ದಕ್ಷಿಣ ಆಫ್ರಿಕಾ: ಕಗ್ಗತ್ತಲ ಖಂಡವೋ ಅಥವಾ ದೇವರ ನಾಡೋ ? ಪುಟ 4

Share Button

ನಾನು ಮಹಾರಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಅಮೃತ ಮೇಡಂ ನನ್ನ ಅಚ್ಚುಮೆಚ್ಚಿನ ಮೇಡಂ. ಅವರ ಪಾಠ ಮಾಡುವ ಶೈಲಿ, ಧರಿಸಿದ ಸಿಲ್ಕ್ ಸೀರೆ, ಹೊಳೆಯುವ ವಜ್ರದ ಓಲೆ ಮತ್ತು ಮೂಗುತಿ ನನಗೆ ಮೋಡಿ ಮಾಡಿದ್ದವು. ಅವರ ಹಾಗೇ ನಾನೂ ಉಪನ್ಯಾಸಕಳಾಗಬೇಕು. ಸಿಲ್ಕ್ ಸೀರೆ, ವಜ್ರದೋಲೆ ಹಾಕಿಕೊಂಡು ಪಾಠ ಮಾಡಬೇಕು. ಓದು ಮುಗಿಸಿ ಉಪನ್ಯಾಸಕಳೇನೋ ಆದೆ, ಆದರೆ ವಜ್ರದೋಲೆ ಹಾಕಿಕೊಳ್ಳುವ ಯೋಗ ಬರಲೇ ಇಲ್ಲ. ಇರಲಿ ಬಿಡಿ, ಈ ದಿನ ವಜ್ರದ ಗಣಿಯನ್ನೇ ನೋಡುವ ಅದೃಷ್ಟ ಬಂತಲ್ಲ. ಈ ದಿನ ನಾವು ಹೋಗುತ್ತಿರುವುದು ದಕ್ಷಿಣ ಆಫ್ರಿಕಾದ ಪ್ರಸಿದ್ಧ ವಜ್ರದ ಗಣಿಗೆ. ‘ಕಲಿನನ್ ವಜ್ರದ ಗಣಿ’. ಇದು ವಿಶ್ವದಲ್ಲೇ ಅತ್ಯುತ್ತಮ ದರ್ಜೆಯ ವಜ್ರಗಳನ್ನು ಉತ್ಪಾದಿಸಿದ ಖ್ಯಾತಿ ಪಡೆದಿದೆ. 1905 ರಲ್ಲಿ ದೊರೆತ 3,106 ಕ್ಯಾರೆಟ್ ಇದ್ದ ಅತಿ ದೊಡ್ಡ ವಜ್ರವನ್ನು ‘ಚಕ್ರವರ್ತಿ ಏಳನೆಯ ಎಡ್‌ವರ್ಡ್‌ಗೆ’ ಕಾಣಿಕೆಯಾಗಿ ನೀಡಿದರು. ಈ ಗಣಿಯ ವಿಶೇಷತೆ ಏನೆಂದೆರೆ ಇಪ್ಪತ್ತೈದು ಪ್ರತಿಶತ ಗಣಿಗಾರಿಕೆ ನಡೆಯುವುದು ಬಯಲಿನಲ್ಲಿಯೇ -ಅದನ್ನು ನೋಡಿದರೆ ನಮ್ಮ ಕೆಮ್ಮಣ್ಣುಗುಂಡಿ ನೆನಪಿಗೆ ಬರುತ್ತದೆ.

