ಕುಂಭಕರ್ಣನ ಸ್ವಗತ…
ಯಾರವರು ಹೀಗೆ ಪಕ್ಕೆ ಮುರಿಯುವಂತೆ ತಿವಿದವರು
ಕಿವಿಯೊಳಗೆ ಡೋಲು ನಗಾರಿಗಳ ಸದ್ದು ತೂರಿದವರು
ಗೊತ್ತಿಲ್ಲವೆ ಇವರೆಲ್ಲರಿಗೂ ನಾನು ಏಳುವ ಹೊತ್ತು
ಏನವಸರವಿತ್ತು, ಏನು ಕಾರಣವಿತ್ತು ನಿದ್ದೆ ಕೆಡಿಸುವುದಕೆ?
ಇರಲಿಲ್ಲವೇ ಪ್ರಹಸ್ತರು, ಅತಿಕಾಯ ಇಂದ್ರಜಿತರು?
ಆಕಳಿಸಿ ಮೈಮುರಿದು ಕುಳಿತವನು ಕಂಡೆ ಕಿಟಿಕಿಯೊಳು
ಲಂಕೆಯ ಹಾದಿ ಬೀದಿಗಳಲ್ಲಿ ಹಿಂಡು ಹಿಂಡು ಕಪಿದಂಡು
ನಿಜಕು ಅವನು ಬಲು ದೊಡ್ಡ ರಾಜಕಾರಣಿಯೆ ಇರಬೇಕು
ಎಲ್ಲಿಂದ ಕರೆತಂದನೊ ಇವರ, ಈ ಪಾಟಿ ಹಿಂಬಾಲಕರ
ಬಿತ್ತಿರಬಹುದು ತಲೆಯೊಳಗೆ ಪ್ರತ್ಯೇಕ ರಾಜ್ಯದ ಕನಸು!
ಹುಡುಗಾಟ ನಮ್ಮೊಲವ ತಂಗಿ ಶೂರ್ಪನಖೆಯದು ಕೂಡ
ಪ್ರೇಮ ನಿವೇದನೆಗೈದು ಹೆಚ್ಚೆನಿಸುವಷ್ಟು ಸಲಿಗೆ ತೋರಿದ್ದು
ತಪ್ಪೇನಿದೆ ಬಿಡಿ, ಆಧುನಿಕ ವಿಚಾರಧಾರೆ, ಸ್ತ್ರೀ ಸ್ವಾತಂತ್ರ್ಯ
ನಮ್ಮ ಲಂಕೆಯಲ್ಲಿದು ಸರ್ವೇ ಸಾಮಾನ್ಯ, ಸರ್ವಮಾನ್ಯ
ಒಲ್ಲೆನೆಂದರೆ ಬಿಡಬಹುದಿತ್ತು, ಕೊಯ್ಯಬೇಕಿತ್ತೇ ಕಿವಿ ಮೂಗ?
ಹುಚ್ಚು ಹುಡುಗಿ, ನಮ್ಮಲ್ಲಿಯೂ ಹುಡುಗರಿಗೇನು ಕೊರತೆಯಿರಲಿಲ್ಲ
ಒಂದೆರಡು ಮೂರ್ನಾಕು ಐದಾರು ತಲೆಯ ಸುಂದೋಪಸುಂದರರು
ತಮಗಿಂತ ಬುದ್ಧಿವಂತರೇ ಇಲ್ಲವೆಂದುಕೊಂಡ ಧೀಮಂತ ಶ್ರೀಮಂತರು
ಬೇಡ, ಕೊನೆಗೆ ಸ್ವಯಂವರವಾದರೂ ಏರ್ಪಡಿಸಬಹುದಿತ್ತು
ಯಾವನೊ ಒಬ್ಬನನು ಕಟ್ಟಬಹುದಿತ್ತು, ಚಂದ ನೋಡಬಹುದಿತ್ತು!
ಸಾರಿ ಹೇಳಿದೆವು ಹತ್ತು ತಲೆಯವನಿಗೆ ಬೇಡ ಸೀತೆಯ ಮೋಹ
ಹೇಳಬಾರದಿತ್ತು ಸಂಜೆಯ ಹೊತ್ತು, ಅರ್ಥವಾಗಲಿಲ್ಲ ಅವನಿಗೆ
ಕೆಂಪು ಕಣ್ಣಿನ ಅವನು, ಕಣ್ಣಿಗೆ ಕಣ್ಣು, ಹೆಣ್ಣಿಗೆ ಹೆಣ್ಣು ಇದೇ ನೀತಿ ಅಂದ
ಅಶೋಕವೃಕ್ಷದ ಕೆಳಗೆ ಶೋಕಗ್ರಸ್ತ ಸೀತೆ, ಬಂತೊಂದು ಒಂಟಿ ಕಪಿ
ಬಾಲಕ್ಕಿಕ್ಕಿದೆವು ಬೆಂಕಿ, ಸ್ವರ್ಣ ಲಂಕೆಯೊಳು ಧಗ ಧಗ ಉರಿ.
ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಔಷಧಿಗೆ ಬೇಕೆಂದರೊಂದು
ಮಂಗ ಇರಲಿಲ್ಲ ನಮ್ಮಲ್ಲಿ ಈ ಲಂಕೆಯಲ್ಲಿ, ಈಗ ನೋಡಿ
ಕಣ್ಣ ಮುಚ್ಚಿ ತೆರೆದಲ್ಲೆಲ್ಲ ಬಾತ ಮುಖಗಳ ನೂರು ಕೋತಿಗಳು
ಕನ್ನಡಿ ನೋಡಿಕೊಂಡರೆ ಒಂದಿಷ್ಟು ಖುಷಿ, ನಾವೆಷ್ಟೋ ವಾಸಿ
ಇದು ನಾವು ಹೇಳಿದ್ದಲ್ಲ, ಕೇಳಿ ನೋಡಿ ನಮ್ಮ ರಕ್ಕಸಿಯರ !
ಹೆಣ್ಣು ಹೊಕ್ಕರೆ ಒಮ್ಮೆ ತಲೆಯ ಒಳಗೆಲ್ಲ, ಮತ್ತೆಲ್ಲಿಯ ನಿದ್ರೆ ಹೇಳಿ?
ನಮ್ಮವನೆಂದು ಹತ್ತು ತಲೆ ಉಳಿಸ ಹೊರಟ ನಮ್ಮ ತಲೆ ಏನಾದೀತು ಹೇಳಿ?
ಬೆಂಬಲಿಸಿ ಹೊರಟಿದ್ದೇವೆ ಯುದ್ಧಭೂಮಿಗೆ ನಾವೇ ಸರಿಯೆಂಬ ಭ್ರಮೆಯಲ್ಲಿ
ನಮ್ಮ ಕೆಲಸ ಶಾಸನದ ಅನುಸರಣೆ, ಕದನ ಕುತೂಹಲವಿದೆ ಮುಂದೆ
ಅವನುಳಿಸಿದರೆ ಮತ್ತೆ ಒಂದಿಷ್ಟು ನಿದ್ರೆ, ಇಲ್ಲವಾದರೆ ಇದೆಯಲ್ಲ, ಚಿರನಿದ್ರೆ!
– ದಿವಾಕರ ಡೋಂಗ್ರೆ ಎಂ.
ಕುಂಭಕರ್ಣನ ಸ್ವಗತ…ಚೆನ್ನಾಗಿದೆ . ‘….ಕನ್ನಡಿ ನೋಡಿಕೊಂಡರೆ ಒಂದಿಷ್ಟು ಖುಷಿ, ನಾವೆಷ್ಟೋ ವಾಸಿ’… ಸಾಲು ನಗು ತರಿಸಿತು.
ಮೂಗಿನ (ನಮ್ಮದೇ) ಮೇಲೆ ಬೆರಳು ಇಟ್ಟುಕೊಳ್ಳುವದೊಂದೇ ಬಾಕಿ .
ಕುಂಭಕರ್ಣನ ಅನಿಸಿಕೆಗಳು ನಿಮ್ಮ ಲೇಖನಿಯ ಮೂಲಕ ಚೆನ್ನಾಗಿ
ಮೂಡಿ ಬಂದಿವೆ, ಕೇವಲ . ಕೆಲವೆ ಪದಗಳಲ್ಲಿ ರಾಮಾಯಣದ ಪೂರ್ತಿ
ಪರಿಚಯ ಹೊರ ಹೊಮ್ಮಿದೆ,ನಿಮ್ಮ ಶಬ್ದ ,ಪದ ವಿನ್ಯಾಸಗಳಿಗೆ ನಮೋನ್ನಮಃ
TAMMA SAHITYA kRUSHI ಮುಂದುವರೆಯಲಿ.
Kewala
ಧನ್ಯವಾದಗಳು ನಾಡಿಗ್ .