಾಕಕ್ಕೆ..! ನನ್ನ ಮಟ್ಟಿಗೆ, ನನ್ನದು ಎರಡು ಮೆಟ್ಟಿಲು ಜಾಸ್ತಿಯೇ ಆದ ಪ್ರೀತಿ ಈ ಚಂದದ ಸೊಪ್ಪಿನ ಮೇಲೆ. ಎಲ್ಲರೂ ಈ ಪರಿಮಳದ ಎಲೆಯನ್ನು ಊಟದ ತಟ್ಟೆ/ಎಲೆಯ ಬದಿಗೆ ಸರಿಸಿಯೇ ಊಟ ಮುಂದುವರಿಸುವವರಾದರೆ, ನಾನಂತೂ ಈಗಲೂ ಎಲೆಯನ್ನು ಬಿಡದೇ ತಿನ್ನುವವಳು..! ಮದುವೆ ಸಮಾರಂಭಗಳಲ್ಲಿ ನನ್ನ ಊಟದ ಎಲೆಯನ್ನು ಖಾಲಿ ಮಾಡುವುದರ ಜೊತೆಗೆ, ಕರಿಬೇವನ್ನೂ ಬಿಡದೆ ಭುಂಜಿಸಿ,ಅಕ್ಕಪಕ್ಕದವರಿಗೆ..ಇವಳೆನಪ್ಪಾ..ಊಟದ ಎಲೆಯನ್ನೂ ಬಿಡೋದಿಲ್ವಾ ಹೇಗೇ..ಎಂದು ಅಂದುಕೊಂಡರೂ ಅದನ್ನೇನೂ ನಾನು ತಲೆಗೆ ಹಚ್ಚಿಕೊಳ್ಳುವವಳಲ್ಲ ಅನ್ನಿ..!
ಮದುವೆಯಾದ ಹೊಸದರಲ್ಲಿ ಎಲ್ಲರಂತೆ ನಾವು ಕೂಡಾ ಬಾಡಿಗೆ ಮನೆ ಗೃಹಸ್ಥರೇ..ನಾನಂತೂ ಆ ಮನೆಯ ಅನುಕೂಲ..ಅನಾನುಕೂಲಗಳನ್ನು ಗಮನಿಸದೆಯೇ ಮೊದಲು ನೋಡಿದ್ದು ಕರಿಬೇವಿನ ಸಸಿ ಎಲ್ಲಿದೆ ಎಂದು..! ಸರಿ..ಮುಂದೆ ನೌಕರಿ ಸಲುವಾಗಿ ನಮ್ಮ ವರ್ಗಾವಣೆಯಾದಾಗಲೆಲ್ಲಾ ನನ್ನದು ಇದೇ ಕತೆ ನೋಡಿ..! ಕೆಲವು ಕಡೆ ಟೆರೇಸ್ ಮೇಲೆ ಚಟ್ಟಿಯಲ್ಲಿ ಗಿಡ ತಂದು ನಟ್ಟು,ಬೇರೆ ಯಾವ ಗಿಡಕ್ಕೂ ಕೊಡದ ಪ್ರಾಮುಖ್ಯತೆಯನ್ನು ಅದಕ್ಕೆ ಕೊಟ್ಟು ಬೆಳೆಸಿದ್ದೇ ಬೆಳೆಸಿದ್ದು..ಆದರೆ ಅದು ಮೇಲೆ ಬಂದರೆ ತಾನೆ..?ಎಲೆ ತೆಗೆಯಲು ಮನಸ್ಸು ಬಾರದೆ,ಇದ್ದ ಎಲೆಗಳನ್ನು ಮುಟ್ಟಿ ನೋಡಿ, ಪರಿಮಳ ಹೀರಿ ಸುಮ್ಮನಾದದ್ದಿದೆ..! ಅಂಗಡಿಯಲ್ಲಿ ಸಿಗುವ ಕರಿಬೇವು ಕೆಲವೊಮ್ಮೆ ಪರಿಮಳ ಇದ್ದರೂ, ಕೆಲವು ಸ್ವಲ್ಪವೂ ಪರಿಮಳವೇ ಇರುವುದಿಲ್ಲ ಅಲ್ವಾ.? ಕರಿಬೇವಲ್ಲಿಯೂ ತರಹೇವಾರಿ..ದೊಡ್ಡ ಎಲೆ. ದಪ್ಪ ಎಲೆ,ಚಿಕ್ಕ ಎಲೆ,ತೆಳು ಎಲೆ ಇತ್ಯಾದಿ..ಇವುಗಳಲ್ಲಿ ಚಿಕ್ಕದಾದ ತೆಳು ಎಲೆಗಳು ತುಂಬಾ ಪರಿಮಳ.! ಏನೂ ಸಿಗದಾಗ ಯಾವ ತರಹದ ಕರಿಬೇವು ಸೊಪ್ಪು ಸಿಕ್ಕಿದರೂ ಅದೇ ಸರ್ವೋತ್ತಮ..!! ನನ್ನ ಮನಸ್ಸಲ್ಲಿಯೇ ಇದ್ದ ಒಂದು ದೊಡ್ಡ ಆಸೆ ಏನು ಗೊತ್ತಾ…ಸ್ವಂತ ಮನೆ..ಅದು ಹೇಗೆಯೇ ಇರಲಿ..ತೊಂದರೆ ಇಲ್ಲ..ಮನೆ ಪಕ್ಕದಲ್ಲಿಯೇ ಪರಿಮಳದ.. ತುಂಬಾ ಕರಿಬೇವು ಸೊಪ್ಪು ..!
ಸರಿ ..ನಮ್ಮದೇ ಆದ ಸ್ವಂತ ಮನೆಯೂ ಆಗುವ ಕಾಲ ಕೂಡಿಬಂತು…ಮನೆಗೆ ಬಂದೂ ಆಯ್ತು..ನಮ್ಮ ಮೊದಲನೇ ಕೆಲಸವೇ ಮನೆ ಬಳಿಯೇ ಕರಿಬೇವಿನ ಗಿಡ ನಡುವುದಾಗಿತ್ತಲ್ಲ.! ನನ್ನ ಅತ್ತೆಯವರು ಅವರ ಮಗಳ ಮನೆಯಿಂದ ಒಳ್ಳೆ ಪರಿಮಳದ ಮೂರು ಗಿಡಗಳನ್ನು ತಂದು ಮನೆ ಮುಂದೆಯೇ ಸಾಕಷ್ಟು ಅಂತರದಲ್ಲಿ ಸಾಲಾಗಿ ನೆಟ್ಟರು. ಸಸ್ಯಪ್ರಿಯರಾದ ಅವರು ಚೆನ್ನಾಗಿ ಆರೈಕೆಯನ್ನೂ ಮಾಡಿದರು. ನಾನು ನೌಕರಿಗೆ ಹೋಗುತ್ತಿದ್ದುದರಿಂದ ಅದರ ಬಗ್ಗೆ ಜಾಸ್ತಿ ಕಾಳಜಿ ವಹಿಸಲು ಸಾಧ್ಯವಾಗದಿದ್ದರೂ ಬೆಳಿಗ್ಗೆ ಮತ್ತು ಸಂಜೆ ಅವುಗಳಿಗೆ ನೀರೆರೆದು ಮುಟ್ಟಿ ಖುಷಿಪಡುವುದಷ್ಟೇನಡೆಯುತ್ತಿತ್ತು.ಅತ್ತೆಯವರು ಹೇಳಿದಂತೆ ಅದಕ್ಕೆ ಬೆಣ್ಣೆ ತೊಳೆದ ನೀರು, ಹುಳಿಮಜ್ಜಿಗೆ, ಅಕ್ಕಿ ತೊಳೆದ ನೀರು ಇತ್ಯಾದಿಗಳನ್ನು ಒಂದು ಬಿಂದೂ ಹಾಳಾಗದಂತೆ ಉಣಿಸಿದ್ದೇ ಉಣಿಸಿದ್ದು..! ಒಟ್ಟಿಗೆ ಒಳ್ಳೆ ಗಟ್ಟಿಮೊಸರು ಹಾಕಲ್ವಾ ಎಂದು ನಮ್ಮವರು ಛೇಡಿಸಿದ್ದೂ ಆಯ್ತೆನ್ನಿ..! ಸಾಮಾನ್ಯವಾಗಿ ಈ ಗಿಡಗಳು ಬದುಕುವುದು ಕಷ್ಟ ಎಂಬುವುದು ವಾಡಿಕೆ ಮಾತು. ನಮ್ಮಲ್ಲಿದ್ದ ಮೂರೂ ಗಿಡಗಳೂ ಚೆನ್ನಾಗಿ ಬೆಳೆದು ದೊಡ್ಡದಾಗುತ್ತಾ ಬಂದುವು..ಅವುಗಳನ್ನು ನೋಡುವುದೇ ಸಂಭ್ರಮ..! ಬೇಕಾದಷ್ಟು ಸೊಪ್ಪು ಕೂಡಾ ಸಿಗುತ್ತಿತ್ತು.
ಒಂದು ದಿನ ಬೆಳಗ್ಗೆ ನೋಡಿದರೆ ಆಳೆತ್ತರ ಬೆಳೆದ ಗಿಡಗಳ ಎಲೆಗಳು ಸ್ವಲ್ಪ ಉದುರಿದ್ದು ಕಾಣಿಸಿತು. ಅದರ ಬಗ್ಗೆ ಜಾಸ್ತಿ ಯೋಚಿಸಲು ಹೋಗಲಿಲ್ಲ ಅನ್ನಿ.. ಆದರೆ ಒಂದು ವಾರದೊಳಗೆ ಸಾಧಾರಣ ಎಲ್ಲಾ ಎಲೆಗಳೂ ಕೆಳಗೆ ಬಿದ್ದಿದ್ದವು..! ನನಗಂತೂ ಆಕಾಶವೇ ಕಳಚಿ ಬಿದ್ದಂತಾಯ್ತು.! ಏನು ಮಾಡುವುದೆಂದು ಗೊತ್ತಾಗಲಿಲ್ಲ..! ಅತ್ತೆಯವರೂ ಮನೆಯಲ್ಲಿರಲಿಲ್ಲ..ಅದರ ಆರೈಕೆ ಸರಿಯಾಗಿ ಆಗದೆ ಸಾಯ್ತಾ ಇದೆಯೇನೋ ಅನ್ನಿಸಿ ಬಾವಿಯಿಂದ ಸೇದಿ ( ಆಗ ಪಂಪ್ ಇರಲಿಲ್ಲ!) ಪ್ರತೀ ಗಿಡಗಳಿಗೂ 4-5 ಕೊಡ ನೀರು ಹಾಕಿದೆ..ಮರುದಿನ ಚಿಗುರಿದೆಯೋ ನೋಡಿದ್ರೆ,,ಇಲ್ಲಾ….ಪುನ: ಹಾಕಿದೆ…ಹಾಗೆಯೇ ಸಾಕಷ್ಟು ಮಜ್ಜಿಗೆಯೂ ಸುರಿದೆ..ಏನು ಮಾಡಿದರೂ ಗಿಡಗಳು ಚಿಗುರುವುದು ಕಾಣಲೇ ಇಲ್ಲ..ನಮ್ಮವರು ಅದಕ್ಕೆ ಸ್ವಲ್ಪ ಮೊಸರು ಮಾಡಿ ಹಾಕಿಬಿಡು..ಚೆನ್ನಾಗಿ ಚಿಗುರಬಹುದು ಎಂದು ತಮಾಷೆ ಮಾಡಲಾರಂಭಿಸಿದಾಗ ನಾನು ಅಳುವುದೊಂದೇ ಬಾಕಿ..! ಅಯ್ಯೋ..ನನ್ನ ಅಮೂಲ್ಯವಾದ ಗಿಡಗಳು ಸಾಯುತ್ತಿದ್ದಾವಲ್ಲಾ ಎಂಬ ಕನಿಕರವೂ ಇಲ್ಲವೇ ಎನಿಸಿತು..ದಿನಾ ಡವಗುಟ್ಟುವ ಎದೆಯೊಂದಿಗೆ ಗಿಡ ಚಿಗುರುವುದೇನೋ ಎಂದು ಆಸೆಯಿಂದ ಕಾಯುತ್ತಲೇ ಇದ್ದೆ..
ಹಾಗೇ 15 ದಿನಗಳೇ ಕಳೆದುವು..ಒಂದು ದಿನ ಬೆಳಗ್ಗೆ ನೋಡ್ತೇನೆ..ಗಿಡದ ಬುಡದಲ್ಲಿ ಅತೀ ಸಣ್ಣಗಿನ ಚಿಗುರು ಮೂಡಿ ಬಂದಿತ್ತು..!! ನನ್ನ ಮಟ್ಟಿಗೆ ಆ ದಿನ ಅತೀ ಸಂತೋಷದ ದಿನ..! ನನ್ನ ಹರ್ಷಕ್ಕೆ ಪಾರವೇ ಇಲ್ಲದಂತಾಗಿತ್ತು!.ಅಂದಿನಿಂದ ನನ್ನ ನೀರಿನ ಸಮಾರಾಧನೆ ದುಪ್ಪಟ್ಟಾಯ್ತು.! ನೀರು ಹಾಕಿದ್ದರಿಂದಲೇ ಗಿಡಗಳು ಬದುಕಿವೆ ಎಂದು ನಾನು ತಿಳಿದುಕೊಂಡಿದ್ದೆ. ದಿನ ಕಳೆದಂತೆ ಮೂರೂ ಗಿಡಗಳೂ ಹುಲುಸಾಗಿ ಚಿಗುರಿ ಹೂ ಬಿಡಲಾರಂಭಿಸಿದವು. ಆ ಮೇಲೆ ತಿಳಿಯಿತು ಚಳಿಗಾಲದಲ್ಲಿ ಕರಿಬೇವಿನ ಮರದ ಎಲೆಗಳು ಉದುರಿ ಚಿಗುರುತ್ತವೆ ಎಂದು..! ನನ್ನನ್ನು ಗಿಡಗಳು ಬೇಸ್ತು ಬೀಳಿಸಿದ್ದವು ನೋಡಿ..! ಈಗಲೂ ಪ್ರತೀವರ್ಷ ಚಳಿಗಾಲದಲ್ಲಿ ಅದರ ಎಲೆಗಳು ಉದುರಿದಾಗ ಆ ಸಂಗತಿಯನ್ನು ನೆನೆದು ನಗು ಬರುತ್ತದೆ..
ಈಗ ಮೂರೂ ಗಿಡಗಳೂ ದೊಡ್ಡ ಮರಗಳಾಗಿ ಹುಲುಸಾಗಿ ಬೆಳೆದು ಮನೆ ಮಾಡಿನ ಮೇಲೆಯೇ ಚಾಚಿ ನಿಂತಿವೆ..ಮರಗಳ ಕೆಳಗೆ ಅದರ ಪುಟ್ಟ ಗಿಡಗಳು ಸಹಸ್ರಾರು ಸಂಖ್ಯೆಗಳಲ್ಲಿ ಹುಟ್ಟಿಕೊಂಡಿವೆ.ನನ್ನ ಮನಸ್ಸಿನ ಆಸೆಯನ್ನು ಭಗವಂತ ನಿಜವಾಗಿಯೂ ಪೂರೈಸಿದ್ದಕ್ಕೆ ದಿನಾ ಅವನಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇನೆ.ಈಗ ನಮ್ಮ ಅಕ್ಕ ಪಕ್ಕ..ಸಂಬಂಧಿಗಳ ಮನೆಗಳ ಸಮಾರಂಭಗಳಿಗೆ ನಮ್ಮದೇ ಕರಿಬೇವು..! ಮನೆಗೆ ಬಂದ ಅತಿಥಿಗಳು.. ಆಹಾ..ಇದೆಷ್ಟು ಪರಿಮಳ ಎಂದು ಅವರ ಮನೆಯಲ್ಲಿ ಕರಿಬೇವು ಇದ್ದರೂ ತೆರಳುವಾಗ ಅವರ ಕೈಯಲ್ಲಿ ಒಂದು ಕಟ್ಟು ಸೊಪ್ಪು ರೆಡಿ..! ಅವರಿಗೆ ಮರೆತರೆ ನಾವೇ ,ನಿಮಗೆ ಕರಿಬೇವಿನ ಸೊಪ್ಪು ಬೇಕಾ ಎಂದು ಕೇಳಿ ಧಾರಾಳವಾಗಿ ದಾನ ಮಾಡುತ್ತೇವೆ.!
ಪರಿಮಳದ ಕರಿಬೇವಿನ ಸೊಪ್ಪು ಕೀ ಜೈ…!!!
-ಶಂಕರಿ ಶರ್ಮ, ಪುತ್ತೂರು
ನನಗೂ ಒಗ್ಗರಣೆಗೆ ಕರಿಬೇವಿನ ಸೊಪ್ಪು ಹಾಕದಿದ್ದರೆ ಅಡುಗೆ ಅಪೂರ್ಣ ಎನಿಸುತ್ತದೆ. ಬರಹ ಇಷ್ಟವಾಯಿತು.
ಆಹಾ.. ತುಂಬಾ ಇಷ್ಟವಾಯಿತು ಬರಹ. ಕರಿ ಬೇವಿನ ಘಮ ಇಲ್ಲದಿದ್ದರೆ ಅಡುಗೆ ಅಡುಗೆಯೇ ಅಲ್ಲ ಎನಿಸಿ ಬಿಡುತ್ತದೆ. ಅದರಲ್ಲೂ ನಮ್ಮ ಸ್ವಂತ ಗಿಡದ ಎಲೆಗಳ ಉಪಯೋಗ ಪರಿಮಳ ಹೆಚ್ಚು ಮಾಡುತ್ತದೆ.
ನಿಮ್ಮ ಕರಿಬೇವಿನ ಕಥೆ ಓದಿ ಕುಶಿ ಆಯ್ತು. ನಿಮ್ಮ ಕರಿಬೇವಿನ ಪ್ರೀತಿ ಯ ಜೈಕಾರಕ್ಕೆ ನನ್ನದೂ ಒಂದು ಜೈಕಾರ..
ಬರಹ ಮೆಚ್ಚಿದ ನಿಮಗೆಲ್ಲರಿಗೂ ಧನ್ಯವಾದಗಳು..
ತುಂಬಾ ಚೆನ್ನಾಗಿದೆ ಬರಹ…ಕರಿಬೇವಿನ ಒಗ್ಗರಣೆಯ ಪರಿಮಳ ನಮ್ಮಲ್ಲಿಗೂ ಬಂತು…
ಬರಹ ಮೆಚ್ಚಿದ ನಿಮಗೆ ಧನ್ಯವಾದಗಳು