ಪ್ರವಾಸಿಗರು ಗಣಿಯೊಳಗೆ ಹೋಗುವ ಮೊದಲು ಕೆಲವು ಎಚ್ಚರಿಕೆಗಳನ್ನು ನೀಡಲಾಗುತ್ತದೆ. ಉಸಿರಾಟದ ಸಮಸ್ಯೆ, ಹೃದಯದ ಸಮಸ್ಯೆಗಳಿದ್ದಲ್ಲಿ ಪ್ರವೇಶ ನಿಷಿದ್ದ. ಒಬ್ಬ ಅನುಭವಿ ಗಣಿಗಾರ ನಮ್ಮ ಗೈಡ್ ಆಗಿದ್ದ. ಪ್ರವಾಸಿಗರಿಗೆಲ್ಲಾ ಕೊವಿಡ್-19 ವಾರ್ಡ್‌ನಲ್ಲಿ ಧರಿಸುವಂತ ಉಡುಪು, ಜೊತೆಗೆ ಒಂದು ಹೆಲ್ಮೆಟ್ ಹಾಗೂ ವೆಲ್ಲಿಸ್ ಶೂ (ಮಂಡಿಯ ತನಕ ಬರುವ ಶೂ) ಕೊಟ್ಟರು. ಕಲಿನನ್ ವಜ್ರದ ಗಣಿಯು ಪ್ರಿಟೋರಿಯಾದಿಂದ ನಲವತ್ತು ಕಿ.ಮೀ. ದೂರದಲ್ಲಿದೆ. ನಮ್ಮ ಗೈಡ್ ಗಣಿಯ ಸುತ್ತ ಅಗೆದಿದ್ದ ಸ್ಥಳ ತೋರಿಸುತ್ತಾ ಗಣಿಯ ಹಿನ್ನೆಲೆ ಹೇಳಿದ. ಒಮ್ಮೆ ಸರ್ ಥಾಮಸ್ ಕಲಿನನ್- ಮಾರುಕಟ್ಟೆಯಲ್ಲಿ ರೈತನೊಬ್ಬ ಹೊಳೆಯುತ್ತಿದ್ದ ಹರಳುಗಳನ್ನು ಮಾರುತ್ತಿದ್ದುದನ್ನು ಕಂಡನು. ತಕ್ಷಣ ಅದು ಬೆಲೆಬಾಳುವ ವಜ್ರ ಎಂದು ಗುರುತಿಸಿ ಆ ರೈತನನ್ನು ಹಿಂಬಾಲಿಸಿದ. ಆ ಹರಳು ಸಿಗುತ್ತಿದ್ದ ಜಮೀನು ‘ಕಾರ್ನೆಲಿಸ್ ಮಿನಾರ್ ಫಾರ್ಮ್’ ಎಂದೂ ಹಾಗೂ ಅದರ ಮಾಲೀಕ ‘ವಿಲಿಯಮ್ ಪ್ರಿನ್ಸ್‌ಲೋ’ ಎಂಬ ಮಾಹಿತಿ ಪಡೆದ. ಕೂಡಲೇ ಆ ಮಾಲೀಕನ ಬಳಿ ಹೋಗಿ ಆ ಜಮೀನನ್ನು ತನಗೆ ಮಾರಿಬಿಡಿ ಎಂದು ಬೇಡಿದ. ಆದರೆ ಜಮೀನಿನ ಒಡೆಯ ಒಪ್ಪಲಿಲ್ಲ. ಹಲವು ಬಾರಿ ಪ್ರಯತ್ನಿಸಿದ. ಆದರೆ ಅವನ ಪ್ರಯತ್ನ ಫಲಿಸಲಿಲ್ಲ. ಕೆಲ ಸಮಯದ ನಂತರ, ಆ ಜಮೀನಿನ ಒಡೆಯ ನಿಧನನಾದ. ಅವನ ಮಗಳು ಆ ಜಮೀನಿಗೆ ಒಡತಿಯಾದಳು. ಕಲಿನನ್ ಪುನಃ ಅವಳ ಬಳಿ ತನ್ನ ಬೇಡಿಕೆ ಇಟ್ಟನು. ತಾಳ್ಮೆ ಕಳೆದುಕೊಂಡ ಒಡತಿ ತನ್ನ ಬಂದೂಕಿನಿಂದ ಅವನ ಕಾಲಿಗೆ ಗುಂಡು ಹಾರಿಸಿದಳು. ಆ ಅಪಘಾತದಿಂದ ಚೇತರಿಸಿಕೊಂಡ ಕಲಿನನ್ ಆರು ತಿಂಗಳ ಬಳಿಕ ಮತ್ತೆ ಅವಳ ಮುಂದೆ ನಿಂತಾಗ, ಬೆರಗಾದ ಜಮೀನಿನ ಒಡತಿಯು 52,000 ಪೌಂಡಿಗೆ ಮಾರಾಟ ಮಾಡಿದಳು.

ಇಟ್ಟಿಗೆ ಸುಡುವ ವೃತ್ತಿಯಲ್ಲಿದ್ದ ಕಲಿನನ್ ವಜ್ರದ ಗಣಿಯ ಮಾಲೀಕನಾದ ಕತೆಯಿದು. ಕೈತುಂಬಾ ಸಾಲಮಾಡಿ 1902 ರಲ್ಲಿ ಪ್ರಿಮಿಯರ್ ವಜ್ರದ ಗಣಿಯನ್ನು ಆರಂಭಿಸಿಯೇ ಬಿಟ್ಟ. ಇಂದಿಗೂ ಕಲಿನನ್ ವಜ್ರ ವಿಶ್ವದಲ್ಲಿಯೇ ಅತ್ಯುತ್ತಮ ವಜ್ರವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ದೊರಕುವ ತಿಳಿ ನೀಲ ವಜ್ರಗಳು ಮನಸೂರೆಗೊಳ್ಳುತ್ತವೆ. ಈ ಗಣಿಯನ್ನು 880  ಮೀಟರ್ ಆಳದವರೆಗೂ ಅಗೆದಿದ್ದಾರೆ. ನಮ್ಮನ್ನು ಅಗಲವಾದ ಲಿಫ್ಟ್‌ನಲ್ಲಿ ಭೂಗರ್ಭದೊಳಗೆ ಕರೆದೊಯ್ದರು. ಭೂಗರ್ಭವನ್ನು ಸೀಳುತ್ತಿರುವ ಯಂತ್ರಗಳು, ಅದಿರನ್ನು ಎತ್ತುವ ಕ್ರೇನುಗಳು, ವಜ್ರವನ್ನು ಬೇರ್ಪಡಿಸುವ ವಿಧಾನ – ಹೀಗೆ ಎಲ್ಲವನ್ನೂ ವಿವರಿಸಿದರು.

ಆದರೆ ಭೂತಾಯಿಯ ಒಡಲಲ್ಲೂ ನಮಗೆ ವರ್ಣಬೇಧದ ಬಿಸಿ ಮುಟ್ಟಿತು. ನಮ್ಮ ಜೊತೆ ಆರು ಜನ ರಷ್ಯನ್ನರು ಇದ್ದರು. ಗಿರಿಜಕ್ಕ ಸಯಾಟಿಕಾ ನೋವು ಇದ್ದುದರಿಂದ ಸೊಂಟಕ್ಕೊಂದು ಬೆಲ್ಟ್ ಹಾಕಿದ್ದಳು. ಅವಳ ನಡಿಗೆ ಸ್ವಲ್ಪ ನಿಧಾನವಾಗಿತ್ತು. ಗೈಡ್ ಆಗಾಗ ಒಂದೆರೆಡು ಕ್ಷಣ ನಮಗಾಗಿ ಕಾಯುತ್ತಿದ್ದ. ಒಬ್ಬ ಬಿಳಿಯ ಹೆಂಗಸು, ‘ನಡೆಯಲು ಆಗದಿದ್ದರೆ ಒಂದೆಡೆ ಕುಳಿತುಕೊಳ್ಳಿ. ಬೇರೆಯವರಿಗೆ ಯಾಕೆ ತೊಂದರೆ ಕೊಡುತ್ತೀರಿ’, ಎಂದು ಕೂಗಾಡಿದಳು. ಅಲ್ಲಿ ನಮಗೆ ನಾಲ್ಕು ಗಂಟೆಗಳ ಕಾಲಾವಕಾಶ ಇತ್ತು. ನಮ್ಮಿಂದ ಅವಳಿಗೆ ಯಾವ ರೀತಿಯ ತೊಂದರೆಯಾದ ಹಾಗೆ ಕಾಣುತ್ತಿರಲಿಲ್ಲ. ನಾವು ಬೇರೆ ವರ್ಣದವರಾಗಿದ್ದೇ ಅವಳ ಕ್ರೋಧಕ್ಕೆ ಮೂಲ ಕಾರಣ ಎಂದು ಸ್ಪಷ್ಟವಾಗಿ ಕಾಣುತ್ತಿತ್ತು. ನಾನು ಮತ್ತು ಅಕ್ಕ ಇಬ್ಬರೂ ಉಪನ್ಯಾಸಕರಾಗಿದ್ದವರು. ಅವಳ ಜೊತೆ ವಾದ ಮಾಡಿದೆವು. ‘ಗಣಿ ನೋಡಲು ಸಾಕಷ್ಟು ಕಾಲಾವಕಾಶ ಇದೆ. ನಾವೂ ನಿನ್ನ ಹಾಗೇ ಟಿಕೆಟ್ ಕೊಂಡು ಬಂದಿದ್ದೇವೆ. ನೀನು ಯಾರು ನಮಗೆ ಹೇಳಲಿಕ್ಕೆ? ಗೈಡ್ ಸುಮ್ಮನಿಲ್ಲವೇ. ಹಿರಿಯರಿಗೆ ಗೌರವ ಕೊಡುವುದನ್ನು ಮೊದಲು ಕಲಿ.’ ಅವಳು ಕಕ್ಕಾಬಿಕ್ಕಿಯಾದಳು, ತೊದಲಿದಳು. ಅವಳಿಗೆ ವಾದಮಾಡುವಷ್ಟು ಇಂಗ್ಲಿಷ್ ಬರುತ್ತಿರಲಿಲ್ಲ. ಅವಳ ಜೊತೆಯವರಿಗೂ ಅಷ್ಟೇ. ಗೈಡ್ ಮೂಕ ಪ್ರೇಕ್ಷಕನಾಗಿದ್ದ. ಅವನು ದಕ್ಷಿಣ ಆಫ್ರಿಕಾದ ಬಿಳಿಯ ಪ್ರಜೆ -ಅವನ ಮನಸ್ಸು, ಭಾವನೆಗಳು ಅವರ ಕಡೆಯೇ ವಾಲುತ್ತಿದ್ದರೂ, ಕಾನೂನಿನ ಪ್ರಕಾರ ನಮ್ಮ ಜೊತೆ ನಿಲ್ಲಲೇಬೇಕಾದ ಪ್ರಸಂಗ ಇದಾಗಿತ್ತು.

(ಮುಂದುವರಿಯುವುದು)

ಈ ಪ್ರವಾಸಕಥನದ ಹಿಂದಿನ ಸಂಚಿಕೆ ಇಲ್ಲಿದೆ :http://surahonne.com/?p=32617

-ಡಾ.ಗಾಯತ್ರಿದೇವಿ ಸಜ್ಜನ್

10 Responses

  1. ನಾಗರತ್ನ ಬಿ.ಆರ್ says:

    ಎಂದಿನಂತೆ ಪ್ರವಾಸ ಕಥನ ಆಕರ್ಷಕವಾಗಿ ಮೂಡಿ ಬಂದಿದೆ.ಒಂದು ಅಂಶ ನನ್ನ ಗಮನ ಸೆಳೆಯಿತು.ನೀತಿ ನಿಯಮವನ್ನು ಅನುಸರಿಸಿ ನಡೆದಾಗಲೂ ಸ್ವಾಭಿಮಾನಕ್ಕೆ ದಕ್ಕೆಯಾದಾಗ ಪ್ರತಿಭಟನೆಮಾಡಲು ಭಾಷೆಯ ಮೇಲೆ ಹಿಡಿತ ಇರಬೇಕು ಎನ್ನುವುದು. ಚಂದದ ನಿರೂಪಣೆ ಧನ್ಯವಾದಗಳು ಮೇಡಂ.

  2. Hema says:

    ಪ್ರವಾಸಕಥನ ಸೊಗಸಾಗಿ ಮೂಡಿಬರುತ್ತಿದೆ.

  3. .ಮಹೇಶ್ವರಿ.ಯು says:

    ಪ್ರವಾಸದ ಅನುಭವ ಕಥನದೊಂದಿಗೆ ಇತಿಹಾಸದ ಕುರಿತಾದ ಮಾಹಿತಿಗಳನ್ನೊಳಗೊಂಡ ಬರಹ ಕುತೂಹಲವನ್ನು ಮೂಡಿಸುತ್ತದೆ.ಧನ್ಯವಾದಗಳು

  4. Padma Anand says:

    ವಜ್ರದ ಗಣಿಯ ಕಥನ ಕುತೂಹಲಕಾರಿಯಾದರೆ, ಛಲಬಿಡದ ತ್ರಿವಿಕ್ರಮನಂತೆ ಹಿಂದೆ ಬಿದ್ದು ಜಮೀನು ಖರೀದಿಸಿದ ಕಲಿನನ್, ಒತ್ತಡಕ್ಕೆ ಮಣಿದ ಪಾಪದ ರೈತನ ಮಗಳು, ಪ್ರಪಂಚದ ಯಾವುದೇ ಮೂಲಿಗೆ ಹೋದರೂ ಮನುಷ್ಯನ ಮನಸ್ಥತಿಗಳು ಒಂದೇ ಎನ್ನುವುದನ್ನು ಸಾಬೀತು ಪಡಿಸಿತು. ಆದರೂ ನೀವಿಬ್ಬರೂ ಕನ್ನಡತಿ ಸಹೋದರಿಯರು ಬಿಳಿಯ ಹೆಂಗಸಿನ ಸೊಕ್ಕಡಗಿಸಿದ್ದು ತುಂಬಾ ಖುಷಿಕೊಟ್ಟಿತು.
    ಪ್ರವಾಸ ಕಥನ ಮುದ ನೀಡುತ್ತಿದೆ.

  5. ಶಂಕರಿ ಶರ್ಮ says:

    ಸೊಗಸಾದ, ಕುತೂಹಲಕಾರಿಯಾದ ಪ್ರವಾಸ ಕಥನ.. ಧನ್ಯವಾದಗಳು ಮೇಡಂ.

  6. ನಯನ ಬಜಕೂಡ್ಲು says:

    ಕುತೂಹಲಕಾರಿಯಾಗಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: