ಏಕಮುಖಿ…ಬಹುಮುಖಿ.. ರುದ್ರಾಕ್ಷಿ
ಹರಿದ್ವಾರದಲ್ಲಿ ಒಂದು ಸುತ್ತು ಹಾಕಿದರೆ ಅಡಿಗಡಿಗೂ ಮಂದಿರಗಳೇ ಕಾಣಸಿಗುತ್ತವೆ. 23 ಸೆಪ್ಟೆಂಬರ್ 2016 ರಂದು ಅಲ್ಲಿ ಸುತ್ತಾಡುತ್ತಾ, ‘ರಾಮ ಮಂದಿರ’ಕ್ಕೆ ಹೋಗಿದ್ದೆವು. ಮಂದಿರದ ಆವರಣದಲ್ಲಿ ರುದ್ರಾಕ್ಷಿ ಮರವಿತ್ತು. ಮರದಲ್ಲಿ ರುದ್ರಾಕ್ಷಿಯ ಎಳೆ ಕಾಯಿಗಳಿದ್ದುವು . ಹಿಂದೂ ಧರ್ಮದಲ್ಲಿ ರುದ್ರಾಕ್ಷಿಗೆ ಪೂಜನೀಯ ಸ್ಥಾನವಿದೆ, ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ. ಹಿಮಾಲಯ ಮತ್ತು ನೇಪಾಳದ ಪ್ರದೇಶಗಳಲ್ಲಿ ರುದ್ರಾಕ್ಷಿ ಮರಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಅಪರೂಪಕ್ಕೆ ದಕ್ಷಿಣ ಭಾರತದ ಕೆಲವೆಡೆಯೂ ರುದ್ರಾಕ್ಷಿ ಮರಗಳನ್ನು ಕಾಣಬಹುದು. ಉದಾಹರಣೆಗೆ, ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ರುದ್ರಾಕ್ಷಿಯ ಮರವಿದೆ.
ಮಂದಿರದ ಎದುರುಗಡೆಯೇ ಉತ್ತರಾಖಂಡ ಸರಕಾರದ ರುದ್ರಾಕ್ಷಿ ಮಾರುವ ಕೇಂದ್ರವಿತ್ತು. ನನಗೇನೂ ರುದ್ರಾಕ್ಷಿ ಕೊಳ್ಳುವ ಆಸಕ್ತಿಯಿದ್ದಿರಲಿಲ್ಲ. ಸುಮ್ಮನೆ ನೋಡೋಣವೆಂದು ಸಹಾಯಾತ್ರಿಕರ ಜತೆಗೆ ಅಂಗಡಿಯ ಒಳಹೊಕ್ಕೆ. ಹಿಂದೊಮ್ಮೆ , ತರಬೇತಿ ಕಾರ್ಯಕ್ರಮವೊಂದರಲ್ಲಿ , ಮಾರಾಟದ ಚಾಣಾಕ್ಷತನಕ್ಕೆ ಉದಾಹರಣೆಯಾಗಿ “ಸೇಲ್ಸ್ ಮ್ಯಾನ್ ಹೇಗಿರಬೇಕೆಂದರೆ, ಹಿಮದ ಮನೆಯಲ್ಲಿಯೇ ವಾಸಿಸುವ ಎಸ್ಕಿಮೋ ಜನರಿಗೆ ರೆಫ್ರಿಜರೇಟರ್ ಮಾರಿ ಬರಬೇಕು” ಅಂದಿದ್ದರು. ಅಲ್ಲಿನ ಅಂಗಡಿಯಾತನ ವಾಕ್ಚಾತುರ್ಯವನ್ನು ನೋಡಿದ್ದಾಗ ನನಗೆ ಈ ಮಾತಿನ ಅರ್ಥ ಮತ್ತು ಅನುಭವ ಒಟ್ಟಿಗೆ ಆಯಿತು. ಹಿಂದಿ ಭಾಷೆಯಲ್ಲಿ ಮಾತನಾಡಿದ ಅವರ ವಾಗ್ಝರಿಯ ಸಾರಾಂಶ ಹೀಗೆ:
