ಶಬರಿ
ಯಾವುದೋ ಬೇಡರ ಹುಡುಗಿ
ಹೆಸರಿಲ್ಲದೇ ಮರೆಗೆ ಸಲ್ಲುವ
ಬದಲು
‘ಶಬರಿ’ ಎನಿಸಿ ತಪಕೆ ಹೆಸರಾಗಿ
ನಿಂತಿದ್ದು ರಾಮನ ಮಹಿಮೆಯೇ
ಶಬರಿಯದೇ
ಕನಸ ಕಂಡಿರಬಹುದೇ ಹುಡುಗಿ
ಕುದುರೆಯೇರಿ ಬರುವ ಯಾವುದೋ
ಉತ್ತರದ
ರಾಜಕುವರನದು
ಹುಡುಗಿ ಹೆಣ್ಣಾಗಿ ಹಣ್ಣಾಗಿ
ಹಪ್ಪು ಮುದುಕಿಯಾಗುವವರೆಗೂ
ಕಾದು ಕಾದು
ಪಾತ್ರ ಬದಲಿಸಿ ಹರಿದಿರಬೇಕು ನದಿ
ಕಾದ ಕಾಯುವ ಕಾವಿನಲ್ಲಿ
ಕಾಮನೆಗಳು ಕರಗಿ ನೋಡುವ ಊಡುವ
ಬಯಲ ಬಯಕೆ ಉಳಿದು
ಕಣ್ಣು ಮುಚ್ಚುವ ಮೊದಲು ಕಂಡೇನೇ
ಎಂದು ಕಣ್ಣ ಕೊನೆಯಲ್ಲೆ ಜೀವವನಿರಿಸಿ
ಕಾದಿದ್ದಕ್ಕೆ ಬಂದ ಉತ್ತರವಾಗಿ
ಅರಸುಮಗನಾಗಲ್ಲ ತಾಪಸಿಯ ವೇಷದಲ್ಲಿ
ಕೊನೆಗೂ ಬಂದ ಘನಿತ ಮೋಡ
ಎಂಥ ಮಳೆ ಬಂದಿರಬೇಕು ಆಗ!
ಯಾವ ಹಣ್ಣನ್ನು ಯಾರು ತಿಂದಿರಬೇಕು
ಕಳಿತ ನೇರಳೆಯಂಥವನಿಗೆ ನೇರಳೆಯ
ಕೊಟ್ಟಳೇ ಮುದುಕಿ
ಕಚ್ಚಿದ್ದಳಂತೆ, ಎಂಜಲು ಹಣ್ಣು ಹಿಡಿದು
ಕಾದಿದ್ದಳಂತೆ -ಆಹಾ!
(ರಾಮಫಲವನ್ನು ಸವಿದಳೇ ಕಣ್ಣಲ್ಲೇ)
ನಡುಗು ಕೈ ಮೈಗಳಲ್ಲಿ
ಏನು ಕೊಟ್ಟಳೋ ಪಡೆದಳೋ ಯಾರಿಗೆ ಗೊತ್ತು
ವಿರಹ ತಪ್ತ ರಾಮ ; ರಾಮ ತಪಿತೆ ಶಬರಿ
ಇದ್ದೀತು ಅವನಿಗದು ಎಂದಿನಂಥದೇ
ಇನ್ನೊಂದು ಹಗಲು
ಶಬರಿಗೋ ಸಂಜೆಯರಳಿ ಹಗಲು
-ಡಾ. ಗೋವಿಂದ ಹೆಗಡೆ
ಕವನದುದ್ದಕ್ಕೂ ಮಡುಗಟ್ಟಿದ ಆ ಮಹಾನ್ ಭಕ್ತೆಯ ಭಕುತಿಯ ಸಾಗರ… ಓದಿದಾಗ ತೆರೆದುಕೊಂಡ ಅನುಭೂತಿ, ಅದ್ಭುತ!
Shabri ಸ್ಟೋರಿ