ಆಷಾಢ ಮಾಸ ಬಂದೀತವ್ವಾ…
ಸುಶ್ರಾವ್ಯವಾದ ಜಾನಪದ ಹಾಡೊಂದರ ಸೊಲ್ಲು ಹೀಗಿದೆ “ಆಷಾಢ ಮಾಸ ಬಂದೀತವ್ವಾ…ಖಾಸಾ ಅಣ್ಣಾ ಬರಲಿಲ್ಲವ್ವಾ…ಎಷ್ಟೆಂದು ನೋಡಲಿ ನಾ ತೌರೀನ ದಾರಿ..“. ಧೋ ಎಂದು ಮಳೆ ಸುರಿಯಬೇಕಾದ ಆಷಾಢ ಮಾಸ ಕಾಲಿಟ್ಟಿದೆ. ಈ ಮಾಸಕ್ಕೆ ತನ್ನದೇ ಆದ ವೈಶಿಷ್ಟ್ಯಗಳಿವೆ. ಬಯಲುಸೀಮೆಯಲ್ಲಿ, ಅಷಾಢ ಮಾಸದಲಿ ಮದುವೆಯಾದ ಹೆಣ್ಣುಮಗಳು ತವರಿಗೆ ಹೋಗುವ ಪರಿಪಾಠವಿದೆ. ಹಾಗೆ ಹೋದವಳು, ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ತವರಿನವರು ಕೊಟ್ಟ ಹೊಸ ಸೀರೆ, ಅರಶಿನ-ಕುಂಕುಮ-ಹೂ-ಬಳೆ ಗಳೊಂದಿಗೆ ಪತಿಗೃಹಕ್ಕೆ ಬರುತ್ತಾಳೆ.
ಮೈಸೂರಿನಲ್ಲಿ ಆಷಾಢದ ಶುಕ್ರವಾರಗಳಂದು ಬೆಟ್ಟದ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲುತ್ತದೆ. ಸಹಸ್ರಾರು ಭಕ್ತಾದಿಗಳು ಜಿಟಿಜಿಟಿ ಮಳೆ,ಚಳಿಯನ್ನು ಲೆಕ್ಕಿಸದೆ ಮೈಲುದ್ದದ ಕ್ಯೂ ನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಾರೆ. ಅ ದಿನಗಳಲ್ಲಿ ದೇವಾಲಯದಲ್ಲಿ ವಿಶೇಷ ಅಲಂಕಾರವಿರುತ್ತದೆ. ಇನ್ನು ಸಂಪ್ರದಾಯಸ್ಥರ ಮನೆಗಳಲ್ಲಿ , ಆಷಾಢ ಶುಕ್ರವಾರದಂದು ಲಕ್ಷ್ಮಿ ಪೂಜೆ ಮಾಡಿ, ಪಾಯಸ/ತಂಬಿಟ್ಟು ನೈವೇದ್ಯ ಸಮರ್ಪಿಸಿ ಮುತ್ತೈದೆಯರಿಗೆ ಅರಶಿನ-ಕುಂಕುಮ ಕೊಡುವ ಪದ್ಧತಿಯನ್ನು ಬಹಳ ಶ್ರದ್ಧೆಯಿಂದ ಆಚರಿಸುತ್ತಾರೆ. ಸಾಮಾನ್ಯವಾಗಿ ಶುಭಕಾರ್ಯಗಳಾದ ಮದುವೆ. ಮುಂಜಿ, ಗೃಹಪ್ರವೇಶ ಇತ್ಯಾದಿಗಳನ್ನು ಆಷಾಢ ಮಾಸದಲ್ಲಿ ಹಮ್ಮಿಕೊಳ್ಳುವುದಿಲ್ಲ.
