ಮಳೆಗೆ ಮುನ್ನ…
ಭೂಮಿ ಮೋಡಗಳ ನಡುವೆ
ಮಳೆ ಇಳಿವ ಮಾತುಕತೆ
ಗಿಡ ಮರ ಸಸಿ ಕಾಂಡಗಳಲ್ಲಿ
ಕ್ಷಣಕ್ಷಣದ ಕಾತರತೆ
ಧಾನ್ಯ ಜೋಪಾನಿಸುವ
ಧ್ಯಾನದ ಇರುವೆಗಳ ಸಾಲು
ಜಿನುಗಲಿಹ ಜಲ ನಿರೀಕ್ಷೆಯ
ನೆಲದೊಳಗಿನ ಆಳ ಬೇರು
ನವಿಲ ನರ್ತನಕ್ಕೆ ಹೆಡೆ
ಬಿರಿದ ಸರ್ಪ ಜಾಗರ ಗಮನ
ಕಪ್ಪೆ ಕುಪ್ಪಳಿಸಿ ತಪ್ಪಿ
ಸಿಕೊಳ್ಳುವ ಜಾರು ಜಾಣತನ
ಗೂಡು ಸೇರುವ ತವಕಗಳ
ಅಸೀಮ ಜೀವ ಜಾತ್ರೆ
ಸಂಭ್ರಮದ ನೆಲ ಗಗನದಲ್ಲಿ
ಸಾಗಿರುವ ಅಭಯ ಯಾತ್ರೆ
ಉರಿವ ಸೂರ್ಯನ ದೂಡಿ
ಮೇಘ ಸರಪಳಿ ದಾಳಿ
ಭುವಿಯ ಬೆಳಕ ಆವರಿಸಿದ
ಕತ್ತಲೆಯ ಕಪ್ಪು ಮೋಡಿ
ಗಾಳಿ ಬೀಸಿಗೆ ನಭದಲ್ಲಿ
ಮುಗಿಲ ಮುತ್ತಾಲಿಂಗನ
ನಗೆ ಚಪ್ಪಾಳೆ ಗುಡುಗು
ಮಿಂಚು ಕ್ಷಣ ವಿಲಕ್ಷಣ
ಏನ ನೆನೆಯಿತು ಪ್ರಕೃತಿ
ಏನ ಬಯಸಿ ಕನಸಿತು
ಏನ ಕೇಳಿತು ಭೂಮಿ
ಏನ ಕಂಡಿತು ಹಾಡಿತು
ಸಿಂಚನದಾಲಾಪದೊಡನೆ
ಧುಮ್ಮಿಕ್ಕುವ ಮೇಘಮಲ್ಹಾರ
ದ ಮುನ್ನ ಮೈ ಮೀಟಿ
ಶೃತಿಯಾಗಲಿರುವಳೀ ಇಳೆ
ತಂಪು ಕಾಡಿನ ತುಂಬು
ಹಸಿ ಹಸಿರು ಚಾಚುವತ್ತ
ಹಕ್ಕಿ ಪಿಕ್ಕಿ ಹುಳು ಹುಪ್ಪಟಗಳ
ಜೀವ ಅರಳುವತ್ತ
ಜ್ವಲಿಸಿದ ರವಿ ಮರೆಯಾಗಿ
ಘನ ಕಪ್ಪು ಹನಿಸುವ ಬೆರಗು
ಬೆವರು ಮಳೆ ಚಕ್ರದಲಿ ಜೀವ
ಜತನವಾಗುವ ಹುರುಪು
– ಅನಂತ ರಮೇಶ್
ಮಳೆಗೆ ಇಳೆಯ ಕಾತುರದ ಕ್ಷಣದ ವರ್ಣನೆ ರಮ್ಯ .. ಪದ್ಯ ಸುಂದರ..
ಮೆಚ್ಚುಗೆಗೆ ಧನ್ಯವಾದಗಳು.
ವಾವ್…. ಅನಂತ ಉದ್ದೀಪನ….
ಮೆಚ್ಚುಗೆಗೆ ಧನ್ಯವಾದಗಳು.