ಮರೆಯಾದ ಮೇಘ…
ಅಂದು ಮಧ್ಯಾಹ್ನ ಪಚ್ಚಿ ಅತಂಕದಿಂದ ಫೋನ್ ಮಾಡಿದರು. ಮೇಘ ಅತ್ಮಹತ್ಯೆ ಮಾಡಿಕೊಂಡಿದ್ದಾಳಂತೆ. ಸ್ವಲ್ಪ ಮಂಗಳರವರಿಗೆ ಫೋನ್ ಮಾಡಿ ವಿಚಾರಿಸಿ ಅಂದು ಫೋನ್ ಇಟ್ಟರು. ತತ್ಕ್ಷಣವೇ ಏನೋ ಆತಂಕ, ನೋವು, ಹೇಳಿಕೊಳ್ಳಲಾಗದ ಕಳವಳವಾಯಿತು. ಅಯ್ಯೋ, ದೇವರೇ ಇದು ನಿಜವಾಗದಿರಲೆಂದು ಪ್ರಾರ್ಥಿಸಿದೆ! ಆದರೆ ವಿಧಿ ತನ್ನ ಆಟವನ್ನು ಆಗಲೇ ನಡೆಸಿ ಆಗಿತ್ತು.
ಮೇಘ, ..ಎಷ್ಟು ಸುಂದರವಾದ ಹೆಸರು.! ಹೆಸರಿಗೆ ತಕ್ಕಂತೆ ಸುಂದರವಾದ ಹುಡುಗಿ. ನೀಳವಾದ ಮೂಗು, ಹೊಳೆಯುವ ಕಣ್ಣುಗಳು, ಸ್ವಲ್ಪ ಬಾಯಿ ಅಗಲವೆನಿಸಿದರೂ ಅಂದವಾದ ಹಲ್ಲುಗಳು, ನೀಳವಾದ ಕೈಬೆರಳುಗಳು, ದಂತದ ಮೈಬಣ್ಣ ….ಒಟ್ಟಿನಲ್ಲಿ ನೋಡಿದ ತತ್ಕ್ಷಣವೇ ಸುಂದರಿ ಅನ್ನಬಹುದಾಗಿತ್ತು. ಅವಳಿಗಿನ್ನೂ 20 ವರ್ಷ. ಬಿ.ಬಿ.ಎಮ್ ಓದುತ್ತಿದ್ದಳು. ಓದಿನಲ್ಲೂ ಮುಂದು. ಆದರೆ ಅವರಮ್ಮನಿಗೆ ಅಷ್ಟು ಸಾಲದಾಗಿತ್ತು. ಅವರಿವರಿಗೆ ಹೋಲಿಸಿ ಯಾವಾಗಲೂ ದಂಡಿಸುತ್ತಿದ್ದರು. ದಿನವೂ ಒಂದಿಲ್ಲೊಂದು ವಿಷಯಕ್ಕೆ ಬೈಗುಳ ಸಿದ್ಧ. ಆ ನೋವು ಅವಳನ್ನು ಕಾಡಿಸುತ್ತಿತ್ತು. ತಾವು ಕಷ್ಟದಲ್ಲಿ ಮುಂದೆ ಬಂದಿರುವುದು, ನಮ್ಮ ಮಕ್ಕಳು ನಮ್ಮಂತೆ ಕಷ್ಟ ಪಡಬಾರದು , ಜೀವನದಲ್ಲಿ ಉನ್ನತಿ ಹೊಂದಬೇಕೆಂದು ಎಲ್ಲ ತಂದೆ ತಾಯಿಯರ ಅಭಿಲಾಷೆ. ಆದರೆ ಆ ಆಸೆ ಅತಿಯಾಗಿ ಬೆಳೆದ ಮಗಳನ್ನೇ ಬಲಿ ತೆಗೆದುಕೊಂಡಿತು..
ನನಗೆ ಇನ್ನೂ ಚೆನ್ನಾಗಿ ನೆನಪಿದೆ. ನಾನು ಮದುವೆಯಾಗಿ ಹೋಗಿದ್ದು 2004 ರಲ್ಲಿ, ಆ ಒಂದು ಸಣ್ಣ ಮನೆಗೆ. ನಾನು ಪ್ರೀತಿಸಿ ಮದುವೆಯಾಗಿದ್ದರಿಂದ ಶುರುವಿನಲ್ಲಿ ಅಷ್ಟಾಗಿ ನಮ್ಮ ಮನೆಗೆ ಯಾರೂ ಬರುತ್ತಿರಲಿಲ್ಲ. ಅಲ್ಲದೆ ನಾನು ಕೆಲಸದಿಂದ ಹಿಂತಿರುರುವಾಗ ಸಂಜೆ 6.30 – 7 ಘಂಟೆ ಆಗುತ್ತಿತ್ತು. ಒಂದು ವರ್ಷದೊಳಗೆ ನಮ್ಸ್ಗೆ ಬಹಳ ಮುದ್ದಾದ ಗಂಡುಮಗುವಾಯಿತು. ಆ ಮಗು, ನನ್ನ ಮಡಿಲಿಗೆ ಸೇರುತ್ತಿರಲಿಲ್ಲ, ಆ ಬೀದಿಯವರೆಲ್ಲಾ ಸೇರಿ ಬೆಳೆಸಿದರು.
ಆ ಮಗುವನ್ನು ನೋಡಲು ದಿನವೂ 12 ವರ್ಷದ ಹುಡುಗಿ ಹಾಜರಾಗುತ್ತಿದ್ದಳು. ಅವರಮ್ಮನ ಬೈಗುಳವನ್ನು ಕಡೆಗಣಿಸಿ, ಕಣ್ತಪ್ಪಿಸಿ ಯಾವುದೋ ಮಾಯದಲ್ಲಿ ಮಗುವಿಗಾಗಿ ಹಂಬಲಿಸಿ ಬರುತ್ತಿದ್ದಳು. ಅಡುಗೆ ಮಾಡುವಾಗ, ಪಾತ್ರೆ ತೊಳೆಯುವಾಗ, ಮಗುವಿಗೆ ಸ್ನಾನ ಮಾಡಿಸುವಾಗ, ಒಂದ,ಎರಡ…ಎಲ್ಲವನ್ನೂ ಮಾಡುತ್ತೇನೆ ಎಂದು ಹಠ ಹಿಡಿಯುತ್ತಿದ್ದಳು. ಹಾಡು, ಲಾಲಿ…ಲಾಲಿ ಹಾಡಿ ಜೋಲಿಯಲ್ಲಿ ತೂಗಿ ಮಲಗಿಸುತ್ತಿದ್ದಳು.ಬೇಡವೆಂದರೂ ಕೇಳದೆ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದಳು. ಹಾಗೆ ಒಮ್ಮೆ ಓಡುವಾಗ ಬೀಳಿಸಿದಳೂ ಕೂಡ. ಪಾದರಸದಂತೆ ಇದ್ದಳು. ಬೀದಿಯವರ ಕಣ್ಣೂ ಅವಳ ಮೇಲೆಯೇ. ನನ್ನ ಮಗ ಬೆಳೆಯುತ್ತಾ ಹೋದಂತೆ ಅವಳೂ ಬೆಳೆದಳು. ಅವಳಿಗೆ ಅವರಮ್ಮ, ಅಪ್ಪನಿಂದ ನಿರ್ಬಂಧ ಜಾಸ್ತಿ ಆಗುತ್ತಾ ಹೋಯಿತು. ನನ್ನ ಮಗನಿಗೆ ಲ್ಯಾಪ್ ಟಾಪ್. ಮೊಬೈಲ್ ನಲ್ಲಿ ಆಡುವ ಹುಚ್ಚು. ನಾವು ಕೊಡದಿದ್ದಾಗ, ಮಗುವನ್ನು ಕದ್ದು ಕರೆದೊಯ್ದು ಅವಳಮನೆಯಲ್ಲಿ ಅವಿತಿಟ್ಟು ಮೊಬೈಲ್ ಅನ್ನು ಆಟವಾಡಲು ಕೊಡುತ್ತಿದ್ದಳು.
ಅವಳ ಚುರುಕು, ಅಂದಕ್ಕೆ ಮಾರು ಹೋಗದ ಹುಡುಗರೇ ಇರಲಿಲ್ಲ. ಅವಳ ಹುಡುಗಾಟಿಕೆ ಜಾಸ್ತಿಯಾಯಿತು. ತುಂಬಾ ದುಡ್ಡು ಇಟ್ಟಿರುವವರನ್ನು ಮದುವೆಯಾಗಬೇಕು, ರಾಣಿಯ ಹಾಗೆ ಇರಬೇಕು ಅಂತ ಕನಸು ಕಾಣುತ್ತಿದ್ದಳು. ಒಮ್ಮೆ ಅವಳ ಮಾವನ ಮಗಳ ಮದುವೆಗೆ ಹೋದಾಗ ಒಬ್ಬ ಹುಡುಗ ಇವಳ ಹಿಂದೆ ಬಿದ್ದ. ಇವಳು ಯೌವನೆ. ಯಾವುದು ಸರಿ ಯಾವುದು ತಪ್ಪು ಅನ್ನುವ ವಿವೇಚನೆ ಇಲ್ಲ, ಪ್ರೀತಿಯಲ್ಲಿ ಮುಳುಗಿದಳು. ಆದರೆ ಅಪ್ಪ-ಅಮ್ಮನಿಗೆ ಇಷ್ಟವಿಲ್ಲ. ಸರಿ ಬೈಗುಳ, ಬುದ್ಧಿ ಮಾತು, ನಿಂದನೆ ಶುರುವಾಯ್ತು. ಅವನನ್ನು ಮದುವೆಯಾದರೆ ತಾನು ಸತ್ತು ಹೊಗುತ್ತೇನೆ ಅಂತ ತಾಯಿ ಹೆದರಿಸಿದರು. ಇತ್ತ ತಂದೆ-ತಾಯಿಯರನ್ನು ಬಿಡದೆ, ಹುಡುಗನನ್ನೂ ಬಿಡಲಾರದೆ, ತನಗೆ ತಾನೇ ಅಂತ್ಯ ಕಂಡುಕೊಂಡು ಬಿಟ್ಟಳು! ಅಂತ್ಯ…ಮರಳಿ ಬಾರದ ಅಂತ್ಯ.
ಅವಳು ಸಾಯುವ 10 ತಿಂಗಳ ಮುಂಚೆ ನಾವು ಬೇರೆ ಮನೆಗೆ ಬಂದು ಬಿಟ್ಟಿದ್ದೆವು. ಆ 9 ವರ್ಷಗಳನ್ನು ನಾವು ಈಗಲೂ ಮರೆಯಲು ಆಗುತ್ತಿಲ್ಲ. ನನ್ನ ಮಗನಿಂದ ನಾವು ಮೇಘ ಇಹಲೋಕ ತ್ಯಜಿಸಿದ ವಿಷಯವನ್ನು ಮುಚ್ಚಿಟ್ಟಿದ್ದೇವೆ. ಕಾರಣ…ಆ ಪುಟ್ಟ ಮಗು ಕೇಳುವ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿಲ್ಲ!!
ತಂದೆ ತಾಯಂದಿರು ಕೇವಲ ನಿಂದನೆ, ದೂಷಣೆ ಮಾಡದೆ ಸ್ನೇಹಿತರಂತೆ ವರ್ತಿಸಿದರೆ ಇಂತಹ ಅನೇಕ ಸಾವುಗಳನ್ನು ತಡೆಯಬಹುದೇನೋ. ಇರುವುದು ಒಂದೇ ಬದುಕು, ಅದನ್ನು ಹಸನು ಮಾಡುವೆಡೆಗೆ ಎಲ್ಲರೂ ನಡೆಯಬೇಕು. ತಪ್ಪನ್ನು ತಿದ್ದುವ ಗುಣವಿರಬೆಕು. ಅಹಂ, ಛಲವನ್ನೆಲ್ಲಾ ಬದಿಗೊತ್ತಿ ಅದರಾಚೆ ನಿಂತು ನೋಡಿದಾಗ ಯಾವುದೂ ತಪ್ಪಲ್ಲ! ಜೀವನ ನಶ್ವರ.
ನೋಡಿದಷ್ಟು ಕಣ್ಣು ತಣಿಯದ ನೋಟ, ಬಾನಂಚಿನ ನೋಟ, ಅಳಿಯದ ನೆನಪು, ಮೇಘ…..
12/03/2014
ಮನ ಮುಟ್ಟುವ೦ಥ ಕಥೆ ಚೆನ್ನಾಗಿದೆ
ಉತ್ತಮ ಬರಹ.ಮಕ್ಕಳು ಮಾನಸಿಕವಾಗಿ ಕುಗ್ಗದಂತೆ ಹೆತ್ತವರು ಗಮನಿಸಬೇಕು. ಅಥವಾ ಖಿನ್ನತೆ ಕಾಡುತ್ತಿದ್ದಲ್ಲಿ ಆತ್ಮಹತ್ಯೆಯೇ ಪರಿಹಾರವೆನಿಸಿಕೊಳ್ಳುವುದು ಇಂದಿನ ಯುವಜನತೆಗೆ ತಕ್ಕುದಲ್ಲ, ಬದಲಾಗಿ ಉತ್ತಮ ಗೆಳೆಯರ ಬಳಗವನ್ನು ಸಂಪಾದಿಸಿಕೊಂಡು ಅವರ ಸಹಾಯದಿಂದ ಸಮಸ್ಯೆಗಳನ್ನು ಬಗೆಹರಿಸಿಕ್ಕೊಳ್ಳಬೆಕು.
ಉತ್ತಮ ಬರಹ. ಬಾಳಿ ಬದುಕಬೇಕಾದ ಎಳೆಯ ಮನಸ್ಸು ಯಾಕೆ ದುಡುಕುತ್ತದೆಯೋ ಅನಿಸಿತು. ಇದರಲ್ಲಿ ಹೆತ್ತವರ ಪಾಲೂ ಇದೆ!