ವಿಭೂತಿ ಮಾಡುವ ವಿಧಾನ
ದೇವಸ್ಥಾನಗಳಲ್ಲಿ, ಹಾಗೂ ಹಿಂದುಗಳಲ್ಲಿ ಕೆಲವು ವರ್ಗದವರು ಹಣೆಗೆ ಬಳಿಯಲು ವಿಭೂತಿ ಉಪಯೋಗವಿದೆ. ಆದರೆ ಅದು ಸಾವಯವ ರೀತಿಯಲ್ಲಿ,ಪರಿಶುದ್ಧವಾಗಿ ಆದರೆ ಅದರ ಮಹತ್ವ ಹೆಚ್ಚು ಎಂಬುದು, ನಮ್ಮಹಿರಿಯರ ಉಪದೇಶ, ನನ್ನ ತಂದೆಯವರಿಂದ (ಶಂಭುಭಟ್ಟ,ನಿಡುಗಳ,ಶಂಕರಮೂಲೆ) ತಿಳಿದುಕೊಂಡ ವಿಚಾರ, ಅವರು ಮಾಡುವುದನ್ನು ಗಮನಿಸಿದ್ದೇನೆ.ಇದೀಗ ನಿಮ್ಮ ಮುಂದೆ ವಿಭೂತಿ ತಯಾರಿಯ ಕ್ರಮ.
ವಿಭೂತಿಗೆ ಬೇಕಾಗುವ ಸಾಮಾಗ್ರಿಃ
ಹಾಲು ಕರೆಯುತ್ತಿರುವ ಊರ ಹಸುವಿನ (ಕಪಿಲೆ ಆದರೆ ಇನ್ನೂಉತ್ತಮ) ಗೋಮೂತ್ರ ಸಾದಾರಣ ಒಂದು ಲೀಟರು, ಗೋಮಯ(ಸಗಣಿ) ಒಂದೆರಡು ಕಿಲೋದಷ್ಟು. ಹತ್ತಿ ನೂಲಿನ ಬಿಳಿ ವಸ್ತ್ರ.
ಮಾಡುವ ವಿಧಾನಃ
ಮಣ್ಣು, ಕಸ ಇಲ್ಲದ ಸಗಣಿಯನ್ನು(ಗೋವು ಸೆಗಣಿ ಹಾಕಿದಕೂಡಲೇ) ಬೆರಣಿ ತಟ್ಟಿ, ಚೆನ್ನಾಗಿ ಬಿಸಿಲಿಗೆ ಒಣಗಿಸಬೇಕು. ಒಣಗಿದ ಬೆರಣಿಯನ್ನು ಶಿವರಾತ್ರಿ ದಿನವೇ ಶುಭ್ರಜಾಗದಲ್ಲಿ ಹೊತ್ತಿಸಿ ಬೂದಿ ಮಾಡಿಕೊಳ್ಳುವುದು. ಆ ಬೂದಿ ತಣಿದ (ಆರಿದ)ಮೇಲೆ,ಅದನ್ನು ನೀರಿನಲ್ಲಿ ಕದಡಿಸಿ; ಮೇಲೆ ಹೇಳಿದ ಬಿಳಿ ಬಟ್ಟೆಯಿಂದ ಸೋಸಿಕೊಳ್ಳುವುದು. ಈಗ ಬೂದಿ ತಳದಲ್ಲಿ ನಿಂತಮೇಲೆ, ವಾಪಾಸು ಬೇರೆ ನೀರುಹಾಕಿ ಕದಡಿಸಿ ,ಬಟ್ಟೆಯಿಂದ ಸೋಸುವುದು. ಹೀಗೆ ನೀರು ಬದಲಿಸಿ ಬದಲಿಸಿ ಸೋಸುವುದು ಏಳುಬಾರಿ! ಕೊನೆಗೆ ತಳದಲ್ಲಿ ಕುಳಿತ ಬೂದಿಯನ್ನು ಶುಭ್ರಜಾಗದಲ್ಲಿ ಬಿಸಿಲಿಗೆ ಒಣಗಿಸುವುದು.
ಇನ್ನು ಕಪಿಲೆ ದನದ ಮೂತ್ರ(ಫ್ರೆಶ್) ವನ್ನೂ ಏಳುಬಾರಿ ಸೋಸಿಕೊಳ್ಳಬೇಕು. ಆ ಸೋಸಿದ ಗೋಮೂತ್ರದಲ್ಲಿ; ಗೋಮಯದ ಬೂದಿಯನ್ನು ಗಟ್ಟಿಯಾಗಿ ಕಲೆಸಿ, ಸಾದಾರಣ ನಿಂಬೆಗಾತ್ರದ ಉಂಡೆಗಳನ್ನು ಮಾಡಿಕೊಳ್ಳುವುದು. ಈ ಉಂಡೆಗಳನ್ನು(ಹಾಗೆಯೇ) ಸರಿಯಾದ ಶುಭ್ರಜಾಗದಲ್ಲಿ ಒಣಗಿಸುವುದು. ವಾಪಾಸು ಆ ಉಂಡೆಗಳನ್ನು ಹುಡಿಮಾಡದೆ, ಬೆರಣಿಯ ಬೆಂಕಿಯಲ್ಲೇ ಹೊತ್ತಿಸುವುದು.ಅದು ಹೊತ್ತಿ ಕೆಂಪು ಬಣ್ಣಕ್ಕೆ ಬಂದಮೇಲೆ ;ಅದನ್ನು ಬೇರೆ ಬೇರೆಯಾಗಿ (ಒಂದಕ್ಕೊಂದು ಅಂಟಿಕೊಳ್ಳದಂತೆ) ಹರವಿ ತಣಿಸುವುದು. ಇದೀಗ ಬಿಳಿಯಾದ, ಗಟ್ಟಿಯಾದ ಬೇಗನೆ ಸುಲಭದಲ್ಲಿ ಹುಡಿಯಾಗದ, ಹಲವಾರು ವರ್ಷಗಳಲ್ಲೂ ಬಾಳಿಕೆ ಬರುವ ವಿಭೂತಿ ಉಂಡೆಗಳು ನಿಮ್ಮ ಮುಂದೆ.
(ಈ ಲೇಖನವನ್ನು ನನ್ನ ಒಪ್ಪಿಗೆಯಿಲ್ಲದೆ ಯಾರೂ ಬೇರೆಕಡೆ ಪಬ್ಲಿಷ್ ಮಾಡಬಾರದು. ಮಾಡುವಿರಾದಲ್ಲಿ ನನ್ನ ಹೆಸರು ಬಳಸಿಕೊಳ್ಳಿ ಎಂದು ವಿನಂತಿ).
ವಿ ಸೂಃ- ಇಲ್ಲಿ ಬೆರಣಿಯನ್ನು ಪ್ರಥಮತಃ ಹೊತ್ತಿಸುವ ಧಾರ್ಮಿಕ ವಿಧಿ ಶಿವರಾತ್ರಿ ದಿನವೇ ಪ್ರಶಸ್ತ. ಎಂದು ನನ್ನಪ್ಪ ಹೇಳುತ್ತಿದ್ದರು, ಹಾಗೆಯೇ ಮಾಡುತ್ತಿದ್ದರು. ಮುಂದಿನ ಕೆಲಸಗಳು ನಾಲ್ಕಾರು ದಿನಗಳು ಹಿಡಿಯುತ್ತವೆ. ಅದಕ್ಕೆ ಮುಹೂರ್ತ ಇಲ್ಲವಂತೆ. ನನ್ನಪ್ಪ ಶಿವ ದೇವಸ್ಥಾನಗಳಿಗೆ, ವಿಶೇಷವಾಗಿ ಕಿದೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವಾಗಲೆಲ್ಲ ಒಂದೆರಡು ವಿಭೂತಿ ಉಂಡೆಯನ್ನೊಯ್ದು ಕೊಡುತ್ತಿದ್ದರು.
-ವಿಜಯಾಸುಬ್ರಹ್ಮಣ್ಯ , ಕುಂಬಳೆ
A special write up…I never thought or knew vibhuthi is a product done with holy cow dung and cow urine… thank you
ಡಾ| ರಾಮ, ನಮಸ್ತೇ.ತಮ್ಮ ಸ್ಪಂಧನೆಗೆ ಧನ್ಯವಾದಗಳು. ನಮ್ಮ ದೇಸೀ ದನದ ಗೋಮೂತ್ರದಲ್ಲಿ ಗಂಗೆ, ಗೋಮಯದಲ್ಲಿ ಲಕ್ಷ್ಮಿ ದೇವಿಯರು ನೆಲೆಸಿದ್ದಾರಂತೆ.ಗೋ ಅರ್ಕದಿಂದ ಕ್ಯಾನ್ಸರ್ ಕಾಯಿಲೆಯನ್ನು ಗುಣಪಡಿಸಬಹುದಾಗಿದೆ. ಹಾಗೇ ದನಕ್ಕೆ ಪುಣ್ಯಕೋಟಿ ಎಂಬ ಪೌರಾಣಿಕ ಹೆಸರು ಇದ್ದು, ೩೩ಕೋಟಿ ದೇವತೆಗಳು ಆಕೆಯಲ್ಲಿದ್ದು; ಹಿಂದೂಗಳಿಗೆ ಪೂಜನೀಯವಾಗಿದೆ.
ತುಂಬಾ ಮಾಹಿತಿಪೂರ್ಣ 🙂
ಶೃತಿ ಶರ್ಮ, ನಿಮಗೆ ಧನ್ಯವಾದಗಳು.
ನಮಸ್ತೆ ಅಮ್ಮ ,ನೀವು ತಯಾರಿಸಿ ಇಟ್ಟುಕೊಂಡಿರುವ ವಿಭೂತಿ ಯನ್ನು ನಮಗೆ ಕೊಡುತ್ತೀರಾ,
ನಮ್ಮ ವಿಳಾಸಕ್ಕೆ ಕಳುಹಿಸಿ ದಯವಿಟ್ಟು.