ಪುಸ್ತಕ ನೋಟ- ಹೇಮಮಾಲಾ ಕಂಡ “ಚಾರ್ ಧಾಮ್”

Share Button

ಕವಿಯೊಬ್ಬ ವರ್ಣಿಸಿರುತ್ತಾನೆ,
“ಪ್ರತಿ ಪರ್ವತದ ತುದಿಗೂ ಇದೆ ಒಂದು ದಾರಿ, 
ಕಣಿವೆಯಲ್ಲಿ ಕಾಣಿಸದು ಚಲಿಸದೇ ಅಲ್ಲಿಗೆ ಒಂದು ಬಾರಿ.”

ಹಿಮಾಲಯದ ಪರ್ವತಶ್ರೇಣಿಗಳಿಗಂತೂ ಒಂದು ಬಾರಿ ಹೋದರೆ ಮತ್ತೆ ಹಲವು ಬಾರಿ ಆಕರ್ಷಿಸುವ ಅಯಸ್ಕಾಂತ ಶಕ್ತಿಯನ್ನು ಹೊಂದಿರಬೇಕು. ಇದು ಹೋದವರೆಲ್ಲರ ಅನುಭವ. ಶ್ರೀಮತಿ ಹೇಮಮಾಲಾರ ಪ್ರವಾಸ ಅನುಭವವನ್ನು ಓದಿದಮೇಲೆ, ಮತ್ತು ಅಲ್ಲಿಯ ವಿವರಣೆಗಳನ್ನು ಅವರು ನೀಡಿದ ಶೈಲಿಯನ್ನು ಕಂಡಮೇಲೆ, ನನಗಂತೂ ಅವರು ಇನ್ನು ಹಲವು ಬಾರಿ ಹೋಗಲಿರುವರು ಅನಿಸುತ್ತದೆ. ಅವರ ಅನುಭವವನ್ನು ಲೇಖನಿಯಲ್ಲಿ ಇಳಿಸಿದ ಧಾಟಿ ಆ ರೀತಿ ಇದೆ.

ಪ್ರಾರಂಭದ ಅಧ್ಯಾಯಗಳಲ್ಲೇ ವಿವರಣೆ ಮತ್ತು ವಾಸ್ತವಿಕತೆಯ ಹೊಂದಾಣಿಕೆ; ಮತ್ತು ಅವರು  ಓದುಗನನ್ನು ಅಲ್ಲಿಗೆ ಕೊಂಡೊಯ್ಯಲು ಒಂದು ದೃಶ್ಯವನ್ನು ನಿರ್ಮಿಸುತ್ತಾರೆ. ಆ ಕಾರಣಕ್ಕೇ ಹರಿದ್ವಾರದ ಬೀದಿ ಬದಿಯ ದೀಪಕ್ ಎನ್ನುವ ಪೆಟ್ಟಿಗೆಯ ಅಂಗಡಿಯವನಾಗಲಿ , ನಗುಮುಖದ ರೀನಾ ಮತ್ತು ಸಿಡುಕು ಮಾತಿನ ಅವಳ ಗಂಡ ಇವರೆಲ್ಲ ನಮ್ಮೊಡನೆಯೇ ವ್ಯವಹರಿಸುತ್ತಾರೆ. ರೀನಾ ಅವರ ನಗುಮುಖ ಕಾಣಸಿಗದಿದ್ದರೂ, ಓದುಗನಿಗೆ ಲೇಖಕಿಯವರು ಸಂಚರಿಸಿದ ಜಾಗಗಳ, ಹೋಟೆಲ್ ಗಳ, ದೇವಸ್ಥಾನಗಳ, ಪರ್ವತ ಶ್ರೇಣಿಗಳ, ಕಣಿವೆಗಳ, ನದಿಗಳ, ಸೇತುವೆಗಳ, ಗುಹೆಗಳ ಮಾತ್ರವಲ್ಲ ಹತ್ತಿ, ಹಾರಿ, ಇಳಿದ ಹೆಲಿಕಾಪ್ಟರ್ ನ ಫೋಟೋಗಳು ಯಥೇಚ್ಛವಾಗಿ ಸಿಗುತ್ತವೆ. ಬಣ್ಣದ ಫೋಟೋಗಳು ಒಂದೆರಡಾದರೂ ಇದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅಂದೆನಿಸಿದರೆ ಸ್ವಾಭಾವಿಕವೇ.

ಒಂದು ಭಾವನಾತ್ಮಕ ಘಟನೆ ನೆನೆಸುವಂತಹುದು. ‘ಭಗೀರಥನು ತಪಸ್ಸು ಮಾಡಿದ ಸ್ಥಳ’ ಎಂಬ ಗಂಗೋತ್ರಿಯ ಜಾಗದಲ್ಲಿ ಪೂರ್ವಿಕರಿಗೆ ತರ್ಪಣ ಕೊಡುವ ವ್ಯವಸ್ಥೆ. ಲೇಖಕಿಯವರಿಗೆ ಅನಿಸಿದ ವಿಷಯ ಓದುಗನಿಗೆ ಜಿಜ್ಞಾಸೆಯ ವಸ್ತು ಎಂದೆನಿಸಿದರೆ ಆಶ್ಚರ್ಯವಿಲ್ಲ! (ಇಲ್ಲಿ ಅದನ್ನು ವಿಮರ್ಶಿಸುವ ಪ್ರಸ್ತುತತೆ ಇಲ್ಲ).

ಕೇದಾರನಾಥ ದರ್ಶನದ ವಿವರಣೆ ಮನಮುಟ್ಟುವಂತೆ ಬಂದಿದೆ. ಆದರೆ ವಿವರಗಳು ಸ್ವಲ್ಪ ಲಗುಬಗೆಯಲ್ಲಿ ಬರೆದಂತೆ ಅನಿಸಿತು. ಕೇದಾರದಿಂದ ಗೌರಿಕುಂಡದವರೆಗಿನ ಊರುಗೋಲಿನ ಸಹಾಯದಿಂದ ನಡಿಗೆ, ಬೆಟ್ಟ ಇಳಿಯುವ, ಅದೂ ಸ್ವಲ್ಪ ಮಂಡಿನೋವು ಇರುವ ಲೇಖಕಿಯ ಸಾಹಸ ಮೆಚ್ಚುವಂತಿತ್ತು. ಈ ಮಧ್ಯೆಯೂ ಪ್ರಕೃತಿಯ ಸೌಂದರ್ಯೋಪಾಸನೆ ಪಯಣದ ಭಾಗವೇ ಎನ್ನುವ ಬರಹ ವೈಶಿಷ್ಟ್ಯಪೂರ್ಣ. ಕೇದಾರದಲ್ಲಿ ಜಲಪ್ರಳಯ (ಜೂನ್, 2013 ) ಆದ ವಿವರವನ್ನು ಓದುಗರು ಟಿ.ವಿ.ಯಲ್ಲಿ, ಪತ್ರಿಕೆಗಳಲ್ಲಿ ನೋಡಿರಬಹುದು, ಓದಿರಬಹುದು, ಆದರೆ ಒಂದು ಬಂಡೆಯ ವೃತ್ತಾಂತ, ಬಂಡೆ ಹೇಗೆ ದೇವಾಲಯವನ್ನು ಉಳಿಸಿತು ಎನ್ನುವ ಕೌತುಕ ಈ ಪುಸ್ತಕದಲ್ಲೇ ಲೇಖಕಿಯ ಸಮರ್ಥ ವಿವರಣೆಯಲ್ಲಿ ಕಣ್ಣಿಗೆ ಕಟ್ಟುವ ದೃಶ್ಯವಾಗಿ ಮೂಡಿದೆ.ಹಿಂದಿರುಗುವ ಸಮಯ, ಹಿಮಾಲಯದ ಕಣಿವೆಗಳಲ್ಲಿ ದೇಶಕಾಯುವ ಯೋಧರಿಗೆ ಸಲ್ಲಿಸಿದ ಗೌರವ “ಜೈ ಜವಾನ್, ಜೈ ಕಿಸಾನ್” ಎಂಬ ಘೋಷಣೆ ಯಾರೇ ದೇಶಪ್ರೇಮಿ ಪ್ರಜೆಯನ್ನು ಪುಳಕಿತಗೊಳಿಸುವಂತೆ ಇತ್ತು.

ತನ್ನ ಸಹ ಪ್ರಯಾಣಿಕರ ಅಭಿಪ್ರಾಯಗಳನ್ನೂ ಸಂಗ್ರಹಿಸಿ ಪ್ರಕಟಿಸಿದುದು, ಲೇಖಕಿಯ ವಿಶೇಷ ಗುಣ.

ಚಾರ್ ಧಾಮ್ ಪಯಣದ ವೃತ್ತಾಂತವನ್ನು ಬರವಣಿಗೆಗೆ ಇಳಿಸಿ, ಓದುಗರ ಕೈಗೆ ನೀಡಲು ಲೇಖಕಿಯವರು ಸಾಕಷ್ಟು ಅಧ್ಯಯನವನ್ನೂ ಮಾಡಿರುತ್ತಾರೆ. ಹಲವು ಸ್ಥಳಗಳ ವಿಚಾರವಿರಬಹುದು, ಅಲ್ಲಿಯ ಸ್ಥಳ ಪುರಾಣವಿರಬಹುದು, ಅಲ್ಲಿಯ ವಿಶೇಷತೆಗಳಿರಬಹುದು ಅಥವಾ ರುದ್ರಾಕ್ಷಿಯಂತಹ ಒಂದು ಕಾಯಿಯ ಮಾಹಿತಿ ಇರಬಹುದು, ಅಧ್ಯಯನಗಳು ಲೇಖನಕ್ಕೆ ಪೂರಕವಾಗಿವೆ. ಚಾರಣ ಯಾ ಕ್ಷೇತ್ರದರ್ಶನದ ವಿವರಗಳು ಎಂ. ರಾಜಗೋಪಾಲ್ ಅವರ “ಸಾಕಾರದಿಂದ ನಿರಾಕಾರಕ್ಕೆ” (1999), “ಭಗೀರಥ ಪಯಣ” (2006 ), ಎಂ.ಕೆ. ಶ್ರೀಧರ್ ಅವರ “ಚಾರಣ, ಏಕೆ, ಹೇಗೆ?” , ಶಿರಂಕಲ್ಲು ಈಶ್ವರ ಭಟ್ಟರ “ಚತುರ್ಧಾಮ ಯಾತ್ರೆ” ಇವೇ ಮೊದಲಾದ ಪುಸ್ತಕಗಳು ಅವರವರಿಗೆ ಸಿಗುವ ಅನುಭವ ಮತ್ತು ದೃಷ್ಟಿಯಾದರೂ ಪ್ರತಿ ಚಾರಣಿಗನ ಅನುಭವ ಹೊಸತು, ಅವರದೇ ಅನುಭೂತಿ. ಮತ್ತು  ಓದುಗರಿಗೆ ಇದನ್ನು ಉಣಬಡಿಸಿ, ತೋರಿಸಿಕೊಟ್ಟಿದ್ದಾರೆ ದ್ದಾರೆ, ಹೇಮಮಾಲಾ.

ಕೇರಳದ ಕಾಸರಗೋಡಿನ (ಗಡಿನಾಡು) ಹಳ್ಳಿಯೊಂದರಲ್ಲಿ ಹೈಸ್ಕೂಲ್ ವರೆಗಿನ ವಿದ್ಯಾಭ್ಯಾಸವಾಗಿ, ಪುತ್ತೂರಿನಲ್ಲಿ ಅನಂತರದ ಕಾಲೇಜು ವ್ಯಾಸಂಗಮಾಡಿ,  ಬಹುರಾಷ್ಟ್ರೀಯ ಕಂಪನಿಯಲ್ಲಿ ಸೇವೆಸಲ್ಲಿಸಿ, ಸುಮಾರಷ್ಟು ವಿದೇಶಗಳಿಗೆ ಭೇಟಿಕೊಟ್ಟು, ಪಯಣ ಹಾಗೂ ಚಾರಣದಲ್ಲಿ ಆಸಕ್ತಿ ತೋರುವ ಜೀವನ ಶೈಲಿಯ ಹೇಮಮಾಲಾರ ಅಭಿರುಚಿ ಸ್ತುತ್ಯರ್ಹ.

ಮಾನಸಸರೋವರ ಮತ್ತು ಕೈಲಾಸದತ್ತ ಇನ್ನು ಅವರ ಚಿತ್ತ ಹರಿಯಲಿ.

 

 – ಡಾ.ಬಿ.ಶ್ರೀಧರ ಭಟ್ , ಪುತ್ತೂರು

 

4 Responses

  1. Sujatha Ravish says:

    ಪುಸ್ತಕ ಓದಲು ಪ್ರೇರೇಪಿಸುತ್ತಿದೆ

  2. Vasanth Shenoy says:

    Nice words about dear Hema. Yes. She is very great in presentation of facts.

  3. Pushpa Nagathihalli says:

    ಡಾ:ಶ್ರೀಧರ್ ಭಟ್ ಬರೆದ ನಿಮ್ಮ ಪುಸ್ತಕದ ಮುನ್ನುಡಿ ಓದಿದೆ .ಪುಸ್ತಕವನ್ನು ಓದಲು ಕುತೂಹಲವಿದೆ.ಇಂಡಿಯಾಕ್ಕೆ ಬಂದನಂತರ ಸಾದ್ಯವಾದೀತು.ಅಭಿನಂದನೆಗಳು ಹೇಮಾ

  4. Shruthi Sharma says:

    Very nice write up. Can’t wait to read the book 🙂

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: