ಉಳಿದುಹೋದೊಂದು ಪತ್ರ

Share Button

Nishkala Gorur

ಸಾವು ಎಲ್ಲವನ್ನು ಮೀರಿದ್ದು ಎನ್ನುವುದಾದರೆ, ನನ್ನ ಪಾಲಿಗೆ ನೆನೆಪು ನೋವು, ಸಂಕಟಗಳನ್ನು ಮೀರಿದ್ದು.

ಅಂದು ಭಾನುವಾರ, ಹೊಟ್ಟೆ ತುಂಬ ಊಟ ಮಾಡಿ ಅಂಗಾತ ಮಲಗಿದ್ದೊಂದೇ ನೆನಪು. ಅದ್ಯಾವಾಗ ನಿದ್ದೆ ಹತ್ತಿತ್ತೊ “ ಪಾಪು ಏಳು 4:30 ಆಯ್ತು ಅದೆಷ್ಟೊತ್ ಮಲ್ಗ್ತೀಯ ಸೋಮಾರಿ” ಎಂದು ಅಮ್ಮ ಗೊಣಗುಟ್ಟಿದಾಗಲೇ ಎಚ್ಚರವಾದದ್ದು. ಅಮ್ಮನನ್ನು ಶಪಿಸುತ್ತಲೆ ಮೇಲೆದ್ದು, ಮುಚ್ಚಿದ್ದ ಕಿಟಕಿಯ ಪರದೇ ಸರಿಸಿ ಹೊರ  ನೋಡಿದೆ, ಹದವಾದ ಮಳೆಬಿದ್ದು ತಂಪಾಗಿದ್ದ ಧರೆ ಕಂಡು ಏನೋ ಆಹ್ಲಾದ. ಆಹಾ!! ಇಂಥ ಸಂಜೆಯಲ್ಲಿ ಒಂದು ಕಪ್ ಅಮ್ಮ ಮಾಡಿದ ಸ್ಟ್ರಾಂಗ್ ಕಾಫಿಯ ಜೊತೆ ನಮ್ಮ ನಿಸಾರ್ ಅಹಮ್ಮದ್ರ ಕವಿತೆ ಇದ್ರೆ ಸ್ವರ್ಗಕ್ಕೆ ನಾಲ್ಕೆ ಗೇಣು ಎಂದು “ಅಮ್ಮ ಒಂದು ಸ್ಟ್ರಾಂಗ್ ಕಾಫಿ ಪ್ಲೀಸ್” ಎಂದು ರೊಂನಿಂದಲೇ ಕೂಗಿ ನನ್ನ ಮೇಜಿನ ಕಡೆ ನೆಡೆದೆ, ಅಲ್ಲಿ ಕಂಡದ್ದು ಚಲ್ಲಾಪಿಲ್ಲಿಯಾಗಿದ್ದ ಪುಸ್ತಕಗಳ ಸಾಲು, ಅಲ್ಲಿಂದ ಹುಡುಕಿ ತಡಕಿ ನನ್ನಿಷ್ಟದ ಭಾವಗೀತೆಗಳನ್ನು ಬರೆದಿಟ್ಟಿದ್ದ ನೀಲಿ ಡೈರಿಯೊಂದನ್ನು ಎಳೆದು ಹೊರತೆಗೆದೆ. ಆದರೆ ನನಗೆ ಸಿಕ್ಕಿದ್ದು  ಸಾಗರೋಪಾದಿಯ ಭಾವತೀರದಲ್ಲೊಂದು ಉತ್ತರಿಸದೇ, ತೀರದ ಆಸೆಯ ಹೊತ್ತ ದೋಣಿಯಂತಿದ್ದೊಂದು ಪತ್ರ. ಸಾವು ಎಲ್ಲವನ್ನು ಮೀರಿದ್ದು ಎನ್ನುವುದಾದರೆ, ನನ್ನ ಪಾಲಿಗೆ ನೆನೆಪು ನೋವು, ಸಂಕಟಗಳನ್ನು ಮೀರಿದ್ದು. ಎಲ್ಲೋ ಹುಟ್ಟಿ, ಹೆಮ್ಮರವಾಗಿ ಬೆಳೆದು ಕೊನೆಗೆ ತನ್ನ ಅವಶೇಷಗಳ ಉಳಿಸಿಹೊದೊಂದು ನೆನಪು.

ಕೆಲವೊಮ್ಮೆ ಇದ್ದಕ್ಕಿದಂತೆ ಕೈಗೂಡಿ ಬರದೆ, ಹಗಲುಗನಸಾಗಿ ಉಳಿದ ಹಳೆಯ ಪ್ರಸಂಗಗಳು ನೆನಪಿಗೆ ಬಂದು, ಇಲ್ಲಿಂದ ಹೊರಗೆ ಬಾರದೇ ಹೋದರೆ ಬದುಕೇ ನಿಸ್ಸಾರವಾಗಿ ಬಿಡುತ್ತದೋ ಎನ್ನುವ ಯೋಚನೆ ತೀವ್ರವಾಗುತ್ತದೆ. ಕೋಡಲೆ ಸಮುದ್ರದ ದಡದಲ್ಲಿ ನಿಂತಾಗ ಕಾಲ ಕಳೆಗಿನ ಮರುಳು ಮೆಲ್ಲನೆ ಜಾರಿ ಹೋದಂತೆ ಯಾರ ಕೈಗೂ ಸಿಗದಂತೆ ಕಳಚಿಕೊಳ್ಳುತ್ತದೆ.

ಸಂಬಂಧವೊಂದು ಕೂಡುಕೊಳ್ಳುವಾಗ ಯಾವ ಮಾಯದಲ್ಲಿ ಕೂಡಿಸುತ್ತದೆಯೋ ಗೊತ್ತಿಲ್ಲ. ಯಾವುದೋ ಮಿಸ್ಡ್ ಕಾಲ್, ಎಲ್ಲೊ ಆದ ಪರಿಚಯ, ಇನ್ನೆಲ್ಲಿಗೊ ಹೋಗಿ ನಿಂತ ಕ್ಷಣ, ಮತ್ತಿಲ್ಲೊ ಆದ ಭೇಟಿ, ಅದ್ಭುತ ಸಂಬಂಧವೊಂದನ್ನು ಹುಟ್ಟಿ ಹಾಕಿಬಿಡುತ್ತದೆ. ನೆನ್ನೆ ನನ್ನ ಬದುಕಿಗೆ ಏನು ಅಲ್ಲದ ವ್ಯಕ್ತಿ ಇಂದು ನನ್ನ ಬದುಕೇ ಆಗಿಹೋಗಿರುತ್ತಾನೆ. ಹೀಗೆ ನನ್ನ ಬದುಕನ್ನು ಕೊಂಚ ಬದಲಿಸಿ, ಹೊಸ ಆಸೆ ಬಿತ್ತಿ, ಹೊಸ ಸಂಬಂಧ ಒಂದಕ್ಕೆ ಮುನ್ನುಡಿಯಾಗ ಬೇಕಾಗಿದ್ದ ಪತ್ರ ಕಳೆದ ಎರಡು ವರ್ಷಗಳಿಂದ ತನ್ನ ಕೆಲಸ ಮರೆತು ಇಲ್ಲೇ ಇದೆ.

ಆತ ಪುನಃ ಬರುತ್ತಾನೆ ಅನ್ನುವ ಒಂದಿನಿತೂ ಭರವಸೆಯ ನೆರಿಗೆ ನನ್ನ ಹಣೆಯ ಮೇಲೆ ಏಳುವುದಿಲ್ಲ. ತೊರೆದು ಹೋದ ಅನ್ನುವ ನೋವು ನನ್ನನ್ನು ಮತ್ತಷ್ಟು ವಿಚಲಿತಳನ್ನಾಗಿಸುವುದಿಲ್ಲ. ಇಷ್ಟು ದಿನ ಜತೆಗಿದ್ದ ನೆನಪುಗಳೇ ಬದುಕಿನುದ್ದಕ್ಕೂ ಸಾಕಾಗುವಷ್ಟಿದೆ. ಮತ್ತೆ ಬದುಕಲ್ಲಿ ಬಾರದ ಇನಿಯನಿಗೆ ಕೆಲ ನಿಮಿಷ, ಒಂದಿಷ್ಟು ತಾಸು, ಅದೆಷ್ಟೊ ದಿನ, ತಿಂಗಳು, ವರ್ಷಗಳೇ ಕಾದರೂ ಪ್ರಯೋಜನವಿಲ್ಲ ಅನ್ನುವುದು ಸತ್ಯ. ನಾನು ಪ್ರೇಯಸಿಯೋ, ಪ್ರತ್ಯಕ್ತೆಯೋ ಗೊತ್ತಲ್ಲ. ಆದರೆ ಅವನ ನೆನಪು ಒಮ್ಮೊಮ್ಮ ನಿರ್ಭಾವುಕಳನ್ನಾಗಿ ಮಾಡುತ್ತದೆ.

memoriesನಾನು ಪ್ರೀತಿ ಕೊಟ್ಟೆ, ಆತ ನೆನಪು ಬಿಟ್ಟು ಹೋದ. ಆದರೆ ಅವನು ನನ್ನವನಲ್ಲ ಅನ್ನುವ ಮಾತೇ ನನ್ನ ದೇಹವನ್ನು ಹಿಂಡಿ ಹಿಪ್ಪೆ ಮಾಡಿದಂತಹ ಯಮಯಾತನೆ ನೀಡುತ್ತದೆ.

ಅವನು ನನ್ನ ನೆನೆಯಬಹುದಾ? ನನ್ನ ಇಲ್ಲದಿರುವಿಕೆ ಆತನನ್ನು ಕಾಡ ಬಹುದಾ? ಒಂದೇ ಒಂದು ಸಲ ಭೇಟಿಯಾಗಬೇಕು ಅಂತೆಲ್ಲ ಆತನಿಗೂ ಅನಿಸಬಹುದಾ? ಆದರೆ ವಿಧಿ ಬರಹವೇ ಹಾಗಿದ್ದ ಮೇಲೆ ನನ್ನ ಪ್ರೀತಿಸಿü ದೂರವಾದವನನ್ನು ಶಪಿಸಿ ಪ್ರಯೋಜನವಿಲ್ಲ. ಇಂದು ಆತ ನನ್ನೊಂದಿಗಿಲ್ಲ, ಇನ್ಯಾರದೋ ಜತೆಯಲ್ಲಿ ದೂರ ದೇಶದಲ್ಲಿದ್ದಾನೆ. ಆ ಶ್ರೀಮಂತ ದೇಶದ ಇಬ್ಬನಿಯಲ್ಲಿ ನನ್ನ ನೆನಪು ಆತನ ಪಾಲಿಗೆ ಮಬ್ಬಮಬ್ಬಾಗಿ ಕಾಣಬಹುದು. ಆದರೆ ನನಗೆ ಹಾಗಲ್ಲ, ಆತನ ನೆನಪುಗಳ ಜತೆ ಬದುಕುವ ಅನಿವಾರ್ಯ ಅನ್ನುವುದಕ್ಕಿಂತ ಇಷ್ಟಪಟ್ಟೆ ಆರಿಸಿಕೊಂಡ ಮಾರ್ಗ ಅದು.

ತರಬೇತಿ ಕೇಂದ್ರ ಒಂದರಲ್ಲಿ ಪರಿಚಯವಾದ ಹುಡುಗ ಹೃದಯದಾಳಕ್ಕೆ ಇಳಿದಿದ್ದ. ನಮ್ಮ ಮಧ್ಯೆಯಿದ್ದ ಆ ಹೆಸರಿಡದ ಸಂಬಂಧ ನನಗೆ ಬಹಳ ಹಿಡಿಸಿತ್ತು. ‘ಆ’ ಸಂಬಂಧದ ಜತೆಗಿದ್ದಷ್ಟು ದಿನ ಆತ, ನೀನೆ ನನ್ನ ಗೆಳತಿ, ಸಂಗಾತಿ ಎಂದು ಆಣೆ, ಪ್ರಮಾಣ ಮಾಡಿಲ್ಲ, ನಾನೂ ಹಾಗೆ ನೋಡಿದರೆ ಕಣ್ಣಿನಿಂದಲೇ ಕೆಲಸ ಮಾಡಿಸಿಕೊಂಡು, ಮಾತಿನಲ್ಲಿ ಮಳೆಬಿಲ್ಲು ತಂದಿಲ್ಲ. ಆದರು ನಮ್ಮಿಬ್ಬರ ನಡುವೆ ಹೆಸರಿಡದ, ಇಬ್ಬರ ಸಹಿ ಇಲ್ಲದೊಂದು ಕರಾರಿತ್ತು. ನನ್ನಲ್ಲಿ ಬೆಚ್ಚಗೆ ಮಲಗಿದ್ದ ಏನೋ ಒಂದನ್ನು ಅವನ ಸಾಮಿಪ್ಯ ಬೆಡಿಬೆಬ್ಬಿಸಿತ್ತು.

ನನ್ನ ಹೊಸ ಬದುಕು ಇನ್ನೇನು ಶರುವಾಗುತ್ತದೆ ಅನ್ನುವ ಸಂಭ್ರಮದಲ್ಲಿದ್ದವಳಿಗೆ ವಿಧಿ ಯಾವ ರೂಪದಲ್ಲಿ ಬರುತ್ತದೆ ಎನ್ನುವ ಸಣ್ಣ ಸೂಚನೆಯೂ ಇರಲಿಲ್ಲ. ನನ್ನ ಕನಸಿನ ಬುತ್ತಿ ಅವನ ಕೈಲಿಡುವ ಹೋತ್ತಿಗೆ, ಆತ ತನ್ನ ನೌಕರಿ ಖಾತ್ರಿ ಪತ್ರವನ್ನು ನನ್ನ ಕಣ್ಮುಂದಿರಿಸಿದ್ದ. ನಾನು ಓಡುವ ಕುದುರೆಯ ಬಾಲ ಹಿಡಿಯಬೇಕೆನ್ನುವುದು ಆತನ ಬಯಕೆ. ಆದರೆ ನನ್ನ ಮನೆಯನ್ನು ಬಿಟ್ಟು ಬೇರೆ ಮನೆಯನ್ನು ಉದ್ದಾರಮಾಡುವ ಉದಾರ ಮನಸ್ನು ನನ್ನದಲ್ಲ. ಮರೆತು ಬಿಡು ಅಂದೆ ಅಷ್ಟೆ. ಮುಖ ತಿರುಗುಸುಕೊಂಡು ಅವ ನೆಡೆದುಬಿಟ್ಟ, ಆ ಮುಖದಲ್ಲಿ ಯಾವ ಛಾಯೆ ಇತ್ತೋ ನನಗೆ ಗೊತ್ತಲ್ಲ. ಆದರೆ ಆತನೊಂದಿಗೆ ಬದುಕು ಎಂದುಕೊಂಡಿದ್ದ ಮನಸ್ಸಿಗೆ ಆಘಾತವಾಗಿದೆ. ಜೋಪಾನವಾಗಿ ಒಂದೊಂದೇ ಕನಸುಗಳನ್ನು ಹೆಕ್ಕಿ ಹೆಕ್ಕಿ ಪೋಣಿಸಿದ್ದ ಅನುರಾಗದ ಪತ್ರ ಕೈಯಲ್ಲಿದೆ. ಅದರ ಒಂದೊಂದು ಪದವು ಅರ್ಥ ಕಳೆದುಕೊಂಡು ಮಬ್ಬಾಗಿದೆ, ಆದರೆ ಅದನ್ನು ತಿದ್ದುವ ಬಯಕೆ ನನಗಿಲ್ಲ. ನಡುಮನೆಯಿಂದ ಎದ್ದು ಬಾಗಿಲಿಗೆ ಬರುವಷ್ಟೇ ಸಹಜವಾಗಿ ಸಂಬಂಧವನ್ನು ಬಿಟ್ಟು ಬಂದಿದ್ದಾಗಿದೆ. ಕೆಲವೊಮ್ಮೆ ಆತನ ನೆನಪು ಮುಗಿಯದ ಕತ್ತಲ ರಾತ್ರಿಗಳ ಮೆರವಣಿಗೆಯಂತೆ ಭಯ ಮೂಡಿಸುತ್ತದೆ. ಆದರೆ ಅದರಿಂದ ತಪ್ಪಿಸಿಕೊಳ್ಳುವ ದಾರಿ ಈಗ ನನಗೆ ಕರಗತ.

broken-love

ಭವಿಷ್ಯದ ಈ ಅನಿಶ್ಚಿತತೆಯನ್ನು ನೋಡಿಯೇ ನಾನು ಏನೇ ಬರಲಿ ಗೊಣಗದೆ, ಕೊರಗದೆ, ಕೀಳರಿಮೆ ಇಲ್ಲದೆ, ತಿಳಿ ತಿಳಿದೂ ತಪ್ಪು ಮಾಡಿದಾಗಲೂ ಪಾಪಪ್ರಜ್ಞೆಯಿಲ್ಲದೆ ಹಸನಾದ ಬದುಕನ್ನು ಇನ್ನಷ್ಟು ಸುಂದರವಾಗು ಎಂದು ಮುಗುಳ್ನಕ್ಕಿದ್ದೇನೆ. ಪ್ರತಿ ಏಟು ಬಿದ್ದಾಗ ಗಟ್ಟಿಗೊಳ್ಳುವ ಬದಲಿಗೆ ಇನ್ನಷ್ಟು ಸೂಕ್ಷಗೊಳ್ಳುತ್ತೇನೆ. ಗಟ್ಟಿಗೊಂಡಷ್ಟು ನವೀರು ಭಾವಗಳನ್ನು, ಅನಿರೀಕ್ಷಿತ ಒಲುಮೆಗಳಿಗೆ ಸ್ಪಂದಿಸುವ ಕಂಪನ್ನು ಕಳೆದುಕೊಳ್ಳುತ್ತೇನೆ. ಈವರೆಗೆ ಅಂತಹ ಅನಿವಾರ್ಯತೆ ಬಂದಿಲ್ಲ. ಇದೆಲ್ಲಕ್ಕಿಂತ ಮಿಗಿಲಾದುದನ್ನು ಬೇರಾವುದೋ ರೂಪದಲ್ಲಿ ಜೀವನ ನನಗೆ ದೊರಕಿಸಿ ಕೊಟ್ಟಿದೆ. ದೂರ ದೇಶದಲ್ಲಿರುವ ಸ್ನೇಹಿತೆಯಂತೆ ಬಂಡುಕೋರರ ದಾಳಿಯಲ್ಲಿ ಆಪ್ತರನ್ನು ಕಳೆದುಕೊಂಡು ಹುಯಿಲಿಡದಂತೆ, ಇನ್ನೆರಡು ನಿಮಿಷದಲ್ಲಿ ತಲುಪಬೇಕಾದ ಸ್ಥಳ ತಲುಪದೇ ಅಪಘಾತದಲ್ಲಿ ಅಸುನೀಗಿದ ಪುಟ್ಟ ಮಕ್ಕಳ ಅಮ್ಮಂದಿರ ಬಡಬಾಗ್ನಿಯ ಬಿಸಿ ತಾಕದಂತೆ, ಏನೊಂದಕ್ಕೂ ಪರಿತಪಿಸದಂತೆ ಕಾಣದ ಕೈ ನನ್ನನ್ನು ಔದಾರ್ಯದಿಂದ ಕಾದಿದೆ ಎಂದು ನನ್ನ ಮೇಜಿನ ಮೇಲಿದ್ದ ರಾಯರ ಪಟಕ್ಕೆ ಧನ್ಯತೆಯಿಂದ ಕೈಮುಗುಯುತ್ತದಂತೆ, ಅಮ್ಮ ಕಾಫಿ ಲೋಟ ಹಿಡಿದು ಬಂದರು, ಕಾಫಿಯ ಹೊಗೆ ನನ್ನ ಕಣ್ಣೀರನ್ನು ಮರೆಮಾಡಿತ್ತು.

 

ಬೇಸರಾಗಿದೆ ಮಾತು

ಭಾರವಾಗಿದೆ ಮೌನ

ನೋವು ಕರಗಿದೆ ಕಣ್ಣಲಿ

 

ಅಡಿಗೆ ಚುಚ್ಚಿದ ಮುಳ್ಳು

ಒಳಗಡೆಯೇ ಮುರಿದಂತೆ

ಭಾವ ಕುಟುಕಿದೆ ಮನದಲಿ

 

ಮುರಿದ ಪ್ರೀತಿಯ ಮರೆಯು

ಬಾಳಿನೊಳು ಹೊಕ್ಕಿರಲು

ಸಾವ ಭಯ ತಾನೆರೆಯಿತೊ

ಮಳೆಯ ಆಸರೆ ಪಡೆಯ

ಹಾವ ಹೆಡೆಯಲಿ ನಿಂದ ಹಕ್ಕಿಯಂದದಿ ಬೀರಿತು

 

ಸಿಪ್ಪೆ ತಿರುಳನು ಉಳಿದು

ಮಣ್ಣಿಗುರುಳಿದ ಬೀಜ

ಕಲಿಸುವಂತೆಯೇ ಮೊಳಕೆಗೆ

ಎಲ್ಲಾ ನಂಟನು ತೊರೆದು ನಗ್ನವಾಗಿದೆ ಜೀವ

ಹೊಸದು ಬದುಕಿನ ಬಯಕೆಗೆ

ಬೇಸರವಾಗಿದೆ ಮಾತು.

 

 

 – ನಿಷ್ಕಲಾ ಗೊರೂರು

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: