ನಾಲ್ಕು ಹೆಜ್ಜೆ
ನೆನಪು ಇಲ್ಲದ್ದು
ಮೊದಲ ಹೆಜ್ಜೆಯಲ್ಲೆ ಬಿದ್ದು
ಅಮ್ಮನ ಮುದ್ದಿಗೆ ಅತ್ತದ್ದು
ನಾಲ್ಕು ಹೆಜ್ಜೆ ಇಟ್ಟು
ಚಪ್ಪಾಳೆ ತಟ್ಟುವ
ಅವಳ ಮುಟ್ಟಿ ನಕ್ಕದ್ದು
ಓಡುವ ಧಾವಂತದಲ್ಲಿ
ಹೊಸಿಲೆಡವಿ ಹಲ್ಲು ಮುರಿದದ್ದು
ಅವಳು ಅತ್ತು ಧಾರೆಯಾದದ್ದು
ನೋವೆಲ್ಲಿ ಎಂದು ವಿಲವಿಲಸಿದ್ದು.
ಅಸ್ಪಷ್ಟ ನೆನಪು
ನಾನು ಹಠದ
ಉದ್ಧಟನಾಗುತ್ತಿದ್ದದ್ದು
ರಗಳೆಯ ರಾಗ ಎಳೆದು
ದೂರುಗಳ ಹೊತ್ತು
ಮನೆವರೆಗೂ ತರುತ್ತಿದ್ದದ್ದು
ಅಮ್ಮನ ರಕ್ಷಣೆಯಲ್ಲಿ ಹೊಸ
ಹಕ್ಕುಗಳ ಸ್ಥಾಪಿಸುತ್ತಿದ್ದದ್ದು
ಲೆಕ್ಕವಿಲ್ಲದಷ್ಟು ಸೊಕ್ಕುಗಳ ಕಟ್ಟುಗಳು
.
ಇಟ್ಟ ಎಲ್ಲ ಹೆಜ್ಜೆಗಳಲ್ಲು
ಅಮ್ಮ ತಿಳಿಸಿಕೊಟ್ಟ
ಅಲಿಖಿತ ಪಠ್ಯದ ಪಾಠ
ಮಾತುಗಳಲ್ಲಿ ಅವಳ ಛಾಯೆ
ಗೆಲುವುಗಳಲ್ಲಿ ಅವಳ ಛಲ
ಉಳಿಯಿಲ್ಲದ ಕೆತ್ತನೆ ನಾನು
ನನ್ನೆಲ್ಲ ಹೆಜ್ಜೆಗಳಲ್ಲಿ ಅವಳ ಎಚ್ಚರ
ಗುರಿ ಗೆಲವು ಗೆಲುವು
.
ಉರುಳಿದ ವರ್ಷಗಳ ಮೊತ್ತದಲ್ಲಿ
ಎಲ್ಲ ದೃಷ್ಟಿಗರ ಶಿಲ್ಪವಾಗಿದ್ದೇನೆ
ಆಕಾಶದೆತ್ತರ ಬೆಳೆವ ಹುಮ್ಮಸಿ
ಗೆಳೆಯ ಗೆಳತಿಯರ ಕೇಂದ್ರ ಬಿಂದು
ಕೈಬೀಸಿ ಕರೆವ ಉದ್ಯಮಿಗಳ ಕಣ್ಮಣಿ
ಕಾಂಚಣದ ಗಣಿ, ಗಟ್ಟಿ ಹೆಜ್ಜೆ
ಜಟ್ಟಿ ಬಾಹುಗಳ ಅಸೀಮ
ವಸಾಹತುಗಾರ ನಾನು.
.
ಹೆದ್ದಾರಿಯಲ್ಲೇ ಗಮನವಿಟ್ಟವನು
ಕಳೆದ ದಾರಿಗೆ ತಿರುಗಿಲ್ಲ
ಅಲ್ಲಿ ಹತ್ತು ಹೆಜ್ಜೆಯೂ
ಅಮ್ಮನೊಡನಿಟ್ಟು
ಅವಳಾಸೆಯ ಕೂಸಾಗಲಿಲ್ಲ.
.
ನನ್ನ ಗಟ್ಟಿ ಉಸಿರ ಸಮಯ
ಅವಳು ಕ್ಷೀಣ ದೇಹಿ
ಅಚೇತನ ಆವರಿಸಿದವಳಿಗೆ ಉಪಚರಿಸಲಿಲ್ಲ
ಧೈರ್ಯ ಅವಳೆದೆಗೆ ತುಂಬಲಿಲ್ಲ
ಅವಳ ಕನಸ ಕೊನರಿಸಲಿಲ್ಲ
ನಾಲ್ಕು ಹೆಜ್ಜೆ ಅವಳೊಡನೆ ಇಡಲಿಲ್ಲ.
.
ಕೊನೆಗೂ
ನನ್ನ ಕೊರಗಿಗೆ ಸಮಾಪ್ತಿ ಹಾಡಿಯೇ
ಬಿಟ್ಟ ಅಮ್ಮ ಹೆಜ್ಜೆಯೂರಿಸಿದಳು
ಮಡಕೆಯಲ್ಲಿ ಕೆಂಡ
ಹೊಗೆಯೊಡನೆ ಅವಳ ಕಳೇಬರ
ಮುಂದೆ ನನ್ನ ಹೆಜ್ಜೆ ಅವಳೊಟ್ಟಿಗೆ
ಹೊತ್ತು ಬರುವ ಎಂಟು ಕಾಲು
ಘಟಕ್ಕೆ ಸಿದ್ದವಾದ ನನ್ನ ಹೆಗಲು
-ಅನಂತ ರಮೇಶ್ ,ಬೆಂಗಳೂರು
ಬಲು ಭಾವಪೂರ್ಣ ಕವನ. ಇಷ್ಟವಾಯಿತು.
ಧನ್ಯವಾದಗಳು.
ನೈಸ್ ಪೊಯಮ್ !ಚೆನ್ನಾಗಿದೆ
ಧನ್ಯವಾದಗಳು 🙂