ಆಚಾರವಿಲ್ಲದ ನಾಲಿಗೆ ..

Share Button

ಶ್ರುತಿ ಶರ್ಮಾ, ಬೆಂಗಳೂರು.

ಮೊನ್ನೆ ಫ಼ೇಸ್ ಬುಕ್ ತೆರೆದಾಗ ಕಾಣಸಿಕ್ಕ ಗೆಳತಿಯೊಬ್ಬಳ ಫೋಟೋಕ್ಕೆ ಲೈಕ್ ಕೊಟ್ಟು ಕಮೆಂಟಿಸಿದೆ. ಮೇಲೆ ಯಾರೋ ಒಬ್ಬಾತ ಹಾಕಿದ್ದ ಕಮೆಂಟೊಂದು ಗಮನ ಸೆಳೆಯಿತು. ಆತ “ಮನೆಯಲ್ಲಿನ ಅನ್ನವನ್ನೆಲ್ಲಾ ನೀನೇ ಖಾಲಿ ಮಾಡುತ್ತೀಯೇನೇ?” ಎಂದು ಅತ್ಯಂತ ಅನಾಗರಿಕವಾಗಿ ಬರೆದಿದ್ದ. ಈತನೂ ನನ್ನ ಪರಿಚಿತನೇ. ಕಾಲೇಜು ಸಮಯದಲ್ಲಿ ಹಾದಿಯಲ್ಲಿ ಸಿಗುವ ಒಬ್ಬರನ್ನೂ ಬಿಡದೇ ಕಾಲೆಳೆದು ಅಭ್ಯಾಸವಿದ್ದ ಈತ ಕಾಲೇಜಿನೊಳಗೆ ಬಹಳ ಪಾಪ್ಯುಲರ್ ಹುಡುಗನಾಗಿದ್ದ. ಈಗೇಕೋ ಇವನ ಕಮೆಂಟ್ ರುಚಿಸಲಿಲ್ಲ.

ಮೊದಲೇ ನೋಡಲು ಗುಂಡು ಗುಂಡಕ್ಕಿದ್ದ ಈ ಹುಡುಗಿಯನ್ನು ಯಾವಾಗಲೂ ಗೋಳುಹೊಯ್ಯುತ್ತಿದ್ದ ಒಂದಷ್ಟು ಜನರಿದ್ದರು. “ಕ್ಲಾಸಿಗೆ ಬರುವಾಗ ಮೆತ್ತಗೆ ಹೆಜ್ಜೆ ಹಾಕುತ್ತಾ ಬಾ, ಇಲ್ಲವೆಂದರೆ ಭೂಕಂಪವಾದೀತು!” ಸುನಾಮಿ ಎದ್ದೀತು!”, “ನಿನ್ನ ಶರೀರದಿಂದ ಎಷ್ಟು ಗಾಳಿ ತೆಗೆದರೆ ನನ್ನಂತಾಗುವೆಯೋ!” ಇತ್ಯಾದಿ ಕಮೆಂಟುಗಳಿಗೆ ಬರಿಯ ನಕ್ಕು ಪ್ರತಿಕ್ರಿಯಿಸುತ್ತಿದ್ದ ಆಕೆಯ ಒಳ ಹೊರಗು ನಮಗೆ ಕೆಲವು ಜನರಿಗಷ್ಟೇ ಗೊತ್ತು. ಥೈರಾಯ್ಡ್, ಪಿಸಿಓಡಿ ಸಮಸ್ಯೆಗಳಿಂದ ಬಳಲುತ್ತಿದ್ದ ಆಕೆಯ ದೇಹಭಾರ, ಮುಖದ ಮೇಲಿನ ಕೂದಲು ಆಕೆಯ ತಪ್ಪಲ್ಲ. ನೋಡುವಾಗ ದಪ್ಪನೆಯದೆನಿಸುವ ಹೊಟ್ಟೆ ಆಕೆ ಮನೆಯಲ್ಲಿನ ಅನ್ನವನ್ನು ಒಬ್ಬಳೇ ಖಾಲಿ ಮಾಡಿದುದರಿಂದಲ್ಲ. ಇವರೆಲ್ಲರ ಮಾತಿಗೆ ಬೇಸತ್ತು ಒಂದು ಕಾಲದಲ್ಲಿ ಆಹಾರ ಪ್ರಮಾಣ ವಿಪರೀತ ಕಡಿಮೆಗೊಳಿಸಿದ ಆಕೆ ಅಪಾರ ಬಳಲಿಕೆಯಿಂದಲೂ ಪೌಷ್ಟಿಕತೆಯ ಕೊರತೆಯಿಂದಲೂ ನಲುಗಿದ್ದೂ ಸತ್ಯ. ಜೊತೆಗೆ ಮಾನಸಿಕವಾಗಿ ಕುಗ್ಗಿಸುವ ಚುಚ್ಚುವ, ಅಸಹನೀಯ ವ್ಯಂಗ್ಯಗಳು ಬೇರೆ. ಪ್ರತಿಬಾರಿ ಇಂತಹ ಒಂದು ಮಾತು ಕೇಳಿದಾಗಲೂ ಇದ್ದಬದ್ದ ಆತ್ಮವಿಶ್ವಾಸ ಅದೆಲ್ಲೋ ಕಳೆದುಕೊಂಡುಬಿಡುತ್ತಿದ್ದಳಾಕೆ. ಕಷ್ಟಪಟ್ಟು ಸಾಧಿಸಿದ ಸಣ್ಣ ಪುಟ್ಟ ಸಾಧನೆಗಳೂ ಎನೂ ಅಲ್ಲವೆನಿಸಿ ಬಿಡುತ್ತಿದ್ದ ಆಕೆಯ ಮುಖ ಒಮ್ಮೆ ಕಣ್ಣೆದುರು ಬಂತು.

ಆಕೆ ಸ್ವಲ್ಪದರಲ್ಲೇ ಫೋಟೋದ ಕೆಳಗಿನ ವಿಕೃತ ಕಮೆಂಟ್ ಗೆ ಉತ್ತರಿಸಿದ್ದಳು. “#SocialMediaPsycho” ಎಂದು. ಇದೇನಪ್ಪಾ ಎಂದು ಈ ಹ್ಯಾಷ್ ಟಾಗ್ ನ ಜಾಡು ಹಿಡಿದು ಹೋದಾಗ ಸಿಕ್ಕಿದ್ದು ಮಲಯಾಳಂ ನ ಆರ್ ಜೆ ಒಬ್ಬಾಕೆಯ ಒಂದು ವಿಡಿಯೋ. ಅದರಲ್ಲಿ ಆಕೆ ತನ ತಲೆಯಲ್ಲಿದ್ದ ಟೊಪ್ಪಿಯನ್ನು ತೆರೆಯುತ್ತಾ ಮಾತಿಗಾರಂಭಿಸುತ್ತಿದ್ದಂತೆ ಒಮ್ಮೆ ಆಶ್ಚರ್ಯವಾಗುತ್ತದೆ. ಆಕೆ ತನ್ನ ಇಚ್ಚೆಯಂತೆ ತಲೆ ಪೂರ್ತಿ ಬೋಳಿಸಿ ನುಣ್ಣಗಾಗಿಸಿದ್ದಳು. ಹೊಳೆಯುವ ತನ್ನ ತಲೆಯನ್ನು ತೋರಿಸುತ್ತಾ ಆಕೆ ಹೇಳುತ್ತಾಳೆ, “ಹಾಗೆ ಸುಮ್ಮನೆ ತಲೆ ಬೋಳಿಸಬೇಕೆನಿಸಿತು, ಬೋಳಿಸಿಕೊಂಡೆ. ರಸ್ತೆಯಲ್ಲಿ ನಡೆಯುವಾಗ ವಿಧ ವಿಧದ ಕಮೆಂಟುಗಳನ್ನು ಕೇಳುತ್ತೇನೆ. “ಇದ್ಯಾವ ಪ್ರಾಣಿಯಪ್ಪಾ!”, “ಇದು ಹೆಣ್ಣೋ ಗಂಡೋ!”, ಎಂಥಾ ವಿಚಿತ್ರ ವೇಷ!” ಇತ್ಯಾದಿ. ರಸ್ತೆಯಲ್ಲಿ ನಡೆಯುವಾಗ ಆಕೆ ಎದುರಿಸಿರಬಹುದಾದ ಎರಡೆರಡು ಬಾರಿ ತಲೆಯೆತ್ತಿ ನೋಡುವ ಕುತೂಹಲಿ ಕಣ್ಣುಗಳ ಬಗ್ಗೆ ನೆನೆಸಿಕೊಂಡು ಖೇದವಾಯಿತು.

