ಚನ್ನಪಟ್ಟಣದ ಚೆನ್ನಾದ ಬೆಟ್ಟಗಳಿವು….

Share Button

Hema -Trek-19062016-Chennapattana

ಮುಂಗಾರು ಮಳೆ ಕಾಲಿರಿಸಿ ಇಳೆ ತಂಪಾಗಿದೆ. ಭೂಮಿಯಲ್ಲಿ ಅಲ್ಲಲ್ಲಿ ಹಸಿರು ಮೊಳೆತು ಕಣ್ಣಿಗೂ ತಂಪಾಗಿದೆ. ಹೀಗಿರುವ ಜೂನ್ 16 ನೆಯ ಭಾನುವಾರ, ಮೈಸೂರಿನ ಯೂಥ್ ಹಾಸ್ಟೆಲ್ಸ್ ಅಸೋಸಿಯೇಷನ್ ತಂಡದ ವತಿಯಿಂದ ಚನ್ನಪಟ್ಟಣದ ಸಮೀಪದ ಗವಿರಂಗಸ್ವಾಮಿ ಬೆಟ್ಟ ಮತ್ತು ಚೆನ್ನಪ್ಪಾಜಿ ಬೆಟ್ಟಗಳಿಗೆ ಏರ್ಪಡಿಸಿದ್ದ ಚಾರಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಸದವಕಾಶ ನನ್ನದಾಯಿತು.

ಹಿಂದಿನ ದಿನದ ದಿಢೀರ್ ರಾಜಕೀಯ ಬೆಳವಣಿಗೆಯೊಂದರ ಪರಿಣಾಮವಾಗಿ, ಮಂಡ್ಯದ ಹೆದ್ದಾರಿಯಲ್ಲಿ ರಸ್ತೆತಡೆ ಚಳವಳಿ ಇರಬಹುದಾದ ಸಾಧ್ಯತೆಯನ್ನು ಮುಂಚಿತವಾಗಿ ಗ್ರಹಿಸಿ, ಮೊದಲು ನಿಗದಿ ಪಡಿಸಿದ ಸಮಯಕ್ಕಿಂತ ಅರ್ಧ ಘಂಟೆ ಹೊರಡೋಣ ಎಂದು ಆಯೋಜಕರು ತಿಳಿಸಿದರು. 30  ಜನರ ತಂಡವನ್ನು ಹೊತ್ತಿದ್ದ ಬಸ್ ಮುಂಜಾನೆ  ಮೈಸೂರು ಬಿಟ್ಟಿತು. ದಾರಿಯಲ್ಲಿ ಮಂಡ್ಯ ಮತ್ತು ಚನ್ನಪಟ್ಟಣದಲ್ಲಿಯೂ ಕೆಲವರು ಜತೆಯಾದರು. ಅಯೋಜಕರಾದ ಶ್ರೀ ವೈದ್ಯನಾಥನ್ ಮತ್ತು ಶ್ರೀ ನಾಗೇಂದ್ರ ಪ್ರಸಾದ್ ಅವರ ತಮ್ಮ ಎಂದಿನ ವ್ಯವಸ್ಥಿತ ಶೈಲಿ ಮತ್ತು ಕಾಳಜಿಯಿಂದ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿದ ಕುರುಕಲು ತಿಂಡಿ, ಸೌತೆಕಾಯಿ ಮತ್ತು ಹಣ್ಣುಗಳ ಚೀಲವನ್ನು ಪ್ರತಿಯೊಬ್ಬರಿಗೂ ವಿತರಿಸಿದರು. ಚನ್ನಪಟ್ಟಣದ ಮುಖ್ಯ ರಸ್ತೆಯಿಂದ ತಿರುಗಿ ‘ಕೋಡಿಂಬಹಳ್ಳ’ ಎಂಬಲ್ಲಿಗೆ 0830  ಕ್ಕೆ ತಲಪಿದೆವು. ಅಲ್ಲಿನ ‘ಹೋಟೆಲ್ ಕಾವೇರಿ’ಯಲ್ಲಿ ‘ಬೆಳಗಿನ ಉಪಾಹಾರವಾಗಿ ಇಡ್ಲಿ-ವಡೆ-ಕಾಫಿ ಸೇವಿಸಿದೆವು.

