ಹಿಮ ನದಿಯ ಪಿಸುಮಾತುಗಳು
ಹಿಮ ನದಿಯ ಪಿಸುಮಾತುಗಳ ಮೂಲಕ ಕಾವ್ಯ ಲೋಕಕ್ಕೆ ದಾಖಲಾಗುತ್ತಿರುವ ಭರವಸೆಯ ಕವಯತ್ರಿ ಕೊಡಗಿನ ಕುಶಾಲನಗರದ ಸುನೀತಾ ಲೋಕೇಶ್, ತಮ್ಮ ಅಂತರಂಗದ ಅನಿಸಿಕೆಗಳನ್ನು ಇಲ್ಲಿ ಕಾವ್ಯ ಕುಸುಮವಾಗಿಸಿದ್ದಾರೆ.ಸ್ವಾತಿ ಮಳೆಯ ಯಾವುದೋ ಒಂದು ಹನಿಬಿಂದು ಮುತ್ತಾಗುವಂತೆ ಪ್ರೇಮ ಪತ್ರ ಬರೆದ ಹನಿಯೊಂದು ಸೇರಬೇಕಾದ ಒಲವ ಹೃದಯವನ್ನು ಹೊಕ್ಕು ಜೀವ ನಾಡಿಯನ್ನು ಮುಟ್ಟಿಯೇ ತೀರುತ್ತದೆ ಎಂಬ ಅಗಾಧ ವಿಶ್ವಾಸದಲ್ಲಿ ಕವಿತೆಯೊಂದಿಗೆ ಇವರು ಸಂವಾದಿಸುತ್ತಾರೆ.
ಬಾಳ ಜಂಜಾಟದಲ್ಲಿ ಹೊನ್ನ ದೀವಿಗೆಯಂತಹ ಮೌನವನ್ನು ಆವಾಹಿಸಿಕೊಳ್ಳುವುದೇ ಒಳಿತು. ಗುಪ್ತಗಾಮಿನಿಯಾಗಿ ಹರಿವ ಮೌನದ ಸುಧೆಯಷ್ಟೇ ತಮ್ಮ ಅಂತರಂಗವನ್ನು ತಿಳಿಯಾಗಿಸಿ ಬದುಕನ್ನು ಸಹ್ಯವಾಗಿಸುವುದು ಎಂಬ ಅಪ್ಪಟ ಸತ್ಯವನ್ನು ಕಂಡುಕೊಂಡಿದ್ದಾರೆ.ಅದಕ್ಕೇ ಇರಬೇಕು ಸದಾ ಮೌನಿಯಾಗಿರುವ ಕವಿತೆಯನ್ನ ಇವರು ಆಪ್ತ ಸಖಿಯಾಗಿಸಿಕೊಂಡಿದ್ದಾರೇನೋ ಎನ್ನುವಂತೆ ಭಾಸವಾಗುತ್ತದೆ.
ಎಲ್ಲೋ ಒಂದು ಕಡೆ ಅಭಯ ನೀಡಲಾರದ ಮತ್ತೆಂದೂ ಚಿಗುರಲಾರದ ಒಣಮರದೆಡೆಗಿನ ಅಸಹಾಯಕ ನೋಟ ನಮ್ಮನ್ನು ನಿರಾಶೆಯ ಮಡುವಿನಲ್ಲಿ ಮುಳುಗಿಸಿದರೂ ತತ್‌ಕ್ಷಣವೇ ಗಾಳಿ ನೀರು ಇಹದಷ್ಟೇ ಅನಿವಾರ್ಯ ನನ್ನ ಗೆಳತಿಯರು ಅನ್ನುತ್ತಾ ಸಖಿಯರೊಡಗಿನ ಅಮೂಲ್ಯ ಸ್ನೇಹ ಸಾಂಗತ್ಯದ ಅಪೂರ್ವ ನೋಟದ ಅನಿಸಿಕೆ ಮತ್ತು ತಾನು ನಿಂತ ಊರಲ್ಲೇ ಖುಷಿಯನ್ನು ಹುಡುಕಿಕೊಳ್ಳುವ ತಹತಹಿಕೆ.ಇನ್ನೂ ಮುಂದಕ್ಕೆ ಹೋಗಿ ಸಂಕಟವನ್ನೆಲ್ಲವನ್ನೂ ಹೂವಾಗಿಸಿಕೊಳ್ಳುವ ಗುಲಾಬಿಕೊಂಬೆಯ ಕುಶಲಗಾರಿಕೆಯನ್ನು ತಮ್ಮೊಳಗೂ ಮೈಗೂಡಿಸಿಕೊಳ್ಳುವ ಕವಯತ್ರಿಯ ಜಾಣ್ಮೆಗೆ ಮನಸು ತಲೆದೂಗುತ್ತದೆ.
ಇಲ್ಲಿನ ಕವಿತೆಗಳಲ್ಲಿ ನೋವಿದೆ. ನಲಿವಿದೆ. ಆತ್ಮದ ಜೊತೆಗಿನ ಅನುಸಂಧಾನವಿದೆ.ಸಂಕಟಕ್ಕೆ ಮಿಡಿಯುವ ಕವಿ ಹೃದಯವಿದೆ.ಬದುಕ ಹಾದಿಯಲ್ಲಿ ಮುಖಾಮುಖಿಯಾಗುವ ಸಂಗತಿಗಳನ್ನು ಜತನದಲ್ಲಿ ನೆನಪ ಜೋಳಿಗೆಯಲ್ಲಿ ಕಾಯ್ದಿರಿಸಿಕೊಳ್ಳುವಷ್ಟು ವ್ಯವಧಾನವಿದೆ. ಮಣ್ಣಲ್ಲೂರಿದ ಗುರುತು ಮಾಯಬಹುದು..ಎದೆಯಲ್ಲೂರಿದ ಹೆಜ್ಜೆಗಳೂ...! ಅಂತ ಆರ್ಥವಾಗಿ ಮನತಟ್ಟುವಂತೆ ಕೇಳಿಕೊಳ್ಳುವ ಸಾಲುಗಳಿವೆ.ಓದುತ್ತಾ ಹೋದಂತೆ ಇಲ್ಲಿನ ಹಿಮನದಿಯ ಪಿಸುಮಾತುಗಳು ಸದ್ದಿಲ್ಲದೇ ನಮ್ಮ ವರೆಗೂ ಬಂದು ತೋಯಿಸಿ ಬಿಡುತ್ತದೆ.ತುಸು ತಡವಾಗಿಯಾದರೂ ಧೃಡವಾಗಿ ಹೆಜ್ಜೆಯೂರುವ ಲಕ್ಷಣವನ್ನು ತೋರಿಸುತ್ತಿರುವ ಸುನೀತಾರ ಈ ಚೊಚ್ಚಲ ಕವನ ಸಂಕಲನವನ್ನು ಕನ್ನಡಿಗರು ಪ್ರೀತಿಯಿಂದ ಕೈಗೆತ್ತಿಕೊಳ್ಳುತ್ತಾರೆಂಬ ಭರವಸೆಯಿದೆ.
-ಸ್ಮಿತಾ ಅಮೃತರಾಜ್. ಸಂಪಾಜೆ
ಕವನ ಸಂಕಲನದ ಪರಿಚಯ ಮತ್ತು ವಿಮರ್ಶೆ ಅಷ್ಟೇ ಕಾವ್ಯಮಯವಾಗಿ ಮೂಡಿಬಂದಿದೆ !
ಅಭಿನಂದನೆಗಳು ಸುನೀತಾ.