“ನಮ್ಮ ಅಂಗಡಿಯು ಸರಕಾರದಿಂದ ಅಂಗೀಕೃತವಾಗಿದೆ. ನೀವು ರುದ್ರಾಕ್ಷಿಯನ್ನು ಕೊಳ್ಳಿರೆಂದು ನಾನು ಹೇಳುತ್ತಿಲ್ಲ. ಅದರ ಬಗ್ಗೆ ತಿಳಿದುಕೊಳ್ಳಿ. ನಮ್ಮ ಅಂಗಡಿಯಲ್ಲಿ ಸಿಗುವ ರುದ್ರಾಕ್ಷಿಗೂ ಬೇರೆ ಕಡೆ ಕಡಿಮೆ ಬೆಲೆಗೆ ಸಿಗುವ ರುದ್ರಾಕ್ಷಿಗೂ ವ್ಯತ್ಯಾಸವೇನೂ ಗೊತ್ತೆ ? ನೀವೇ ಪರೀಕ್ಷಿಸಿ. ಇದು ಕಡಿಮೆ ಬೆಲೆಯದ್ದು, ಇದನ್ನು ನೀರಿನಲ್ಲಿ ಒಂದು ದಿನ ನೆನೆಸಿ. ನಮ್ಮ ಅಂಗಡಿಯ ರುದ್ರಾಕ್ಷಿಯನ್ನೂ ನೆನೆಸಿ. ಕಡಿಮೆ ಬೆಲೆಯ ರುದ್ರಾಕ್ಷಿ ಬಣ್ಣಗೆಟ್ಟಿರುತ್ತದೆ. ಯಾಕೆಂದರೆ, ಅವು ಎಳೆಯವು, ಮರದಿಂದ ಬಿದ್ದ ರುದ್ರಾಕ್ಷಿ ಕಾಯಿಗಳು. ಅವನ್ನು ಭದ್ರಾಕ್ಷಿ ಅನ್ನುತ್ತಾರೆ. ಭದ್ರಾಕ್ಷಿಗೆ ಬಣ್ಣ ಬಳಿದು ಮಾರುತ್ತಾರೆ.
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭಿಸುವ ರುದ್ರಾಕ್ಷಿಗಳು ಗೋಲಾಕಾರದಲ್ಲಿರುತ್ತವೆ. ಪಂಚಮುಖಿ ರುದ್ರಾಕ್ಷಿಗಳು ಹೆಚ್ಚಾಗಿ ಸಿಗುತ್ತವೆ. 108 ಪಂಚ ಮುಖಿ ರುದ್ರಾಕ್ಷಿಗಳಿಂದ ಜಪ ಮಾಲೆ ಮಾಡುತ್ತಾರೆ.
ಏಕಮುಖ ರುದ್ರಾಕ್ಷಿಗಳು ಮಾತ್ರ ಅರ್ಧಚಂದ್ರಾಕಾರಾವಾಗಿರುತ್ತವೆ. ಇದು ಬಲು ಅಪರೂಪವಾಗಿ ಲಭಿಸುತ್ತದೆ. ಒಂದು ರುದ್ರಾಕ್ಷಿ ಮರದಲ್ಲಿ ವರ್ಷಕ್ಕೆ ಒಂದೇ ಏಕಮುಖ ರುದ್ರಾಕ್ಷಿಯು ಬಿಡುತ್ತದೆ. ಏಕಮುಖಿ ರುದ್ರಾಕ್ಷಿಯನ್ನು ಶಿವನ ಸ್ವರೂಪವೆಂದು ತಿಳಿಯುತ್ತಾರೆ . ಇದರ ಪೂಜ್ಯತೆ ಮತ್ತು ಲಭ್ಯತೆಗೆ ಅನುಗುಣವಾಗಿ ಬೆಲೆಯೂ ಹೆಚ್ಚು.ಇದನ್ನು ಮನೆಯಲ್ಲಿ ಪೂಜಿಸಿದರೆ ಅಥವಾ ಧರಿಸಿದರೆ ಈಶ್ವರನ ಕೃಪೆ ದೊರೆಯುತ್ತದೆ ಎಂಬುದು ಆಸ್ತಿಕರ ದೃಢ ನಂಬಿಕೆ.
