ಕೋಗಿಲೆ
ಬಂತು ನನ್ನ ಕೋಗಿಲೆ, ಮನದ ಮೌನದೂರಿಗೆ…
ಸದಾ ತಲೆಯದೂಗಬೇಕು, ಅದರ ಶೈಲಿಗೆ.
ತಂತು ಜೀವ ಒಮ್ಮೆಲೆ, ನನ್ನ ಹೃದಯದಾಡಿಗೆ…
ನನ್ನ ನಾನೇ ಮರೆಯಬೇಕು, ಅದರ ಪ್ರೀತಿಗೆ.
ಬಂತು ನನ್ನ ಕೋಗಿಲೆ, ಮನದ ಮೌನದೂರಿಗೆ…
ನನಗೆ ಈಗ ವರ್ಷ ಪೂರ್ತಿ ವಸಂತವೇ…ವಸಂತವು…
ಹೊಸತು ಚಿಗುರು, ಮನವು ನವಿರು, ನೂತನ.. ನಿತ್ಯವು.
ನಿನ್ನ ಮುದ್ದು ಸಾಲು ಸಾಲೆ ನನಗೆ ಜೋಗುಳ,
ಕಳೆದು ಬಿಡುವೆ ನನ್ನ ಜನ್ಮ ಅದುವೆ ನಿಚ್ಚಳ.
ಎಷ್ಟು ರಾಗ ಹಾಡಬಲ್ಲೆ ಹಾಡು ಕೋಗಿಲೆ,
ಅಷ್ಟು ನನಗೆ ಅಚ್ಚು ಮೆಚ್ಚು ನಿನ್ನಿಂದಲೇ…
ಬಂತು ನನ್ನ ಕೋಗಿಲೆ, ಮನದ ಮೌನದೂರಿಗೆ…
ನಿನ್ನ ರೂಪ ನೋಡಿ ಜರಿವರೆಲ್ಲ, ಕುರುಡರು…
ಮನದ ಮುಖ್ಯಪ್ರಾಣವನ್ನು ಅರಿಯದೇ, ಹೋದರು.
ಬರಿದೆ ಕಣ್ಣಿಗಲ್ಲ ನಿನ್ನ ಮನದ ಹೋಳಿಗೆ…
ತಂದ ಪ್ರೀತಿಯಿಂದ ಭರ್ತಿಯಾಯ್ತು ನನ್ನ ಜೋಳಿಗೆ.
ಹಾಡಿಕೊಂಡೆ ಇದ್ದು ಬಿಡು, ನೀನು ನಿನ್ನ ಪಾಡಿಗೆ,
ತಲುಪಲಿದೆ ನಿನ್ನ ಹಾಡು ನನ್ನ ಎದೆಯಗೂಡಿಗೆ.
ಬಂತು ನನ್ನ ಕೋಗಿಲೆ, ಮನದ ಮೌನದೂರಿಗೆ…
ಸದಾ ತಲೆಯದೂಗಬೇಕು, ಅದರ ಶೈಲಿಗೆ.
-ಶರತ್ ಪಿ.ಕೆ. ಹಾಸನ
Super