ಸೂರ್ಯಶಿಕಾರಿ
ಬೆಳಿಗ್ಗೆ ಮೂಡಣದಲ್ಲಿ
ದಿವ್ಯರಥವೇರಿ
ಕಿರಣ ಒಡ್ಡೋಲಗದೊಡಗೂಡಿ
ಪಡುವಣದ ಕರೆಗೆ
ಬಾನ ದಾರಿಯಲಿ
ಪಯಣ ಬೆಳೆಸುವ ದಿನಪ
ಯಾಕೆ ಗುಟ್ಟಿನಲಿ
ಮೂಡಲಿಗೆ
ಹಿಂದಿರುಗುವ …
ಯಾವುದು ಅವನ ದಾರಿ
ಏನಿದರ ಮರ್ಮ ?
ಇಂದು ಸಂಜೆ ಕಲ್ಪನೆಯ
ನಾವೆಯನೇರಿ
ಶಬ್ದಜಾಲವ ಬೀಸುವ
ಮುನ್ನವೇ
ಕಡಲಾಳಕ್ಕಿಳಿದು
ಮರೆಯಾದ ದಿನಕರ
ನಿಡುಸುಯ್ದ – ಸದ್ಯ , ಇಂದು ಬಚಾವಾದೆ !
- ಡಾ.ಗೋವಿಂದ ಹೆಗಡೆ