ಇಂತಹ ಅಪರೂಪದ ಏಕಮುಖಿ ರುದ್ರಾಕ್ಷಿಯು ನಮ್ಮ ಅಂಗಡಿಯಲ್ಲಿ ಲಭ್ಯ.ನಮ್ಮ ಅಂಗಡಿಯಲ್ಲಿ ಸಿಗುವ ಏಕಮುಖಿ ರುದ್ರಾಕ್ಷಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಪ್ರಮಾಣೀಕರಿಸಲಾಗಿದೆ. ಆಮೇಲೆ ಕೇದಾರನಾಥ ದೇವಾಲಯದಲ್ಲಿ ಪೂಜಿಸಿಯೇ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ. ಸಾಮಾನ್ಯವಾಗಿ 4000 ರೂ ಗಳಿಗೆ ಮಾರುತ್ತೇವೆ. ಈ ತಿಂಗಳು ಪಿತೃಮಾಸವಾದುದರಿಂದ ಡಿಸ್ಕೌಂಟ್ ಬೆಲೆ ರೂ.2000/- ಮಾತ್ರ . ಐದು ವರ್ಷಗಳ ಕಾಲ ಗ್ಯಾರಂಟಿ ಕೊಡಲಾಗುತ್ತದೆ. ನಿಮ್ಮ ಮನೆಗೆ ಸುರಕ್ಷಿತವಾಗಿ ಕೊಂಡೊಯ್ದು, ಸಂಪುಟದಲ್ಲಿಟ್ಟು ಸೋಮವಾರದಿಂದ ಆರಂಭಿಸಿ ಹನ್ನೆರಡು ದಿನ ಪೂಜಿಸಿ. ಆಮೇಲೆ ಕತ್ತಿಗೆ ಹಾರವಾಗಿ ಧರಿಸಿ ಅಥವಾ ದೇವರ ಕೋಣೆಯಲ್ಲಿರಿಸಿ ಪೂಜೆ ಮಾಡಿ. ಪೂಜೆ ಮಾಡದಿದ್ದರೂ ಅದು ಸ್ವಯಂಶಕ್ತಿಯಿಂದ ಉತ್ತಮ ಫಲವನ್ನೇ ಕೊಡುತ್ತದೆ. ಏಕಮುಖಿ ರುದ್ರಾಕ್ಷಿಯನ್ನು ನೆನೆಸಿದ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು .
ನಮ್ಮಲ್ಲಿರುವ ನವರತ್ನ ಮಾಲೆಯು ಅಪ್ಪಟ. ನಿಮಗೆ ಬೇರೆಡೆ ಕಡಿಮೆ ಬೆಲೆಗೆ ಸಿಗಬಹುದು. ಇದು ನಿಜವಾದ ರತ್ನ ಹೌದೇ ಅಲ್ಲವೇ ಎಂದು ನೀವೇ ಪರೀಕ್ಷಿಸಿ. ಹೇಗೆ ಗೊತ್ತೆ? ದೀಪ ಆರಿಸಿ, ಒಂದೇ ವರ್ಗದ ಎರಡು ಹರಳುಗಳನ್ನು ಪರಸ್ಪರ ಉಜ್ಜಿ, ಆಯಾಯ ಬಣ್ಣದ ಜ್ವಾಲೆ ಹೊಮ್ಮಿದರೆ ಅದು ಅಪ್ಪಟ. ಉದಾ: ಪಜ್ಜೆ ಬಣ್ಣದ ರತ್ನಗಳು ಹಸಿರು ಬಣ್ಣದ ಕಿಡಿಯನ್ನು ಹೊಮ್ಮಿಸುತ್ತದೆ.ಇದನ್ನು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು….ಇದನ್ನು ಪ್ರಥಮವಾಗಿ ಗುರುವಾರ ಆರಂಭಿಸಿ ಧರಿಸಿ. ಆಮೇಲೆ ದಿನದ ಯಾವ ಸಮಯ ಬೇಕಿದ್ದರೂ ಒಂದೆರಡು ಗಂಟೆ ಧರಿಸಿ. ಮನೆ ಮಂದಿಗೆಲ್ಲಾ ಒಂದೇ ಮಾಲೆ ಸಾಕು. ಇದು ಪಾಸಿಟಿವ್ ಶಕ್ತಿಯನ್ನು ಆಕರ್ಷಿಸುತ್ತದೆ. ಆರೋಗ್ಯವನ್ನು ಹೆಚ್ಚಿಸುತ್ತದೆ… ಮಾತು ಇನ್ನೂ ಮುಂದುವರಿಯಿತು.”
ಇವರ ಕಾರ್ಯತತ್ಪರತೆಯನ್ನು ಗುರುತಿಸುವುದಕ್ಕಾಗಿಯಾದರೂ ಏನಾದರೂ ಕೊಳ್ಳೋಣವೆನಿಸಿತು. ಧಾರ್ಮಿಕ ವಿಚಾರಗಳಲ್ಲಿ ನನಗಿಂತ ಹೆಚ್ಚು ಶ್ರದ್ಧೆಯುಳ್ಳ ನಮ್ಮ ಮನೆಯವರಿಗೆ ಅಲ್ಲಿಂದಲೇ ಫೋನಾಯಿಸಿ ಏಕಮುಖಿ ರುದ್ರಾಕ್ಷಿ/ನವರತ್ನ ಮಾಲೆ ತರಬೇಕೆ ಎಂದೆ. ಇರಲಿ ಅಂದರು. ಹೀಗೆ, 2000 ರೂ ಕೊಟ್ಟು ಒಂದು ಏಕಮುಖಿ ರುದ್ರಾಕ್ಷಿ ಮತ್ತು 1000 ರೂ ಬೆಲೆಯ ಒಂದು ನವರತ್ನ ಮಾಲೆಯನ್ನು ಖರೀದಿಸಿದೆ.
ವಿಕಿಪೀಡಿಯದಲ್ಲಿ ಲಭಿಸಿದ ಮಾಹಿತಿ ಪ್ರಕಾರ, ರುದ್ರಾಕ್ಷಿ ಹಿಮಾಲಯ ತಪ್ಪಲು ಪ್ರದೇಶದಲ್ಲಿ ಮತ್ತು ನೇಪಾಳದಲ್ಲಿ ಬೆಳೆಯುತ್ತದೆ. ಆಗ್ನೇಯ ಏಷಿಯಾ ದೇಶಗಳಲ್ಲಿಯೂ ಬೆಳೆಯುತ್ತದೆ. ರುದ್ರಾಕ್ಷಿ ಕಾಯಿ ನೋಡಲು ನಸು ನೀಲಿ ಬಣ್ಣದ್ದಾಗಿರುತ್ತದೆ. ಇದು ಸಿಪ್ಪೆಯ ಭಾಗ. ಸಿಪ್ಪೆ ಸುಲಿದರೆ , ಒಳಗಡೆ ಹಸಿರು ಬಣ್ಣದ ರುದ್ರಾಕ್ಷಿ ಸಿಗುತ್ತದೆ. ಅದು ಚೆನ್ನಾಗಿ ಒಣಗಿದ ನಂತರ ನಸು ಶ್ವೇತವರ್ಣ, ತಾಮ್ರದ ನಸು ಕೆಂಪು, ಹಾಗೂ ನಸು ಕಪ್ಪು ಬಣ್ಣದವು ಸಿಗುತ್ತವೆ. ಸೂಜಿಯನ್ನು ಉಪಯೋಗಿಸಿ ಮಡಿಕೆಗಳಿರುವ ರುದ್ರಾಕ್ಷಿಯ ಗೆರೆಗಳನ್ನು ಬಿಡಿಸುತ್ತಾರೆ. ಗೆರೆಗಳ ಆಕಾರವನ್ನು ನೋಡಿ ರುದಾಕ್ಷಿಯ ಮುಖಗಳನ್ನು ಗುರ್ತಿಸುತ್ತಾರೆ. ಅದರಲ್ಲಿ ಒಂದು ಮುಖದಿಂದ ಹಿಡಿದು 21 ಮುಖಗಳವರೆಗೂ ಇರುವ ರುದ್ರಾಕ್ಷಿ ಸಿಗುವುದೆಂದು ಹೇಳುತ್ತಾರೆ. ಆದರೆ ಏಕ ಮುಖ ರುದ್ರಾಕ್ಷಿ ಬಹಳ ವಿರಳವಾಗಿ ದೊರೆಯುತ್ತವೆ. ಪಂಚಮುಖಿ ರುದ್ರಾಕ್ಷಿ ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತದೆ. ಒಂದೊಂದು ಬಗೆಯ ರುದ್ರಾಕ್ಷಿಗೂ ಅದರದೇ ಮಹತ್ವವಿದೆ. ಒಂದೊಂದು ಮುಖಕ್ಕೂ ಒಬ್ಬೊಬ್ಬ ದೇವತೆಯನ್ನು ಗುರುತಿಸುತ್ತಾರೆ. ಇದಲ್ಲದೆ ರುದ್ರಾಕ್ಷಿಗೆ ಔಷಧೀಯ ಗುಣಗಳಿವೆ. ಅನೇಕ ರೋಗಗಳಿಗೆ ಆಯುರ್ವೇದದಲ್ಲಿ ರುದ್ರಾಕ್ಷಿಯನ್ನು ಉಪಯೋಗಿಸುತ್ತಾರೆ.
– ಹೇಮಮಾಲಾ.ಬಿ
ರುದ್ರಾಕ್ಷಿ ಮರ ನಮ್ಮಲ್ಲಿದೆ! ಫಲ ಕೂಡ ಕೊಡುತ್ತಿದೆ. ನಮಗೆ ಈ ವರೆಗೆ ಚತುರ್ಮುಖಿ, ಪಂಚ ಮುಖಿ ರುದ್ರಾಕ್ಷಿಗಳು ಮಾತ್ರ ಲಭಿಸಿವೆ. ಆಸಕ್ತರು ನಮ್ಮಲ್ಲಿ ಬಂದು ನೋಡಬಹುದು.
ನಿಮ್ಮ ವಿಳಾಸ ಕೊಡಿ ನಾವು ಬಂದು ರುದ್ರಾಕ್ಷಿ ಮರ ವೀಕ್ಷಣೆ ಮಾಡುತ್ತೆವೆ ಸಾರ್
ನಮ್ಮಲ್ಲಿ ರುದ್ರಾಕ್ಷಿ ಮರ ಇಲ್ಲ. ಮೈಸೂರಿನ ‘ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ, ದತ್ತನಗರ, ಮೈಸೂರು’ ಅವರ ಉದ್ಯಾನದಲ್ಲಿದೆ. ಅದು ಪ್ರಸಿದ್ಧ ಪ್ರವಾಸಿ ತಾಣವೂ ಆಗಿದೆ.
ಹೇಮ ಅಂಗಡಿಯವ ಹೇಳಿದಕ್ಕಿಂತ ನಿನ್ನ ವಿವರಣೆ ಅತ್ಯದ್ಭುತ…
ಈರೀತಿ ಮಾರಾಟ ಮಾಡುವ ಕಲೆ ಅವರಿಗೆ ಅನೇಕ ದಶಕಗಳಿಂದ (ಬಹುಶಃ ಕೆಲ ಶತಮಾನಗಳಿಂದ) ಪರಂಪರಾಗತವಾಗಿ ಬಂದಿದೆ
ಆದರೆ ರುದ್ರಾಕ್ಷದ ಧಾರಣೆ ಸಂಸಾರಿಗಳಗೆ ಹೇಳಿಮಾಡಿಸಿದಂತೆ ಅಲ್ಲ.ಇದರಿಂದ ಲಾಭಕ್ಕಿಂತ ನಷ್ಟವೇ ಅಧಿಕ ಎಂದು ಹಲವು ಪಂಡಿತರ ಅಭಿಪ್ರಾಯ.ರುದ್ರಾಕ್ಷಾ ಧಾರಣೆ ಸಾಧಕರಿಗೆ ಅತ್ಯಂತ ಪ್ರಯೋಜನಕಾರಿ .ಇದರ ಬಗ್ಗೆ ವಿವರಣೆ ಬೇಕಿತ್ತು.