ಚೂಡಿ ಪೂಜೆ

Share Button
ಶ್ರಾವಣ ಮಾಸ, ಮಾಸಗಳಲ್ಲೇ ಶ್ರೇಷ್ಠ,ಜೊತೆಗೆ ಅಬಾಲ ವೃಧ್ದರಾದಿಯಾಗಿ ಎಲ್ಲರೂ ಖುಷಿ ಪಡುವ ಕಾಲ.ಇದನ್ನು ಹಬ್ಬಗಳ ತೇರು ಹೊರಡುವ ಕಾಲ ಅನ್ನಲೂ ಬಹುದು.ಸಾಲು ಸಾಲು ಹಬ್ಬಗಳ ಆಚರಣೆ. ದೇಗುಲಗಳೂ ಅಲಂಕೃತವಾಗಿ ಜಗಮಗಿಸುತ್ತವೆ.ನನಗರಿವಿರುವಂತೆ ಈ ಮಾಸವೇ ಸಾರಸ್ವತ ಮಹಿಳೆಯರಿಗೆ ಬಲು ಸಂಭ್ರಮ ಹಾಗೂ  ಪವಿತ್ರ ಕಾಲ.ಏಕೆಂದರೆ ಈ ಮಾಸದಲ್ಲಿ ಸಾರಸ್ವತ ಮಹಿಳೆಯರು ಆಚರಿಸುವ ವಿಶಿಷ್ಟ  ಸರಳ ಸುಂದರ ಆಚರಣೆಯೇ “ಚೂಡಿ ಪೂಜೆ“. ಇದನ್ನು ಶ್ರಾವಣ ಮಾಸದ ಭಾನುವಾರ ಹಾಗು ಶುಕ್ರವಾರದಂದು ಆಚರಿಸುತ್ತಾರೆ.
.
ಈ ಚೂಡಿ ಕಟ್ಟುವಲ್ಲಿ ಗರಿಕೆ,ಮಿಠಾಯಿ ಹೂವು,ರತ್ನಗಂಧಿ,ಮೀಸೆ ಹೂವು,ತೇರಿನಹೂವು,ಶಂಕಪುಷ್ಪದಂತಹ ಸಣ್ಣ ಬಿಡಿ ಹೂವುಗಳು ,ಪಚ್ಚೆ ಕದರು ,ಕೆಲವು ಪತ್ರೆಗಳು ತುಂಬಾ ಮಹತ್ವವಾದವು.ಚೂಡಿಯನ್ನು ಅಚ್ಚುಕಟ್ಟಾಗಿ ಹಾಗು ಸುಂದರವಾಗಿ ಕಟ್ಟುವುದೂ ಒಂದು ಕಲೆ ,ಆಸಕ್ತಿ.ಮೇಲೆ ಹೇಳಿದ ಹೂಗಳೊಂದಿಗೆ ತಲಾ 5 ಗರಿಕೆ ಗಳನ್ನು ಸೇರಸಿ ಸಣ್ಣ ಸಣ್ಣ ಪುಷ್ಪ ಗುಚ್ಛ  ಕಟ್ಟುತ್ತಾರೆ. ಹಾಗೆ ಕಟ್ಟಿದ ಆ ಗುಚ್ಛಗಳೇ ಚೂಡಿ ಎನಿಸಿಕೊಳ್ಳುತ್ತದೆ.ಈ ಚೂಡಿಗಳನ್ನು ಒಂದು ಹರಿವಾಣದಲ್ಲಿಟ್ಟು ಜೊತೆಗೆ ದೀಪ,ವೀಳ್ಯದೆಲೆ ಪಟ್ಟಿ,ಅರಿಶಿಣ,ಕುಂಕುಮ, ಗಂಧಾಕ್ಷತೆ,ಕಲಶ ಸಹಿತ ತುಳಸಿ ಮಾತೆಯ ಪೂಜೆ ಮಾಡಲಾಗುತ್ತದೆ. ನೈವೇದ್ಯಕ್ಕೆ ಗೋಧಿ ಕಡಿ,ಹೊದ್ಲು,ಅಥವಾ ಯಥಾನುಶಕ್ತಿ ಪ್ರಸಾದ ಮಾಡುವುದು ವಾಡಿಕೆ.ಪೂಜೆ,ನೈವೇದ್ಯದ ಬಳಿಕ ಒಂದು ಚೂಡಿಯನ್ನು ವೀಳ್ಯದೆಲೆ ಪಟ್ಟಿ ಸಹಿತ ತುಳಸಿ ಮಾತೆಗೆ ಹರಿದ್ರಾಕುಂಕುಮ ಅಕ್ಷತೆ ಸಹಿತ ಅರ್ಪಿಸಿ ಸೂರ್ಯ ದೇವರಿಗೂ ತುಳಸಿ ಮಾತೆಗೂ ಪ್ರದಕ್ಷಿಣೆ ಹಾಕಿ ನಮಸ್ಕರಿಸುವರು.ನಂತರ ಮತ್ತೊಂದು ವೀಳ್ಯದೆಲೆ ಪಟ್ಟಿ ಸಹಿತ ಚೂಡಿಯನ್ನು ಮನೆ ಮಾಡಿನ ಮೇಲಿಟ್ಟು ಅಗಲಿದ ಹಿರಿಯರಿಗೆ ಸಮರ್ಪಿಸುವರು. ನಂತರ ಹೊಸ್ತಿಲು,ದೇವರಿಗೂ ಹೀಗೆ ಅರ್ಪಿಸಿ ಸಾಧ್ಯವಾದಷ್ಟು ಮುತೈದೆಯರೊಂದಿಗೆ ಪೂಜಿಸಿದ ಚೂಡಿಗಳನ್ನು ,ಪ್ರಸಾದದೊಂದಿಗೆ ವಿನಿಮಯ ಮಾಡಿಕೊಂಡು ಆಶೀರ್ವಾದ ಪಡೆದುಕೊಳ್ಳುವುದು ವಾಡಿಕೆ.

ಇದರಲ್ಲಿ ಗಂಡಸರ ಪಾತ್ರ ಕಡಿಮೆ .ಕಾಲಾನುಕ್ರಮದಲ್ಲಿ ಪೇಟೆಗಳಲ್ತೂ ಅದರ ಸಾಹಿತ್ಯಗಳೆಲ್ಲ ಸಿಗುವುದು ಕಷ್ಟ.ಅದರೂ ಆಚರಣೆ ಮಾಡುವ ಆಸ್ಥೆ,ದೈವಿ ಭಕ್ತಿ ಹಾಗೇ ಉಳಿದಿರುವುದು ಸಂತಸ ಹಾಗೂ ಹೆಮ್ಮೆ.ಮಕ್ಕಳಿಗೂ ಖುಷಿ ಕಾರಣ ವಾರಕ್ಕೆರಡು ಪ್ರಸಾದ ಲಾಭ.ಹೆಂಗಳೆಯರೂ ವಸ್ತ್ರ,ಆಭರಣಗಳ ಧರಿಸಿ ಮುದಗೊಳ್ಳುವ ಸಮಯ.ನನಗೆ ತಿಳಿದಂತೆ ಈ ಅಪರೂಪ ಹಾಗೂ ವೈಶಿಷ್ಟ್ಯ ಪೂರ್ಣ ಪದ್ದತಿಯು ಸಾರಸ್ವತರ ಹೆಮ್ಮೆಯ ಸಂಸ್ಕೃತಿಯೂ ಹೌದು.

.

– ಲತಾ ವಿಶ್ವನಾಥ್ , ಸಾಗರ

5 Responses

  1. Jayaram Kh says:

    ಚೆನ್ನಾಗಿದೆ, ಸಾರಸ್ವತರ ಆಚರಣೆಗಳ ಬಗ್ಗೆ ಬರೆಯುತ್ತಾ ಹೋಗಿ; ನಂತರ ಅದು ಆ ಸಮುದಾಯಕ್ಕೆ ಒಂದು ಒಳ್ಳೆಯ ಪುಸ್ತಕವಾಗುತ್ತದೆ.

  2. Hema says:

    ಸಂಸ್ಕೃತಿಯ ಪರಿಚಯ,ಆಚರಣೆ ಸೊಗಸಾಗಿದೆ

  3. Pallavi Bhat says:

    ನೆರೆಹೊರೆಯ ಮನೆಗಳಲ್ಲಿ ನೋಡಿದ್ದೆ ಚೂಡಿ ಪೂಜೆಯನ್ನು. ಪೂರ್ಣ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು. 🙂

  4. Nagaraja T Manasatte says:

    ಹಿಂದು ಸಂಪ್ರದಾಯದ ಸಾರಸ್ವತರ ವಿಶಿಷ್ಠವಾದ ಆಚರಣೆಯ ಸಂಬೃಮದ ಪರಿಚಯ ಅಮೂಲ್ಯವಾಗಿತು

  5. Shankari Sharma says:

    ಚೂಡಿಪೂಜೆಯ ವಿವರ ತಿಳಿದು ಖುಶಿಯಾಯ್ತು..!

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: