ಮೇ ಫ಼್ಲವರ್ ದಿನಗಳು..
ಮತ್ತೆ ಬಂದಿದೆ ಮೇ ತಿಂಗಳು. ಗುಲ್ಮೊಹರ್ ಹೂಗಳ ಕೆಂಪಿನೊಂದಿಗೆ, ಬಿಸಿಲಿನ ಝಳದೊಂದಿಗೆ. ಈ ಕೆಂಬಣ್ಣ ಕ್ರಾಂತಿಯ ಸಂಕೇತವೂ ಹೌದು. ಕಾರ್ಮಿಕ ದಿನಾಚರಣೆಯ ಈ ಮಾಸದಲ್ಲಿ ಶ್ರಮ, ಶ್ರಮಿಕ ವರ್ಗದ ಬಗ್ಗೆ ಒಂದೆರಡು ಮಾತು. ಕಾರ್ಲ್ ಮಾರ್ಕ್ಸ್ ಹೇಳುವಂತೆ ಸಮಾಜ ವ್ಯವಸ್ಥೆ, ಧರ್ಮ, ಸಾಹಿತ್ಯ ಎಲ್ಲವೂ ಕಾರ್ಮಿಕರ ಶ್ರಮದ ಮೇಲೆ ನಿಂತಿದೆ. ಹೌದು. ದೊಡ್ಡ ಮಾಲ್ ಗಳ ಝಗಮಗದಲ್ಲಿ ಅವನ್ನು ಕಟ್ಟಿದ ಕೂಲಿ ವರ್ಗದವರನ್ನು ನಾವು ಮರೆಯುತ್ತೇವೆ. ಐಶಾರಾಮಿ ಹೋಟೆಲ್ ಗಳ ತರಕಾರಿ ಹೆಚ್ಚುವವರನ್ನು, ಟೇಬಲ್ ಒರಸುವವರನ್ನು ಕಡೆಗಣ್ಣಲ್ಲಿ ನೋಡಿ ಸುಮ್ಮನಾಗುತ್ತೇವೆ. ನಮ್ಮ ರೇಶಿಮೆ ಸೀರೆಯ ನಯದ ಹಿಂದೆ, ಗಾಜಿನ ಬಳೆಗಳ ಝಣತ್ಕಾರದಲ್ಲಿ, ಸ್ಟೈಲಾಗಿ ಧರಿಸುವ ರೆಡಿಮೇಡ್ ಬಟ್ಟೆಬರೆಗಳು, ಸ್ವಚ್ಛವಾಗಿರುವ ರಸ್ತೆ, ಮನೆ, ಆಫ಼ೀಸು ಎಲ್ಲದರ ಹಿಂದೆ ಕಾರ್ಮಿಕ ವರ್ಗದವರ ಶ್ರಮ ಇದ್ದೇ ಇದೆ.
ಹಾಗೆ ನೋಡಿದರೆ ಒಂದು ರೀತಿಯ ‘ವಿಸ್ಮೃತಿ’ ನಮಗೆ. ವಿಸ್ಮೃತಿ ಎಂದರೆ ನಮಗೆ ಬೇಕಿಲ್ಲದಿರುವುದನ್ನು ಮರೆಯುವುದು. ನನ್ನನ್ನೂ ಸೇರಿಸಿದಂತೆ ದಲಿತರು, ಬಡವರ ಬಗ್ಗೆ ಮಧ್ಯಮ ವರ್ಗದವರಿಗೆ ಅನುಕಂಪವಿಲ್ಲವೆಂದೇನಿಲ್ಲ. ಆದರೆ ” ಆನೆಗೆ ಆನೆಯ ಕಷ್ಟ ಇರುವೆಗೆ ಇರುವೆಯ ಕಷ್ಟ “ ಎನ್ನುವಂತೆ ನಮಗೆ ನಮ್ಮ ಸಮಸ್ಯೆಗಳೇ ಬೃಹದಾಕಾರವಾಗಿರುತ್ತವೆ.
ಇಡೀ ಜಗತ್ತೇ ಹೆಚ್ಚು ಹೆಚ್ಚು ಕ್ಯಾಪಿಟಲೈಸ್ಡ್ ಆಗುತ್ತಿರುವ ಈ ಸಂದರ್ಭದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿರುವುದು ಖಾಸಗಿ ಕ್ಷೇತ್ರದಲ್ಲಿ. ಹೀಗಾಗಿಯೇ ನಮ್ಮ ಅಭಿರುಚಿಗೆ ಹೊಂದಿಕೊಳ್ಳುವ ಉದ್ಯೋಗವನ್ನು ಪಡೆದುಕೊಳ್ಳುವುದು ಏಕ ಕಾಲದಲ್ಲಿ ಸುಲಭ ಮತ್ತು ಕಷ್ಟ. ಇದೊಂದು ವಿರೋಧಾಭಾಸದ ಸ್ಥಿತಿ. ನಮ್ಮ ದೇಶದ ಕೈಗಾರಿಕೆಗಳು, ಉದ್ದಿಮೆಗಳು, ರಾಜಕೀಯ, ವಿದ್ಯಾಭಾಸ ಕೂಡ ಜಾಗತಿಕ ಟ್ರೆಂಡ್ ಗಳನ್ನು ಅವಲಂಬಿಸಿರುವುದರಿಂದ ಹಳ್ಳಿಯ ಬಡ ಬೋರೇಗೌಡನಿಗೆ ಕೂಡ ಅದರ ಪರಿಣಾಮದ ಬಿಸಿ ತಟ್ಟುತ್ತದೆ. ಮನೆಯಲ್ಲಿರುವ ಗೃಹಿಣಿಗೆ ಕೂಡ ಅದರ ಝಳ ಅರಿವಾಗುತ್ತದೆ. ಹೀಗಾಗಿಯೇ ‘ಪರ್ಸನಲ್ ಈಸ್ ಪೊಲಿಟಿಕಲ್ ‘. ಬ್ರಿಟಿಷರ ಕಾಲದಿಂದಲೇ ನಮ್ಮ ದೇಶದ ಆರ್ಥಿಕತೆ, ಗುಡಿಕೈಗಾರಿಕೆಗಳು ಮೂಲೆಗುಂಪಾದವು. ಈಗಿರುವುದು ಜಾಗತಿಕ ಅವಶ್ಯಕತೆಗಳಿಗೆ ಸ್ಪಂದಿಸುವ ಇಕಾನಮಿ.
ಎಡ-ಬಲ ಯಾವುದೇ ಪಂಥಗಳಿಗೆ ಸೇರದ ಭಾರತದ ಮಧ್ಯಮ, ತಳ ವರ್ಗದ ಜನತೆ ದಿನ ನಿತ್ಯ ಎಂಬಂತೆ ‘ ಆರ್ಥಿಕ ಎಮರ್ಜೆನ್ಸಿ’ ಎದುರಿಸುತ್ತಿರುತ್ತದೆ. ಯಾವ ಥಿಯರಿಗಿಂತಲೂ ವಾಸ್ತವ ಮಿಗಿಲು. ಅಭಿವೃದ್ಧಿಯ ಕುರಿತಾದ ತಮ್ಮ ಪುಸ್ತಕ ‘ಡೆವಲಪ್ ಮೆಂಟ್ ಆಸ್ ಫ಼ೀಡಮ್‘ ನಲ್ಲಿ ಅಮರ್ತ್ಯ ಸೇನ್ ಅವರು ಅಭಿವೃದ್ಧಿಯಿಂದಲೇ ಸ್ವಾತಂತ್ರ್ಯ ಸಾಧ್ಯ ಎಂದು ಹೇಳುತ್ತಾರೆ. ಅಬ್ದುಲ್ ಕಲಾಂ ಅವರು ಕೂಡ ತಮ್ಮ ‘ಇಗ್ನೈಟೆಡ್ ಮೈಂಡ್ಸ್ ಕೃತಿಯಲ್ಲಿ ಸಂಪತ್ತನ್ನು ಸೃಷ್ಟಿಸಬೇಕಾದ ಅವಶ್ಯಕತೆಯನ್ನು ಪ್ರತಿಪಾದಿಸುತ್ತಾರೆ. ಒಟ್ಟಿನ ಮೇಲೆ ‘ಅಭಿವೃದ್ಧಿ’ ಎನ್ನುವ ವಿಷಯ ಅನೇಕ ರಾಜಕೀಯ, ತಾತ್ವಿಕ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದೆ. ಇನ್ನು ಕಾರ್ಮಿಕರ ದಿನಾಚರಣೆಯನ್ನು ಪರಿಗಣಿಸಿದರೆ ಮಹಿಳೆಯರನ್ನೂ ಸೇರಿಸಿ ನಮ್ಮೆಲ್ಲರ ದೈನಂದಿನ ಜೀವನದಲ್ಲಿ ಅವರ ಶ್ರಮ, ತ್ಯಾಗ ಇದ್ದೇ ಇದೆ.
ಕೃಷಿಭೂಮಿಯಲ್ಲಿ ಕಳೆಕೀಳುವ ಮಹಿಳೆಯರು, ಇಟ್ಟಿಗೆ ಭಟ್ಟಿಯಲ್ಲಿ ಬೇಯುವವರು, ಕಟ್ಟಡಕ್ಕೆ ಕಲ್ಲುಹೊರುವವರು, ಫ಼್ಯಾಕ್ಟರಿಗಳಲ್ಲಿ ದುಡಿಯುವವರು.. ಹೀಗೆ ಬಡ, ದಲಿತ ವರ್ಗದ ಕಣ್ಣೀರು, ಕೆಚ್ಚು, ಛಲದಿಂದಲೇ ದೇಶ ಮುನ್ನಡೆಯುತ್ತಿದೆ. ಯಾವುದೇ ಇಸಂ, ಥಿಯರಿಗಳು ಗೊತ್ತಿಲ್ಲದ, ಕೇವಲ ಸಾಮಾನ್ಯ ಪ್ರಜೆಯಾಗಿ ವಿದ್ಯಾಭ್ಯಾಸ’ವೊಂದೇ ಅರಿವಿನ, ಸ್ವಾತಂತ್ರ್ಯದ ದಾರಿ ದೀಪ ಎಂದೆನಿಸುತ್ತದೆ. ದೇವನೂರ ಮಹದೇವರೆಂದಂತೆ :
‘ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು’.
– ಜಯಶ್ರೀ. ಬಿ. ಕದ್ರಿ, ಮಂಗಳೂರು.
Very true..! And nicely narrated.. 🙂
nice
ಚೆನ್ನಗಿದೆ ಬರಹ ಇಷ್ಟವಾಯಿತು
ನಿಮ್ಮ ಬರಹ ಮನ ಮುಟ್ಟುವಂತಿದೆ. ಕಾರ್ಮಿಕರ ಬಗೆಗಿನ ಲೇಖನ ಚೆನ್ನಾಗಿದೆ.
ಪ್ರತಿಕ್ರಿಯಿಸಿದ ಎಲ್ಲರಿಗೂ , ಓದಿದವರಿಗೂ ಧನ್ಯವಾದಗಳು.
ಬೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಫಲ ಕೊಡುವದು.ಈ ಮಾತು ನೂರಕ್ಕೆ ನೂರು ಸತ್ಯ.
ತುಂಬಾ ಚೆನ್ನಾಗಿದೆ ಲೇಖನ
ಲೇಖನ ತುಂಬಾ ಚೆನ್ನಾಗಿದೆ. ಘನಘೋರ ಗಂಭೀರ ಸ್ವರೂಪದ ಸಮಸ್ಯೆಯನ್ನು ಎದುರಿಸುತ್ತಿರುವ ಹಾಗು ಯಾವುದೇ ತರಬೇತಿ ಇಲ್ಲದ ಶ್ರಮಿಕರ ,ಅಸಂಘಟಿತ ವಲಯದ ಕಾರ್ಮಿಕವರ್ಗದ ಮೇಲೆ ಬೆಳಕು ಚೆಲ್ಲುವಂತಿದೆ.ಧನ್ಯವಾದಗಳು !