ದುಂಡು ಮಲ್ಲಿಗೆಯ ನರುಗಂಪು…
ಮೈಸೂರಿನ ಬೀದಿಗಳಲ್ಲಿ ಅಡ್ಡಾಡುವಾಗ ಕಣ್ಸೆಳೆಯುವುದು ಪುಟ್ಟ ಬಿದಿರ ಬುಟ್ಟಿಗಳಲ್ಲಿ ತೆಪ್ಪಗೆ ತನ್ನ ಪಾಡಿಗೆ ತಾನು ಕಂಪನ್ನರಳಿಸುತ್ತ ತಣ್ಣಗೆ ಬಾಳೆಲೆಯ ಮೇಲೆ ಮಲಗಿದ ಮುದ್ದು ಮಲ್ಲಿಗೆಯ ಮಾಲೆಗಳು, ಮೇಲೊಂದಿಷ್ಟು ನೀರ ಹನಿಗಳ ತಂಪು!ಹೌದು! ಮೈಸೂರ ಮಲ್ಲಿಗೆಯ ಗಂಧ ಅವರ್ಣನೀಯ. ಅದರ ಮೆರುಗಿಗೆ ಮಾರುಹೋಗದವರು ಇಲ್ಲವೆಂದೇ ಹೇಳಬಹುದು, ಸಂಜೆಯಾಗುತ್ತಿದ್ದಂತೆ ಶುಭ್ರತೆಯ ಪ್ರತೀಕವೆಂಬಂತೆ ಬೆಳ್ಳನೆ ದುಂಡಾಗಿ ಅರಳಿ ನಿಂತರೆ ರಾತ್ರಿಯುದ್ದಕ್ಕೂ ಮರುಳಾಗಿಸುವ ಘಮ-ಘಮ! ಎಂತಹ ಧೂಳುಮಯವಾದ, ವಾಹನಗಳ ಹೊಗೆ ತುಂಬಿದ ಬೀದಿ ಬದಿಯಲ್ಲೂ ಮಲ್ಲಿಗೆ ಬುಟ್ಟಿ ಮಡುಗಿದ್ದರೆ ಸುತ್ತ ಒಂದಷ್ಟು ವಿಸ್ತೀರ್ಣಕ್ಕೆ ಯಾವ ಗಬ್ಬು ನಾತವೂ ತಟ್ಟದು. ಅಚ್ಚುಕಟ್ಟಾಗಿ ದಾರವನ್ನು ತಬ್ಬಿದ ಮಲ್ಲಿಗೆಯ ಜೊತೆಗೆ ಮಧ್ಯ ಒಂದೊಂದು ಕನಕಾಂಬರವನ್ನೂ ಜೋಡಿಸಿದ್ದರೆ ಮಾಲೆಯ ಅಲಂಕಾರ ಪರಿಪೂರ್ಣವೆಂಬಂತೆ. ಅದರ ಪ್ರಭಾವ ಎಂತಹವರ ಮುಖದಲ್ಲೂ ಒಮ್ಮೆ ಮೃದುಭಾವವನ್ನು ತರಿಸುವುದು ಸುಳ್ಳಲ್ಲ.
ಕವಿ ದಿ|| ಕೆ. ಎಸ್. ನರಸಿಂಹಸ್ವಾಮಿಯವರು 1942 ರಲ್ಲಿ “ಮೈಸೂರು ಮಲ್ಲಿಗೆ” ಎಂಬ ಕವನಗಳ ಸಾಲನ್ನು ಸೃಷ್ಟಿಸಿದ್ದು, ಮೈಸೂರು ಮಲ್ಲಿಗೆಯ ಕಂಪಿನಿಂದ ಪ್ರಭಾವಿತರಾಗಿ ಅವರು ಆ ಹಾಡುಗಳನ್ನು ಬರೆದಿದ್ದಾರೆ ಎನ್ನುತ್ತವೆ ಕೆಲವು ಮೂಲಗಳು. ಜೊತೆಗೆ, ಇದರ ಹಾಡಿನ ಸಾಲುಗಳಿಗೆ ಮಲ್ಲಿಗೆಯ ಘಮದ ಹೋಲಿಕೆಯೂ ಮಾಡಬಹುದು. ಅಷ್ಟು ಸುಂದರ, ಅರ್ಥಪೂರ್ಣ! ಇದರ ಕ್ಯಾಸಟ್ ಗಳು ಒಂದು ಕಾಲದಲ್ಲಿ ಕನ್ನಡ ನಾಡಿನಲ್ಲಿ ಸಾರ್ವತ್ರಿಕವಾಗಿ, ಮದುವೆಯಾದ ಹೊಸ ಜೋಡಿಗಳಿಗೆ ಉಡುಗೊರೆಯಾಗಿ ಕೊಡಲಾಗುತ್ತಿತ್ತು, ಜೊತೆಗೆ ಅದು ಬೇರೆಲ್ಲ ಬಗೆಯ ಉಡುಗೊರೆಗಳಿಗಿಂತ ವಿಶೇಷವಾಗಿ ಭಾವಿಸಲಾಗುತ್ತಿತ್ತು! ಹೀಗೇ ಆ ಹಾಡುಗಳ ಸರಣಿ ಮೂವತ್ತೆರಡಕ್ಕೂ ಹೆಚ್ಚು ಪುನರ್ಮುದ್ರಣಗಳನ್ನು ಕಂಡಿದೆ. ಇಂದಿಗೂ “ಮೈಸೂರು ಮಲ್ಲಿಗೆ”ಯ ಹಾಡುಗಳು ಕನ್ನಡಿಗರಿಗೆ ಪ್ರಿಯ. ಕನ್ನಡದ ಅತ್ತ್ಯುತ್ತಮ ಸಾಹಿತ್ಯಿಕ ಸೃಷ್ಟಿಯಾಗಿ ಆ ಕವನಗಳನ್ನು ಪರಿಗಣಿಸಲಾಗಿದ್ದು ಮುಂದೆ ಅದೇ ಹೆಸರಿನಲ್ಲಿ ಟಿ. ಎಸ್. ನಾಗಾಭರಣರ ನಿರ್ದೇಶನದ ಚಲನಚಿತ್ರವು ಬಿಡುಗಡೆಯಾಗಿದ್ದು ವಿಶೇಷ.
ಮಲ್ಲಿಗೆಯು ಕಂಪು ಸೂಸುವುದರ ಜೊತೆಗೆ, ಪೂಜೆಗಳಲ್ಲಿ ದೇವರ ಮುಡಿಗೇರುವುದರೊಂದಿಗೆ, ಹೆಣ್ಣುಮಕ್ಕಳ ಜಡೆಯನ್ನಲಂಕರಿಸುವುದರ ಜೊತೆ, ಹಲವರ ಬದುಕಿನಲ್ಲೂ ನಗೆಯರಳಿಸುವ ಒಂದು ಉದ್ಯಮ. ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅನೇಕರ ಜೀವನೋಪಾಯವೂ ಆಗಿದೆ ಮಲ್ಲಿಗೆಯ ಬೆಳೆ. ಎರಡರಿಂದ ಮೂರು ಮೀಟರ್ ಉದ್ದ ಬೆಳೆಯುವ ಇದರ ಗಿಡಗಳು ಮೈಸೂರಿನ ಮಣ್ಣು, ಹವೆಗೆ ವರ್ಷದುದ್ದಕ್ಕೂ ಶುಭ್ರ ಬಣ್ಣದ, ದುಂಡಾದ ಮಲ್ಲಿಗೆಯರಳಿಸುತ್ತವೆ. ಏಪ್ರಿಲ್ ಹಾಗೂ ಮೇ ತಿಂಗಳಿನ ಮೈಸೂರ ಬೆಚ್ಚನೆಯ ಒಣ ಹವೆಗೆ ಬೆಳೆಯು ಅಧಿಕ. ಇದರಲ್ಲಿನ ಎಣ್ಣೆಯ ಪ್ರಮಾಣವೂ ಅಧಿಕವಾಗಿದ್ದು ಸುಗಂಧ ದ್ರವ್ಯಗಳ ತಯಾರಿಯಲ್ಲೂ ಧಾರಾಳವಾಗಿ ಬಳಕೆಯಾಗುತ್ತವೆ, ಆಯುರ್ವೇದದ ಸುಗಂಧ ಚಿಕಿತ್ಸೆಯಲ್ಲೂ ಒಳಗೊಂಡಿರುವ ಮೈಸೂರು ಮಲ್ಲಿಗೆಯು ಅಧಿಕ ಎಣ್ಣೆಯ ಅಂಶ ಹೊಂದಿದ್ದು ಒಣ ಚರ್ಮದಿಂದಾಗಿ ತೊಂದರೆಗೊಳಗಾಗುತ್ತಿರುವವರ ಚಿಕಿತ್ಸೆಗೂ ಉಪಯೋಗವಾಗುತ್ತದೆ. ಸುಗಂಧಗಳಿಗೆ ಹೆಸರುವಾಸಿಯಾದ ಮೈಸೂರಿನಲ್ಲಿ ಮಲ್ಲಿಗೆಯ ಜೊತೆ ಶ್ರೀಗಂಧವೂ ವಿಶೇಷ.
“ಹೂಗಳ ರಾಣಿ”(Queen of Flowers) ಎಂದು ಮಲ್ಲಿಗೆಯು ಕರೆಯಲ್ಪಡುತ್ತಿದ್ದರೆ, ಅದರ ಎಲ್ಲಾ ವೈವಿಧ್ಯಗಳಿಗಿನ್ನ ವಿಶೇಷವೆನಿಸಿಕೊಂದಿರುವುದು ಮೈಸೂರ ಮಲ್ಲಿಗೆ(Queen of Jasmins). ಮೈಸೂರಿನಲ್ಲಿ ಉತ್ಸವ, ಪೂಜೆ, ಮದುವೆ, ಮುಂಜಿ, ಗೃಹಪ್ರವೇಶ, ಯಾವುದೇ ಕಾರ್ಯಕ್ರಮವಿರಲಿ, ಅಲ್ಲ್ಲಿಯ ಮಲ್ಲಿಗೆಯಿಲ್ಲದೆ ಅದು ಅಪೂರ್ಣ. ಮೈಸೂರ ದಸರಾದಷ್ಟೇ ಪ್ರಾಮುಖ್ಯ ಇಲ್ಲಿನ ಮಲ್ಲಿಗೆಯೂ ಪಡಕೊಂಡಿದೆ. ಕೇರಳ, ತಮಿಳ್ನಾಡುಗಳಲ್ಲೂ ಒಳ್ಳೆಯ ಬೇಡಿಕೆ, ಜೊತೆಗೆ ಮೈಸೂರು ಮಲ್ಲಿಗೆಯ ಸುಗಂಧ ದ್ರವ್ಯಗಳಿಗೆ ವಿದೇಶಗಳಲ್ಲೂ ಉತ್ತಮ ಬೇಡಿಕೆಯಿದೆ. ದೂರದಲ್ಲಿರುವ ಸಸ್ಯ ಪ್ರೇಮಿಗಳು ಆನ್ ಲೈನ್ ಮೂಲಕವೂ ಮೈಸೂರು ಮಲ್ಲಿಗೆಯ ಗಿಡಗಳನ್ನು ಖರೀದಿಸಿ ಮನೆಯ ಕುಂಡಗಳಲ್ಲಿ ಬೆಳೆಸಿ ಖುಶಿಪಡುತ್ತಿರುವುದು ಕಂಡರೆ, ಪ್ರಕೃತಿಯು ಮೈಸೂರಿಗೆ ನೀಡಿದ ಹಲವು ಅತ್ತ್ಯುತ್ತಮ ಕೊಡುಗೆಗಳಲ್ಲೊಂದು ಇಲ್ಲಿಯ ಮಲ್ಲಿಗೆ ಹೂವು ಎಂದೆನಿಸುತ್ತದೆ.
ಮೈಸೂರಿನ ಪ್ರಮುಖ ಮಾರುಕಟ್ಟೆಯಾದ ದೇವರಾಜ ಮಾರ್ಕೆಟ್ ನಲ್ಲಿ ವರ್ಷದುದ್ದಕ್ಕೂ ಲಭಿಸುವ ಮೈಸೂರು ಮಲ್ಲಿಗೆ, ಬಿಡಿಯಾಗಿಯೂ, ಮೊಗ್ಗಾಗಿಯೂ, ಅರಳಿದಾಗಲೂ, ನೊಡಲು ಚಂದ, ಮಲ್ಲಿಗೆ ಮಾಲೆಗಳನ್ನು ಆಸೆಯಿಂದ ಕೊಳ್ಳುವ ಹೆಣ್ಣುಮಕ್ಕಳನ್ನ್ಯು ನೊಡುವಾಗ ‘ಹಣ್ಣೆಲೆ ಚಿಗುರಿದಾಗ’ ಚಿತ್ರದಲ್ಲಿ ಪಿ. ಸುಶೀಲರವರು ಹಾಡಿದ “ಹೂವು.. ಚೆಲುವೆಲ್ಲ ನಂದೆಂದಿತು.. ಹೆಣ್ಣು ಹೂವ ಮುಡಿದು.. ಚೆಲುವೇ ತಾನೆಂದಿತು.. ” ಎಂಬ ಸಾಲುಗಳು ನೆನಪಾಗುವುದು. ತಕ್ಕಂತೆ ಸಂಜೆ ಹೊತ್ತು ಪುಟ್ಟ ಹುಡುಗರು ಕೂಡಾ ಮಲ್ಲಿಗೆ ಮಾಲೆಗಳನ್ನು ಮಾರಿ ಅಂದಂದಿನ ಖರ್ಚು ತೂಗಿಸಿಕೊಳ್ಳುವುದನ್ನು ನೋಡಿದರೆ ಮೈಸೂರಿನಲ್ಲಿ ಮಲ್ಲಿಗೆಯು ಅದೆಷ್ಟು ರೀತಿಯಲ್ಲಿ ತನ್ನ ಪ್ರಭಾವ ಬೀರುತ್ತಿದೆಯೆನ್ನುವುದು ತಿಳಿಯುತ್ತದೆ, ನೂರಾರು ಮಂದಿಗೆ ಪ್ರಮುಖ ಜೀವನ ಮಾರ್ಗವೂ ಆಗಿರುವ ಮೈಸೂರು ಮಲ್ಲಿಗೆ ಬೆಳೆದವರ, ಕೊಂಡವರ, ಮುಡಿದವರ ಮುಖದಲ್ಲೂ ನಗೆಮಲ್ಲಿಗೆಯರಳಿಸುತ್ತ ತಾನೂ ದಿನ ದಿನ ಹೊಸದಾಗಿ ಅರಳಿ ನಗುವುದು.
.
— ಶ್ರುತಿ ಶರ್ಮಾ, ಬೆಂಗಳೂರು
ತುಂಬಾ ಸೊಗಸಾದ ಲೇಖನ. ಯಾವುದೇ ವಿಷಯದ ಬಗ್ಗೆ ಬರೆಯುವುದಿದ್ದರೂ ವಿವರವಾಗಿ ಅರಿತುಕೊಂಡು ಬರೆಯುತ್ತೀರಿ.ಗ್ರೇಟ್!
ಧನ್ಯವಾದಗಳು 🙂
ಬಹುಶ ಮೈಸೂರು ಮಲ್ಲಿಗೆ ಕವನಗಳ ಸಾಲು ಸೃಷ್ಟಿಸಿದ್ದು ೧೯೪೨ ರಲ್ಲಿ.
ಬರಹ ಚೆನ್ನಾಗಿದೆ ಶ್ರುತಿ.
Thank you! 🙂
ಚೆನ್ನಾಗಿದೆ ಶ್ರುತಿ . ತುಂಬಾ ಖುಷಿಯಾಯಿತು 🙂
Thanks Vinay! 🙂
nice shruti. your writing has poetic flashes as well..
Thank you ಜಯಶ್ರೀ! 🙂
Very nice article.
Actual jasmine fragrance is coming out from your words.
Thank you so much Mr. Ghouse 🙂
ಈಗ ರೈಲು ಗಳಲ್ಲಿ ಬಿಡಿ ಮಲ್ಲಿಗೆ ಹೂವು ,ಸ್ವಲ್ಪ ಕನಕಾಂಬರ ,ಹಾಗೂ ಹೂ ಕಟ್ಟಲು ದಾರವನ್ನೂಇಟ್ಟು ಮಾರುತ್ತಾರೆ!ನಿತ್ಯ ರೈಲಿನಲ್ಲಿ ಪ್ರಯಾಣಿಸುವ ಎಷ್ಟೋ ಜನ ಇದನ್ನು ಕೊಂಡು ,ಹೂ ಕಟ್ಟುತ್ತಾ ದಾರಿ ಸವೆಸುತ್ತಾರೆ!
ಹೌದಾ! ಈ ವಿಚಾರ ತಿಳಿದಿರಲಿಲ್ಲ 🙂
ಪ್ರೀಯ ಶೃತಿದೇವಿ “ಮಲ್ಲಿಗೆ’ ಕುರಿತಾಗಿ ನೀಡಿದ ವಿವರಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ.
ಆದರೆ ಲೇಖಕರು ಮಲ್ಲಿಗೆ ದಂಡೆ ಯಾಕೆ ಮುಡಿದುಕೊಂಡಿಲ್ಲ ? ಮಲ್ಲಿಗೆಯ ಕಂಪು ಮೈಸೂರ್
ಮುಖಾಂತರ ಹುಬ್ಬಳ್ಳಿಗೆ ತಲುಪಿದೆ , ನಿಮ್ಮ ಸಾಹಿತ್ಯ ಕೃಷಿ ಮುಂದುವರೆಯಲಿ ,,ಶುಭ ಹಾರೈಕೆಗಳು.
ರಂಗನಾಥ್ ನಾಡಗೀರ್, ಹುಬ್ಬಳ್ಳಿ.
,
.
ತುಂಬಾ ಧನ್ಯವಾದ.. ಲೇಖಕಿಗೆ ಬೆಂಗಳೂರಿನಲ್ಲಿ ಮೈಸೂರು ಮಲ್ಲಿಗೆ ಸಿಕ್ಕಿಲ್ಲ 😀
ಮಲ್ಲಿಗೆಯಷ್ಟೇ ಸೊಗಸಾದ,ನಾಜೂಕಾದ, ಸುಗಂಧಭರಿತ ಸಾಲುಗಳು…ಅಭಿನಂದನೆಗಳು
ಧನ್ಯವಾದಗಳು
ತುಂಬಾ ಇಷ್ಟವಾಯ್ತು