ಹೆಚ್ಚಾಗಿ ಹೆಣ್ಣು ಮಕ್ಕಳ ತಲೆ ಬೋಳಾಗುವುದು ಭಾರತದಲ್ಲಿ ಎರಡು ಕಾರಣಗಳಿಂದ, ಒಂದೆಂದರೆ ಯಾವುದೋ ದೇವಸ್ಥಾನಕ್ಕೆ ಮುಡಿ ಕೊಟ್ಟಿರುತ್ತಾರೆ, ಇಲ್ಲವೆಂದಲ್ಲಿ ಯಾವುದೋ ರೋಗದಿಂದಾಗಿರುತ್ತದೆ. ಇಂಥಹವರ ಫೋಟೋ ಸಿಕ್ಕರೆ “ಇವರಿಗಾಗಿ ಒಂದು ಲೈಕ್ ಒತ್ತಿದರೆ ನೂರು ಪ್ರಾರ್ಥನೆಗೆ ಸಮ, ಒಂದು ಷೇರ್ 1000 ರುಪಾಯಿಯನ್ನು ಕೊಡುತ್ತದೆ” ಇತ್ಯಾದಿ ಫೋಟೋದ ಕೆಳಗೆ ಬರೆದು ಫ಼ೇಸ್ ಬುಕ್ ನಲ್ಲಿ ಪ್ರಸಾರ ಮಾಡುವ ವಿಕೃತ ಪೇಜ್ ಗಳೂ ಇವೆ, ಅದನ್ನು ಷೇರ್ ಮಾಡುವ ಭೂಪರು ಇಂದೂ ಇದ್ದಾರೆ!

ಇದನ್ನು ನೋಡುವ ಆ ವ್ಯಕ್ತಿಯ ಮನಸ್ಸೆಷ್ಟು ಕುಸಿಯಬಹುದು! ತಮಗೆ ಬೇಕೋ ಬೇಡವೋ, ಒಂದಷ್ಟು ವಿಕೃತ ವಿಷಯಗಳನ್ನು ಅಲ್ಲಿಂದಿಲ್ಲಿಗೆ ಸೋಷಿಯಲ್ ಮೀಡಿಯಾದಲ್ಲಿ ಪಸರಿಸುತ್ತಾ ಹೋಗುವ ವ್ಯಕ್ತಿಗಳಿದ್ದಾರೆ. ಅದು ನಿಜವೋ ಸುಳ್ಳೋ ಎಂದು ತಲೆಯೇ ಕೆಡಿಸಿಕೊಳ್ಳದ ಈ ವರ್ಗ ಸುಖಾಸುಮ್ಮನೆ ತಮ್ಮ ತಮ್ಮ ಅಭಿರುಚಿಯ ಮಟ್ಟವನ್ನು ಅಭಿವ್ಯಕ್ತಿಪಡಿಸುತ್ತಾ ಸಾಗುತ್ತದೆ.

ಇತರರ ಶರೀರದ ಆಕಾರದ ಮೇಲೆ, ಮೈಬಣ್ಣದ ಮೇಲೆ, ಕೂದಲಿನ ಬಗ್ಗೆಯಿರಲಿ, ರೂಪದ ಮೇಲೆ ವಿಕೃತವಾಗಿ ಮಾತಾಡುವುದು ಕೆಲವು ದೇಶಗಳಲ್ಲಿ ಈಗಾಗಲೇ “ಅಪರಾಧ” ಎಂದು ಪರಿಗಣಿಸಲ್ಪಟ್ಟಿದ್ದು ಇದಕ್ಕೆ ತಕ್ಕ ಶಿಕ್ಷೆಯೂ ಇದೆ. ಈ ಅಪರಾಧದ ಹೆಸರು “Body Shaming”, ಕನ್ನಡದಲ್ಲಿ ಹೇಳಬೇಕೆಂದರೆ “ಆಕಾರ ನಿಂದನೆ”.

ಇತರರ ರೂಪ, ಬಣ್ಣ, ಭಾರ, ದಪ್ಪ ಇತ್ಯಾದಿಗಳನ್ನು ಟೀಕಿಸಿದಾಗ ಮನುಷ್ಯನ ಮನಸ್ಸಿನೊಳಗಾಗುವ ಸಂತೋಷ ಬರಿಯ ಅಪರಾಧವಲ್ಲ, ಅದೊಂದು ಮಾನಸಿಕ ಅಸೌಖ್ಯವೆಂದೂ ಪರಿಗಣಿಸಿದಲ್ಲಿ ಖಂಡಿತಾ ತಪ್ಪಿಲ್ಲ. ತಮ್ಮ ದೌರ್ಬಲ್ಯಗಳಿಂದಾಗಿ ಒಳಗೊಳಗೆ ಕೊರಗುತ್ತಾ, ಇತರರಲ್ಲಿ ಕೆಲವು ಕಣ್ಣಿಗೆ ಕಾಣಸಿಗುವ ವಿಷಯಗಳನ್ನು ಹುಡುಕಿ ಹಿಡಿದು ಅದು ಅವರ ದೌರ್ಬಲ್ಯವೆಂದು ತಿಳಿದು ತೃಪ್ತಿಪಟ್ಟುಕೊಳ್ಳುವುದಿದೆಯಲ್ಲಾ, ಅದು ಬಹಳ ಅಪಾಯಕಾರಿ.

“ಆಕೆ ದಪ್ಪಗಾಗಿದ್ದಾಳೆ! ಯಾಕಾದರೂ ಆ ಉಡುಪು ತೊಟ್ಟಿದ್ದಾಳೋ!, ಅಸಹ್ಯವಾಗಿ ಕಾಣುತ್ತಾಳೆ!, ಈ ವಯಸ್ಸಿನಲ್ಲಿ ಈ ಉಡುಪು ಆಕೆ ಧರಿಸಬಾರದಿತ್ತು” ಈ ಮಟ್ಟದ ಟೀಕೆಗಳನ್ನು ಬೆನ್ನ ಹಿಂದೆ ಆಡಿಕೊಳ್ಳುವವರು ಈ ಕಾಲದಲ್ಲೂ ಅದೆಷ್ಟೋ ಮಂದಿ ಇದ್ದಾರೆ. ಮೊತ್ತಮೊದಲಾಗಿ ಉಡುಗೆ ತೊಡುಗೆ ಅವರವರ ಇಚ್ಚೆ, ಅದು ಸಾಂದರ್ಭಿಕವಾಗಿದ್ದರೆ ಚೆನ್ನ ಎಂಬ ಮೂಲಭೂತ ಸತ್ಯವನ್ನು ಮನಗಾಣುವಷ್ಟು ಮಾನಸಿಕ ಬೆಳವಣಿಗೆ ಇವರಲ್ಲಿರುವುದಿಲ್ಲ. ಅದಿಲ್ಲದ ಮೇಲೆ, ಅವರು ಅದನ್ನು ಮೊದಲು ತಮಗೋಸ್ಕರ ಧರಿಸಿರುತ್ತಾರೆಯೇ ಹೊರತು, ಇತರರನ್ನು ಮೆಚ್ಚಿಸಲೋಸ್ಕರ ಅಲ್ಲವೇ ಅಲ್ಲ ಎಂಬುದನ್ನೂ ಮನಗಾಣುವುದೆಲ್ಲಿಂದ ಬಂತು. ಈ ತರಹದ ಟೀಕೆಗಳು ಹೆಚ್ಚಾಗಿ ಹೆಣ್ಣು ಮಕ್ಕಳನ್ನೇ ಬಾಧಿಸುವುದೂ ಸತ್ಯ.

ಇದೆಲ್ಲವನ್ನು ನೋಡುತ್ತಾ, ಕೇಳುತ್ತಾ ಎಲ್ಲದರ ಮಧ್ಯೆ ಮುಂದಿನ ಪೀಳಿಗೆಯ ಬೆಳವಣಿಗೆ ಆಗುತ್ತಿದೆ. ವಿದ್ಯಾಭ್ಯಾಸ, ಸಂಸ್ಕಾರ, ದೇಶ-ಕಾನೂನುಗಳೊಂದಿಗೆ ಬದಲಾಗುತ್ತಿದೆ. ಮುಂದೊಂದು ದಿನ ಆಕಾರ ನಿಂದಕರು ತಮ್ಮ ಮಕ್ಕಳಿಂದಲೇ ಜರಿಯಲ್ಪಡಬಾರದೆಂದೇನಿಲ್ಲ. ಅದೆಷ್ಟೋ ಮಂದಿ ಇಂದಿನ ಪೀಳಿಗೆ ಕುಲಗೆಟ್ಟು ಹೋಗಿದ್ದಾರೆಂದು ಹೇಳುತ್ತಿದ್ದರೆ, ಇನ್ನೊಂದೆಡೆ ಎಲ್ಲಾ ಪೀಳಿಗೆಗಳಲ್ಲೂ ಮನೆಮಾಡಿರುವ ವಿಕಾರಗಳು ಕಣ್ಣಿಗೆ ರಾಚುತ್ತವೆ. ಹಲವು ಇಂತಹ ಸಮಸ್ಯೆಗಳಿಗೆ ಪೂರ್ಣವಿರಾಮ ಹಾಕಲು ನಾಳೆಗೆ ಕಾಯಬೇಕಾಗಿಲ್ಲ. ಅದು ಇಂದಿನಿಂದಲೇ, ಪ್ರತಿ ವ್ಯಕ್ತಿಯ ಒಳಗಿನಿಂದಲೇ ಪ್ರಾರಂಭವಾಗಬೇಕು.

ಇದನ್ನೆಲ್ಲಾ ನೋಡಿದಾಗ ಪುರಂದರದಾಸರು ಹಾಡಿದ “ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ|| ವಿಚಾರವಿಲ್ಲದೆ ಪರರ ದೂಷಿಪುದಕ್ಕೆ ಚಾಚಿಕೊಂಡಿರುವಂಥ ನಾಲಿಗೆ||” – ಈ ಪದವು ಅತ್ಯಂತ ತಾತ್ವಿಕ ಮರ್ಮವನ್ನು ಹೊಂದಿದ್ದು, ಸರ್ವಕಾಲಕ್ಕೂ ಸತ್ಯವೆನಿಸುವುದು.
.

– ಶ್ರುತಿ ಶರ್ಮಾ, ಬೆಂಗಳೂರು.

6 Responses

  1. Ramyashri Bhat says:

    Body shaming ವಿಷಯದ ಬಗ್ಗೆ ಒಳ್ಳೆಯ ರೀತಿಯಲ್ಲಿ ಬರೆದಿದ್ದೀರಿ. ಪ್ರಪಂಚ ಎಷ್ಟೇ ಆಧುನಿಕವಾಗಿ ಮುಂದುವರಿದರೂ, ಜನರು ಪರ ಜನರ ಬಗ್ಗೆ ಟೀಕಿಸಿ ಮಾತನಾಡುವುದು ಕಾಣಲು ಬೇಸರವಾಗುತ್ತದೆ.

  2. Dr.Harshitha says:

    ಅರ್ಥಪೂರ್ಣ ಬರಹ..ಅಭಿನಂದನೆಗಳು..

  3. Srinivas says:

    ಎಷ್ಟು ಹೇಳಿದರೂ, ಕೆಲವರು ಬದಲಾಗುವುದಿಲ್ಲ. ಅವರ ಮಾನಸಿಕ ಸ್ಥಿತಿ ಹಾಗಿರುತ್ತದೆ. ಅಂತಹವರು ಸಂಸ್ಕಾರ ಇಲ್ಲದೆ ಮತಿಹೀನರಾಗಿರುತ್ತಾರೆ. ಲೇಖನ ಅಂತಹವರನ್ನು ಹೊಡೆದೆಬ್ಬಿಸುವಂತಿದೆ. ಪುರಂದರದಾಸರ ಹಾಡಿನ ಹೋಲಿಕೆ ಲೇಖನಕ್ಕೆ ಅಥ೯ ಗಭಿ೯ತವಾಗಿದೆ.

  4. ನಮ್ಮೂರಲ್ಲಿ ಕೇವಲ ವ್ಯಂಗ್ಯವಾಗಿ ಮಾತನಾಡುವವರು ಕಾಣಸಿಕ್ಕರೆ ಉತ್ತರಭಾರತದ ಕಡೆ ಹೋದಂತೆಲ್ಲ ಅಸಭ್ಯವಾಗಿ ಸ್ತ್ರೀಯನ್ನು ಭೋಗದ ವಸ್ತುವಂತೆ ಮಾತ್ರ ನೋಡುವವರನ್ನು (ಆ ಮಾತುಗಳೂ ಬಹಳವಾಗಿ ಕುಗ್ಗಿಸುತ್ತವೆ, ಕೋಪತರುತ್ತವೆ), ಕೊಳಕು ಮಾತಾಡುವವರನ್ನು ಕಾಣಬಹುದು. ದೇಶದ ಹೊರಗಡೆ ಇದರ ತೀವ್ರತೆ ಇನ್ನೂ ಹೆಚ್ಚು. ಆದರೆ ಯಾರೂ ಆ ಬಗ್ಗೆ ಹೇಳಿಕೊಳ್ಳುವುದು ಅಪರೂಪ, ಅಷ್ಟೇ. (ಲಿಂಗ ಸಂಬಂಧೀ ವಿಕಾರ ಭಾವನೆಗಳೂ ಆಕಾರನಿಂದನೆಯೆಂದೇ ನನ್ನ ಅನಿಸಿಕೆ.) ಪ್ರತಿಭಟನೆ ಮುಂದೊಂದು ದಿನ ಫಲಕೊಡಬಹುದು.

  5. ಗಂಗಾಧರ says:

    ಬಲು ಬೇಸರ..

  6. Samatha.R says:

    ಮಾರ್ಮಿಕ ಲೇಖನ..ನಿಜ ಕೆಲವರಿಗೆ ಆಡಿ ಕೊಳ್ಳುವುದು ಒಂದು ರೋಗ.ಯಾವುದೇ ವ್ಯಕ್ತಿಯ ರೂಪ, ಆಕಾರ,ಬಣ್ಣ,ವರ್ತನೆ,ಉಡುಪು ಇದು ಆ ವ್ಯಕ್ತಿಯ ವೈಯಕ್ತಿಕ ವಿಷಯ,ನಿಂದನೆ ಮಾಡಲು ಯಾರಿಗೂ ಯಾವುದೇ ಹಕ್ಕಿಲ್ಲ,ಕೆಲವು ಬಾರಿ ತಾವು ಆಡುವ ಮಾತುಗಳು ಹೇಳಿಸಿ ಕೊಂಡ ವರಮನಸ್ಸಿಗೆ ಎಂತಹ ನೋವು ಉಂಟು ಮಾಡಬಹುದು ಅನ್ನುವುದರ ಪರಿವೆಯೇ ಇಲ್ಲದೆ ಆಡಿ ಬಿಡುತ್ತಾರೆ,ಕೇಳಿಸಿಕೊಂಡವರು ಗಟ್ಟಿ ಮನಸ್ಸಿನವರಾದರೆ ಸರಿ, ಸೂಕ್ಷ್ಮ ಮನಸ್ಸಿನವರಾದರೆ ಅನುಭವಿಸುವ ನೋವಿನ ಪರಿವೆ ಈ ನಿಂದಿಸಿದವರಿಗೆ ಎಂದೂ ಗೊತ್ತಾಗದು.”ನಗೆ ಕೊಲ್ಲು ವಂತೆ ಹಗೆ ಕೊಲ್ಲದು”ಅನ್ನುವ ಮಾತೇ ಇದೆ.ಇನ್ನೊಬ್ಬರಿಗೆ ನೋವು ಕೊಡದಂತೆ ಬದುಕುವುದು ನೈತಿಕತೆಯ ಉನ್ನತ ಮಟ್ಟ,ಎಲ್ಲರೂ ಅದನ್ನು ಪಾಲಿಸಿದರೆ ಎಷ್ಟು ಚೆನ್ನ…ಉತ್ತಮ ಬರಹ…ಮನ ಮುಟ್ಟಿತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: