ಓ ಎಮ್ಮೆ! ಕಾಪಾಡೆನ್ನನು
ನನಗೆ ಪ್ರತಿದಿನವೂ ಮಧ್ಯಾಹ್ನ ನನ್ನ ಮಗಳ ಮನೆಗೆ ಹೋಗುವ ಅಭ್ಯಾಸ. ಹೋಗಿಬರಲು ಸ್ಕೂಟರ್ ಅಥವಾ ಕಾರನ್ನು ಬಳಸುತ್ತೇನೆ. ಕೆಲವೊಮ್ಮೆ ಬಸ್ಸಿನ ಮೂಲಕವೂ ಪ್ರಯಾಣಿಸುತ್ತೇನೆ. ಈ ಘಟನೆಯು ಸಂಭವಿಸಿ ಬಹುಶ: ತಿಂಗಳೊಂದು ಕಳೆದಿರಬೇಕು .. ಆ ದಿನ ಬಸ್ಸಿನಲ್ಲಿ ಹಿಂದುರಿಗಿ ಬರುತ್ತಿದ್ದೆ . ಪ್ರಧಾನ ಮಾರ್ಗವು ಮನೆಯಿಂದ 5 ನಿಮಿಷದ ಕಾಲುನಡಿಗೆಯ ದೂರದಲ್ಲಿದೆ .. ಅಲ್ಲೇ ಪಕ್ಕದಲ್ಲಿ ಬಸ್ಸಿನ ತಂಗುದಾಣವಿದೆ .ಆದರೆ ಆ ತಂಗುದಾಣವನ್ನು ತಲುಪಲು ”ಮಾರ್ಗೋಲ್ಲಂಘನ”ವೆಂಬ ಘನಕಾರ್ಯವು ಜರಗಬೇಕು .
ಸಾಯಂಕಾಲದ ಸಮಯದಲ್ಲಿ ಆ ಮಾರ್ಗದಲ್ಲಿರುವ ಜನಸಂದಣಿ , ನುಗ್ಗುವ ವಾಹನಗಳ ವೇಗವೋ ವರ್ಣನಾತೀತ . ಪುಣೆ ವಿದ್ಯಾಪೀಠದಿಂದ ಪೌಡ್ ರೋಡ್ ಡಿಪೋದ ತನಕ, ಐದು ಕಿಲೋಮೀಟರು ದೂರದ ಆ ವ್ಯಾಪ್ತಿಯಲ್ಲಿ ಎಲ್ಲಿಯೂ ಚತುಷ್ಪಥ ಮಾರ್ಗವಿಲ್ಲ . ಆದ್ಧರಿ೦ದ ಜಲಪ್ರವಾಹದಂತೆ ಮಾರ್ಗದ ಎರಡೂ ಪಾರ್ಶ್ವಗಳಲ್ಲಿ ಎಲ್ಲಾತರದ ವಾಹನಗಳು ರಭಸದಿಂದ ಚಲಿಸುವುದನ್ನು ನೋಡಿದರೆ , ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದ ಹೊರಡುವ ಹೊಗೆಯೇ ಆವರಿಸಿದಂತೆ ತೋರುತ್ತದೆ . ಹೆಚ್ಚಾಗಿ ಎರಡೂ, ಮೂರೋ ನಿಮಿಷಗಳ ಕಾಲಾವಕಾಶದಲ್ಲಿ ಅಡ್ಡದಾಟಲು ಸಾಧ್ಯವಾಗುವ ದಿನಗಳಿದ್ದವು . ಇಂದು ಅದು ಕೂಡಾಸಾಧ್ಯವಾಗದೆ ಹೋಯಿತು . ಅನೇಕ ಸಲ ಬಹಳ ಪ್ರಯತ್ನದಿಂದ ನಾಕುಹೆಜ್ಜೆಗಳಷ್ಟು ಮುನ್ನುಗ್ಗಿ ಭೀತಿಯಿಂದ ಮತ್ತೆ ಹಿ೦ದೆ ಸರಿದಿದ್ದೆ . ಆ ಪ್ರಯತ್ನದಲ್ಲಿ ಹತ್ತುನಿಮಿಷಗಳಿಗಿಂತಲೂ ಹೆಚ್ಚಿನ ಸಮಯ ಆಗಲೇ ಕಳೆದಿತ್ತು . ಎಲ್ಲಿ ಇದ್ದೆನೋ ಇನ್ನೂ ಅಲ್ಲೇ ಉಳಿದಿದ್ದೆ .
ಆಗ ಹಿಂದಿನಿಂದ ಬಂದ ದಢೂತಿ ಎಮ್ಮೆಯೊಂದು ನನ್ನ ದೃಷ್ಟಿಗೆ ಬಿತ್ತು . ಬಾಲಕನೊಬ್ಬ ಅದರ ಕೊರಳಿಗೆ ಬಿಗಿದ ಹಗ್ಗವನ್ನು ಹಿಡಿದುಕೊಂಡಿದ್ದ. ಅವನನ್ನು ನೋಡಿದ ಕೂಡಲೇ ನನಗೊಂದು ಉಪಾಯ ಹೊಳೆಯಿತು . ಉಪಾಯ ಕಂಡುಕೊಂಡೆ , ಉಪಾಯ ಕಂಡುಕೊಂಡೆ ಎನ್ನುತ್ತಾ (ಆರ್ಕಿಮಿಡಿಸನು ಯುರೇಕಾ , ಯುರೇಕಾ ಎಂದ೦ತೆ) ಮನದಲ್ಲೇ ನನ್ನ ಬೆನ್ನನ್ನು ನಾನೇ ತಟ್ಟಿಕೊಳ್ಳುತ್ತಾ , ಆ ಹುಡುಗನನ್ನು ಕೇಳಿದೆ ”ಈ ಎಮ್ಮೆಯ ಹಗ್ಗಹಿಡಿದುಕೊಂಡು ನನ್ನೊಂದಿಗೆ ಮಾರ್ಗದ ಆಚೆ ಬದಿಗೆ ಬರುವೆಯಾ ?”
ಏನೊಂದೂ ಅರ್ಥವಾಗದಿದ್ದರೂ ”ಯಾವ ಮಹಾಕಾರ್ಯವನ್ನು ಮಾಡದೆ ಹಣವಂತೂ ಸಿಗುತ್ತದೆ” ಎಂದು ಯೋಚಿಸಿದ ಆ ಬಾಲಕ ನನ್ನ ಪ್ರಸ್ತಾಪವನ್ನು ಅಂಗೀಕರಿಸಿದ .
ಮಾರ್ಗದಲ್ಲಿರುವ ವಾಹನಗಳ ನೂಕುನುಗ್ಗಲಿಗೂ ಎಮ್ಮೆಗೂ ಏನೇನೂ ಸಂಬ೦ಧವಿಲ್ಲದ೦ತೆ ಅದು ಹೊರಡುವುದು ಕಂಡು ಬಂತು . ಬಹಳಷ್ಟು ವಾಹನಗಳು ಚಲಿಸುತ್ತಿದ್ದರೂ ಎಮ್ಮೆಯು ತಾನು ಅವುಗಳಿಗೆ ಅಡ್ಡಲಾಗಿ ಚಲಿಸತೊಡಗಿತು . ಅದರ ನೇತೃತ್ವದಲ್ಲಿ ನಾನೂ ಮುಂದಡಿಯಿಟ್ಟೆ . ಕೆಲವು ವಾಹನಚಾಲಕರು ಕೋಪದಿಂದ ನನ್ನನ್ನು ನೋಡಿ ಗೊಣಗುತ್ತಿರುವಂತೆಯೇ ನಾನು ಎಮ್ಮೆಯ ಸಹಾಯದಿಂದ ಸುಖವಾಗಿ ಮಾರ್ಗದ ಮತ್ತೊಂದು ಬದಿಯನ್ನು ತಲುಪಿದೆ . ಮಾರ್ಗದ ಇನ್ನೊಂದು ಬದಿಗೆ ತಲುಪಿದ ನಾನು ಬಾಲಕನಿಗೆ ಐದು ರೂಪಾಯಿಗಳನ್ನು ಕೊಡುತ್ತಾ ಧನ್ಯವಾದಗಳನ್ನು ತಿಳಿಸಿದೆ . ಇಲ್ಲಿ ಮಾರ್ಗದ ಇನ್ನೊಂದು ಬದಿಯನ್ನು (ನಾನು ಹೊರಟ ಬದಿ) ತಲುಪಲು ನಾಲ್ಕು ಜನ ವೃದ್ದರು ನನ್ನಂತೆ ”ಉತ್ತಮ” ಸಮಯಕ್ಕಾಗಿ ಕಾಯುತ್ತಿದ್ದರು . ನಾನು ಮಾರ್ಗದ ಆ ಬದಿಯಿಂದ ಈ ಬದಿಗೆ ಸುಖವಾಗಿ ತಲುಪಿದ್ದನ್ನು ನೋಡಿದ ಅವರು ಬಾಲಕನಿಗೆ ಹಣಕೊಟ್ಟು ಆ ಬದಿಗೆ ಹೊರಡಲು ತಯಾರಾದರು . ಬಾಲಕನು ಅದಕ್ಕೆ ಸಮ್ಮತಿಸಿ ಎಮ್ಮೆಯನ್ನು ಜತೆಗೂಡಿಸಿ ನನ್ನನು ಕರೆತಂದ ಬದಿಗೆ ಹಿಂದಿರುಗಿದ .
ಇದೆಲ್ಲವನ್ನೂ ನೋಡುತ್ತಾ ನಾನು ಬಸ್ ತಂಗುದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದೆ . ಆ ಸಮಯದಲ್ಲಿ ಪುನಃ ಮತ್ತಿಬ್ಬರು ಎಮ್ಮೆಯ ಸಹಾಯದಿಂದ ಮಾರ್ಗವನ್ನು ಅಡ್ಡದಾಟಿದರು . ಎಮ್ಮೆಯ ಸಹಾಯ ಪಡೆದು ದಾಟಿದವರು ಖುಷಿಯಲ್ಲಿರುವಂತೆ ಭಾಸವಾಗುತ್ತಿತ್ತು . ವೇಗವಾದ ವಾಹನಗಳನ್ನು ಕ್ರಮಿಸಿ ಹೋಗಲು ಎಮ್ಮೆಯ ಸಹಾಯ ಪಡೆಯುವುದು ಉತ್ಕೃಷ್ಟವಾದ ಉಪಾಯವಾಗಿ ಪರಿಣಮಿಸಿತು . ಆ ಬಾಲಕನು ದೂರದಿಂದ ನನ್ನನ್ನು ನೋಡಿ , ನನ್ನತ್ತ ಕೈಬೀಸುತಿದ್ದನು . ಬಹುಶ: ಆತ ನನಗೆ ಧನ್ಯವಾದಗಳನ್ನು ತಿಳಿಸುತ್ತಿದ್ದಿರಬೇಕು ;, ನಾನೂ ಕೈ ಬೀಸಿದೆ . ನನಗೆ ಬೇಕಾದ ಬಸ್ ಬಂದು , ನಾನು ಅಲ್ಲಿಂದ ಹೊರಟೆ . ಈ ಘಟನೆಯ ನಂತರ ನಾನು ಸ್ಕೂಟರ್ ಇಲ್ಲವೇ ಕಾರಿನಲ್ಲಿ ಹೋಗುತ್ತಿದ್ದೆ . ತಿಂಗಳ ತನಕ ನಾನು ಬಸ್ ತಂಗುದಾಣದ ಹತ್ತಿರ ಕೂಡಾ ಸುಳಿಯಲಿಲ್ಲ .
ಪುನಃ ಮತ್ತೊಮ್ಮೆ ಆಕಸ್ಮಿಕವಾಗಿ ಆ ರಸ್ತೆಯಲ್ಲಿ ಹೋಗಬೇಕಾಗಿ ಬಂತು . ಸ್ವಲ್ಪ ನಡೆದು ನಾನು ಮುಖ್ಯಮಾರ್ಗವನ್ನು ತಲುಪಿದೆ . ಅಲ್ಲಿಯೋ ಅದೇ ನೂಕುನುಗ್ಗಲು . ಅವ್ಯವಸ್ಥೆಯಿಂದಲೇ ಮಾರ್ಗದ ಎರಡೂ ಬದಿಯಲ್ಲಿ ಓಡಾಡುವ ದ್ವಿಚಕ್ರ ,ಚತುಶ್ಚಕ್ರ ವಾಹನಗಳ ಸಂಚಾರ ಭೀಕರವಾಗಿತ್ತು .ಆದುದರಿಂದ ಮಾರ್ಗವನ್ನು ಅಡ್ಡದಾಟಲು ಜನರು ‘ಉತ್ತಮ ‘ ಸಮಯಕ್ಕಾಗಿ ಕಾಯುತ್ತಿದ್ದರು . ಯಾಕೆ ಈ ರೀತಿಯಾಗುತ್ತಿದೆ ಎಂದು ಯೋಚಿಸುತ್ತಿರುವಾಗಲೇ ನನ್ನ ದೃಷ್ಟಿಗೆ ಬಿದ್ದ, ಆ ಎಮ್ಮೆ ಹಿಡಿದುಕೊಂಡಿರುವ ಬಾಲಕ . ನನ್ನನ್ನು ನೋಡಿ ಕೈಬೀಸಿ ಬಾಲಕನೆಂದ – ”ನಡೆಯಿರಿ ಚಿಕ್ಕಪ್ಪ! ನಿಮ್ಮನ್ನು ರಸ್ತೆಯ ಆ ಬದಿಗೆ ಶುಲ್ಕರಹಿತವಾಗಿ ಬಿಟ್ಟು ಬರುತ್ತೇನೆ .”
ತಿಂಗಳ ಹಿಂದೆ ಸಂಭವಿಸಿದ ಘಟನೆ ನನ್ನ ಸ್ಮೃತಿ ಪಟಲದಲ್ಲಿ ಇನ್ನೂ ಹಸಿಯಾಗಿಯೇ ಇತ್ತು .” ಆ ದಿನ ಮಾರ್ಗವನ್ನು ಕ್ರಮಿಸಲು ಸಹಾಯ ಮಾಡಿದ್ದಕ್ಕಾಗಿ ನೀವು ನನಗೆ ಐದು ರೂಪಾಯಿಗಳನ್ನು ಕೊಟ್ಟಿದ್ದೀರಲ್ಲವೇ?”ಎಂದು ಹೇಳಿದ ಬಾಲಕ ನನ್ನನ್ನು ಅಲ್ಲಿಯೇ ಇರಲು ಹೇಳಿ ಪುಷ್ಪಗುಚ್ಛವೊ೦ದನ್ನು ಖರೀದಿಸಿ ತಂದ . ನನಗೆ ನಮಸ್ಕರಿಸಿ ,ಅದನ್ನು ಕೊಟ್ಟು ” ಹೊರಡೋಣ ಸ್ವಾಮೀ ” ಎ೦ದ . ಒಂದು ತಿಂಗಳಲ್ಲೇ ಆ ಎಮ್ಮೆಯು ನೂಕುನುಗ್ಗಲಿನಲ್ಲಿ ನಿರ್ಭಯವಾಗಿ ಮಾರ್ಗವನ್ನು ಅಡ್ಡ ದಾಟುವುದನ್ನು ಕರಗತ ಮಾಡಿಕೊಂಡಿತ್ತು .ಈ ಮಧ್ಯದಲ್ಲಿ ನಾನು ಮತ್ತು ಹುಡುಗ ಸಂಭಾಷಣೆಗೆ ತೊಡಗಿಸಿಕೊಂಡೆವು .
”ಯಾಕಾಗಿ ? ” ಎಂದು ನಾನು ಮರು ಪ್ರಶ್ನೆಯನ್ನೆಸೆಯಲು ಅವನು ಈ ರೀತಿ ನುಡಿದ -”ನೀವೇ, ನನ್ನ ಈ ಕಾರ್ಯಕ್ಕೆ ಮಾರ್ಗದರ್ಶಕರು .ಸಾಯಂಕಾಲ ಎಮ್ಮೆಯನ್ನು ಇಲ್ಲಿಗೆ ತಂದು , ಜನರಿಗೆ ಮಾರ್ಗವನ್ನು ಅಡ್ಡದಾಟಲು ಸಹಾಯ ಮಾಡುತ್ತೇನೆ . ಈಗ ಹತ್ತು ದಿನಗಳಿಂದ ಎಂಟು ಎಮ್ಮೆಗಳನ್ನು ಈ ಕೆಲಸಕ್ಕಾಗಿ ನಿಯೋಜಿಸಿದ್ದೇನೆ . ಮನೆಮಂದಿಯೆಲ್ಲ ಎರಡೋ , ಮೂರೋ ಘಂಟೆಗಳ ಕಾಲ ಇಲ್ಲೇ ಇರುತ್ತೇವೆ . ಪ್ರತಿ ಎಮ್ಮೆಯೂ ಪ್ರತಿದಿನವೂ ಹತ್ತಿರ ಹತ್ತಿರ ನೂರು ರೂಪಾಯಿಗಳಷ್ಟು ಕಮಾಯಿಸುತ್ತದೆ. (ಸಂಪಾದಿಸುತ್ತದೆ ). ಈ ಹೊತ್ತಿನಲ್ಲಿ ಎಮ್ಮೆಗಳಿಗೆ ಬೇರೇನೂ ಕಾರ್ಯಗಳಿರುವುದಿಲ್ಲ. ಹಿಂಡಿ ತಿ೦ದ ನಂತರ ಅವುಗಳಿಗೆ ಇದರಿಂದಲಾಗಿ ಕೈಕಾಲಾಡಿಸಿದಂತಾಗುತ್ತದೆ . ಅವುಗಳಿ೦ದ ದೊರೆಯುವ ಹಾಲಿನ ಪ್ರಮಾಣವೂ ಜಾಸ್ತಿಯಾದಂತಿದೆ . ” ಎಂದ ಸಂತಸದಿಂದ
”ನೂಕುನುಗ್ಗಲು ಕಡಿಮೆ ಇದ್ದ ಪಕ್ಷದಲ್ಲಿ ಕೂಡಾ ವಿಚಿತ್ರವಾಗಿ ಚಲಿಸುವ ವಾಹನಗಳಿಂದಾಗಿ ಜನರು ಎಮ್ಮೆಯ ಸಹಾಯವನ್ನೇ ಯಾಚಿಸುತ್ತಾರೆ . ನೂಕುನುಗ್ಗಲು ತೀರಾ ಕಡಿಮೆಯೆಂದು ಕಂಡರೆ ನಾನೇ ಇತ್ತ ಬರುವುದಿಲ್ಲ .” ಎಂದ ಹುಡುಗ.
”ಬಹಳ ಒಳ್ಳೆ ಕೆಲಸ ” ಎಂದು ನಾನು ಮೆಚ್ಚುಗೆ ವ್ಯಕ್ತಪಡಿಸಿದೆ. ಆ ಹೊತ್ತಿಗಾಗಲೇ ನಾವು ಮಾರ್ಗದ ಇನ್ನೊಂದು ಬದಿಯನ್ನು ತಲುಪಿದ್ದೆವು . ಈ ಬದಿಯಲ್ಲೂ ಎಮ್ಮೆಯ ”ಸಹಾಯಹಸ್ತಕ್ಕಾಗಿ” ಕೆಲವರು ಕಾಯುತ್ತಿದ್ದರು. ”ಈ ಮಹಾಶಯರೇ ನನ್ನನ್ನು ಈ ಕಾರ್ಯಕ್ಕೆ ಪ್ರೇರೇಪಿಸಿದವರು ” ಎಂದು ಹುಡುಗ ಬಹಳ ಗೌರವದಿಂದ ನನ್ನನ್ನು ಅವರಿಗೆ ಪರಿಚಯಿಸಿದ. ಅದನ್ನು ಕೇಳಿ ಸಂತಸದಿಂದ ನಾನು ದೇವರಿಗೆ ಮನಸಿಲಿನಲ್ಲೇ ವಂದಿಸಿದೆ . ಆ ಬಾಲಕನನ್ನು ಹೋಗಗೊಟ್ಟು ಆ ವೃದ್ದರು ನನ್ನೊಡನೆ ಮಾತಿಗಿಳಿದರು …
”ಈ ತರದ ಯೋಜನೆಯು ನಮ್ಮಂತಹವರಿಗೆ ವರದಾನವಾಗಿದೆ ” ಎಂದು ಎರಡನೆಯವರು ತನ್ನ ಸರದಿಯನ್ನು ಮುಗಿಸಿದರು.
.
ಕನ್ನಡಕ್ಕೆ ಅನುವಾದ : ಭಾಗ್ಯಲಕ್ಷ್ಮಿ, ಮೈಸೂರು
.
ಕಥೆ ಸ್ವಾರಸ್ಯಕ್ರರವಾಗಿದೆ, ಅನುವಾದ ಚೆನ್ನಾಗಿದೆ.
ಧನ್ಯವಾದಗಳು
ಪಾದಚಾರಿಗಳ ಪಾಡನ್ನು ಭಗವಂತನೇ ಬಲ್ಲ
ಅಂದರೆ ಆ ಬಾಲಕ, ಭಗವಂತನು ಅಲ್ಲಿಗೆ ಕಳುಹಿಸಿದ ಸಹಾಯಕ ಅನ್ನೋಣವೇ ? . ಧನ್ಯವಾದಗಳು
ಎಮ್ಮೆಗೂ ಒಂದು ವೃತ್ತಿ ಮತ್ತೆ ಸಂಭಾವನೆ super
ನಿಮ್ಮ ಯೋಚನೆ ಚೆನ್ನಾಗಿದೆ . ಎಮ್ಮೆಯ ಬಗ್ಗೆ ಗೌರವ ತಂದು ಕೊಟ್ಟ someಭಾವನೆ ಅನ್ನಲೂ ಅಡ್ಡಿಯಿಲ್ಲ . ಧನ್ಯವಾದಗಳು
Wonderful writing! 🙂
ಧನ್ಯವಾದಗಳು
ಇದನ್ನೋದಿದ ಮೇಲೆ ಮೂಲ ಸಂಸ್ಕೃತ ದ ಲೇಖನ ಓದಬೇಕಾಗಿಲ್ಲ . . .
ಧನ್ಯವಾದಗಳು . ಲೇಖನವನ್ನು ಮೆಚ್ಚಿ ಬರೆದ ನಿಮ್ಮ ಪ್ರಶಂಸೆಗೆ ಆಭಾರಿಯಾಗಿದ್ದೇನೆ .
ಹಾ ಹ್ಹಾ! ಲೇಖಕರ ಸಮಯ ಸ್ಫೂರ್ತಿ ಮೆಚ್ಚುವಂತದ್ದು. ರಸ್ತೆ ದಾಟಲು ಹೊಸ ಟ್ರಾಫಿಕ್ಕು ಪೋಲೀಸನೊಬ್ಬನ್ನು ಅನ್ವೇಷಣೆ ಮಾಡಿದ್ದು, ಆ ಮೂಲಕ ಮಹಿಷಾಧಿಪನಿಗೆ ಹೊಸ ಆದಾಯಮೂಲ ಹುಡುಕಿಸಿಕೊಟ್ಟದ್ದು ವಿಶೇಷ ಸಾಧನೆಯೇ! ಪಾದಚಾರಿಗಳಿಗೆ ಕಿರಿಕಿರಿ ಮಾಡುವ ವಾಹನಸವಾರರಿಗೆ ಪೆಚ್ಚಾಗಿರಬಹುದಲ್ಲ!
ಮುಂದೊಂದು ದಿನ ಈ ಪದ್ಧತಿ ಎಲ್ಲೆಡೆ ಕಾಣಸಿಕ್ಕರೆ ಆಶ್ಚರ್ಯ ಇಲ್ಲಬಿಡಿ!
ಅನುವಾದ ಹಾಗೂ ನಿಮ್ಮ ಹಾಸ್ಯಪ್ರಜ್ಞೆ ಎರಡೂ ಇಷ್ಟವಾಯಿತು. ಮೂಲ ಲೇಖಕರು ಯಾರು? ಬರಹ ಓದಲು ಸಿಗಬಹುದೇ? ಧನ್ಯವಾದಗಳು.
ಧನ್ಯವಾದಗಳು . ದಯವಿಟ್ಟು ಲೇಖನವನ್ನು ಇನ್ನೊಮ್ಮೆ ಗಮನಿಸಿ . ನೀವು ಕೇಳಿದ ವಿವರಗಳು ಲೇಖನದ ಕೆಳಭಾಗದಲ್ಲಿ ದಾಖಲಿಸಿಯೇ ಇದೆ . ೨೦೧೭ ನೇ ಇಸವಿಯ ನವಂಬರ್ ತಿಂಗಳ ಪತ್ರಿಕೆಯಿಂದ . ”ಅಯಿ ಮಹಿಷಿ ! ತಾರಯ ಮಾಮ್ ” ಅನ್ನುವ ತಲೆಬರಹದಲ್ಲಿ ಇದೆ .