ಬಹುಧಾನ್ಯದಿಂದ ಬಹುಧಾನ್ಯಕ್ಕೆ – ಆತ್ಮಕಥನ
“ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು, ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ” ಅಂದಿದ್ದಾರೆ ಡಿ.ವಿ.ಜಿ ಯವರು. ಆದರೆ, ಈ ಮಾತಿನಂತೆ ಬಾಳಿ, ಬದುಕನ್ನೇ ಸಾಹಸಯಾತ್ರೆಯಾಗಿಸುವ ಛಲ, ಚೈತನ್ಯ ಇರುವವರು ಬಲು ವಿರಳ. ತಮ್ಮ ಜೀವನದುದ್ದಕ್ಕೂ ಸಂಕಷ್ಟಗಳು ಅವಿರತವಾಗಿ ಬಂದು ಅಪ್ಪಳಿಸಿದರೂ, ಹೇಗೋ ಕಷ್ಟಪಟ್ಟು, ಅವುಗಳನ್ನು ಎದುರಿಸಿ ತನ್ನ ಹಾಗೂ ಪುಟ್ಟ ಮಕ್ಕಳ ಭವಿಷ್ಯವನ್ನು ರೂಪಿಸಿಕೊಂಡ ದಿಟ್ಟ ಮಹಿಳೆಯಾದ ಶ್ರೀಮತಿ ಪರಮೇಶ್ವರಿ ಲೋಕೇಶ್ವರ್ ಅವರನ್ನು ಇತ್ತೀಚೆಗೆ ಭೇಟಿಯಾದೆ.
ಮೈಸೂರಿನಲ್ಲಿ ವಾಸವಿದ್ದು, ಅಲ್ಪ ಸ್ವಲ್ಪ ಕನ್ನಡ ಪುಸ್ತಕಗಳ ಓದು ಹಾಗೂ ಗುಡ್ಡ-ಬೆಟ್ಟಗಳಿಗೆ ಚಾರಣ ಕೈಗೊಳ್ಳುವ ಹವ್ಯಾಸವನ್ನು ರೂಢಿಸಿಕೊಳ್ಳುತ್ತಿರುವ ನನಗೆ ಶ್ರೀಮತಿ ಪರಮೇಶ್ವರಿ ಲೋಕೇಶ್ವರ್ ಅವರ ಪರಿಚಯವಾಗಿದ್ದು ತೀರಾ ಅನಿರೀಕ್ಷಿತವಾಗಿ, ಬೆಟ್ಟದಲ್ಲಿ ಚಾರಣ ಮಾಡುತ್ತಿರುವಾಗ ಆಕಸ್ಮಿಕವಾಗಿ ಕಂಡ ಸೊಗಸಾದ ವನಪುಷ್ಪದಂತೆ! ಮಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಅವರ ಬಳಿ ಒಂದಿಷ್ಟು ಮಾತನಾಡುವ ಸಂದರ್ಭ ಲಭಿಸಿತು. ಪ್ರಥಮ ಪರಿಚಯದಲ್ಲಿಯೇ ಆತ್ಮೀಯರಾದರು.
ಅವರ ಆತ್ಮಕಥನ ‘ಬಹುಧಾನ್ಯದಿಂದ ಬಹುಧಾನ್ಯಕ್ಕೆ’ ಪುಸ್ತಕವನ್ನು ಪಡೆದುಕೊಂಡೆ. ಕೆಲವು ಪುಟಗಳನ್ನು ಓದಿ, ನಿಧಾನಕ್ಕೆ ಬಿಡುವಿದ್ದಾಗ ಇಡೀ ಪುಸ್ತಕವನ್ನು ಓದಿದರಾಯಿತು ಎಂಬ ಆಲೋಚನೆಯಿಂದಲೇ ಪುಸ್ತಕವನ್ನು ಕೈಗೆತ್ತಿಕೊಂಡಿದ್ದೆ. ಆದರೆ, ಪುಟಗಳನ್ನು ತಿರುವುತ್ತಾ ಹೋದಂತೆ ಅನಾವರಣಗೊಂಡ ಲೇಖಕಿಯವರ ಬಾಲ್ಯದಿಂದಲೇ ಆವರಿಸಿಕೊಂಡ ಸಂಕಷ್ಟಗಳು ಮತ್ತು ಅವುಗಳನ್ನು ಅವರು ಸಹಿಸಿ, ಎದುರಿಸಿದ ರೀತಿ ಮತ್ತು ಪ್ರಾಮಾಣಿಕ ನಿರೂಪಣೆಯು ಕೊನೆಯ ಪುಟದ ವರೆಗೂ ಪುಸ್ತಕವನ್ನು ಒಂದೇ ಗತಿಯಲ್ಲಿ ಓದಿಸಿಕೊಂಡು ಹೋಯಿತು!
ಕುಮಟಾದ ‘ಬಾಡ’ ಎಂಬ ಪುಟ್ಟ ಹಳ್ಳಿಯಲ್ಲಿ, 1938ರ ಇಸವಿಯಲ್ಲಿ, ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಲೇಖಕಿಯವರು ಒಂದು ವರ್ಷದ ಮಗುವಾಗಿದ್ದಾಗಲೇ ಮಾತೃವಿಯೋಗವಾಗಿತ್ತು, ಸೋದರತ್ತೆಯರ ಅಕ್ಕರೆ ಲಭಿಸಿದುದು ಇವರ ಪಾಲಿಗೆ ಸುಯೋಗವಾಗಿತ್ತು. ಬಡತನ, ಅಹಿತಕರ ಬಾಲ್ಯ, ಓದುವುದಕ್ಕಾಗಿ ಉಳಕೊಂಡಿದ್ದ ಮನೆಯಲ್ಲಿ ಅನಾದರ ಬಾಲ್ಯದ ಕಹಿ ಅನುಭವಗಳಾಗಿದ್ದುವು. ಇವುಗಳ ನಡುವೆಯೂ, ಅಲ್ಲಿಯ ಪ್ರಾಥಮಿಕ ಶಾಲೆಯಲ್ಲಿ ಲಭ್ಯವಾದಷ್ಟು ವಿದ್ಯೆಯನ್ನು ಕರಗತಮಾಡಿಕೊಂಡ ಅವರ ಛಾತಿ ಶ್ಲಾಘನೀಯ.
ಅಂದು ಪ್ರಚಲಿತವಿದ್ದ ಪದ್ಧತಿಗನುಗುಣವಾಗಿ, ಬದುಕಿದ ಬಾಲವಿಧವೆಯರಾದ ಅವರ ಸೋದರತ್ತೆಯರ ಬಗ್ಗೆ ಓದುವಾಗ, ನಮ್ಮ ಕಣ್ಣುಗಳು ಮಂಜಾಗುತ್ತದೆ. ಆದರ್ಶ ಶಿಕ್ಷಕರಾಗಿ ರೂಪುಗೊಳ್ಳುತ್ತಿದ್ದ ಪತಿ ಲೋಕೇಶ್ವರ್ ಅವರೊಂದಿಗೆ ಇದ್ದುದದರಲ್ಲಿ ಸಂತೋಷವಾಗಿ ಬದುಕುತ್ತಿದ್ದಾಗ ತಂದೆಯವರ ಅಸೌಖ್ಯತೆ ಮತ್ತು ಮರಣ, ಆಸರೆಗಾಗಿದ್ದ ಸೋದರತ್ತೆಯವರ ಮರಣ…..ಹೀಗೆ ವಿಧಿ ತನ್ನ ಕ್ರೂರ ಅಟ್ಟಹಾಸ ಮೆರೆಯುತ್ತಾ ಬಂದಿತ್ತು. ಹೀಗಿರುವಾಗ ಇನ್ನೂ 25 ರ ಹರೆಯದಲ್ಲಿ, ಅನಾರೋಗ್ಯಕ್ಕೀಡಾದ ಪತಿಯನ್ನೂ ಕಳೆದುಕೊಂಡ ಇವರಿಗೆ ಇಬ್ಬರು ಪುಟ್ಟ ಮಕ್ಕಳೊಂದಿಗಿನ ಮುಂದಿನ ಜೀವನವೇ ಸವಾಲಾಗಿತ್ತು.
ಸಣ್ಣ ಪುಟ್ಟ ವೈಫಲ್ಯಗಳಿಗೆ ಮನನೊಂದು ಅತ್ಮಹತ್ಯೆ ಮಾಡಿಕೊಳ್ಳುವ ಜನರಿರುವ ಈ ಸಮಾಜದಲ್ಲಿ, ‘ಈಸಬೇಕು, ಇದ್ದು ಜೈಸಬೇಕು’ ಎಂದು, ಎದುರಾದ ವಿವಿಧ ವಿಘ್ನಗಳಿಗೆ ಎದೆಗುಂದದೆ, ತಮ್ಮ ಆರ್ಥಿಕ ದುಸ್ಥಿತಿಗೆ ಕೊರಗದೆ, ವಿದ್ಯಾಭ್ಯಾಸವನ್ನು ಮುಂದುವರಿಸಿ, ಅಧ್ಯಾಪಿಕೆಯಾಗಿ ತನ್ನ ಬದುಕು ಕಟ್ಟಿಕೊಂಡರು. ತಾನು ಕಾರ್ಯನಿರ್ವಹಿಸಿದ ಎಲ್ಲಾ ಶಾಲೆಗಳಲ್ಲೂ, ಕರ್ತವ್ಯನಿಷ್ಠರಾಗಿ ದುಡಿಯುತ್ತಾ ಉತ್ತಮ ಶಿಕ್ಷಕಿ ಎಂಬ ಗೌರವವನ್ನೂ ಸಂಪಾದಿಸಿದರು. ತನ್ನ ಪುಟ್ಟ ಮಕ್ಕಳಿಬ್ಬರಿಗೂ ಸೂಕ್ತ ವಿದ್ಯಾಭ್ಯಾಸ ಕೊಡಿಸಿ, ಅವರು ತಮ್ಮ ಕ್ಷೇತ್ರಗಳಲ್ಲಿ ಛಾಪನ್ನು ಮೂಡಿಸುವಂತಾದುದು ಈ ಅಮ್ಮನ ಪರಿಶ್ರಮಕ್ಕೆ ಸಿಕ್ಕ ಫಲ.
1938 ರ ‘ಬಹುಧಾನ್ಯ’ ಸಂವತ್ಸರದಲ್ಲಿ ಜನಿಸಿದ ಇವರು, ತನ್ನ 60 ನೆಯ ವಯಸ್ಸಿನ ಜೀವನದೆಡೆಗೆ ಹಿಂತಿರುಗಿ ನೋಡುತ್ತಾ, ಇನ್ನೊಂದು ‘ಬಹುಧಾನ್ಯ’ ಸಂವತ್ಸರದ ವರೆಗೆ ಬರೆದ ಆತ್ಮಕಥನವಿದು. ತನ್ನ ಕಷ್ಟದ ದಿನಗಳಲ್ಲಿ ವಿವಿಧ ರೂಪದಲ್ಲಿ ಸಹಾಯಮಾಡಿದವರೆಲ್ಲರನ್ನೂ ವಿನಮ್ರವಾಗಿ ಸ್ಮರಿಸುತ್ತಾರೆ. ಹಾಗೆಯೇ ತನ್ನ ಪ್ರಗತಿಗೆ ಅಡ್ಡಗಾಲು ಹಾಕಿದವರ ಬಗ್ಗೆ ಸಹಜ ಸಿಟ್ಟು, ಸಾತ್ವಿಕ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಒಟ್ಟಿನಲ್ಲಿ ‘ಫಣಿಯಮ್ಮ’ನಾಗುವ ಸಾಧ್ಯತೆಯಿದ್ದ ಮಹಿಳೆಯೊಬ್ಬರು ‘ಬೆಂಕಿಯಲ್ಲಿ ಅರಳಿದ ಹೂವು’ ಆಗಿರುವುದು ಇವರ ಯಶೋಗಾಥೆ. ಸಣ್ಣ ಕಾರಣಗಳಿಗೂ ಅತಿಯಾಗಿ ಚಿಂತಿಸುವವರಿಗೆ, ಕೀಳರಿಮೆಯಿಂದ ಬಳಲುವವರಿಗೆ, ಜೀವನದಲ್ಲಿ ಹತಾಶರಾದವರಿಗೆ ಈ ಪುಸ್ತಕದ ಓದು ನಿಜಕ್ಕೂ ಸ್ಪೂರ್ತಿದಾಯಕ ಮತ್ತು ಚೇತೋಹಾರಿಯಾಗಬಲ್ಲುದು.
ಖ್ಯಾತ ಸಾಹಿತಿ ವೈದೇಹಿ ಅವರ ಮುನ್ನುಡಿಯೊಂದಿಗೆ ಹಾಗೂ 15 ಕ್ಕೂ ಹೆಚ್ಚು ಸಹೃದಯ ಓದುಗರ ಅಭಿಪ್ರಾಯದೊಂದಿಗೆ ಎರಡನೆಯ ಮುದ್ರಣವನ್ನು ಕಂಡ ‘ಬಹುಧಾನ್ಯದಿಂದ ಬಹುಧಾನ್ಯಕ್ಕೆ’ ಪುಸ್ತಕವು 168 ಪುಟಗಳನ್ನು ಹೊಂದಿದ್ದು, ‘ಛಾಯಾ ಸಾಹಿತ್ಯ, ಬೆಂಗಳೂರು’ ಇವರ ಪ್ರಕಾಶನದಲ್ಲಿ ಸೊಗಸಾಗಿ ಮೂಡಿ ಬಂದಿದೆ.
– ಹೇಮಮಾಲಾ. ಬಿ
ಜಯ ಹೊ!
ಪುಸ್ತಕ ಪರಿಚಯದೊಟ್ಟಿಗೆ ಲೇಖಕರ ಸಾಧನೆಯನ್ನೂ ಸಂಕ್ಷಿಪ್ತದಲ್ಲಿ ಚೆನ್ನಾಗಿ ಕೊಟ್ಟಿದ್ದೀರಿ. ಪುಸ್ತಕ ಓದುವ ಕುತೂಹಲ ಮೂಡಿಸಿದ್ದೀರಿ. ಧನ್ಯವಾದಗಳು.
ಪರಮೇಶ್ವರಿ ಲೋಕೇಶ್ವರ್ ಇವರನ್ನು ಬಲ್ಲೆ. ಇವರ ಮಗಳು ವಿಜಯಲಕ್ಷ್ಮಿ ಶ್ಯಾನುಭೋಗ್ ನನ್ನ ಆತ್ಮೀಯ ಸ್ನೇಹಿತೆ.