ಕಡಿಮೆಯೇನು
ಈ ದಾರಿ ನಡೆಯುತ್ತ ಕಂಡಿದ್ದು ಕಡಿಮೆಯೇನು
ನೋವಿನೆಲೆ ಹಾಸಿ ಬುತ್ತಿಯುಂಡಿದ್ದು ಕಡಿಮೆಯೇನು
ಸುಣ್ಣದ ಭಟ್ಟಿಗಳು ಒಡಲುದ್ದಕೂ ಮೊಳೆದು
ಕುಡುತೆ ನೀರುಂಡು ಬೆಂದಿದ್ದು ಕಡಿಮೆಯೇನು
ಚಹರೆಗಳೆ ಕಳೆದ ಮುಖಹೀನ ಸಂದಣಿಯಲ್ಲಿ
ಕಳೆದ ಎದೆ ಹುಡುಕುತ್ತ ನೊಂದಿದ್ದು ಕಡಿಮೆಯೇನು
ಸುಡುಗಾಡಿನಲ್ಲೂ ಮರ ನೆರಳುಗಳ ನೆಮ್ಮಿ
ಬೆಂಕಿಮಳೆ ಕೆಂಡಗಳ ಮಿಂದಿದ್ದು ಕಡಿಮೆಯೇನು
ಹೆಣ್ಣಾಗಿ ಪಾಲಿಸಿದ ನೆಲಕು ನಂಜೇರಿ ‘ವಿಶು’
ಹೂಕನಸುಗಳು ನಲುಗಿ ನಂದಿದ್ದು ಕಡಿಮೆಯೇನು
– ಗೋವಿಂದ ಹೆಗಡೆ