ಕರಾವಳಿಯ ಕೆಲವು ಭಾಗಗಳಲ್ಲಿ, ಆಷಾಢ ತಿಂಗಳನ್ನು ‘ಆಟಿ’ ಎಂದು ಕರೆಯುತ್ತಾರೆ. ಆಟಿ ತಿಂಗಳಲ್ಲಿ ಮನೆಮನೆಗೆ ‘ಆಟಿ ಕಳೆಂಜ’ ಬರುತ್ತಾನೆ. ಆಟಿ ಕಳೆಂಜ ತುಳು ನಾಡಿನ ಜನಪದ ಕುಣಿತಗಳಲ್ಲಿ ಒಂದು. ಕಳೆಂಜ ದುಷ್ಟ ಶಕ್ತಿಗಳನ್ನು ದೂರವಾಗಿಸುವ ದೈವಶಕ್ತಿ ಎಂದರ್ಥವೂ ಇದೆ. ಸಂಬಂಧಿತ ಕಲೆಯನ್ನು ಬಲ್ಲ ಜನಾಂಗದವರು ಇದನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಚಿಕ್ಕ ಬಾಲಕನೊಬ್ಬನಿಗೆ ಕಳೆಂಜ ವೇಷ ಹಾಕುತ್ತಾರೆ. ಮುಖಕ್ಕೆ ಢಾಳಾಗಿ ಬಣ್ಣ, ತಲೆಗೆ ಅಡಕೆ ಹಾಳೆಯ ಟೊಪ್ಪಿ, ಸೊಂಟಕ್ಕೆ ತೆಂಗಿನ ಗರಿಯಿಂದ ಮಾಡಿದ ಸ್ಕರ್ಟ್ ನಂತಹ ಉಡುಗೆ, ಕೈಗೊಂದು ತಾಳೆಗರಿಯ ಛತ್ರಿ, ಕಾಲಿಗೆ ಗೆಜ್ಜೆ (ಇದನ್ನು ಗಗ್ಗರ ಅನ್ನುತ್ತಾರೆ). ಹೀಗೆ ಕಳೆಂಜನ ಅಲಂಕಾರವಿರುತ್ತದೆ. ಕಳೆಂಜ ಮನೆಗೆ ಬರುವಾಗ ಹಿರಿಯವರೊಬ್ಬರು ಜತೆಯಲ್ಲಿರುತ್ತಾರೆ. ಕಳೆಂಜ ಮನೆಯಂಗಳದಲ್ಲಿ ಕುಣಿಯುವಾಗ ಇವರು ಹಿಮ್ಮೇಳದಲ್ಲಿ ‘ತೆಂಬರೆ’-ಯನ್ನು (ಚಿಕ್ಕ ಮದ್ದಳೆಯನ್ನು ಹೋಲುವ ಚರ್ಮ ವಾದ್ಯ) ನುಡಿಸುತ್ತಾ ಜಾನಪದ ಪಾಡ್ದನವನ್ನು ಹಾಡುತ್ತಾರೆ. ಮನೆಗೆ ಆಟಿ ಕಳೆಂಜ ಬಂದರೆ ಶುಭ ಎಂದು ನಂಬಿಕೆ. ಮನೆಯವರು ಕಳೆಂಜನಿಗೆ, ಅಕ್ಕಿ, ಬೆಲ್ಲ, ಕಾಯಿ ಮತ್ತು ದುಡ್ಡು ಕೊಡುತ್ತಾರೆ.
ಆಟಿ ತಿಂಗಳಲ್ಲಿ ‘ಚೆನ್ನೆಮಣೆ’ ಅಥವಾ ಅಳಗುಳಿಮಣೆ ಆಟ ಆಡುತ್ತಾರೆ. ಇದೊಂದು ರಂಜನೀಯ ಆಟ. ಕೆಂಪು ಬಣ್ಣದ ಮಂಜೊಟ್ಟಿ ಬೀಜ ಅಥವಾ ಹುಣಸೇ ಬೀಜವನ್ನು ಉಪಯೋಗಿಸುತ್ತಾ ಆಡುವ ಈ ಗ್ರಾಮೀಣ ಆಟ ಈಗ ಮರೆಯಾಗುತ್ತಿದೆಯಾದರೂ ಆಟಿ ತಿಂಗಳು ಅದನ್ನು ಜ್ಞಾಪಿಸುತ್ತದೆ. ನಾನು ‘ಆಟಿ ಕಳೆಂಜ’ ನನ್ನು ನೋಡಿ ಎಷ್ಟೊ ವರ್ಷಗಳಾದುವು. ಹಾಗೆಯೇ ಚೆನ್ನೆಮಣೆ ಆಟ ಬಾಲ್ಯದ ನೆನಪು. ಇವು ಈಗಲೂ ಆಚರಣೆಯಲ್ಲಿ ಇರಬಹುದು. ಹಳೆಯ ಪದ್ಧತಿಗಳನ್ನು ವರ್ಷಕ್ಕೆ ಒಮ್ಮೆಯಾದರೂ ನೆನಪಿಸಿಕೊಳ್ಳದಿದ್ದರೆ ಇಂತಹ ಬಹಳಷ್ಟು ಸಂಪ್ರದಾಯಗಳು ಮರೆತುಹೋಗುವುದರಲ್ಲಿ ಸಂಶಯವಿಲ್ಲ.
– ಹೇಮಮಾಲಾ. ಬಿ.
VERY GOOD ARTICLE REGARDING OUR BEAUTIFUL TRADITION.
Aatikalenja..baruthaane..anistava..neegalu!!
ಶ್ರೀಮತಿ ಹೇಮಾ ಮಾಲ ರವರೆ, ನಮಸ್ಕಾರಗಳು, ಆಷಾಢ ಮಾಸದ ವಿಚಾರ ಚೊಕ್ಕವಾಗಿ ಮೂಡಿ ಬಂದಿಧೆ. ನಾನು ಆಷಾಢ ಮಾಸದಲ್ಲೇ ಹುಟ್ಟಿದ್ದು. ಆಷಾಢ ಮಾಸದ ಶುಕ್ಲ ಪಾಡ್ಯ ನನ್ನ ಹುಟ್ಟಿದ ದಿನ. ನನಗೆ ಹೆಚ್ಚಿನ ಸಂಬ್ರಮವಾಯಿತು. ಆಷಾಢ ಮಾಸದ ನೆನಪುಗಳು “ಮಾಸದ” ನೆನಪುಗಳು. ಹಾಗೆಯೆ ನನ್ನ ಹುಟ್ಟಿದದಿನ! ಆಷಾಢದ ಗಾಳಿ, ಆಷಾಢ ಮಳೆ, ಆಷಾಢ ತುಂತುರು ಹನಿಗಳು ಅಮೋಘ! ಆಷಾಢ ಮಾಸದ ಚಂದಿರ ನೋಡಲು ಬಲು ಸುಂದರ ಆಷಾಢ ಮಾಸದ ಪೌರ್ಣಮಿ, ಶ್ರೀ ಗುರುವಿನ ಆಶಿರ್ವಾದ, ಚಾತುರ್ಮಾಸದ ಪೂಜೆ, ಊಟ, ಉಪಚಾರಗಳು, ದೇವಿಯರ ಅಲಂಕಾರ, ಗುಡಿ ಗೋಪುರಗಳ ಅಲಂಕಾರ, ಆಹಾರ, ವಿಹಾರ ಅಸ್ವಾಧಿಸಲು ಬಲು ರಮಣೀಯ. ಆಷಾಢ ಮಾಸದಲ್ಲಿ ಮಾಡುವ “ಲಕ್ಷ್ಮಿ” ಪೂಜೆ, “ದೇವಿ” ಪೂಜೆ, “ಅಷ್ಟ ಲಕ್ಷ್ಮಿ”ಯಾ ಪೂಜೆ, “ಅಂದಲ್ ಜಯಂತಿ, “ಮದುರೈ ಮೀನಾಕ್ಷಿಯಾ ಸುಂದರ ನೋಟ ” ಮೈಸೂರಿನ ಚಾಮುಂಡಿ ದೇವಿಯ ತಾಂಡವ ಕೂಟ, ಆಗಾಗ ವರುಣನ ಜಲಧಾರೆ, ಇಂದ್ರನ ವಜ್ರಾಯುಧದಂತೆ ಬರುವ ಗುಡುಗುಗಳು, ಕೋಲ್ಮಿಂಚುಗಳು, ನೋಡಲು ಅತಿ ಸುಂದರ ಹಾಗು ಮಧುರ. ಆಷಾಢ ಮಾಸದಲ್ಲಿ ಕಾಡುವ “ಆಸೆಗಳು” ಶ್ರಾವಣದಲ್ಲಿ “ಚಿಗುರಿ” , ಭಾದ್ರಪದದಲ್ಲಿ “ಭವ್ಯವಾಗಿ”, ಮಾಘದಲ್ಲಿ “ಮಾಗಿ” ಫಾಲ್ಗುಣದಲ್ಲಿ “ಪತನ”ವಾಗುವ ಸಂಯೋಗ, ಸೃಷ್ಟಿಯ ಅನಂತ ಚಮತ್ಕಾರ.! ಅನಂತ ಧನ್ಯವಾದಗಳು! ನಾಗರಾಜ ಬಾಬು
ಮಾನ್ಯರೇ, ನನ್ನ ಲೇಖನಕ್ಕೆ ಇನ್ನಷ್ಟು ಮಾಹಿತಿಗಳನ್ನು ಸೇರಿಸಿ ಸಂಪನ್ನಗೊಳಿಸಿದ ತಮಗೆ ತುಂಬಾ ಧನ್ಯವಾದಗಳು.
ಮುಂದೆ ಆಟಿ ಕಲೆಂಜ ಕಟ್ಟುವವರು ಸಿಗುವುದಿಲ್ಲ . ಈಗಲೇ ಬಹು ಕಡಿಮೆ ಆಗಿದ್ದಾರೆ.ಆಟಿಯ ಕೆಟ್ಟ ಫಲವನ್ನು ತಗ್ಗಿಸಲು ಬರುವವ ಕಲೆಂಜ .ಚೆನ್ನಾಗಿ ನೆನಪಿಸಿದ್ದೀರಿ.
ಮರಿಯಾಲದ ಬರ್ಸೊಗು ನೆಲ ಬೊದುಲೊಂದು
ನಟ್ಟಿ ನಡ್ ದ್ ಕೈ ಬುಲೆದ್ ತುಳುವೆರೆಗ್ ಬತ್ತುಂಡತ್ತಾ ಆಟಿ…!
ಪಸೆ ಅಂಡ್ ಇರೆ ಪಚ್ಚೆಗ್ ಲೇಸ್ ಶುಭ ಕಜ್ಜ ಕೋಡಿಗ್
ಮದಿಮೆ ಮುಂಜಿಲೆನ್ ದುಂಬು ತೊರ್ತೊಂದು ಬತ್ತುಂಡತ್ತಾ ಆಟಿ…!
ಮಾಮಿಲ್ಲದ ಪೊಸ ಮದಿಮಾಲ್ ಪೆದ್ದಿ ಅಪ್ಪೆಲ್ಲಡೆ ಪಿದಡಿಯಾಲ್
ಮರಿಯಾಲದ ನೀರ್ ಗೊಬ್ಬೆರೆ ಪೊಣ್ಣು ಕಾತಿ ಪರ್ಬ ಬತ್ತುಂಡತ್ತಾ ಆಟಿ…!
ಮೈ ಜಿಂಜ ಅಲಂಕಾರೊಡು ಪೊಸತನೋತ್ತ ಬಣ್ಣ ರೂಪೊಡು
ತುಳು ದೈವ ಆಟಿ ಕಲೆಂಜನ್ ಇಲ್ಲ ತಡ್ದೆಗ್ ಲೆತೊಂದು ಬತ್ತುಂಡತ್ತಾ ಆಟಿ…!
ಪತ್ರೊಡೆ, ಕನಿಲೆ, ತೆಡ್ಲೆ, ಮೂಡೆ ಕೆರೆಂಗ್ ಪೂ, ಗುಜ್ಜೆ ಬೋಲೆ, ತೊಜಂಕ್, ಅಂಬಡೆ ಮರಿಯಾಲದ ವಿಧ ವಿಧೋತ ತಿನ್ಪುಲೆನ್ ನೆಂತೊಂದ್ ಬತ್ತುಂಡತ್ತಾ ಆಟಿ…!
ನಿಮ್ಮ ಈ ಬರಹ ಓದಿ ಖುಷಿ ಆಯಿತು.
ಧನ್ಯವಾದಗಳು 🙂
ಆಹಾ ಆಷಾಡ ಮಾಸದ ಸೊಬಗು.. ಆಟಿ ಕಳೆ0ಜ ತುಳುನಾಡಿನ ಆಟ. ಲೇಖನ ಚೆನ್ನಾಗಿತ್ತು.
ನನ್ನ ಮೆಚ್ಚಿನ ಜಾನಪದ ಗೀತೆ ಮೇಡಂ ಜಿ ..
ಆಷಾಢ ಬಗ್ಗೆ ನೀಡಿರುವ ಮಾಹಿತಿ ಉತ್ತಮವಾಗಿ ಮೂಡಿ ಬಂದಿದೆ ಮೇಡಮ್. ನಮ್ಮ ಜಾನಪದರ ಬದುಕು ಅವರು ಕಟ್ಟಿದ ಹಾಡುಗಳ ಜೊತೆಗೆ ಸಾಗುತ್ತಿದೆ ಎಂಬುದನ್ನು ಮರೆಯಬಾರದು .ಉತ್ತಮ ಲೇಖನ ಮೇಡಂ
“ಆಷಾಢ ” ತವರು ಮನೆಯಿಂದ ಬುಲಾವು ಬರಲಿಲ್ಲ,.., ಹಾಗೂ ಇನ್ನಿತರ ಸವಿಸ್ತಾರ ಮಾಹಿತಿ
ಚೆನ್ನಾಗಿ ಶಬ್ದಗಳ ರೂಪದಲ್ಲಿ ಮೂಡಿ ಬಂದಿವೆ, ಇನ್ನು “ಶ್ರಾವಣ” ಮಾಸ ಬರುವದು,
“ಪಂಚಮಿ ಹಬ್ಬ “… ಅಣ್ಣಾ ಬರಲಿಲ್ಲ ಕರಿಯಾಕ . ಎಂದು ಪರಿತಪಿಸದೆ ಹುಬ್ಬಳ್ಳಿಯ
ಅಣ್ಣನ ಮನೆಗೆ ಬರಲು ಮುಂಚಿತವಾಗಿಯೇ ಆಹ್ವಾನ ನೀಡುತ್ತಿರುವೆ, ಹೀಗೆಯೇ
ನಿಮ್ಮ ಲೇಖನಗಳ ಸರಮಾಲೆ ಮುಂದುವರೆಯಲಿ., ಶುಭೇಚ್ಛೆಗಳು ,
ರಂಗಣ್ಣ ನಾಡಗೀರ್ , ಹುಬ್ಬಳ್ಳಿ.
ಹುಬ್ಬಳ್ಳಿಯ ಅಣ್ಣನಿಂದ ಇಷ್ಟೊಂದು ಆತ್ಮೀಯವಾದ ಕರೆಯೋಲೆ ಪಡೆದ ನಾನು ನಿಜಕ್ಕೂ ಧನ್ಯೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇರೆ ಬೇಕೆ?ಲೇಖನ ಬರೆದಿದ್ದಕ್ಕೆ ಸಾರ್ಥಕವಾಯಿತು. ತಮಗೆ ಸಾಷ್ಟಾಂಗ ನಮಸ್ಕಾರಗಳು…:) 🙂
ನಮ್ಮ ಕಡೆ ‘ಪಂಚಮಿ ಹಬ್ಬ’ದ ಆಚರಣೆಯ ಕಡಿಮೆ ( ಅಥವಾ ನಾನು ಗಮನಿಸಿಲ್ಲ). ಅದರ ಆಚರಣೆ,ಮಹತ್ವದ ಬಗ್ಗೆ ಬರೆದು ಕಳಿಸುವಿರಾ? ಧನ್ಯವಾದಗಳು.
ಹೇಮಾ