ಮನದ ಮಾತು
ಮನಸಿನೊಳಗೆ ಸುರಿದ ನಿನ್ನ ಮೌನ
ಮೌನಕೆ ಮಾತಿಲ್ಲ ಕಥೆಯಿಲ್ಲ,
ಹಾಡು ಹಸೆಯ ಹಂಗಿಲ್ಲ,
ನಿನ್ನ ನೆನಪು ಎದೆಯ ಗಾಳಕ್ಕೆ ಸಿಲುಕಿ
ಕಲಕಿದಂತೆ ಅಂತರಾಳದ ಕಡಲು,
ಹಾಡೆಲ್ಲ ಮೂಕವಾಗಿ
ಹಾಡೊಳಗೆ ಶೋಕದ ಸಾಲು!
ಒಂದಷ್ಟು ರೆಕ್ಕೆಗಳು ನನ್ನ ಬಳಿ ಇವೆ,
ಹಾರಿ ಹೋಗುವ ಬಯಕೆ
ಉದುರಿದ ರೆಕ್ಕೆಗೆ ಯಾವ ತೆಕ್ಕೆ?
ಗಗನವೂ ಇಲ್ಲ, ಗಾಳಿಯೂ ಇಲ್ಲ!
ಒಂದಷ್ಟು ಕನಸುಗಳು ನನ್ನ ಬಳಿ ಇವೆ,
ಕಣ್ತೆರೆದು ನೋಡುವ ಬಯಕೆ.
ಚದುರಿದ ಕನಸಿಗೆ ಯಾವ ಮಾನ್ಯತೆ?
ಉಸಿರೂ ಇಲ್ಲ, ದಿರಿಸೂ ಇಲ್ಲ!
ಒಂದಷ್ಟು ಹಾಡುಗಳು ನನ್ನ ಬಳಿ ಇವೆ.
ಎದೆ ತುಂಬ ಹಾಡುವ ಬಯಕೆ
ಮಾತಿರದ ಹಕ್ಕಿಗೆ ಯಾವ ಸಾಮ್ಯತೆ?
ನನಗೆ ರಾಗವೂ ಇಲ್ಲ, ಅನುರಾಗವೂ ಇಲ್ಲ!
-ಪ್ರಭು ಆರ್, ನಂಜನಗೂಡು.
10/03/2014
Beautifully narrated Prabhu… Pls keep going.
nice. very intense and poignant.
ಒಳ್ಳೆಯ ಕವಿತೆ.