ಪುನ: ಬಸ್ಸನ್ನೇರಿ ಅಲ್ಲಿಂದ ಎರಡು ಕಿ.ಮೀ ದೂರದಲ್ಲಿರುವ ‘ಸಿಂಗರಾಜಪುರ’ಕ್ಕೆ ಬಂದೆವು. ತಂಡದವರೆಲ್ಲರೂ ಪರಸ್ಪರ ಪರಿಚಯಿಸುವ ಕಾರ್ಯಕ್ರಮವಾದ ನಂತರ, ಸ್ವಲ್ಪ ದೂರ ಹಳ್ಳಿಯ ರಸ್ತೆಯಲ್ಲಿ ನಡೇದು ಆ ಮೇಲೆ ಕಾಡಿನ ದಾರಿ ಹಿಡಿದೆವು. ಸ್ಥಳೀಯರಾದ ಶ್ರೀ ಸಿದ್ರಾಮ ನಮಗೆ ಮಾರ್ಗದರ್ಶಿಯಾಗಿದ್ದರು. ಅಲ್ಲಿನ ರಸ್ತೆಗಳು ಕಿರಿದಾಗಿದ್ದರೂ ಅಚ್ಚುಕಟ್ಟಾಗಿದ್ದುವು. ದಾರಿಯುದ್ದಕ್ಕೂ ಹಲವಾರು ಸೊಗಸಾದ ಬಣ್ಣ-ಬಣ್ಣದ ತೊಟ್ಟಿಮನೆಗಳು, ಮನೆಯ ಜಗಲಿಯಲ್ಲಿ ಕುಳಿತು ಮೊರದಲ್ಲಿ ಧಾನ್ಯವನ್ನು ಹಸನುಗೊಳಿಸುತ್ತಿದ್ದ ಮಹಿಳೆಯರು, ಬುಟ್ಟಿಯಲ್ಲಿ ತುಂಬಿಟ್ಟಿದ್ದ ದಂಟಿನ ಸೊಪ್ಪಿನ ಬೀಜಗಳು, ಕಟ್ಟಿ ಹಾಕಿದ್ದ ಪುಟ್ಟ ಕರುಗಳು…..ಇತ್ಯಾದಿ ಗ್ರಾಮೀಣ ಜೀವನದ ಸಿರಿಯನ್ನು ಅನಾವರಣಗೊಳಿಸಿದುವು. ಇನ್ನೂ ಸ್ವಲ್ಪ ಮುನ್ನಡದಂತೆ ಕಬ್ಬು, ರಾಗಿ, ಮಾವಿನಮರಗಳು ನಳನಳಿಸುತ್ತಿರುವ ತೋಟ ಎದುರಾಯಿತು. ಬೆಟ್ಟದ ತುದಿಯನ್ನು ತಲಪಲು ಕಚ್ಚಾ ಮೆಟ್ಟಿಲುಗಳುಳ್ಳ ಕಾಲುದಾರಿ ಇದೆ ಮತ್ತು ರಸ್ತೆ ಸಂಪರ್ಕವೂ ಇದೆ. ನಾವು ಚಾರಣದ ಹಾದಿಯಾದ ಏರುಗತಿಯ ಕಾಲುದಾರಿಯಲ್ಲಿ ನಡೆದೆವು.

Beppale-2

ಚನ್ನಪಟ್ಟಣದ ಮರದ ಬೊಂಬೆಗಳು ಸುಪ್ರಸಿದ್ಧ. ಈ ಬೊಂಬೆಗಳನ್ನು ತಯಾರಿಸಲು  ‘ಬೆಪ್ಪಾಲೆ’ ಮರದ ಮೃದುವಾದ ಕಾಂಡವನ್ನು ಬಳಸುತ್ತಾರಂತೆ. ಎರಡು ಬೀನ್ಸ್ ಗಳನ್ನು  ಜೋಡಿಸಿ ಮಾಡಿದ ಲೋಲಾಕಿನಂತೆ ಕಾಣಿಸುವ ಹಸಿರು ಕಾಯಿಗಳನ್ನು ಹೊತ್ತ ‘ಬೆಪ್ಪಾಲೆ’ ಮರಗಳು ಬೆಟ್ಟದಲ್ಲಿ ಹೇರಳವಾಗಿ ಕಂಡುಬಂದುವು. ತಂಪಾದ ಹವೆಯಲ್ಲಿ ಸುತ್ತುಮುತ್ತಲಿನ ನಿಸರ್ಗದ ಸೊಬಗನ್ನು ಸವಿಯುತ್ತಾ ಎಲ್ಲರೂ ಬೆಟ್ಟದ ತುದಿ ತಲಪಿದೆವು. ಎತ್ತ ನೋಡಿದರೂ ಹಸಿರಾಗಿ ಕಾಣಿಸುವ ಚಿಕ್ಕ-ದೊಡ್ಡ ಬೆಟ್ಟಗಳು, ದೂರದಲ್ಲೊಂದು ದೊಡ್ಡ ಕೆರೆ ,ಹಸಿರಿನ ಮಧ್ಯೆ ಎದ್ದು ಕಾಣುವ ಕೆಂಪು ಹೆಂಚಿನ ಮನೆಗಳು ಹಲವಾರು. ಇಲ್ಲಿ ಮನೆಹೊಂದಿದವರು ಅದೃಷ್ಟವಂತರು ಎಂದು ಉದ್ಗರಿಸಿದವರು ಹಲವರು. ಆದರೆ ಗ್ರಾಮೀಣ ಜೀವನವೂ ಕೂಡಾ ‘ದೂರದ ಬೆಟ್ಟದಂತೆಯೇ ಕಣ್ಣಿಗೆ ನುಣ್ಣಗೆ’ ಎಂಬುದು ಅನುಭವಿಗಳ ಮಾತು.

ಮುಂದಕ್ಕೆ ನಡೆದಾಗ ಬೃಹತ್ತಾದ ಏಕಶಿಲೆ ಎದುರಾಯಿತು. ಸುಮಾರು ಒಂದೂವರೆ ಗಂಟೆ ಚಾರಣ ಮಾಡಿ ಅಲ್ಲಿಗೆ ತಲಪಿದೆವು. ಅಲ್ಲಿ ನಮ್ಮನ್ನು ಸ್ವಾಗತಿಸಿದವರು ಚನ್ನಪಟ್ಟಣದ ಶ್ರೀ ಕೃಷ್ಣೇಗೌಡರು. ಅವರ ನಗುಮೊಗದ ಆತಿಥ್ಯಕ್ಕೆ ನಮ್ಮೆಲ್ಲರ ಕೃತಜ್ಞತೆಗಳು. ತಮ್ಮ ತೋಟದಲ್ಲಿ ಬೆಳೆದಿದ್ದ ಎಳನೀರು ಮತ್ತು ಮಾವಿನಹಣ್ಣುಗಳನ್ನು ಧಾರಾಳವಾಗಿ ತಮ್ಮ ವಾಹನದಲ್ಲಿ ಹೇರಿಕೊಂಡು ಅಲ್ಲಿಗೆ ಬಂದಿದ್ದರು. ಮೇಲಾಗಿ ಮಜ್ಜಿಗೆ ನೀರನ್ನೂ ಮನೆಯಲ್ಲಿ ತಯಾರಿಸಿ ತಂದಿದ್ದರು. ಸಹಚಾರಣಿಗ ಚೇತನ್ ಅವರು ಮಚ್ಚು ಹಿಡಿದುಕೊಂಡು ವೃತ್ತಿಪರ ವ್ಯಾಪಾರಿಯಷ್ಟೇ ವೇಗವಾಗಿ ಎಳನೀರುಗಳನ್ನು ಕೊಚ್ಚಿಕೊಡುತ್ತಿದ್ದರು! ತೋಟದ ತಾಜಾ ಎಳನೀರು ಅಮೃತಸಮಾನ ಎನಿಸಿತು.

ಬೆಟ್ಟದಲ್ಲಿ ಮೊದಲು ಪುಟ್ಟ ಭೈರವರ ಗುಡಿ ಸಿಗುತ್ತದೆ. ಇಲ್ಲಿ ಒಂದು ಅಂಜನೇಯನ ಗರುಡಗಂಭವಿದೆ. ಅಲ್ಲಿ ಹಲವಾರು ‘ಆಂಜನೇಯ ಸ್ವರೂಪಿ’ಗಳು ಓಡಾಡುತ್ತ ಭಕ್ತರು ಹಣ್ಣು-ಕಾಯಿ ತಂದಿದ್ದಾರೆಯೆ ಎಂದು ತಪಾಸಣೆ ಮಾಡುತ್ತಿದ್ದುವು. ಪಕ್ಕದಲ್ಲಿ ಚಿಕ್ಕದಾದ ಗವಿಯಲ್ಲಿ ಉದ್ಭವ ರಂಗಸ್ವಾಮಿಯ ಮೂರ್ತಿಯಿದೆ. ಈ ಗವಿಯಲ್ಲಿ ತಗ್ಗಿಯೇ ಹೋಗಬೇಕು ಮತ್ತು ಅಲ್ಲಿರುವಷ್ಟು ಕಾಲ ಬಗ್ಗಿಯೇ ಇರಬೇಕು, ಇಲ್ಲವಾದರೆ ತಲೆಗೆ ಬಂಡೆ ತಾಕುತ್ತದೆ. ಏಕಕಾಲದಲ್ಲಿ ೩-೪ ಮಂದಿ ಇರಬಹುದಾದಷ್ಟು ಮಾತ್ರ ಜಾಗವಿದೆ. ಸ್ಥಳ ಪುರಾಣದ ಪ್ರಕಾರ ಇಲ್ಲಿ ಹಿಂದೆ ವಿಭಾಂಡಕ ಮುನಿಯ ಪುತ್ರರಾದ ಋಷ್ಯಶೃಂಗರು ತಪಸ್ಸನ್ನಾಚರಿಸಿದ್ದರಂತೆ. ಇಲ್ಲಿ ಪ್ರತಿ ಶನಿವಾರ ಪೂಜೆ ಮತ್ತು ದಾಸೋಹವಿರುತ್ತದೆ. ಭಕ್ತರು ಬಯಸಿ ಮುಂಚಿತವಾಗಿ ತಿಳಿಸಿದರೆ ಮತ್ತು ವಿಶೇಷ ಹಬ್ಬದ ದಿನಗಳಲ್ಲಿಯೂ ಪೂಜೆಗೆ ವ್ಯವಸ್ಥೆ ಮಾಡುತ್ತಾರೆ.

Trek-19062016-2-Gavirangaswamy- Chennapatana

Trek-19062016-water source

 

ಈ ಮೂರ್ತಿಯನ್ನು ಪಕ್ಕದಲ್ಲಿ ಕಟ್ಟಲಾದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿವ ಪ್ರಕ್ರಿಯೆ ಕಾರ್ಯ ಆರಂಭವಾಗಿದೆ. ಇಲ್ಲಿ ಶ್ರೀ ವೈದ್ಯನಾಥನ್ ಮತ್ತು ಕುಮಾರಿ ಧಾರಾ ಭಕ್ತಿಗೀತೆಗಳನ್ನು ಹಾಡಿದರು. ಆಮೇಲೆ ಅರ್ಚಕರು ದೇವರಿಗೆ ಪೂಜೆ ನೆರವೇರಿಸಿದರು. ಅಲ್ಲಿ ಚಹಾ ಸೇವಿಸಿ, ಸ್ವಲ್ಪ ದೂರದಲ್ಲಿರುವ ಶಿಲೆಯ ಮಧ್ಯೆ ಒರತೆಯುಳ್ಳ ನೀರಿನ ಸೆಲೆ (ಸೊಣೆ)ಗೆ ಭೇಟಿಕೊಟ್ಟೆವು. ಪ್ರಕೃತಿದತ್ತವಾದ ಈ ನೀರು ನಿರ್ಮಲವಾಗಿ ಮತ್ತು ರುಚಿಯಾಗಿತ್ತು. ಅಲ್ಲಿಂದ ಹೊರಟು, ಭೈರವ ದೇವರ ದರ್ಶನ ಮಾಡಿ, ಮಜ್ಜಿಗೆ ಕುಡಿದು ಬೆಟ್ಟದಿಂದ ಕೆಳಗಿಳಿಯಲಾರಂಭಿಸಿದೆವು. ನಮ್ಮ ಮಾರ್ಗದರ್ಶಿ ಆಗಿದ್ದ ಶ್ರೀ ಸಿದ್ರಾಮ ಅವರು ತಿಳಿಸಿದಂತೆ, ಭಕ್ತರು/ಚಾರಣಿಗರು ಮುಂಚಿತವಾಗಿ ತಿಳಿಸಿದರೆ ಇಲ್ಲಿನ ಪ್ರಸಾದ ಗೃಹದಲ್ಲಿಯೇ ಊಟದ ವ್ಯವಸ್ಥೆಯನ್ನೂ ಮಾಡಬಹುದು.

ಗವಿರಂಗಸ್ವಾಮಿಯ ಬೆಟ್ಟದ ತುದಿಯನ್ನು ತಲಪಲು ಬೆಟ್ಟದ ಬುಡದಿಂದ 4000 ಹೆಜ್ಜೆ ನಡೆಯಬೇಕು ಅಂದಿದ್ದರು, ನಮ್ಮ ಅಯೋಜಕರು. ಬಹುಶ: ಅಷ್ಟೇ ಹೆಜ್ಜೆಗಳ ಮೂಲಕ ಎಲ್ಲರೂ ಬಂದ ದಾರಿಯಲ್ಲಿಯೇ ಹಿಂತಿರುಗಿ, ಸಿಂಗರಾಜಪುರದಲ್ಲಿ ನಿಲ್ಲಿಸಿದ್ದ ಬಸ್ಸನ್ನೇರಿ ಪುನ: ಕೋಡಂಬಹಳ್ಳಿಗೆ ಬಂದು ಹೋಟೆಲ್ ಕಾವೇರಿಯಲ್ಲಿ ಊಟ ಮುಗಿಸಿದೆವು. ಇಲ್ಲಿಗೆ ಒಂದು ಬೆಟ್ಟದ ಚಾರಣ ಮಧ್ಯಾಹ್ನ 0330 ಕ್ಕೆ ಸಂಪನ್ನವಾಯಿತು.

ನಮ್ಮ ಮುಂದಿನ ಗುರಿ ಅಲ್ಲಿಂದ 3 ಕಿ.ಮೀ ದೂರದಲ್ಲಿದ್ದ ಚನ್ನಪ್ಪಾಜಿ ಬೆಟ್ಟವಾಗಿತ್ತು. ಬಸ್ಸನ್ನೇರಿ ‘ಬಲ್ಲಾಪಟ್ಟಣ’ ಎಂಬ ಹಳ್ಳಿಗೆ ಬಂದೆವು. ಸರಕಾರದ ಗ್ರಾಮೀಣಾಭಿವೃದ್ಧಿಯ ಯೋಜನೆಯೊಂದರ ದ್ಯೋತಕವಾಗಿ, ಆ ಪುಟ್ಟ ಹಳ್ಳಿಯಲ್ಲಿ ಕಿರಿದಾದ ಕಾಂಕ್ರೀಟ್ ರಸ್ತೆ ಎದ್ದು ಕಾಣಿಸುತ್ತಿತ್ತು. ಚಿಕ್ಕ ಬೆಟ್ಟ ಎದುರಿಗೆ ಕಾಣಿಸುತ್ತಿತ್ತು. ರಸ್ತೆಯ ಮೂಲಕ ನಡೆದು ಬೆಟ್ಟದ ಪಾದ ಸೇರಿದೆವು. ಅಲ್ಲಿಯೂ ಒಂದು ದೇವಸ್ಥಾನವಿದೆ. ಮುಂದಿನದು ಕಾಲುದಾರಿಯ ಚಾರಣ. ಆಗಲೇ ಒಂದು ಬೆಟ್ಟದ ಚಾರಣದ ಸ್ವಲ್ಪ ಆಯಾಸದ ಜತೆಗೆ ಹೊಟ್ಟೆ ತುಂಬಿ ಭುಕ್ತಾಯಾಸವೂ ಸೇರಿದ್ದ ಕಾರಣ ಕೆಲವರ ನಡಿಗೆ ಮಂದಗತಿಯಲ್ಲಿತ್ತು. ಸುಮಾರು ಒಂದು ಗಂಟೆ ಕಾಲ ಕಾಲುದಾರಿಯಲ್ಲಿ ಚಾರಣ ಮಾಡಿದೆವು. ಬೆಟ್ಟದ ತುದಿಯಲ್ಲಿ ಚನ್ನಪ್ಪಾಜಿಯ ಗದ್ದುಗೆಯಿದೆ. ಅಲ್ಲಿ ಆರತಿ-ಪ್ರಸಾದ ಸ್ವೀಕರಿಸಿದೆವು. ಶ್ರೀ ವೈದ್ಯನಾಥನ್ ಅವರು ವಿವಿಧ ಅಣಕು ಹಾಡುಗಳನ್ನು ಕನ್ನಡ ಪ್ರಸಿದ್ಧ ಚಲನಚಿತ್ರ ಗೀತೆಗಳ ಧಾಟಿಯಲ್ಲಿ ಹಾಡಿ ರಂಜಿಸಿದರು. ಸೌತೆಕಾಯಿ, ಚಕ್ಕುಲಿ ಇತ್ಯಾದಿ ತಿನ್ನುತ್ತಾ ಒಂದು ಗಂಟೆ ಕಾಲ ಕಳೆದೆವು.

ಇಲ್ಲಿ ನಿಂತು ನೋಡಿದಾಗ ಸುತ್ತುಮುತ್ತಲು ಬೆಟ್ಟಗಳೇ ಕಾಣಿಸುತ್ತವೆ. ಹಸಿರಾದ ಪ್ರಕೃತಿ ಸೌಂದರ್ಯ ಸವಿದಷ್ಟೂ ಮುಗಿಯದು ಎಂಬಂತಿತ್ತು. ಆಯೋಜಕರ ಮಾತಿನಲ್ಲಿ ಹೇಳುವುದಾದರೆ ತಿಂಗಳಿಗೊಂದು ಬೆಟ್ಟ ಹತ್ತುವುದಾದರೂ ಚನ್ನಪಟ್ಟಣದ ಸುತ್ತುಮುತ್ತಲಿನ ಎಲ್ಲಾ ಬೆಟ್ಟಗಳಿಗೆ ಚಾರಣ ಮಾಡಲು ಕನಿಷ್ಟ 10 ವರ್ಷ ಬೇಕು!’

Trek-19062016-team

ಸಂಜೆಗತ್ತಲಾಗುವ ಮುನ್ನ ಬಸ್ ಬಳಿ ತಲಪಬೇಕೆಂದು ಹಿಂದಿರುಗಿದೆವು. ಆಗಷ್ಟೇ ಆರಂಭವಾದ ಸೋನೆ ಮಳೆ ಹಿತವಾಗಿಯೇ ಇತ್ತು. ಇನ್ನೇನು ಬಸ್ಸಿಗೆ ಒಂದು. ಕಿ.ಮೀ ಇದೆ ಎನ್ನುವಷ್ಟರಲ್ಲಿ ಮಳೆ ಚೆನ್ನಾಗಿಯೇ ಬಂತು. ಮುನ್ನೆಚ್ಚರಿಕೆಯಾಗಿ ರೈನ್ ಕೋಟ್ ತನ್ನಿ ಎಂದು ಸೂಚಿಸಿದ್ದರೂ ತಾರದವರು ಕೆಲವರು. ರೈನ್ ಕೋಟ್ ತಂದಿದ್ದರೂ ‘ಈವತ್ತು ಮಳೆ ಬರಲ್ಲ’ ಅನ್ನುವ ವಿಶ್ವಾಸದಿಂದ ಅದನ್ನು ಬಸ್ಸಿನಲ್ಲಿಯೇ ಬಿಟ್ಟು ಹೋದವರು ಇನ್ನು ಕೆಲವರು. ಒಟ್ಟಾರೆಯಾಗಿ ಹೆಚ್ಚಿನವರು ಮಳೆಗೆ ನೆನೆದು ಅನಿವಾರ್ಯವಾಗಿ ಮುನ್ಸೂನ್ ಚಾರಣವನ್ನೂ ಮಾಡಿದರು!

ಹೀಗೆ ಚನ್ನಪಟ್ಟಣದ ಚೆನ್ನಾದ ಎರಡು ಬೆಟ್ಟಗಳಿಗೆ ಚಾರಣ ಮಾಡಿ, ಮೈಸೂರಿಗೆ ಹಿಂದಿರುಗಿದಾಗ ರಾತ್ರಿ ೦೮೪೫ ಆಗಿತ್ತು. ಈ ಕಾರ್ಯಕ್ರಮದ ರೂವಾರಿಗಳಾದ ಯೈ.ಎಚ್.ಎ.ಐ ಮೈಸೂರು ಘಟಕದ ಶ್ರೀ ವೈದ್ಯನಾಥನ್ ಮತ್ತು ಶ್ರೀ ನಾಗೇಂದ್ರ ಪ್ರಸಾದ್ ಇವರಿಬ್ಬರ ಕಾಳಜಿ, ಹಾಸ್ಯ ಪ್ರವೃತ್ತಿ ಮತ್ತು ನಾಯಕತ್ವಕ್ಕೆ ದೊಡ್ಡ ಸಲಾಂ. ಎಲ್ಲಾ ವಯೋಮಾನದ, ಕೆಲವು ಆರೋಗ್ಯ ಸಮಸ್ಯೆಯುಳ್ಳ ಜನರಿಗೂ ಚಾರಣ ಮಾಡಲು ಸಾಧ್ಯವಾಗುವಂತಹ ಬೆಟ್ಟಗಳನ್ನು ಗುರುತಿಸಿ ‘ಸುಲಭದ ಒಂದು ದಿನದ ಚಾರಣಕ್ಕೆ’ ತಂಡವನ್ನು ಕರೆದೊಯ್ಯುವ ತಾಳ್ಮೆಗೆ ಅನಂತ ನಮನಗಳು. ಈ ಬೆಟ್ಟದ ಬಗ್ಗೆ ಮಾಹಿತಿ ಒದಗಿಸಿದ ಶ್ರೀಮತಿ ಸುಮತಿ ಮತ್ತು ಶ್ರೀ ಉಮಾಶಂಕರ್, ಆತಿಥ್ಯ ನಿರ್ವಹಿಸಿದ ಶ್ರೀ ಕೃಷ್ಣೇಗೌಡ ಮತ್ತು ಮಾರ್ಗದರ್ಶಿ ಸಿದ್ರಾಮ – ಎಲ್ಲರಿಗೂ ಧನ್ಯವಾದಗಳು.

.
 -ಹೇಮಮಾಲಾ.ಬಿ

 

1 Response

  1. savithri s bhat says:

    ಚಾರಣ ಲೇಖನ ಬಹಳ ಚೆನ್ನಆಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: