
ನವಮ ಸ್ಕಂದ – ಅಧ್ಯಾಯ – 3
ಶ್ರೀರಾಮ ಕಥಾ – 2
ಬಾಲ್ಯದಲೇ ಯಾಗರಕ್ಷಣೆಗೆ ರಾಮಲಕ್ಷ್ಮಣರ ನಡೆ
ವಿಶ್ವಾಮಿತ್ರರೊಡನೆ
ದುರುಳ ರಕ್ಕಸಿ ತಾಟಕಿ
ಅವಳ ಮಕ್ಕಳು ಸುಬಾಹು ಮಾರೀಚರ ವಧೆ
ಅಹಲ್ಯೆಯ ಶಾಪವಿಮೋಚನೆ
ಮಿಥಿಲೆಯಲಿ ರುದ್ರ ಧನುಸ್ಸ ಬೇಧಿಸಿ
ಸೀತಾ ಕಲ್ಯಾಣ
ಊರ್ಮಿಳೆ ಲಕ್ಷ್ಮಣ ಸತಿ
ಮಾಂಡವಿ, ಶೃತಕೀರ್ತಿ
ಭರತ ಶತೃಘ್ನರ ವರಿಸಿ ಅಯೋಧ್ಯೆಗೆ ಹೊರಟರೆ
ಮಾರ್ಗ ಮಧ್ಯದಿ ಪರಶುರಾಮನಿತ್ತ
ವೈಷ್ಣವ ಧನಸ್ಸ ಬೇಧಿಸಿ
ಅಯೋಧ್ಯೆಯಲಿ ಕೆಲಕಾಲ ಸೀತೆಯೊಡಗೂಡಿ
ಸುಖಾನುಭವ ಸಂಸಾರ
ಭರತ ಶತೃಘ್ನರು ಮಾವ ಕೇಕೇಯ ರಾಜನೂರಿಗೆ ಪಯಣ
ಶ್ರೀರಾಮಗೆ ಯುವರಾಜಪಟ್ಟವ ನೀಡಲಿಚ್ಚಿಸಿದ
ದಶರಥಗೆ ಕಿರಿಯರಾಣಿ ಕೈಕೇಯಿಯ ತಡೆ
ಹಿಂದೆ ದೇವಾಸುರ ಯುದ್ಧದಿ ನೀಡಿದ ವರಗಳ
ಪಾಲನೆಗೆ ಹಟ
ರಾಮನಿಗೆ ಹದಿನಾಲ್ಕು ವರ್ಷ ವನವಾಸ
ಭರತನಿಗೆ ರಾಜ್ಯಾಭಿಷೇಕ
ಪಿತೃವಾಕ್ಯಪರಿಪಾಲನೆಗೆ ಜಟಾಧಾರಿ ರಾಮ
ಮಡದಿ ಸೀತೆ, ಅನುಜ ಲಕ್ಷ್ಮಣರ ಜೊತೆಗೂಡಿ
ದಂಡಕಾರಣ್ಯದಲಿ ವಾಸ
ಪಂಚವಟಿಯಲಿ ರಾವಣ ಸೋದರಿ
ಶೂರ್ಪಣಕಿಯ ಕಾಮರೂಪಿಗೆ ಬೇಸರಿಸಿ
ಲಕ್ಷ್ಮಣ ಶ್ರೀರಾಮಾಜ್ಞೆಯ ಪಾಲಿಸಿ
ಅವಳ ಕಿವಿಮೂಗುಗಳ ವಿರೂಪಗೊಳಿಸೆ
ಅಣ್ಣ ರಾವಣನಲ್ಲಿಗೆ ಓಡಿ
ಸೀತೆಯ ಸೌಂದರ್ಯ, ತನಗಾದ
ಅವಮಾನವೆಲ್ಲವಂ ತಿಳಿಸೆ
ರಾವಣ ಕಾಮಮೋಹಿತನಾಗಿ
ಕಪಟ ಸನ್ಯಾಸಿ ವೇಷದಿಂ ಸೀತೆಯ ಬಳಿಗೈದು
ರಾಮಲಕ್ಷ್ಮಣರ ಆಶ್ರಮದಿಂ ದೂರ ಕಾನನಕೆ
ನಿರ್ಗಮಿಸುವಂತೆ ಮಾಡ್ಪಲು
ಮಾರೀಚನ ಮಾಯಾಮೃಗವೇಷದಿ ಬಲಿಯಾಗಿಸಿ
ಸೀತಾಪಹರಣ ಮಾಡಿ
ಲಂಕೆಗೆ ಹಾರಿದ ಸಮಯದಿ ರಾವಣನೆದುರಿಸಿ
ಅಸು ನೀಗುವ ಪೂರ್ವದಿ ಜಟಾಯು
ರಾವಣ ಸೀತಾಪಹರಣಗೈದು ಲಂಕೆಗೆ
ಹಾರಿದ ಸುದ್ದಿಯಂ ಅರುಹಿ
ಅಸುನೀಗಿದ ಜಟಾಯುವಿಗೆ ಅಂತ್ಯಕ್ರಿಯೆಯ ಮಾಡಿ
ನಂತರದಿ ಸುಗ್ರೀವ ಸಖ್ಯ, ವಾಲಿ ವಧೆ
ಆಂಜನೇಯ ಸಮುದ್ರ ದಾಟಿ
ಲಂಕೆಯಲಿ ಅಶೋಕವನದಲಿ ಸೀತೆಯಂ
ಕಂಡು, ಅವಳಿತ್ತ ಅಭಿಜ್ಞಾನಾಭರಣವ
ರಾಮಗೆ ತಂದೊಪ್ಪಿಸಿ ಲಂಕಾದಹನದ ಸುದ್ಧಿ ತಿಳಿಸೆ
ರಾಮ ಕಪಿಸೈನ್ಯದೊಡನೆ ಲೇಶಮಾತ್ರವೂ
ಸಾವಕಾಶ ಮಾಡದೆ
ಸಮುದ್ರ ದಂಡೆಗೈದು ಸಮುದ್ರರಾಜನ ಸಲಹೆ ಪಡೆದು
ಕಪಿವೀರರೊಡಗೂಡಿ ಮಹಾ ರಾಮಸೇತುವ ನಿರ್ಮಿಸಿದ
ಪರಿ ಅದ್ಭುತ
ರಾವಣಸೋದರ ವಿಭೀಣನೊಡಗೂಡಿ
ಅಪಾರ ರಾಕ್ಷಸ ಸೈನ್ಯವ ಎದುರಿಸಿದ ಕಪಿಸೇನೆ
ರಾಮ ಲಕ್ಷ್ಮಣರೊಡನೆ ರಾಕ್ಷಸವೀರ ಕುಂಭಕರ್ಣ
ಇಂದ್ರಜಿತು, ದುರ್ಮುಖರೆಲ್ಲರ ಸಂಹರಿಸೆ
ಕ್ರೋಧದಿಂ ರಾವಣ, ರಾಮನೆಡೆಗೆ
ಭಯಂಕರಾಸ್ತ್ರ ಪ್ರಯೋಗಿಸೆ
ರಾಮನೂ ಬ್ರಹಾಸ್ತ್ರವ ಪ್ರಯೋಗಿಸಿ
ರಾವಣ ಸಂಹಾರಗೈದು
ಅಗ್ನಿಮುಖದಿಂ ಪವಿತ್ರಳಾದ
ಮಹಾಪತಿವ್ರತೆ ಸೀತಾದೇವಿಯೊಡಗೂಡಿ
ಪುಷ್ಪಕವಿಮಾನದಿಂ ಅಯೋಧ್ಯೆಗೆ ತೆರಳುವ
ಮಾರ್ಗಮಧ್ಯದಿ, ಭಾರದ್ವಾಜಾಶ್ರಮದಲಿ ವಿಶ್ರಮಿಸೆ
ಸಕಾಲದಲಿ ಅಣ್ಣ ರಾಮನಾಗಮನದ ಸುದ್ಧಿಯ
ಹನುಮಂತ ಭರತನಿಗೆ ಅರುಹಿ
ಅವನ ಅಗ್ನಿಪ್ರವೇಶವ ತಡೆಯಲು
ನಂತರದಿ ಭರತ ಸಕಲ ಪರಿವಾರದೊಡಗೂಡಿ
ಶ್ರೀರಾಮ ಪಟ್ಟಾಭಿಷೇಕವ ವೈಭವದಿ ನಡೆಸಿ
ಅಯೋಧ್ಯೆಯಲಿ ರಾಮರಾಜ್ಯವ ಸ್ಥಾಪಿಸಿದ
ಪ್ರಜಾನುರಾಗಿಯಾಗಿ ರಾಮ
ಲೋಕದ ಸಕಲ ಒಳಿತಿಗೊಂದು ಮಾದರಿಯಾಗಿ
ತ್ರೇತಾಯುಗವಾದರೂ ಕೃತಯುಗ ಧರ್ಮದಲೇ
ಪ್ರಜೆಗಳೆಲ್ಲರೂ ಆನಂದಿಂ ಬಾಳಿದ ಸುವರ್ಣಕಾಲ
ರಾಮರಾಜ್ಯಕಾಲ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : http://surahonne.com/?p=43206
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
Nice
ಕಾವ್ಯ ಭಾಗವತ ಓದಿ ಸಿಕೊಂಡು ಹೋಗುತ್ತದೆ…ಸಾರ್
ಎಂದಿನಂತೆ ಕಾವ್ಯ ಭಾಗವತ ಓದಿ ಸಿಕೊಂಡು ಹೋಗುತ್ತದೆ…ಸಾರ್
ರಾಮರಾಜ್ಯ ಕಾಲದ ವರ್ಣನೆ ಎಲ್ಲಾ ವಿಷಯಗಳನ್ನೊಳಗೊಂಡ ಸಂಕ್ಷಿಪ್ತ ಸರಳ ರೂಪದಲ್ಲಿ ಮೂಡಿ ಬಂದಿದೆ.
ಪೂರ್ತಿ ರಾಮಾಯಣವನ್ನು, ಸರಳ, ಸುಂದರವಾದ ಕೆಲವೇ ಸಾಲುಗಳಲ್ಲಿ ಸಂಕ್ಷಿಪ್ತವಾಗಿ ತುಂಬಿ ಕೊಟ್ಟ ಕಾವ್ಯ ಭಾಗವತವು ಸೊಗಸಾಗಿದೆ ಸರ್.